Posts

Showing posts from November, 2019

ಕಂಪ್ಲಾಪುರ ಮೋಹನ್ ಒಂದು ನೆನಪು

ಕಂಪ್ಲಾಪುರ ಮೋಹನ್  ಒಂದು ನೆನಪು ~~~~~~~~~~~~~~~~~~~~ "ತಾನೊಂದು ನೆನೆದರೆ ಮಾನವ ಬೇರೊಂದು ಬಗೆವುದು ದೈವ" ರೇಡಿಯೋ ಹಾಡು ಸಂದರ್ಭೋಚಿತ ಎನಿಸುತ್ತಿತ್ತು.  ೨೦೧೮ ಮೇ ತಿಂಗಳ ಯಾವುದೋ ಒಂದು ಪತ್ರಿಕೆಯಲ್ಲಿ ಕವಿಗೋಷ್ಠಿಯ ಜಾಹೀರಾತು. ಕಂಪ್ಲಾಪುರ ಮೋಹನ್‌ರವರ ದೂರವಾಣಿ ಸಂಖ್ಯೆ ದೊರಕಿತು. ನನ್ನ ಬಹಳ ದಿನಗಳ ಬಯಕೆ ಕಂಪ್ಲಾಪುರ ಮೋಹನ್‌ರವರ ಮನೆ ಮನೆ ಕವಿಗೋಷ್ಠಿಯಲ್ಲಿ ಭಾಗವಹಿಸುವುದಾಗಿತ್ತು. ಆದರೆ ಸಮಯ ಸಂದರ್ಭಗಳು ಒದಗಿಬರಲೇ ಇಲ್ಲ. ಆಗಾಗಲೇ ಹಾಸನದ ಮನೆ ಮನೆ ಕವಿಗೋಷ್ಠಿ ಬಳಗದಲ್ಲಿ ಕೊಟ್ರೇಶ್ ಉಪ್ಪಾರ್‌ರವರ ನೇತೃತ್ವದಲ್ಲಿ ನಡೆಯುತ್ತಿದ್ದ ಹಲವಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ. ಆ ಸಂದರ್ಭಗಳಲ್ಲಿ ಕೆಲವು ಆತ್ಮೀಯ ಗೆಳೆಯರ ಸಲಹೆಯ ಮೇರೆಗೆ ಕೊಡಗಿನಲ್ಲಿ ಮನೆ ಮನೆ ಕವಿಗೋಷ್ಠಿ ಬಳಗವನ್ನು ಸ್ಥಾಪಿಸಬೇಕು ಎಂಬ ಕನಸು ಗರಿಕೆದರಿತ್ತು. ಕಾಲ ಗಳಿಗೆ ಕೂಡಿಬರಬೇಕು ಮಾತ್ರವಲ್ಲದೆ ಅನುಭವ ಕೂಡ ಜೊತೆಯಲ್ಲಿ ಇರಬೇಕು ಎಂಬುದನ್ನು ಈಗಾಗಲೇ ಕೆಲವು ಕಹಿ ಅನುಭವಗಳನ್ನು ಮೆಲುಕು ಹಾಕಿ ಅಳೆದು ಸುರಿದು ಮೇ ತಿಂಗಳ ಕೊನೆಯ ವಾರದ ವೇಳೆಗೆ ನವೆಂಬರ್ ಹನ್ನೊಂದು ಎರಡು ಸಾವಿರದ ಹದಿನೆಂಟನೇ ಭಾನುವಾರದಂದು ಮನೆ ಮನೆ ಕಾವ್ಯಗೋಷ್ಠಿ ಬಳಗದ ಉದ್ಘಾಟನೆ ಎಂದು ಸ್ವತಃ ನಿರ್ಧರಿಸಿಬಿಟ್ಟೆ.  ಕಾರ್ಯಕ್ರಮ ಸ್ವಂತವಾಗಿ ಮಾಡಿ ಅನುಭವ ಇಲ್ಲ ಹಾಸನದ ಕವಿಗೋಷ್ಠಿಯಲ್ಲಿ ಭಾಗವಹಿಸುವ ಸಂದರ್ಭಗಳಲ್ಲಿ ಹೆಚ್ಚಾಗಿ ಗೆಳೆಯರ ಜೊತೆಗೆ ಸ್ಥಳವನ್ನು ತಲುಪುವ ವೇಳ...

ಮುಕ್ತಕ ಮಾಲೆ ೧೫೧ ರಿಂದ

ಸುತ್ತಲಿರುವವರ ಘನ ಚಿತ್ತವನು ಸೆಳೆಯುತಲಿ ಮತ್ತಿನೊಳು ಸಿಲುಕಿಸುವ ಯತ್ನವೇಕೆ| ಮುತ್ತಿನಿರವನರಿಯದೆ ಹತ್ತರೊಳಗೊಂದಾಗಿ ಸತ್ತುಹೋಗದಿರಿಯೆಂಬ  ಬೊಮ್ಮಲಿಂಗ|೧೫೧|| ಹುಟ್ಟಿದರು ಕೆಟ್ಟವರ ಮೆಟ್ಟಿ ಮುರಿಯಲು ಬಲ್ಲ  ಜಟ್ಟಿಯಂದದಿ ನಿಂದ ರಾಷ್ಟ್ರಬಂಧು| ಸೊಟ್ಟಮನಗಳಿಗಿಂದು ತಟ್ಟದಂತಿಹುದವರ  ದಿಟ್ಟನುಡಿಗಳು ಕಾಣ ಬೊಮ್ಮಲಿಂಗ||೧೫೨| ಕಟ್ಟಿ ಬೆಳೆಸುತ ದೇಶ ಮುಟ್ಟಿ ಜನಗಳ ಮನವ  ಮಟ್ಟಿಯೊಳು ಸೇರಿದರು ದೀನ ಬಂದು| ಹುಟ್ಟದಿರಿ ಕಂದಗಳೆ  ಮೆಟ್ಟುವರೆ ಕಾದಿಹರು  ದಿಟ್ಟತನ ತೋರುವರ ಬೊಮ್ಮಲಿಂಗ||೧೫೩||  ಮಲ ಮೇವ ಬಯಕೆಯಲಿ ಹೊಲಸು ನುಡಿಯುವ ಬಾಯಿ ಕೊಳಕು ಕಿಡಿಗೇಡಿಗಳ ನಿತ್ಯ ಭಕ್ಷ್ಯ| ಕೊಳೆತು ನಾರುವ ಕೆರೆಗೆ ಹೊಳೆನೀರ ಕಾಣುತಿರೆ ತಳವದೋ ಸೀಯುತಿದೆ ಬೊಮ್ಮಲಿಂಗ||೧೫೪|| ಮಲ ಮೇವ ಬಯಕೆಯಲಿ ಹೊಲಸು ನುಡಿಯುವ ಬಾಯಿ ಕೊಳಕು ಕಿಡಿಗೇಡಿಗಳ ನಿತ್ಯ ಭಕ್ಷ್ಯ| ಕೊಳೆತು ನಾರುವ ಕೆರೆಗೆ ಹೊಳೆನೀರ ಕಾಣುತಿರೆ ತಳವದೋ ಸೀಯುತಿದೆ ಬೊಮ್ಮಲಿಂಗ||೧೫೫|| ಉಂಡಿರುವ ತಟ್ಟೆಯೊಳು  ತುಂಡುಗಳು ಮುಗಿದಿರಲು ಚಂಡಿಯನು ತೆಗೆಯುವದು ನಾಯಿ ಬುದ್ಧಿ| ಅಂಡಿನಲಿ ಬೆಂಕಿಯನು  ಚೆಂಡುಗಾತ್ರದೊಳಿಟ್ಟು ಕಂಡಲ್ಲಿ ಬೊಗಳುವುದು  ಬೊಮ್ಮಲಿಂಗ.||೧೫೬|| ಯೋಗಿಗಳ ರೂಪದಲಿ ಜೋಗಿಗಳು ತಾವಾಗಿ  ರೋಗವನು ಹರಡುವುದು ತರವೆ ನಿಮಗೆ| ಭೋಗವನು ಕೈಗೊಂಡ ಗೂಗೆಗಳು ಜಗದಲಿ ವಿ ರಾಗಿಗಳ ವೇಷದೊಳು ಬೊಮ್ಮಲಿಂಗ||೧೫೭|| ಜೋಗಿ = ನಿಂತಲ್ಲಿ ನಿ...

ಕುಂತರು ನಿಂತರು ಸುರಿಯುತ್ತದೆ

ಕುಂತರು ನಿಂತರು ಸುರಿಯುತಿದೆ ~~~~~~~~~~~~~~~~~ ಅಗಜಾ ಬಂದಳು ತೌರಿನ ಮನೆಕಡೆ ಮಗನದೊ ಬಂದಿಹನೆನ್ನುತಲಿ ಜಗದಲಿ ಬಿಡದಿಹ ವರ್ಷದ ಲಾವಣಿ ಮಗರಿಸ ಸೇರಿಸಿ ಹಾಡುವೆನು ಅಮ್ಮನ ತೌರಿನ ಮೋದಕ ಮೆಲ್ಲುತ ಸುಮ್ಮನೆ ನಡಿಗೆಗೆ ಹೊರಟಿಹನು ಹೊಮ್ಮಿದ ಮಳೆಯಲಿ ನೆನೆಯಲು ಮೂಷಿಕ ಚಿಮ್ಮುತ ಛತ್ರಿಯ ತಂದಿಹನು ಆತನ ನೋಟಕೆ ಮನುಜರು ನೋವಲಿ ಸೋತಿಹ ಸಂಗತಿ ಕಾಣುತಿರೆ ಮಾತೆಯ ಕರೆಯಲು ಬಂದಿಹ ಗಣಪನು ಭೀತಿಯ ಪಡುವರ ನೋಡಿದನು ಎಂತಹ ಮಳೆಯಿದು ಗಳಿಗೆಯು ಬಿಡದೆಲೆ ಕುಂತರು ನಿಂತರು ಸುರಿಯುತಿದೆ ಸಂತರ ಹಾಗಿರ ಬೇಕಿಹ  ವರಣನು ಸಂತೆಯ ಕೆಡಿಸುತ ನಡೆದಿಹನೆ ದೂರದ ಬೆಟ್ಟದ ಬುಡದಲಿ ನಲುಗಿಹ ತೋರದ ಲೋಗರ ತಾ ನೋಡಿ  ಬಾರದ ಲೋಕಕೆ ನಡೆದಿಹ ಬಂಧುವ ತೀರದ ಬವಣೆಗೆ ಮರುಗಿದನು ಗಣಪನು ಕೋಪದಿ ವರುಣನ ಕೇಳಿದ ಜನಗಳ ಕಷ್ಟವ  ತಾನರಿತು ಗುಣವಿದು ಬಿಡದಿಹೆಯೆಂದಿನ ಕಾಲಕು  ಮನಗಳ ನೋಯಿಪೆ ಸರಿಯೇನು  ಬೆನಕನ ಮಾತಿಗೆ ಬೆದರುತಲೆಂದನು  ಕನಿಕರವಿರದೆಲೆ ಸುರಿದಿಲ್ಲ  ವನಗಳ ತರಿದಿರೆ ಪರಿಸರ ಕೆಡಿಸಿರೆ ನನಗಿದ ತಡೆಯಲು ಕಸುವಿಲ್ಲ ಮರಗಳ ಕಡಿದಿಹ ಮನುಜರ ಶಿಕ್ಷಿಸೆ ಹರನಲಿ  ನುಡಿದೆನು  ಫಲವಿಲ್ಲ  ವರವನು ನೀಡುವ ಭರದಲಿ ಪರಶಿವ  ಪರಿಸರ ಮರೆತಂತಿಹನಲ್ಲ ಪರಿಸರ ಜೀವನವರಿತಿಹ ಹರನಿವ  ಪರಿಪರಿ ಮರುಗಿದ ಮನದಲ್ಲಿ  ಮರವನು ತರಿಯುವ ಲೋಗರ ನರಕಕೆ ಕರೆಯಲು ಬಂದನು ಜವರಾಯ ಸುಮವದೊ ಸವೆವುದದೆನ್ನುವ ಪರಿಯಿರೆ ಸಮಸಮದೊಲವ...

ಬಾಳ್ವೆ ನಮದಾಯ್ತು

ಬಾಳ್ವೆ ನಮದಾಯ್ತು ~~~~~~~~~~~ ಕರಿಯ ರವಿಕೆಯ ತೊಟ್ಟು ನಗುತಲಿ ಜರಿಯ ಲಂಗದಿ ಮಿನುಗಿ  ಚಿಮ್ಮುತ ಹರನ ಸತಿಯನು ಹೋಲುವಂದದಿ ಬಂದೆ ನೀನಂದು| ಸುರಿವ ಚೆಲುವನು ಕಂಡು ಮನದಲಿ  ಕೊರಗಿ ನಲುಗಿದೆ ಕನಸ ಕಾಣುತ ಮರುಗಿ ಫಲವಿದೆಯೆನಿಸಲಿಲ್ಲವೊ ನಿನ್ನ ಚೆಲುವೆದುರು|| ಅತ್ತೆ ಮಗಳೇ ಕೇಳು ನಿನ್ನನು  ಸುತ್ತ ಹುಡುಕಿದೆ ನತ್ತು ನೋಡಲು ಕತ್ತು ಕೊಂಕಿಸಿ ಹೊರಟು ಹೋದೆಯ ಮನವ ನೀ ಕೆಡಿಸಿ|  ಕಿತ್ತು ಬರುತಿಹ ಭಾವದಿಂದಲಿ ಹೊತ್ತು ಹೊತ್ತಿಗೆ ಕೂಳು ತಿನ್ನದೆ ಸತ್ತು ಹೋಗುವ ಹಾದಿ ಹಿಡಿದಿದೆ ತನುವು ನಿನ್ನಾಣೆ|| ಅಮ್ಮನರಿತಳು ನನ್ನ ಭಾವನೆ ಸುಮ್ಮನಿರದೆಲೆ ನಿನ್ನ ತಂದೆಯ ತಮ್ಮನೆದುರಲಿ ಮಗನ ಮದುವೆಯ ವಿಷಯ ವಿಟ್ಟಿರಲು| ನಿಮ್ಮ ತಾಯಿಯ ಕೇಳಿ ನೋಡಲು  ಸಮ್ಮತಿಗಳನು ಪಡೆದು ಹಿರಿಯರ ಸಮ್ಮುಖದಲಿಯೆ ಲಗ್ನ ತಿಳಿಯಲು ಮನವ ಮಾಡಿದರು|| ಭಗ್ನವಾಯಿತು ಕಷ್ಟವೆಲ್ಲವು ಲಗ್ನ ಪತ್ರಿಕೆ ಹಂಚಿಕೊಂಡೆವು ವಿಘ್ನವಿರದೆಲೆ ಮದುವೆ ನಡೆಯಲು ಕೋರಿ ಕೊಂಡಿಹೆವು| ಅಗ್ನಿದೀಪನವಾಯ್ತು ಕುಂಡದಿ ವಿಘ್ನರಾಜನ ಕರುಣೆಯಿಂದಲಿ ಲಗ್ನ ಮುಗಿಯಲು ಹರುಷದಿಂದಿಹ ಬಾಳ್ವೆ ನಮದಾಯ್ತು.||  ಪಶಿವೈ  ಪಿ ಎಸ್ ವೈಲೇಶ ಕೊಡಗು ೨೭/೧೧/೨೦೧೯  

ಹೋಗದಿರು ರಾಧೆ

ಹೋಗದಿರು ರಾಧೆ. ~~~~~~~~~~ ಪರಿಧಿಯ ಮೀರಿ  ಹೋಗದಿರು ರಾಧೆ ನೀನಿರದಿರೆ ಎನ್ನೊಳು  ಮುಗಿಯದೆ ಭಾದೆ ಏರಿದ ಕಾವನು  ತಣಿಸಲಾರದು ಕಾವೇರಿ ತೀರದ ದಾಹದಲಿ  ತುಂಗಾಜಲವಲ್ಲ ಭದ್ರಾ  ಕೈಬಳೆಯ ಕಿಣಿ ಕಿಣಿಗೆ  ಕಾಲ್ಗೆಜ್ಜೆ ತಾಳಕ್ಕೆ  ಮನ ಕುಣಿದಿದೆ ನಿನ್ನ  ನಿಜರೂಪವನರಸಿದೆ  ತಂಗಾಳಿಯೇ ಮೃದು  ಸೆರಗಂತೆ ಸೋಕಿರಲು ಮೈಮನ ಬಿರಿದರಳುತಿದೆ ಉರುಳಾಗಿ ಕಾಡಿದೆ  ಕೇಶರಾಶಿಯ ಘಮಲನು ನಾಶಿಕವು ಆಘ್ರಾಣಿಸಿ  ಸುಮಧುರ ಭಾವನೆಯ  ಹುಚ್ಚು ಕಿಚ್ಚಾಗುತಿದೆ ರಾಧೆ ಮುಂಗುರುಳ  ನರ್ತನವನರಿತು  ನಿನ್ನಂದವ ಸವಿಯುವ  ಬಯಕೆಯೊಡ ಮೂಡಿದೆ  ಹದಿನಾರು ಸಾವಿರ  ಜೋಡಿಕಂಗಳಲಿ ಕಾಣದ ಹೊಳಪದು  ಎನ್ನೆದೆಯನಿರಿದಿದೆ ಬಳಿ ಬಾರೇ ಒಲವೆ ನೀ ಎನ್ನ ಬಾಳಿನೊಡವೆ  ಏಕೆ ಈ ಜಗದ ಗೊಡವೆ  ಕರೆದಾಗೆಲ್ಲಾ ನಾನೋಗೊಡುವೆ  ಮುನಿಸುಗಳ ಮನ್ನಿಸು  ಮೈ ಮನವ ಮುದ್ದಿಸು  ಪ್ರೇಮದೊಲವ ನೀ ಹರಿಸು  ಈ ಜಗದಿಂದ ಎನ್ನ ಸರಿಸು ಸರಸಿಜಾಕ್ಷೆ ಪಶಿವೈ ಪಿ ಎಸ್ ವೈಲೇಶ ಕೊಡಗು ೨೨/೧೧/೨೦೧೯

ಅಯ್ಯೋ ಮಳೆಯೆಂತು

ಮಳೆಯೆಂತು ~~~~~~~ ನೋಡುವ ಕಣ್ಣನು ಸೆಳೆಯುವ ತೆರದಲಿ ಜಾಡಿಸಿ ಸುರಿದಿಹೆ ನೀನಿಲ್ಲಿ| ದಾಡಿಯೆ ನಿನಗದು ಸಮಯದಿ ಬರುವರೆ ಬಾಡುತ ನಡೆವೆವು ನಾವಿಲ್ಲಿ||೧|| ನೋಡುತಲಿರುತಿರೆ ಬಡವರ ಗುಡಿಸಲ  ಮಾಡನು ಮುಳುಗಿಸಿ ಬೀಗುತಿಹೆ| ಹಾಡುತ ಮಹಡಿಯ ಸಿರಿಯಲಿ ಕುಳಿತರು ಪಾಡಿದು ಸಮಸಮವೆನ್ನುತಿಹೆ|| ಮೂಲವದಿರದೆಲೆ ಸಾಲದ ಧನದಲಿ ಹಾಲನು ನೀಡುವ ಹಸು ತಂದೆ| ಬೇಲಿಯ ಹಾರುತ ಬಂದವ ನಮ್ಮಯ ಕಾಲನು ಕಡಿದವ ನೀನೆಂದೆ|| ನಂದನದಂದದಿ ನಗುವನು ತಂದಿಹ ಕಂದನ ಸೆಳೆಯುತ ಕೊಂಡೊಯ್ದೆ| ತಂದೆಯ ಮಸಣದಿ ಮಲಗಿಸಿ ಬಾಳಿನ  ಸುಂದರ ಚಣಗಳ ಕದ್ದೊಯ್ದೆ|| ಎಳೆಯರ ಬೆಳೆಸಲು ಛಲದಲಿ ಬದುಕಿನ ಬೆಳೆಯನು ಹೊಲದಲಿ ಹರಡಿದ್ದೆ| ಮೊಳೆಯುವ ಸಸಿಯನು ಕಾಯದೆ ಜೊತೆಯಲಿ ಹೊಳೆಯುವ ಜೀವವ ಕಸಿದೊಯ್ದೆ|| ಸಕಲವ ಜಲದಲಿ ಹೋಮವ ಮಾಡಿದೆ ಮುಖದಲಿ ಕಳೆಯದು ಬರಲೆಂತು| ಸುಖವನು ಕಾಣದೆ ನಡೆದಿಹ ಬದುಕಿನ ಸಖರನು ಕಳೆದವ ಮಳೆಯೆಂತು|| ಪಶಿವೈ  ಪಿ ಎಸ್ ವೈಲೇಶ ಕೊಡಗು ೧೯/೧೧/೨೦೧೯

ಹದವಿರಲಿ (ಲಾವಣಿ)

ಹದವಿರಲಿ ( ಲಾವಣಿ) ~~~~~~~~~~~~ ಬದುಕುವ ರೀತಿಯ ಮಾನವ ನೀತಿಯ ಯದುಕುಲ ತಿಲಕನು ತಿಳಿಸಿಹನು ಕುದಿಯುವ ಮನಸಿಗೆ ಲಾವಣಿ ರೂಪದಿ ಹದವಿರಲೆನ್ನುತ ಪಾಡುವೆನು ರಾಮನ ಮಡದಿಯ ಬಿಡದೆಲೆ ತಡವಿದ ಕಾಮುಕ ದಿಟ್ಟಿಯ ರಾವಣನು  ಚಾಮರ ಬೀಸುವ ದಾಸಿಯರೆದುರಲಿ ಭಾಮೆಯನಾಗಿಸೆ ಸೋತಿಹನು  ಜೀವಿತವೆಂದರೆ ಮಾನವ ಕುಲದೊಳು ಭಾವನೆ ತುಂಬಿದ ಸಂಸಾರ ಗೋವಿನ ತೆರದಲಿ ಬಾಳುವೆಯಾದರೆ ಬೇವಿನ ಕಹಿಯಲಿ ಸಂಹಾರ  ರಾಮನ ತೆರದಲಿ ಹೆಂಡತಿಯೊಬ್ಬಳು  ಕಾಮವ ತಣಿಸಲದಿರಬೇಕು ಭೀಮನ ರೀತಿಯು ಸತಿಯನು ಕಾಯಲು ಸೋಮನೆ ತಾನಾಗಿರಬೇಕು ಮನೆತನ ಬೆಳಗಲು ಮಕ್ಕಳ ಪಡೆಯಲು ತನುವಿಗೆ ನೆಮ್ಮದಿ ತರಬೇಕು ಕೊನೆಯನದರಿಯದ ಕಾಮವುದೆಂದಿಗು  ಮನಸಲಿ ದೂರವದುಳಿಬೇಕು ಜೀವನವೆಂದರೆ ಕಾಮಕು ಮಿಗಿಲಲಿ ಭಾವನೆಗಳ ಹೊಳೆ ಹರಿಬೇಕು ಜೀವಿಗೆ ಕಾಮವು ಬೆಲ್ಲದ ಜೊತೆಯಲಿ ಬೇವಿನ ಹಾಗೆಯದಿರಬೇಕು   ಪಶಿವೈ  ಪಿ ಎಸ್ ವೈಲೇಶ ಕೊಡಗು ೨೧/೧೧/೨೦೧೯

ಮಕ್ಕಳ ದಿನಾಚರಣೆ

ಓದಿರಿ ಮನವಿರಿಸಿ ~~~~~~~~~ ಹೊಕ್ಕಳು ಬಳ್ಳಿಯೆ ಆಗಿಹ ನಮ್ಮಯ ಮಕ್ಕಳ ದಿನವನು ನೆನೆಯುವೆನು| ಚಿಕ್ಕವನಾಗುತ ಚಿಣ್ಣರ ಜೊತೆಯಲಿ  ಸಕ್ಕರೆ ಲಾವಣಿ ಪಾಡುವೆನು||ಪ|| ನಮ್ಮಯ ನಾಡಿನ ಇಂದಿನ ಮಕ್ಕಳ ಹೆಮ್ಮೆಯ ಹಬ್ಬದ ವಿಷಯವಿದು| ಹೊಮ್ಮಲು ಮುನ್ನಡೆ ವಿದ್ಯೆಯ ಜೊತೆಯಲಿ ಕಮ್ಮವ ಕಲಿಯಿರಿ ನೀವಿಂದು||೧|| ದೇಶದ ಏಳಿಗೆ ಮನದಲಿ ತುಂಬುವ  ವೇಷವ ಧರಿಸುವ ನೀವೆಲ್ಲಾ| ಆಸರೆ ನೀಡಿದ ಹಿರಿಯರ ಮರೆಯದೆ  ಪೋಷಣೆ ಮಾಡಿರಿ ಬಾಳೆಲ್ಲಾ||೨||  ಅರಿಯುವ ಸಮಯದಿ ಸಕಲವು ತಿಳಿವುದು ಮೆರೆಯಲು ಅವಸರ ಮಾಡದಿರಿ| ಪರಪರಿಯಾಸೆಗೆ ಮನವನು ಬಿಡದೆಲೆ ಪರಿಸರ ರಕ್ಷಣೆ ಮಾಡುತಿರಿ||೩|| ಕಣ್ಣಿಗೆ ಕಾಣುವ ಸತ್ಯವದೆಲ್ಲವು ಬೆಣ್ಣೆಯ ಹಾಗೇ ಜಾರುವುದು| ಸುಣ್ಣದ ನೀರಿನ ತಣ್ಣನೆ ಹಾಲಿನ  ಬಣ್ಣದ ಪರಿಚಯವಾಗುವುದು||೪|| ಆಸೆಯ ಭರಿಸುವ ಭರದಲಿಯೆಂದಿಗು ಮೋಸವ ಮಾಡದೆ ಬಾಳುತಿರಿ| ಮೀಸೆಯು ಮೊಳೆಯುವ ವೇಳೆಗೆ ಹಾದಿಯ ದೋಷಗಳರಿವನು ತಿಳಿಯುವಿರಿ||೫|| ದೇಶವ ಸುತ್ತುತ ಬದುಕಿನ ಬಹುವಿಧ ವೇಷವ ನೋಡಲು ಕಾತರಿಸಿ| ಭಾಷೆಯನರಿಯುವ ತವಕವ ತೋರುತ ಕೋಶವನೋದಿರಿ ಮನವಿರಿಸಿ||೬|| ಪಶಿವೈ ಪಿಎಸ್ ವೈಲೇಶ ಕೊಡಗು ೧೪/೧೧/೨೦೧೯

ಪರಿವರ್ಧಿನಿ ಷಟ್ಪದಿ

ಪರಿವರ್ಧಿನಿ ಷಟ್ಪದಿ ೧ ಮೊದಲ ಪ್ರಯತ್ನ ಕನಸಿನ ಲೋಕದಿ ಕುದುರೆಯನೇರುತ ಮನವನು ಗೆಲ್ಲುವ ಹುರುಪನು ತೋರುತ ತನುವಿನ ಬಯಕೆಯ ಬೆಂಕಿಗೆ ತುಪ್ಪವ ವಿನಯದಿ ಸುರಿದಿಹನೇ| ಇನಿಯನ ಮಾತದು ಕೇಳಲು ಮಧುರವು ನನಸನು ಮಾಡಲು ನಿಜಜೀವನದೊಳು ಗಣಗಳು ಬಿಡುವವೆ ಗುಣಹೀನದ ನುಡಿ ಕೇಳುವುದಾರಮ್ಮ||೧|| ಮಂದಿರದಂತಹ ನೀಲಾಕಾಶದಿ ಸುಂದರ ತರುಣನ ಕನಸಲಿ ನೆನೆಯುತ ನಿಂದಿಹ ಚೆಲುವೆಯ ಹೃದಯದಿ ಸಾವಿರ ಸಾಯದ ಬಯಕೆಗಳು| ಚಂದಿರನೂರಿಗೆ ಪಯಣವ ಹೊರಡಲು ಚೆಂದದ ಕನಸನು ನನಸಾಗಿಸುವರೆ ತಂದೆಯ ಜೊತೆಯಲಿ ಸಂದಿಯ ಮಾಡಲು ಬೇಕಿದೆ ಬಂಧುಗಳು||೨||

ಅಮ್ಮನ ಮಡಿಲಲ್ಲಿ

ಅಮ್ಮನ ಮಡಿಲಲ್ಲಿ ಆಲದ ಸಸಿಯ ಸ್ವಗತ ~~~~~~~~~~ ಅಂದೊಮ್ಮೆ ಅಮ್ಮನ ಮಡಿಲಲ್ಲಿ ಹಕ್ಕಿಯು  ಕುಕ್ಕಿ ಕುಕ್ಕಿ ನನ್ನ ಕಬಳಿಸಿತ್ತು.  ಸಂದಿಗೊಂದಿಯಲಿ ಹಾರಿ ನಡುವೆ ಗಾಳಿಯಲಿ  ಹಿಕ್ಕೆಯಂತೆನ್ನ ತೂರಿಬಿಟ್ಟಿತ್ತು  ಜೋರಾದ ಗಾಳಿಯ ಹೊಡೆತವೆನ್ನ ಒಯ್ದು ಕಲ್ಲು ಕಟ್ಟಡದ ಎಡೆಯಲ್ಲಿ ಕೂರಿಸಿತ್ತು  ನೀರಿನಾವಿಯ ತುಂತುರು ಹನಿಗೆ ಸಂತಸದ ಗೆಲ್ಲುಗಳು ಮೂಡಿ ಮನ ನಲಿದಿತ್ತು ಹೆಚ್ಚೇನು ಉಳಿಯದೆ ಸಂತಸ ಸಂಕಟ ಮತ್ತೆ ಹಲ್ಲು ಕಿಸಿದು ನಕ್ಕಂತಾಯ್ತು ಹೆಜ್ಜೇನು ಸವಿಯಂತೆ ಬಂದ ದೂಳಕಣವದು  ಎಲ್ಲ ಕಡೆಯಾವರಿಸಿ ಚಿಗುರೊಡೆದಾಯ್ತು ಅರಿವು ಮೂಡಿದಾಗ ಹೆಮ್ಮರವಾಗಲೆನ್ನ ಬಿಡಲಾರರಿವರೆಂದೆನಿಸಿತ್ತು ಅವರಿವರಿಗೆ ತಿಳಿಸಲೆಂದೇ ಕ್ಯಾಮರಾ ಕಣ್ಣು ಬಡಿದು ರೆಪ್ಪೆಯನು ಚಿತ್ರವಾಯಿತು  ಎಂದಿಗೆ ಬರುವರೋ ಎನ್ನ ಕಿತ್ತೊಗೆಯಲು ಮಂದಿಯೆಂದು ಕಾಯುತ್ತಿರುವೆ ಮುಂದೆ ಹರಿವ ನದಿಯೊಳು ಸರಿದು ಕೊಳೆತು ಮಂದಿ ತಿನ್ನುವನ್ನಕೆ ಗೊಬ್ಬರವಾಗುವೆ ಈ ಜನುಮವಲ್ಲಿಗೆ ಸಾರ್ಥಕದ ಭಾವವು  ಮೂಡಿ ಬಂದು ಸಂತಸಗೊಂಡೆ ಮರುಜನ್ಮವಿದ್ದೊಡೆ ನೆರಳ್ಹಣ್ಣು ನೀಡುವನಕ ಕೂಡಿರಲಿ ಅಯಷ್ಯವೆಂದು ಬೇಡಿಕೊಂಡೆ.  ಪಶಿವೈ ಪಿ ಎಸ್ ವೈಲೇಶ ಕೊಡಗು ೩/೧೧/೨೦೧೯