ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು :- ಡಾಕೇಶ್ ತಾಳಗುಂದ 
ಇವರ ಸಂಪೂರ್ಣ ಹೆಸರು:-  ಡಾಕೇಶ್ವರಪ್ಪ.ಆರ್.ಬಿ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತಾಳಗುಂದ ಗ್ರಾಮದ  ರಾಮಪ್ಪ. ಬಿ. ಹಾಗೂ   ರೇಣುಕಮ್ಮ ದಂಪತಿಯ ಮಗನಾಗಿ ೧೯೭೯ರ ಮಾರ್ಚ್ ೨೨ರ ಗುರುವಾರದಂದು ಜನಿಸಿದ್ದಾರೆ. ಇವರಿಗೆ ಸಹೋದರರಾಗಿ ಯೋಗೇಶ್ವರ, ಧರಣೇಶ್ ಸಹೋದರಿಯಾಗಿ ಭಾಗ್ಯಲಕ್ಷ್ಮೀ ಇದ್ದಾರೆ. ಪ್ರೀತಿಯ ಅತ್ತೆ ಸೋಮಕ್ಕನ ಮಮತೆ ಪ್ರೀತಿಯನ್ನು ತಾಯಿ ರೇಣುಕಮ್ಮನ ಅಕ್ಕರೆಯಂತೆಯೇ ಸಮನಾಗಿ ಉಂಡು ಬೆಳೆದವರು.‌
         ಎಂ.ಎ, ಬಿ.ಎಡ್. ಎನ್ ಇ ಟಿ ಪದವಿಗಳನ್ನು ಪಡೆದ ಬಳಿಕ ೦೭.೦೮.೨೦೦೮ ರಿಂದ ಸರಕಾರಿ ಪ್ರೌಢಶಾಲೆ ಮಾಣಿಲ ಮುರುವ ಅಂಚೆ ಬಂಟ್ವಾಳ ತಾಲೂಕ್ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕನಾಗಿ ಸೇವೆ ಪ್ರಾರಂಭಿಸಿದ್ದಾರೆ. ದಿನಾಂಕ ೦೧.೦೪.೨೦೧೫ ರಿಂದ ೧೧.೧೧.೨೦೧೬ರ ವರೆಗೆ ಪ್ರಭಾರ ಮುಖ್ಯಶಿಕ್ಷಕನಾಗಿ ಅದೇ ಶಾಲೆಯಲ್ಲಿ ಬಡ್ತಿ ಪಡೆದು ಸೇವೆ ಮುಂದುವರಿಸಿದ್ದಾರೆ.  ೧೨.೧೧.೨೦೧೬ ರಿಂದ ಸರಕಾರಿ ಪ್ರೌಢಶಾಲೆ ಕುಂಚೂರು ಹಿರೇಕೆರೂರು ತಾಲೂಕು ಹಾವೇರಿ ಜಿಲ್ಲೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಸವಳಂಗದಲ್ಲಿ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕನಾಗಿ ಪ್ರಸ್ತುತದವರೆಗೂ ಸೇವೆ ಸಲ್ಲಿಸುತ್ತಿದ್ದಾರೆ. ಎಸ್.ಎಸ್‌.ಎಲ್.ಸಿ ಯಲ್ಲಿ ಇದುವರೆಗೂ ೩೦ಕ್ಕೂ ಅಧಿಕ ಮಕ್ಕಳು ೧೨೫ಕ್ಕೆ ೧೨೫ ಅಂಕ ಪಡೆಯುವಲ್ಲಿ ಸಫಲರಾಗುವಲ್ಲಿ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಾಧಕ ಮಕ್ಕಳಿಗೆ ಅವರ ತಂದೆಯ ಹೆಸರಿನಲ್ಲಿ ಗೌರವದ ಅಭಿನಂದನಾ ಸನ್ಮಾನವನ್ನು ಮಾಡುತ್ತಾ ಬರುತ್ತಿದ್ದಾರೆ. 

  ಸಾಹಿತ್ಯವನ್ನು ತಮ್ಮ ಉಸಿರಾಗಿಸಿಕೊಂಡಿರುವ ಇವರು ಹಲವಾರು ಕವನಗಳು ಪ್ರಕಟಿಸಿದ್ದಾರೆ. ರಾಷ್ಟ್ರಕವಿ ಕುವೆಂಪು ಶತಮಾನೋತ್ಸವ ನಿಮಿತ್ತ ಪ್ರಕಟಿತ ಕುವೆಂಪು ಒಂದು ನೆನಪು ಕವನ ಸಂಕಲನದಲ್ಲಿ "ರಸ ಋಷಿಗೆ ಶರಣು" ಕವನ, ವಿಷು ಸಂವತ್ಸರದ ನೆನಪಿನ ವಿಷು ಕವನ ಸಂಕಲನದಲ್ಲಿ " ಪ್ರೇಮ ನಿವೇದನೆ " ಕವನ, ಭದ್ರಾವತಿಯಲ್ಲಿ ನಡೆದ ರಾಜ್ಯಮಟ್ಟದ ಪ್ರೇಮ ಕವಿಗೋಷ್ಠಿಯಲ್ಲಿ "ಹೃದಯ ದೇವತೆ" ಕವನ ವಾಚನ ಮಾಡಿದ್ದಾರೆ. 
           ಗೋವಿಂದ ಪೈ ನೆನಪಾರ್ಥ ಕವನ ಸ್ವರ್ಧೆಯಲ್ಲಿ "ಕನ್ನಡ ತಾಯಿ"  ಮೆಚ್ಚುಗೆಯ ಕವನವಾಗಿ ಗೌರವ ಪಡೆದಿದೆ. ಬೀದರ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಬಹು ಭಾಷಾ ಕವಿಗೋಷ್ಠಿಯಲ್ಲಿ "ಅನಾಥ ಪ್ರಜ್ಞೆ" ಕವನ, ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನಲ್ಲಿ ನಡೆದ ರಾಜ್ಯ ಮಟ್ಟದ ಕವನ ಸ್ವರ್ಧೆಯ ಕವಿಗೋಷ್ಠಿಯಲ್ಲಿ "ನನ್ನ ದೀಪಾವಳಿ" ಕವನ, ಮೈಸೂರಿನಲ್ಲಿ  ಕರ್ನಾಟಕ ರಕ್ಷಣಾ ವೇದಿಕೆಯು ನಡೆಸಿದ "ಹೊಸ ನಾಳೆ ಕಾವ್ಯ ಬೆಳೆ" ಕವಿಗೋಷ್ಠಿಯಲ್ಲಿ "ನಾವು ಅನ್ನದಾತರು" ಕವನ ವಾಚನಗಳನ್ನು ಮಾಡಿದ್ದಾರೆ. ಶಿಕಾರಿಪುರದ ಸಭಾಸಿನಿ ವೇದಿಕೆಯ ವಾರ್ಷಿಕ ಸಮಾರಂಭದ ಉಪನ್ಯಾಸವನ್ನು ಮಾಡಿದ್ದು ಗೌರವ ಸನ್ಮಾನವನ್ನು ಪಡೆದಿದ್ದಾರೆ.

  ೨೦೧೬ ರಲ್ಲಿ ಬೆಂಗಳೂರಿನ ನಮ್ಮ ಬಳಗದ ವತಿಯಿಂದ ರಚಿತವಾದ "ನನ್ನ ಗೀತೆ ನನ್ನವರ ಗಾಯನ" ಧ್ವನಿ ಸಾಂದ್ರಿಕೆಯ ೨೪ ಕವಿಗಳ ಹಾಡುಗಳಲ್ಲಿ ಇವರ "ಸ್ವಾರ್ಥವಿರದ ಪ್ರೀತಿ ನನ್ನದು" ಗೀತೆ ಅಡಕವಾಗಿದೆ. ಅರಸೀಕೆರೆಯಲ್ಲಿ ನಡೆದ ಕಾವ್ಯಕಮ್ಮಟದಲ್ಲಿ ನನ್ನ ಕವಿತೆ "ಹೆಣ್ಣು ಅಬಲೆಯಲ್ಲ" ಕವನ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಶಿವಮೊಗ್ಗ ಶಾಖೆಯ ವತಿಯಿಂದ ಹೊರತಂದ "ಸಿಹಿಮೊಗೆ ಸಂಭ್ರಮ" ಸ್ಮರಣ ಸಂಚಿಕೆಯಲ್ಲಿ ಇವರ ಏಳು ವಚನಗಳ ಜೊತೆಗೆ "ಮುನ್ನಡೆಯೋಣ" ಎಂಬ ಕವನವೂ ಪ್ರಕಟವಾಗಿವೆ. 
       ದಿನಾಂಕ : ೧೬.೦೯.೨೦೧೭ ರಂದು ದೇಶಪಾಂಡೆ ಸಾಹಿತ್ಯಿಕ ಮತ್ತು  ಸಾಂಸ್ಕೃತಿಕ ವೇದಿಕೆ (ರಿ)  ಬೀದರ್ ಇವರು ವಚನ ಸಾಹಿತ್ಯದ ಕೃಷಿಗೆ " ವಚನ ಪ್ರತಿಭಾ ರತ್ನ ಪ್ರಶಸ್ತಿ" ನೀಡಿ ಗೌರವಿಸಿದರು. ಡಿಸೆಂಬರ್ ೨೪ ೨೦೧೭ ರಂದು "ವಚನ ಪ್ರಣವ ಜ್ಯೋತಿ" ಮತ್ತು "ಇದು ಬರಿ ಬೆಳಗಲ್ಲೋ!!!" ಕೃತಿಗಳು ಇವರ ಸ್ವಂತ ಪ್ರಕಾಶನದಿಂದ ಲೋಕಾರ್ಪಣೆ ಮಾಡಿದ್ದಾರೆ. "ವಚನ ಪ್ರಣವ ಜ್ಯೋತಿ" ಕೃತಿಗೆ ಎಸ್.ಸಿ.ಇ.ಆರ್.ಡಿ ಟ್ರಸ್ಟ್ ಯಾನಗುಂದಿ ಸೇಡಂ ತಾ. ಕಲಬುರಗಿ ಜಿಲ್ಲೆ ಮಾತೋಶ್ರೀ ನಾಗಮ್ಮ ಆಶಪ್ಪ ಬೊಪ್ಪಾಲ್ ಸ್ಮರಣಾರ್ಥವಾಗಿ ಕೊಡಮಾಡುವ ೨೦೧೭ ನೇ ಸಾಲಿನ "ಅಕ್ಷರ ಲೋಕದ ನಕ್ಷತ್ರ " ಗೌರವ ಪ್ರಶಸ್ತಿಯನ್ನು ೩೧.೦೧.೨೦೧೮ ರ ಕಲ್ಯಾಣ ಕರ್ನಾಟಕ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಡೆದುಕೊಂಡಿದ್ದಾರೆ. ಹೆಚ್.ಎಸ್.ಆರ್.ಎ ಪ್ರಕಾಶನ ಬೆಂಗಳೂರು ಇವರಿಂದ "ಸಾಹಿತ್ಯ ಕಲಾ ಸಾಮ್ರಾಟ" ಪುರಸ್ಕಾರ, ಶಂಭುಗೌಡರ ಮಹಾಪರ್ವ ಪ್ರಕಾಶನದಿಂದ "ವಚನ ವಾಗ್ಮಯಿ" ಪುರಸ್ಕಾರ, ಜೀ.ಶಂ.ಪ ವೇದಿಕೆ ಮಂಡ್ಯ ಇವರಿಂದ "ಕಾವ್ಯ ಶ್ರೀ" ಪುರಸ್ಕಾರ, ಬಿ.ವೈ. ರಾಘವೇಂದ್ರ ಅವರ ಜನ್ಮ ದಿನದ ಸವಿನೆನಪಿನಂದು ಸಾಹಿತ್ಯ ಕ್ಷೇತ್ರದ ಸಾಧನೆಗೆ ಗೌರವ ಸನ್ಮಾನಕ್ಕೆ ಭಾಜನರಾಗಿದ್ದಾರೆ. 

        ಈಗಾಗಲೇ ಇವರು
೧. ವಚನ ಪ್ರಣವ ಜ್ಯೋತಿ ( ವಚನ ಸಂಕಲನ)
೨. ಇದು ಬರಿ ಬೆಳಗಲ್ಲೋ!! (ಕವನ ಸಂಕಲನ)
೩. ರಸ ಪೌರ್ಣಿಮೆ ( ಕವನ ಸಂಕಲನ)
೪. ಭಾವ ತೋರಣ ( ಸಂಪಾದನ ಕವನ ಸಂಕಲನ)
೫. ವಚನ ಪ್ರಣವ ಜ್ಯೋತಿ -೨ ( ವಚನ ಸಂಕಲನ)
೬. ಡಾಕೇಶನ ತ್ರಿಪದಿಕಾ ( ತ್ರಿಪದಿಗಳ ಸಂಕಲನ) ಎಂಬ ಒಟ್ಟು ಆರು ಕೃತಿಗಳನ್ನು ಲೋಕಾರ್ಪಣೆ ಮಾಡಿದ್ದಾರೆ
ಮುಂದುವರೆದು 
೧. ಕಾವ್ಯ ಕಲ್ಪ ವಲ್ಲರಿ (ಛಂದೋಬದ್ಧ ಕವನ ಸಂಕಲನ) 
೨. ಮುಕ್ತಕಗಳ ಸಂಕಲನ 
೩. ಕಥಾ ಸಂಕಲನ
೪. ಮೂರನೇ ವಚನ ಸಂಕಲನ
೫. ಕವನ ಸಂಕಲನಗಳು ಲೋಕಾರ್ಪಣೆಯ ಸಿದ್ಧತೆಯಲ್ಲಿ ಇವೆ. ಶಾಲಾವಧಿಯಲ್ಲಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ  ಮುರುವ ಮಾಣಿಲದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಷಣಕಾರನಾಗಿ, ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ಶ್ರೀಕೃಷ್ಣಾಷ್ಟಮಿ ನಿಮಿತ್ತ ಧಾರ್ಮಿಕ ಭಾಷಣವೂ ಸೇರಿದಂತೆ ಹಲವಾರು ಕಾರ್ಯಕ್ರಮ ಹಾಗೂ ಗೋಷ್ಠಿಗಳಲ್ಲಿ ಭಾಗಿಯಾಗಿದ್ದಾರೆ.
   ಪತ್ನಿ ಶ್ರೀದೇವಿ ಡಿ. ಹೆಚ್. ಮಕ್ಕಳಾದ ವಿಶ್ರುತ ಡಿ,  ವಿಭಾಶ್ರೀ ರೇಣುಕಾ ಮಗ ಶೌರಿ ಶ್ರೀವತ್ಸ ಡಿ ಇವರೊಂದಿಗೆ ಪ್ರಸ್ತುತ ನೌಕರಿಯನ್ನು ಸರಕಾರಿ ಪ್ರೌಢಶಾಲೆ ಸವಳಂಗದಲ್ಲಿ ನಿರ್ವಹಿಸುತ್ತಿದ್ದುದರ ನಿಮಿತ್ತ ಶಿಕಾರಿಪುರದಲ್ಲಿ ವಾಸವಾಗಿದ್ದಾರೆ. ಇವರ ಮುಂದಿನ ಬದುಕು ಬರೆಹ ಇನ್ನಷ್ಟು ಉನ್ನತಿಗೇರಲೆಂದು ಹಾರೈಸೋಣ. 

ವೈಲೇಶ.ಪಿ.ಎಸ್. ಕೊಡಗು
೮೮೬೧೪೦೫೭೩೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು