ಕಂಪ್ಲಾಪುರ ಮೋಹನ್ ಒಂದು ನೆನಪು
ಕಂಪ್ಲಾಪುರ ಮೋಹನ್ ಒಂದು ನೆನಪು
~~~~~~~~~~~~~~~~~~~~
೨೦೧೮ ಮೇ ತಿಂಗಳ ಯಾವುದೋ ಒಂದು ಪತ್ರಿಕೆಯಲ್ಲಿ ಕವಿಗೋಷ್ಠಿಯ ಜಾಹೀರಾತು. ಕಂಪ್ಲಾಪುರ ಮೋಹನ್‌ರವರ ದೂರವಾಣಿ ಸಂಖ್ಯೆ ದೊರಕಿತು. ನನ್ನ ಬಹಳ ದಿನಗಳ ಬಯಕೆ ಕಂಪ್ಲಾಪುರ ಮೋಹನ್‌ರವರ ಮನೆ ಮನೆ ಕವಿಗೋಷ್ಠಿಯಲ್ಲಿ ಭಾಗವಹಿಸುವುದಾಗಿತ್ತು. ಆದರೆ ಸಮಯ ಸಂದರ್ಭಗಳು ಒದಗಿಬರಲೇ ಇಲ್ಲ. ಆಗಾಗಲೇ ಹಾಸನದ ಮನೆ ಮನೆ ಕವಿಗೋಷ್ಠಿ ಬಳಗದಲ್ಲಿ ಕೊಟ್ರೇಶ್ ಉಪ್ಪಾರ್‌ರವರ ನೇತೃತ್ವದಲ್ಲಿ ನಡೆಯುತ್ತಿದ್ದ ಹಲವಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ. ಆ ಸಂದರ್ಭಗಳಲ್ಲಿ ಕೆಲವು ಆತ್ಮೀಯ ಗೆಳೆಯರ ಸಲಹೆಯ ಮೇರೆಗೆ ಕೊಡಗಿನಲ್ಲಿ ಮನೆ ಮನೆ ಕವಿಗೋಷ್ಠಿ ಬಳಗವನ್ನು ಸ್ಥಾಪಿಸಬೇಕು ಎಂಬ ಕನಸು ಗರಿಕೆದರಿತ್ತು. ಕಾಲ ಗಳಿಗೆ ಕೂಡಿಬರಬೇಕು ಮಾತ್ರವಲ್ಲದೆ ಅನುಭವ ಕೂಡ ಜೊತೆಯಲ್ಲಿ ಇರಬೇಕು ಎಂಬುದನ್ನು ಈಗಾಗಲೇ ಕೆಲವು ಕಹಿ ಅನುಭವಗಳನ್ನು ಮೆಲುಕು ಹಾಕಿ ಅಳೆದು ಸುರಿದು ಮೇ ತಿಂಗಳ ಕೊನೆಯ ವಾರದ ವೇಳೆಗೆ ನವೆಂಬರ್ ಹನ್ನೊಂದು ಎರಡು ಸಾವಿರದ ಹದಿನೆಂಟನೇ ಭಾನುವಾರದಂದು ಮನೆ ಮನೆ ಕಾವ್ಯಗೋಷ್ಠಿ ಬಳಗದ ಉದ್ಘಾಟನೆ ಎಂದು ಸ್ವತಃ ನಿರ್ಧರಿಸಿಬಿಟ್ಟೆ.
ಕಾರ್ಯಕ್ರಮ ಸ್ವಂತವಾಗಿ ಮಾಡಿ ಅನುಭವ ಇಲ್ಲ ಹಾಸನದ ಕವಿಗೋಷ್ಠಿಯಲ್ಲಿ ಭಾಗವಹಿಸುವ ಸಂದರ್ಭಗಳಲ್ಲಿ ಹೆಚ್ಚಾಗಿ ಗೆಳೆಯರ ಜೊತೆಗೆ ಸ್ಥಳವನ್ನು ತಲುಪುವ ವೇಳೆಗೆ ಕಾರ್ಯಕ್ರಮ ಆರಂಭಗೊಂಡಿರುತ್ತಿತ್ತು. ಯಾರನ್ನಾದರೂ ಕೇಳೋಣವೆಂದರೆ ಒಳಗೊಳಗೇ ಭಯ ಜೊತೆಗೆ ಅಪಹಾಸ್ಯ ಮಾಡುವರೇನೋ ಎಂಬ ಅಳುಕು. ಗೆಳೆಯ ದೇಸು ಆಲೂರು ಒಂದಷ್ಟು ನೀತಿ ನಿಯಮಗಳನ್ನು ಹೇಳಿಕೊಟ್ಟರು. ನನಗೋ ಅವು ಪುಸ್ತಕದ ಬದನೆಕಾಯಿ ಎನ್ನುವಂತಾಯಿತು. ಸಾರಿಗೆ ಬರದೇ ಇದ್ದರೂ ತಲೆಯೊಳಗೆ ತುಂಬಿಕೊಂಡೆ. ಸರಿ ಥಿಯರಿ ಆಯಿತು ಈಗ ಪ್ರಾಕ್ಟಿಕಲ್ ಬೇಕು ಎನಿಸಿತು ಕೊಟ್ರೇಶ್‌ರವರಲ್ಲಿ ವಿಚಾರಿಸುವ ಎಂದರೆ ಏನೋ ಸಂಕೋಚ ಜೊತೆಗೆ ಹಾಸನದ ಸರಳ ರೀತಿಯ ಕವಿಗೋಷ್ಠಿಗಳಂತೆ ಕೊಡಗಿನಲ್ಲಿ ನಡೆಸಲು ಸಾಧ್ಯವೇ ಎಂಬ ದಿಗಿಲು ನನ್ನನ್ನು ಪರ್ಯಾಯ ಕಲಿಕೆಯನ್ನು ಹುಡುಕುವಂತೆ ಮಾಡಿತು. ಆಗಸ್ಟ್ ತಿಂಗಳ ಒಂದು ದಿನ ಕೊಡಗು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಲೋಕೇಶ್ ಸಾಗರ್‌ರವರಲ್ಲಿ ಕಂಪ್ಲಾಪುರ ಮೋಹನ್‌ರವರ ದೂರವಾಣಿ ಸಂಖ್ಯೆ ಕೇಳಿದೆ.
ಎರಡು ದಿನಗಳ ನಂತರ ಅವರು ಕೊಟ್ಟ ನಂಬರ್ ನನ್ನ ಮೊಬೈಲ್‌ಗೆ ಸೇರಿಸುತ್ತಿದ್ದಂತೆಯೇ ಕಂಪ್ಲಾಪುರ ಮೋಹನ್ ಎಂದು ಮೊಬೈಲ್ ತೋರಿಸುತ್ತಿತ್ತು. ಆಗ ಎರಡು ತಿಂಗಳ ಹಿಂದೆ ಮೋಹನ್‌ರವರ ದೂರವಾಣಿ ಸಂಖ್ಯೆ ಅಡಕಗೊಳಿಸಿರುವುದು ಜ್ಞಾಪಕ ಬಂತು. ಸರಿ ಇನ್ನೇನು ಪೋನ್ ಮಾಡಿದೆ ಕೆಲವು ಪ್ರಾಥಮಿಕ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ದಿನಾಂಕ ನಿಗದಿಪಡಿಸಿಕೊಂಡು ಪಿರಿಯಾಪಟ್ಟಣಕ್ಕೆ ಹೋಗಿ ಮಾತನಾಡುವುದೆಂದು ತೀರ್ಮಾನಿಸಿಕೊಂಡೆವು. ನಿಗದಿತ ದಿನ ನಿಗದಿತ ಸಮಯಕ್ಕೆ ಒಂದು ಗಂಟೆ ಮುಂಚಿತವಾಗಿ ನನಗೊಂದು ಪೋನ್ ಬಂತು ನೋಡಿದರೆ ಅದು ಕಂಪ್ಲಾಪುರ ಮೋಹನ್‌ರವರ ಪೋನ್ ಆಗಿತ್ತು. ಉಭಯಕುಸಲೋಪರಿಯ ನಂತರ ಸಮಯಕ್ಕೆ ಸರಿಯಾಗಿ ತಲುಪುವುದಾಗಿ ತಿಳಿಸಿದೆ. ಪಿರಿಯಾಪಟ್ಟಣ ಬಸ್ ನಿಲ್ದಾಣ ತಲುಪುವ ವೇಳೆಗೆ ಮತ್ತೆ ಪೋನ್ ಮಾಡಿದರು. ಬಸ್ ಇಳಿದು ಅವರನ್ನು ಹುಡುಕುವ ಅಗತ್ಯವೇ ಬರಲಿಲ್ಲ ಮನೆ ಮನೆ ಕವಿಗೋಷ್ಠಿ ಬಳಗ ಪಿರಿಯಾಪಟ್ಟಣದ ಉಪಾಧ್ಯಕ್ಷರಾದ ಶ್ರೀ ಜಹೂರ್ ಆಲಿಯೊಂದಿಗೆ ಬಸ್ ನಿಲ್ದಾಣದಲ್ಲಿ ಕುಳಿತಿದ್ದರು. ಪರಸ್ಪರ ಪರಿಚಯದ ಬಳಿಕ ಮನೆಗೆ ಕರೆದೊಯ್ದು ತನ್ನ ತಮ್ಮ ಕೆ ವಿ ವೆಂಕಟೇಶ್‌ರವರು ಹಾಸನದ ಮನೆ ಮನೆ ಕವಿಗೋಷ್ಠಿಯಲ್ಲಿ ಭಾಗವಹಿಸಿ ಸ್ಫೂರ್ತಿಗೊಂಡು ತನಗೆ ಕಂಪ್ಲಾಪುರದಲ್ಲಿ ಮನೆ ಮನೆ ಕವಿಗೋಷ್ಠಿ ಪ್ರಾರಂಭಿಸಲು ಒತ್ತಾಸೆಯಾಗಿದ್ದು ಕಾರ್ಯಕ್ರಮದ ಆಯೋಜನೆಯನ್ನು ಹೇಗೆ ಮಾಡಬೇಕು ಎಂಬ ಎಲ್ಲ ವಿವರಗಳನ್ನು ತಿಳಿಸಿ ಕೊಟ್ಟರು.
ಆಗಿನ್ನೂ ಸೆಪ್ಟೆಂಬರ್ ತಿಂಗಳ ಮೊದಲ ವಾರ ನವೆಂಬರ್ ತಿಂಗಳ ಎರಡನೇ ವಾರದಲ್ಲಿ ನಮ್ಮ ಮನೆ ಮನೆ ಕಾವ್ಯಗೋಷ್ಠಿ ಪರಿವಾರದ ಉದ್ಘಾಟನೆ ಎಂದು ನಿರ್ಧರಿಸಿಯಾಗಿದೆ ಬದಲಾವಣೆಗಳನ್ನು ಯಾವುದೇ ಕಾರಣದಿಂದಾಗಿ ಮಾಡುವುದಿಲ್ಲ ಎಂದು ನಾವು ಮನೆಯವರೆಲ್ಲರೂ ಒಮ್ಮತದಿಂದ ಅಂದುಕೊಂಡಿದ್ದೇವೆ. ಅತಿಥಿ ಅಧ್ಯಕ್ಷರ ಆಯ್ಕೆ ಮಾಡಲಾಯಿತು. ದಿನಾಂಕವು ಹತ್ತಿರ ಬಂದಂತೆ ಎಲ್ಲರಿಗೂ ಆಹ್ವಾನವನ್ನು ನೀಡಿದೆವು ಅಂತೆಯೇ ಕಂಪ್ಲಾಪುರ ಮೋಹನ್‌ರವರ ಹಸ್ತದಿಂದ ಉದ್ಘಾಟನೆ ಮಾಡಿಸುವುದು ಎಂದು ನಿರ್ಧರಿಸಿ ಆಹ್ವಾನಿಸಿದಾಗ ನನ್ನ ಆರೋಗ್ಯ ಸರಿ ಇಲ್ಲ ಆದ ಕಾರಣ ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸುವುದು ಬೇಡ ಆದರೆ ಬಂದೇ ಬರುವೆ ಎಂಬ ಉತ್ತರ ದೊರೆಯಿತು. ಸರಿ ೧೧/೧೧/೨೦೧೮ ರಂದು ನಿಗದಿತ ಸಮಯಕ್ಕೆ ಕಾರ್ಯಕ್ರಮ ಜರುಗಬೇಕು ಎನ್ನುವಷ್ಟರಲ್ಲಿ ನಾವು ನಿಗಪಡಿಸಿಕೊಂಡಿದ್ದ ಅಧ್ಯಕ್ಷರು ಮತ್ತು ಉದ್ಘಾಟಕರು ಅನಿವಾರ್ಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದಾಗಿಬಿಡುತ್ತದೆ. ಇಂತಹ ಸಂದರ್ಭಗಳನ್ನು ಈಗಾಗಲೇ ಸಮರ್ಥ ಕನ್ನಡಿಗರು ಬಳಗದಲ್ಲಿ ಅನುಭವಿಸಿ ಧೃತಿಗೆಡದೆ ಕಾರ್ಯಕ್ರಮವನ್ನು ಮುನ್ನಡೆಸುತ್ತಿದ್ದ ನಮಗೆ ಬೇಸರವಾಗಲೇ ಇಲ್ಲ. ತತ್ಕ್ಷಣವೇ ಅಲ್ಲಿಯೇ ಇದ್ದ ಒಬ್ಬರು ಅತಿಥಿಗಳನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. ಅಷ್ಟರಲ್ಲಿ ಕಂಪ್ಲಾಪುರ ಮೋಹನ್‌ರವರ ಪೋನ್ ಕೂಡ ಬಂತು ಇನ್ನೊಂದು ಕಾಲು ಗಂಟೆ ಅವಧಿಯಲ್ಲಿ ಕಾರ್ಯಕ್ರಮದ ಸ್ಥಳಕ್ಕೆ ತಲುಪುವೆ ಎಂದು ಹೇಳಿದರು. ಮುನ್ನಾ ದಿನ ಮೋಹನ್‌ರವರಿಗೆ ಕರೆಮಾಡಿದಾಗ ಆಸ್ಪತ್ರೆಯಿಂದ ಬಂದು ಮಲಗಿದ್ದಾರೆ ಎಂದು ಅವರ ಸೊಸೆ ಹೇಳಿದ್ದರು ಬೆಳಿಗ್ಗೆ ಎಂಟು ಗಂಟೆಗೆ ಪೋನ್ ಮಾಡಿದಾಗ ಮಲಗಿದ್ದಾರೆ ಎಂದವರು ಹತ್ತು ಗಂಟೆಗೆ ವಿರಾಜಪೇಟೆಯ ನಮ್ಮ ಮನೆಯ ಬಳಿ ತಲುಪಿದ್ದರು. ಮತ್ತು ನಾವು ಮೊದಲು ನಿಶ್ಚಯಿಸಿದಂತೆ ಕಂಪ್ಲಾಪುರ ಮೋಹನ್‌ರವರೇ ನಮ್ಮ ಮನೆ ಮನೆ ಕಾವ್ಯಗೋಷ್ಠಿ ಬಳಗವನ್ನು ಉದ್ಘಾಟನೆ ಕೂಡ ಮಾಡಿದರು.
ಕವಿಗೋಷ್ಠಿ ಎಂದರೆ ಅದಮ್ಯ ಉತ್ಸಾಹ ತೋರಿಸುತ್ತಿದ್ದ ಕಂಪ್ಲಾಪುರ ಮೋಹನ್‌ರವರು ನಮ್ಮ ಮನೆ ಮನೆ ಕಾವ್ಯಗೋಷ್ಠಿ ಪರಿವಾರದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಅವರ ಅರೋಗ್ಯ ಪರಿಸ್ಥಿತಿಯನ್ನು ಅರಿತಿದ್ದ ಕಾರಣದಿಂದಾಗಿ ಅವರಿಗೆ ಆಹ್ವಾನವನ್ನು ನೀಡದೆ ಇದ್ದ ಸಂದರ್ಭಗಳಲ್ಲಿ ಏಕೆ ಕರೆಯಲಿಲ್ಲ ನನ್ನನ್ನು ಎಂದು ಹಲವಾರು ಬಾರಿ ಕೇಳಿದ್ದಾರೆ. ನಿರುತ್ತರನಾದ ನಾನು ಅಸಹಾಯಕತೆ ಹೊರತುಪಡಿಸಿ ಬೇರೆ ಮಾತನಾಡುತ್ತಿರಲಿಲ್ಲ. ಒಮ್ಮೆ ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಗ್ರಾಮದಲ್ಲಿ ಕುಮಾರಿ ರಾಧ ಅವರ ಒಂದು ಕವಿಗೋಷ್ಠಿಗೆ ಹೋಗಬೇಕು ಎಂದು ಮನೆಯವರ ವಿರೋಧದ ನಡುವೆಯೂ ಒಬ್ಬರೇ ಬಸ್ಸಿನಲ್ಲಿ ಹೊರಟು ಬಂದುಬಿಟ್ಟಿದ್ದಾರೆ ಮೊಬೈಲ್ ಸಹ ತಂದಿರಲಿಲ್ಲ. ಅದೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಸ್ವಲ್ಪ ತಡವಾಗಿ ಹೋದ ನನಗೆ ಅವರನ್ನು ಕಂಡು ಸಂತೋಷವಾಯಿತು.
ಕಾರ್ಯಕ್ರಮದ ನಂತರ ನಾವು ನಮ್ಮ ಹಿರಿಯ ಕವಯತ್ರಿಯರಾದ ಅಕ್ಕ ಎಂದೇ ಕರೆಯುವ ಜಲ ಕಾಳಪ್ಪನವರ ಮನೆಗೆ ಹೋಗಬೇಕು ಎಂದರು ಸರಿ ಹೋಗಿ ಬಂದೆವು ಜಲಕ್ಕನವರ ಮನೆಯಿಂದ ಬಸ್ ನಿಲ್ದಾಣಕ್ಕೆ ಬಂದರೆ ನಮಗಿಬ್ಬರಿಗೂ ಬಸ್ ತಡವಾಗಿ ಬರುವುದು ಎಂದು ತಿಳಿಯುತ್ತದೆ. ಅ ಸಂದರ್ಭದಲ್ಲಿ ಅವರ ಆರೋಗ್ಯದ ಬಗ್ಗೆ ನನಗೆ ಸರಿಯಾದ ಮಾಹಿತಿ ಇದ್ದು ಅವರನ್ನು ಒಬ್ಬರನ್ನೇ ಪಿರಿಯಾಪಟ್ಟಣಕ್ಕೆ ಕಳುಹಿಸಲಾಗದ ಸಂಕಟ ಹೋಗಿ ಅವರನ್ನು ಮನೆಗೆ ಬಿಟ್ಟು ನಂತರ ನನ್ನ ಮನೆಗೆ ಹೋಗುವ ಎಂದರೆ ಅತ್ಯಂತ ಜರೂರು ಕೆಲಸದ ವಿಚಾರ ನನಗೂ ಕೂಡ ಮನೆಗೆ ಹೋಗಬೇಕಾದ ಅಗತ್ಯತೆ ಒಟ್ಟಾರೆ ಅವರು ಮನೆ ತಲುಪಿ ನನಗೆ ಪೋನ್ ಮಾಡಿದ ಬಳಕವಷ್ಟೇ ನಿರಾಳವಾಯಿತು.
ಅವರ ಮನೆಗೆ ನಾನು ಕೊನೆಯ ಬಾರಿ ಹೋದಾಗ ಮನೆ ಮಾತ್ರ ಬದಲಾಗಿತ್ತು ಮನೆಯವರ ಮನಸ್ಸು ಮಾತ್ರ ಹಾಗೆಯೇ ಇತ್ತು ಬರುವೆ ಎಂದು ಮೊದಲೇ ತಿಳಸಿದ್ದ ಕಾರಣದಿಂದಾಗಿ ಎರಡು ಪೋನ್ ಮಾಡಿದ ಬಳಿಕ ಊಟ ಮುಗಿಸಿ ಕುಳಿತ್ತಿದ್ದರು. ಎಂದಿನ ತಮ್ಮ ಶೈಲಿಯಲ್ಲಿ ಮಾತನಾಡಿಸಿ ತಮ್ಮ ಶ್ರೀಮತಿಯವರಿಗೆ ನನಗೆ ಊಟ ಬಡಿಸಲು ತಿಳಿಸಿ ಊಟ ಮಾಡುವವರೆಗೂ ಜೊತೆಯಲ್ಲಿಯೇ ಕುಳಿತಿರುತ್ತಿದ್ದರು. ಸಾಹಿತ್ಯದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದ್ದಂತೆ ಅವರನ್ನು ಒಂದು ಮಾತು ಕೇಳಿದೆ ಮತ್ತು ಆ ಬೇಟಿಯ ಉದ್ದೇಶ ಕೂಡ ಅವರನ್ನು ಆ ವಿಚಾರ ಕೇಳುವುದೇ ಆಗಿತ್ತು. ಸರ್ ನಿಮ್ಮ ಅಭಿನಂದನಾ ಗ್ರಂಥವನ್ನು ಮಾಡುವ ಎಂದು ಕೇಳಿದಾಗ "ನನ್ನ ಸಾಧನೆ ಏನೇನೂ ಸಾಲದು ನನಗೇಕೆ ಅಭಿನಂದನಾ ಗ್ರಂಥ" ಎಂದು ಬಿಟ್ಟರು. ಮೈಸೂರು ಮಂಡ್ಯ ಚಾಮರಾಜನಗರ ಹುಣಸೂರು ಹೆಚ್ ಡಿ ಕೋಟೆ ಕೆ ಆರ್ ನಗರದ ಅದೆಷ್ಟೋ ಕವಿ ಕವಯತ್ರಿಯರನ್ನು ಬೆಳಸಿದ ಇವರ ಸಾಧನೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ನನಗನ್ನಿಸಿತು. ಹುಣಸೂರಿಗೆ ಹೋಗಿದ್ದ ಮಗ ಸೊಸೆ ಬಂದ ನಂತರ ಈ ಮಾತುಗಳನ್ನು ಅವರೆದುರು ಹೇಳಿ ನಕ್ಕುಬಿಟ್ಟರು.
ನೂರಾರು ಕವಿ ಕವಯತ್ರಿಯರು ಸಾಧನೆಗೆ ಹಾದಿ ತೋರಿಸುವ ಮೂಲಕ ತಮ್ಮ ತನು ಮನ ಧನವನ್ನು ಸಾಹಿತ್ಯ ಸೇವೆಗೆ ಮುಡಿಪಾಗಿಟ್ಟ ಹಿರಿಯ ಜೀವ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ನಮ್ಮೆಲ್ಲರ ಮನ ಮನೆಯಲ್ಲಿ ನೆಲೆಸಿದ್ದಾರೆ ಎಂಬುದಾಗಿ ಹೇಳುತ್ತಾ ಇಂತಹ ಸಾಧಕರನ್ನು ನೆನಪಿಸುವ ಸಲುವಾಗಿ ಒಂದು ನುಡಿ ನಮನ ಕೃತಿಯನ್ನು ನಾವೆಲ್ಲರೂ ಸೇರಿ ಮಾಡಬೇಕಾದ ಅಗತ್ಯವಿದೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಇವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪರಮಾತ್ಮನನ್ನು ಬೇಡುವೆ.
Comments
Post a Comment