ಬಾಳ್ವೆ ನಮದಾಯ್ತು

ಬಾಳ್ವೆ ನಮದಾಯ್ತು
~~~~~~~~~~~
ಕರಿಯ ರವಿಕೆಯ ತೊಟ್ಟು ನಗುತಲಿ
ಜರಿಯ ಲಂಗದಿ ಮಿನುಗಿ  ಚಿಮ್ಮುತ
ಹರನ ಸತಿಯನು ಹೋಲುವಂದದಿ ಬಂದೆ ನೀನಂದು|
ಸುರಿವ ಚೆಲುವನು ಕಂಡು ಮನದಲಿ 
ಕೊರಗಿ ನಲುಗಿದೆ ಕನಸ ಕಾಣುತ
ಮರುಗಿ ಫಲವಿದೆಯೆನಿಸಲಿಲ್ಲವೊ ನಿನ್ನ ಚೆಲುವೆದುರು||

ಅತ್ತೆ ಮಗಳೇ ಕೇಳು ನಿನ್ನನು 
ಸುತ್ತ ಹುಡುಕಿದೆ ನತ್ತು ನೋಡಲು
ಕತ್ತು ಕೊಂಕಿಸಿ ಹೊರಟು ಹೋದೆಯ ಮನವ ನೀ ಕೆಡಿಸಿ| 
ಕಿತ್ತು ಬರುತಿಹ ಭಾವದಿಂದಲಿ
ಹೊತ್ತು ಹೊತ್ತಿಗೆ ಕೂಳು ತಿನ್ನದೆ
ಸತ್ತು ಹೋಗುವ ಹಾದಿ ಹಿಡಿದಿದೆ ತನುವು ನಿನ್ನಾಣೆ||

ಅಮ್ಮನರಿತಳು ನನ್ನ ಭಾವನೆ
ಸುಮ್ಮನಿರದೆಲೆ ನಿನ್ನ ತಂದೆಯ
ತಮ್ಮನೆದುರಲಿ ಮಗನ ಮದುವೆಯ ವಿಷಯ ವಿಟ್ಟಿರಲು|
ನಿಮ್ಮ ತಾಯಿಯ ಕೇಳಿ ನೋಡಲು 
ಸಮ್ಮತಿಗಳನು ಪಡೆದು ಹಿರಿಯರ
ಸಮ್ಮುಖದಲಿಯೆ ಲಗ್ನ ತಿಳಿಯಲು ಮನವ ಮಾಡಿದರು||

ಭಗ್ನವಾಯಿತು ಕಷ್ಟವೆಲ್ಲವು
ಲಗ್ನ ಪತ್ರಿಕೆ ಹಂಚಿಕೊಂಡೆವು
ವಿಘ್ನವಿರದೆಲೆ ಮದುವೆ ನಡೆಯಲು ಕೋರಿ ಕೊಂಡಿಹೆವು|
ಅಗ್ನಿದೀಪನವಾಯ್ತು ಕುಂಡದಿ
ವಿಘ್ನರಾಜನ ಕರುಣೆಯಿಂದಲಿ
ಲಗ್ನ ಮುಗಿಯಲು ಹರುಷದಿಂದಿಹ ಬಾಳ್ವೆ ನಮದಾಯ್ತು.|| 

ಪಶಿವೈ 
ಪಿ ಎಸ್ ವೈಲೇಶ ಕೊಡಗು
೨೭/೧೧/೨೦೧೯

 

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು