ಅಮ್ಮನ ಮಡಿಲಲ್ಲಿ
ಅಮ್ಮನ ಮಡಿಲಲ್ಲಿ
ಆಲದ ಸಸಿಯ ಸ್ವಗತ
~~~~~~~~~~
ಅಂದೊಮ್ಮೆ ಅಮ್ಮನ ಮಡಿಲಲ್ಲಿ ಹಕ್ಕಿಯು ಕುಕ್ಕಿ ಕುಕ್ಕಿ ನನ್ನ ಕಬಳಿಸಿತ್ತು.
ಸಂದಿಗೊಂದಿಯಲಿ ಹಾರಿ ನಡುವೆ ಗಾಳಿಯಲಿ
ಹಿಕ್ಕೆಯಂತೆನ್ನ ತೂರಿಬಿಟ್ಟಿತ್ತು
ಜೋರಾದ ಗಾಳಿಯ ಹೊಡೆತವೆನ್ನ ಒಯ್ದು
ಕಲ್ಲು ಕಟ್ಟಡದ ಎಡೆಯಲ್ಲಿ ಕೂರಿಸಿತ್ತು
ನೀರಿನಾವಿಯ ತುಂತುರು ಹನಿಗೆ ಸಂತಸದ
ಗೆಲ್ಲುಗಳು ಮೂಡಿ ಮನ ನಲಿದಿತ್ತು
ಹೆಚ್ಚೇನು ಉಳಿಯದೆ ಸಂತಸ ಸಂಕಟ ಮತ್ತೆ
ಹಲ್ಲು ಕಿಸಿದು ನಕ್ಕಂತಾಯ್ತು
ಹೆಜ್ಜೇನು ಸವಿಯಂತೆ ಬಂದ ದೂಳಕಣವದು
ಎಲ್ಲ ಕಡೆಯಾವರಿಸಿ ಚಿಗುರೊಡೆದಾಯ್ತು
ಅರಿವು ಮೂಡಿದಾಗ ಹೆಮ್ಮರವಾಗಲೆನ್ನ
ಬಿಡಲಾರರಿವರೆಂದೆನಿಸಿತ್ತು
ಅವರಿವರಿಗೆ ತಿಳಿಸಲೆಂದೇ ಕ್ಯಾಮರಾ ಕಣ್ಣು
ಬಡಿದು ರೆಪ್ಪೆಯನು ಚಿತ್ರವಾಯಿತು
ಎಂದಿಗೆ ಬರುವರೋ ಎನ್ನ ಕಿತ್ತೊಗೆಯಲು
ಮಂದಿಯೆಂದು ಕಾಯುತ್ತಿರುವೆ
ಮುಂದೆ ಹರಿವ ನದಿಯೊಳು ಸರಿದು ಕೊಳೆತು
ಮಂದಿ ತಿನ್ನುವನ್ನಕೆ ಗೊಬ್ಬರವಾಗುವೆ
ಈ ಜನುಮವಲ್ಲಿಗೆ ಸಾರ್ಥಕದ ಭಾವವು
ಮೂಡಿ ಬಂದು ಸಂತಸಗೊಂಡೆ
ಮರುಜನ್ಮವಿದ್ದೊಡೆ ನೆರಳ್ಹಣ್ಣು ನೀಡುವನಕ
ಕೂಡಿರಲಿ ಅಯಷ್ಯವೆಂದು ಬೇಡಿಕೊಂಡೆ.
ಪಶಿವೈ
ಪಿ ಎಸ್ ವೈಲೇಶ ಕೊಡಗು
೩/೧೧/೨೦೧೯
Comments
Post a Comment