ಮಕ್ಕಳ ದಿನಾಚರಣೆ
ಓದಿರಿ ಮನವಿರಿಸಿ
~~~~~~~~~
ಹೊಕ್ಕಳು ಬಳ್ಳಿಯೆ ಆಗಿಹ ನಮ್ಮಯ
ಮಕ್ಕಳ ದಿನವನು ನೆನೆಯುವೆನು|
ಚಿಕ್ಕವನಾಗುತ ಚಿಣ್ಣರ ಜೊತೆಯಲಿ
ಸಕ್ಕರೆ ಲಾವಣಿ ಪಾಡುವೆನು||ಪ||
ಹೆಮ್ಮೆಯ ಹಬ್ಬದ ವಿಷಯವಿದು|
ಹೊಮ್ಮಲು ಮುನ್ನಡೆ ವಿದ್ಯೆಯ ಜೊತೆಯಲಿ
ಕಮ್ಮವ ಕಲಿಯಿರಿ ನೀವಿಂದು||೧||
ದೇಶದ ಏಳಿಗೆ ಮನದಲಿ ತುಂಬುವ
ವೇಷವ ಧರಿಸುವ ನೀವೆಲ್ಲಾ|
ಆಸರೆ ನೀಡಿದ ಹಿರಿಯರ ಮರೆಯದೆ
ಪೋಷಣೆ ಮಾಡಿರಿ ಬಾಳೆಲ್ಲಾ||೨||
ಅರಿಯುವ ಸಮಯದಿ ಸಕಲವು ತಿಳಿವುದು
ಮೆರೆಯಲು ಅವಸರ ಮಾಡದಿರಿ|
ಪರಪರಿಯಾಸೆಗೆ ಮನವನು ಬಿಡದೆಲೆ
ಪರಿಸರ ರಕ್ಷಣೆ ಮಾಡುತಿರಿ||೩||
ಕಣ್ಣಿಗೆ ಕಾಣುವ ಸತ್ಯವದೆಲ್ಲವು
ಬೆಣ್ಣೆಯ ಹಾಗೇ ಜಾರುವುದು|
ಸುಣ್ಣದ ನೀರಿನ ತಣ್ಣನೆ ಹಾಲಿನ
ಬಣ್ಣದ ಪರಿಚಯವಾಗುವುದು||೪||
ಆಸೆಯ ಭರಿಸುವ ಭರದಲಿಯೆಂದಿಗು
ಮೋಸವ ಮಾಡದೆ ಬಾಳುತಿರಿ|
ಮೀಸೆಯು ಮೊಳೆಯುವ ವೇಳೆಗೆ ಹಾದಿಯ
ದೋಷಗಳರಿವನು ತಿಳಿಯುವಿರಿ||೫||
ದೇಶವ ಸುತ್ತುತ ಬದುಕಿನ ಬಹುವಿಧ
ವೇಷವ ನೋಡಲು ಕಾತರಿಸಿ|
ಭಾಷೆಯನರಿಯುವ ತವಕವ ತೋರುತ
ಕೋಶವನೋದಿರಿ ಮನವಿರಿಸಿ||೬||
ಪಶಿವೈ ಪಿಎಸ್ ವೈಲೇಶ ಕೊಡಗು
೧೪/೧೧/೨೦೧೯
Comments
Post a Comment