ಹೋಗದಿರು ರಾಧೆ

ಹೋಗದಿರು ರಾಧೆ.
~~~~~~~~~~

ಪರಿಧಿಯ ಮೀರಿ 
ಹೋಗದಿರು ರಾಧೆ
ನೀನಿರದಿರೆ ಎನ್ನೊಳು 
ಮುಗಿಯದೆ ಭಾದೆ

ಏರಿದ ಕಾವನು 
ತಣಿಸಲಾರದು ಕಾವೇರಿ
ತೀರದ ದಾಹದಲಿ 
ತುಂಗಾಜಲವಲ್ಲ ಭದ್ರಾ 

ಕೈಬಳೆಯ ಕಿಣಿ ಕಿಣಿಗೆ 
ಕಾಲ್ಗೆಜ್ಜೆ ತಾಳಕ್ಕೆ 
ಮನ ಕುಣಿದಿದೆ ನಿನ್ನ 
ನಿಜರೂಪವನರಸಿದೆ 

ತಂಗಾಳಿಯೇ ಮೃದು 
ಸೆರಗಂತೆ ಸೋಕಿರಲು
ಮೈಮನ ಬಿರಿದರಳುತಿದೆ
ಉರುಳಾಗಿ ಕಾಡಿದೆ 

ಕೇಶರಾಶಿಯ ಘಮಲನು
ನಾಶಿಕವು ಆಘ್ರಾಣಿಸಿ 
ಸುಮಧುರ ಭಾವನೆಯ 
ಹುಚ್ಚು ಕಿಚ್ಚಾಗುತಿದೆ ರಾಧೆ

ಮುಂಗುರುಳ 
ನರ್ತನವನರಿತು 
ನಿನ್ನಂದವ ಸವಿಯುವ 
ಬಯಕೆಯೊಡ ಮೂಡಿದೆ 

ಹದಿನಾರು ಸಾವಿರ 
ಜೋಡಿಕಂಗಳಲಿ
ಕಾಣದ ಹೊಳಪದು 
ಎನ್ನೆದೆಯನಿರಿದಿದೆ

ಬಳಿ ಬಾರೇ ಒಲವೆ
ನೀ ಎನ್ನ ಬಾಳಿನೊಡವೆ 
ಏಕೆ ಈ ಜಗದ ಗೊಡವೆ 
ಕರೆದಾಗೆಲ್ಲಾ ನಾನೋಗೊಡುವೆ 

ಮುನಿಸುಗಳ ಮನ್ನಿಸು 
ಮೈ ಮನವ ಮುದ್ದಿಸು 
ಪ್ರೇಮದೊಲವ ನೀ ಹರಿಸು 
ಈ ಜಗದಿಂದ ಎನ್ನ ಸರಿಸು ಸರಸಿಜಾಕ್ಷೆ

ಪಶಿವೈ
ಪಿ ಎಸ್ ವೈಲೇಶ ಕೊಡಗು
೨೨/೧೧/೨೦೧೯






Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು