ಕುಂತರು ನಿಂತರು ಸುರಿಯುತ್ತದೆ

ಕುಂತರು ನಿಂತರು ಸುರಿಯುತಿದೆ
~~~~~~~~~~~~~~~~~
ಅಗಜಾ ಬಂದಳು ತೌರಿನ ಮನೆಕಡೆ
ಮಗನದೊ ಬಂದಿಹನೆನ್ನುತಲಿ
ಜಗದಲಿ ಬಿಡದಿಹ ವರ್ಷದ ಲಾವಣಿ
ಮಗರಿಸ ಸೇರಿಸಿ ಹಾಡುವೆನು

ಅಮ್ಮನ ತೌರಿನ ಮೋದಕ ಮೆಲ್ಲುತ
ಸುಮ್ಮನೆ ನಡಿಗೆಗೆ ಹೊರಟಿಹನು
ಹೊಮ್ಮಿದ ಮಳೆಯಲಿ ನೆನೆಯಲು ಮೂಷಿಕ
ಚಿಮ್ಮುತ ಛತ್ರಿಯ ತಂದಿಹನು

ಆತನ ನೋಟಕೆ ಮನುಜರು ನೋವಲಿ
ಸೋತಿಹ ಸಂಗತಿ ಕಾಣುತಿರೆ
ಮಾತೆಯ ಕರೆಯಲು ಬಂದಿಹ ಗಣಪನು
ಭೀತಿಯ ಪಡುವರ ನೋಡಿದನು

ಎಂತಹ ಮಳೆಯಿದು ಗಳಿಗೆಯು ಬಿಡದೆಲೆ
ಕುಂತರು ನಿಂತರು ಸುರಿಯುತಿದೆ
ಸಂತರ ಹಾಗಿರ ಬೇಕಿಹ ವರಣನು
ಸಂತೆಯ ಕೆಡಿಸುತ ನಡೆದಿಹನೆ

ದೂರದ ಬೆಟ್ಟದ ಬುಡದಲಿ ನಲುಗಿಹ
ತೋರದ ಲೋಗರ ತಾ ನೋಡಿ 
ಬಾರದ ಲೋಕಕೆ ನಡೆದಿಹ ಬಂಧುವ
ತೀರದ ಬವಣೆಗೆ ಮರುಗಿದನು

ಗಣಪನು ಕೋಪದಿ ವರುಣನ ಕೇಳಿದ
ಜನಗಳ ಕಷ್ಟವ ತಾನರಿತು
ಗುಣವಿದು ಬಿಡದಿಹೆಯೆಂದಿನ ಕಾಲಕು 
ಮನಗಳ ನೋಯಿಪೆ ಸರಿಯೇನು 

ಬೆನಕನ ಮಾತಿಗೆ ಬೆದರುತಲೆಂದನು 
ಕನಿಕರವಿರದೆಲೆ ಸುರಿದಿಲ್ಲ 
ವನಗಳ ತರಿದಿರೆ ಪರಿಸರ ಕೆಡಿಸಿರೆ
ನನಗಿದ ತಡೆಯಲು ಕಸುವಿಲ್ಲ

ಮರಗಳ ಕಡಿದಿಹ ಮನುಜರ ಶಿಕ್ಷಿಸೆ
ಹರನಲಿ ನುಡಿದೆನು ಫಲವಿಲ್ಲ 
ವರವನು ನೀಡುವ ಭರದಲಿ ಪರಶಿವ 
ಪರಿಸರ ಮರೆತಂತಿಹನಲ್ಲ

ಪರಿಸರ ಜೀವನವರಿತಿಹ ಹರನಿವ 
ಪರಿಪರಿ ಮರುಗಿದ ಮನದಲ್ಲಿ 
ಮರವನು ತರಿಯುವ ಲೋಗರ ನರಕಕೆ
ಕರೆಯಲು ಬಂದನು ಜವರಾಯ

ಸುಮವದೊ ಸವೆವುದದೆನ್ನುವ ಪರಿಯಿರೆ
ಸಮಸಮದೊಲವಲಿ ಕಾಣುತಿರೆ
ತಮವನು ಹರಡದೆ ಬೆಳಕನು ಚೆಲ್ಲಲು
ಘಮಘಮ ನಮ್ಮಯ ಬದುಕಿಂದು

ಪಶಿವೈ 
ಪಿ ಎಸ್ ವೈಲೇಶ ಕೊಡಗು
೫/೯/೨೦೧೯

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು