ಮುಕ್ತಕ ಮಾಲೆ ೧೫೧ ರಿಂದ

ಸುತ್ತಲಿರುವವರ ಘನ
ಚಿತ್ತವನು ಸೆಳೆಯುತಲಿ
ಮತ್ತಿನೊಳು ಸಿಲುಕಿಸುವ ಯತ್ನವೇಕೆ|
ಮುತ್ತಿನಿರವನರಿಯದೆ
ಹತ್ತರೊಳಗೊಂದಾಗಿ
ಸತ್ತುಹೋಗದಿರಿಯೆಂಬ  ಬೊಮ್ಮಲಿಂಗ|೧೫೧||

ಹುಟ್ಟಿದರು ಕೆಟ್ಟವರ
ಮೆಟ್ಟಿ ಮುರಿಯಲು ಬಲ್ಲ 
ಜಟ್ಟಿಯಂದದಿ ನಿಂದ ರಾಷ್ಟ್ರಬಂಧು|
ಸೊಟ್ಟಮನಗಳಿಗಿಂದು
ತಟ್ಟದಂತಿಹುದವರ 
ದಿಟ್ಟನುಡಿಗಳು ಕಾಣ ಬೊಮ್ಮಲಿಂಗ||೧೫೨|

ಕಟ್ಟಿ ಬೆಳೆಸುತ ದೇಶ
ಮುಟ್ಟಿ ಜನಗಳ ಮನವ 
ಮಟ್ಟಿಯೊಳು ಸೇರಿದರು ದೀನ ಬಂದು|
ಹುಟ್ಟದಿರಿ ಕಂದಗಳೆ 
ಮೆಟ್ಟುವರೆ ಕಾದಿಹರು 
ದಿಟ್ಟತನ ತೋರುವರ ಬೊಮ್ಮಲಿಂಗ||೧೫೩|| 

ಮಲ ಮೇವ ಬಯಕೆಯಲಿ ಹೊಲಸು ನುಡಿಯುವ ಬಾಯಿ

ಕೊಳಕು ಕಿಡಿಗೇಡಿಗಳ ನಿತ್ಯ ಭಕ್ಷ್ಯ|

ಕೊಳೆತು ನಾರುವ ಕೆರೆಗೆ ಹೊಳೆನೀರ ಕಾಣುತಿರೆ
ತಳವದೋ ಸೀಯುತಿದೆ ಬೊಮ್ಮಲಿಂಗ||೧೫೪||

ಮಲ ಮೇವ ಬಯಕೆಯಲಿ
ಹೊಲಸು ನುಡಿಯುವ ಬಾಯಿ
ಕೊಳಕು ಕಿಡಿಗೇಡಿಗಳ ನಿತ್ಯ ಭಕ್ಷ್ಯ|
ಕೊಳೆತು ನಾರುವ ಕೆರೆಗೆ
ಹೊಳೆನೀರ ಕಾಣುತಿರೆ
ತಳವದೋ ಸೀಯುತಿದೆ ಬೊಮ್ಮಲಿಂಗ||೧೫೫||

ಉಂಡಿರುವ ತಟ್ಟೆಯೊಳು 
ತುಂಡುಗಳು ಮುಗಿದಿರಲು
ಚಂಡಿಯನು ತೆಗೆಯುವದು ನಾಯಿ ಬುದ್ಧಿ|
ಅಂಡಿನಲಿ ಬೆಂಕಿಯನು 
ಚೆಂಡುಗಾತ್ರದೊಳಿಟ್ಟು
ಕಂಡಲ್ಲಿ ಬೊಗಳುವುದು  ಬೊಮ್ಮಲಿಂಗ.||೧೫೬||

ಯೋಗಿಗಳ ರೂಪದಲಿ
ಜೋಗಿಗಳು ತಾವಾಗಿ 
ರೋಗವನು ಹರಡುವುದು ತರವೆ ನಿಮಗೆ|
ಭೋಗವನು ಕೈಗೊಂಡ
ಗೂಗೆಗಳು ಜಗದಲಿ ವಿ
ರಾಗಿಗಳ ವೇಷದೊಳು ಬೊಮ್ಮಲಿಂಗ||೧೫೭||

ಜೋಗಿ = ನಿಂತಲ್ಲಿ ನಿಲ್ಲದವರು 

ದುಃಖವನು ಮರೆಯುವರೆ 
ದುಃಖವನೆ ಮೆರೆಸುತಲಿ 
ದುಃಖವನೆ ಹಾಸುಡತ ಮಲಗಲೇಕೆ|
ದುಃಖಿಸಲು ಮಿತಿಮೀರಿ
ದುಃಖವದು ನಮ್ಮನ್ನು 
ದುಃಖದಲೆ ಮುಳುಗಿಪುದು ಬೊಮ್ಮಲಿಂಗ ||೧೫೯||

ಅಂತಃಕರಣ ರೂಪ
ಅಂತಃಕೃತದೊಳಿರಲು
ಅಂತಃಪುರವದು ಸೊಗಸಾದ ಕವನ|
ಅಂತಃಕಲಹವಿಂದು
ಅಂತಃಪಟದ ತೆರದಿರೆ
ಅಂತಃಶಕ್ತಿಯಿಹುದೆ ಬೊಮ್ಮಲಿಂಗ||೧೬೦||

ಅಂತಃಕೃತ = ಒಳಗೊಂಡ
ಅಂತಃಪಟದ ತೆರದಿ ಇರೆ=
ಅಂತಃಪಟ= ಮದುವೆಯಲ್ಲಿ ವಧುವರರ ನಡುವಿನ ಪರದೆ

ಭಿಕ್ಷೆಯನು ಬೇಡುವಳ 
ರಕ್ಷಿಸಿದೆ ನಾನೆಂದು 
ಕಕ್ಷೆಯೊಳಗಿರಿಸುವುದು ತರವೆ ನಮಗೆ|
ಶಿಕ್ಷಿಸಲು ಮೇಲೊಬ್ಬ
ಶಿಕ್ಷಕನು ಕುಳಿತಿಹನು
ಶಿಕ್ಷಣವ ನೀಡುವರೆ ಬೊಮ್ಮಲಿಂಗ||೧೬೧||

ರಕ್ಷೆಯನು ಬೇಡುವರ 
ಶಿಕ್ಷಿಸುವ ಪರಿಯೇಕೆ 
ರಕ್ಷಕರು ನಾವಾಗಿ ಮೆರೆಯಬೇಕು|
ಭಕ್ಷಕರ ಸೆದೆಬಡಿದು 
ರಕ್ಷಣೆಯ ನೀಡಿದೊಡೆ 
ಲಕ್ಷ ಹೊನ್ನಿಗೆ ಸಮವು ಬೊಮ್ಮಲಿಂಗ||೧೬೨||

ಅಂದದಲಿ ಸಮವುಂಟೆ
ಚೆಂದುಳ್ಳಿ ಚೆಲುವೆಯೇ 
ಚಂದಿರನು ಸುತ್ತುತಿಹ ಸುಮ್ಮನಿರದೆ|
ಸಂದಿಗೊಂದಿಗಳಲಿಯು
ನಿಂದಂದ ಸವಿಯುವರು
ಸಂದು ಸಿಕ್ಕರೆ ಸಾಕು ಬೊಮ್ಮಲಿಂಗ||೧೬೩||

ನಿನ್ನೊಳಗ ಕೂಸಿವರು
ನಿನ್ನೊಲವ ಮೆದ್ದಿಹರು 
ನಿನ್ನೊಡಲ ಸಿಗಿಯಲದೊ ಕಾಯುತಿಹರು |
ನನ್ನಮ್ಮನೆನ್ನುವುದ
ಸಣ್ಣಗೂ ನೆನೆಯದೆಲೆ
ಚೆನ್ನುಡುಗೆಯಿರಗೊಡರು ಬೊಮ್ಮಲಿಂಗ||೧೬೪||

ಮಣ್ಣಿನಲಿ ಹುದುಗಿದ್ದ
ಹೊನ್ನನ್ನು ಮುಗಿಸಿಹರು
ಕನ್ನ ಹಾಕುತ ಬೆಟ್ಟ ಗುಡ್ಡ ಮುಗಿಸಿ|
ಹಣ್ಣುಗಳ ನೀಯುತಲಿ
ಬೆನ್ನೆಲುಬು ಮರಗಿಡವ 

ಯಿನ್ನಿಲ್ಲದಾಗಿಸಲು ಬೊಮ್ಮಲಿಂಗ||೧೬೫||

ಅಕ್ಕಿಯನು ನೀಡುತಲಿ
ಮಕ್ಕಳನು ಸಲಹುತಿರೆ 
ಸೊಕ್ಕಿನಿಂ ಕುಕ್ಕುವರು ಕಾಣದೇನು|
ಕಕ್ಕುಲತೆ ತೋರುತಿರೆ
ಕಕ್ಕುವುದೆ ವಿಷವನ್ನು
ಬಿಕ್ಕುತಲೆ ನೀನುಳಿಸೆ ಬೊಮ್ಮಲಿಂಗ|| ೧೬೬||

ಒದ್ದು ನಿಂದವರಿಂದು
ಬಿದ್ದು ನಿಲ್ಲಲಂದಿಗೆ
ಸುದ್ದಿಯಾದವರಲ್ಲ ನೆಪವು ಮಾತ್ರ|
ಗೆದ್ದೆ ನಾನೆಂದವರು
ಗುದ್ದಿಗಿದೊ ಸೋತರೂ
ಗುದ್ದದಲಿ ಗದ್ದಿಗೆಯು ಬೊಮ್ಮಲಿಂಗ||೧೬೭||

ಎಷ್ಟು ದೂರುವವರಿರೆ
ನಷ್ಟವಾದರು ಸರಿಯೆ
ಕಷ್ಟದೊಳಿರುವವರನು ಪೊರೆವೆಯಂತೆ|
ಇಷ್ಟದಾ ಕೂಸುಗಳಿ-
ಗಷ್ಟ ಸುಖವನು ನೀಡಿ
ಶಿಷ್ಟತನವನೀಯುವೆ ಬೊಮ್ಮಲಿಂಗ||೧೬೮||

ಪ್ರೀತಿ ತುಂಬಿರಬೇಕು ಭೀತಿ ತೂರದ ಹಾಗೆ

ನೀತಿಯನು ಮರೆತಿರಲು‌ ಬದುಕಲಹುದೆ|
ಪಾತೆಯಂತೀ ಬದುಕು ಗಾಥೆಯೊಳು ಬಂಧಿಸಿರಿ 
ಮಾತೆಯಂತೆಲ್ಲರನು ಬೊಮ್ಮಲಿಂಗ||೧೬೯||

ಸಹನೆಯನು ಮೀರಿದರೆ ಮಹನೀಯ ಮರುಗುವನು 
ತಹಬದಿಗೆ ಕೋಪವನು ತಂದುಕೊಳ್ಳಿ|
ಅಹಮಿಕೆಯ ಕಾರಣಕೆ ಮಹಿಯೊಳಗೆ ಬಹುತೇಕ
ದಹಿಸಿಕೊಳುತಿರುವ ನರ ಬೊಮ್ಮಲಿಂಗ||೧೭೦||

ದಯೆಯಿರಲಿ ಜೀವಿಗಳೆ ಭಯಪಡಿಸಿ ಬದುಕದಿರಿ
ಜಯವಿಲ್ಲಿ ನಿಮಗಾಗಿ ಕಾಯುತಿಹುದು|
ಕ್ಷಯಗೊಳ್ಳುವಾ ಬದುಕು ಜಯಶಾಲಿ ನೀವಾಗೆ
ಜಯಮುಖಿಯ ಹುಡುಕುತಿರಿ ಬೊಮ್ಮಲಿಂಗ||೧೭೧||

ಅಧಿಕಾರವಿದ್ದಾಗ ಮದವನ್ನು ತೋರದೆಲೆ
ಹದದಿಂದ ಬಾಳಿದರೆ ಬದುಕು ಹಸನು|
ಹದಿಹರೆಯ ಬಂದಾಗ ನದಿಯಂತೆ ತೆವಳುತಲಿ
ಪದಗಳಿಗೆ ಸಿಗುತಲಿರಿ ಬೊಮ್ಮಲಿಂಗ||೧೭೨||

ಗೆಲುವು ನಮಗಾಗುವರೆ ಹಲ ಬಗೆಯ ಕಷ್ಟಗಳ
ಸಲಗವನು ಸಹಿಸುತಲಿ ಬಾಳಬೇಕು|
ಒಲವಿತ್ತು ಬದುಕಿನಲಿ ಬಲವಿತ್ತು ತುತ್ತಿನಲಿ
ನೆಲಕೆ ನೀಡಿರೆ ಮಾತೆ ಬೊಮ್ಮಲಿಂಗ||೧೭೩||

ಅನುಕಂಪ ಬೇಕಿಲ್ಲ ಧನ ಧಾನ್ಯ ಕೇಳಿಲ್ಲ 
ಜನರ ನಡುವಲಿ ನಮ್ಮ ಬದುಕಗೊಡಿರಿ|
ತನುವಿನಲಿ ಕೊರತೆಯಿರೆ ಮನದೊಳಗೆ ಮೊರೆತವಿದೆ
ಹನಿಗಣ್ಣು ಮಾಡದಿರಿ ಬೊಮ್ಮಲಿಂಗ||೧೭೪||



ಮೇಲೆ ಮಳೆ ಬರುವುದನು
ಮೇಳದಂತೆಯೆ ನೋಡಿ
ಬೇಳೆ ಬೇಯದೆನುತಲಿ ಬಡವನಿದ್ದ|
ಕೇಳಿದರು ಬಾರದೆಲೆ
ಹೇಳದೇ ಮಳೆ ಸುರಿದು
ಗೇಲಿ ಮಾಡಿತು ಕಾಣ ಬೊಮ್ಮಲಿಂಗ||೧೭೫||

ಹಾಳಾದ ಮಳೆಸುರಿಯೆ
ಬಾಳೆಲ್ಲ ಬರಡಾಯ್ತು 
ಗೋಳುಗಳ ಕೇಳುವವರಾರದಿಲ್ಲ |
ಪಾಳಾದ ಹೊಲಗಳನು 
ಪಾಲುದಾರಿಕೆ ಪಡೆದು 
ಸೋಲುಗಳ ಕಂಡಿಹೆವು ಬೊಮ್ಮಲಿಂಗ||೧೭೬||

ಕೋಟಿ ಕೋಟಿಗಳನ್ನು 
ಲೂಟಿ ಮಾಡಿದ ನಮ್ಮ
ಮೇಟಿಗಳು ಗೋಡೆಗಳ ನಡುವೆ ಬಂಧಿ|
ಸಾಟಿಯಿಲ್ಲದ ಮಾತೆ 
ಸೂಟೆ ಹಿಡಿದಂತಿಲ್ಲಿ
ದಾಟಿ ಬಂದಿರುವರೇ ಬೊಮ್ಮಲಿಂಗ||೧೭೭||

ಅಕ್ಕ ಪಕ್ಕದ ಗೂಡು
ಹಕ್ಕಿಯಿಲ್ಲದೆ ಖಾಲಿ
ಪುಕ್ಕವನ್ನುದುರಿಸಿದ ಕಥೆಯ ಕೇಳಿ |
ಅಕ್ಕಿ ಹಾಕಲು ಬಂದ್ರೆ
ಮುಕ್ಕುತಿದ್ದುದೆ ನೆನಪು
ಬಿಕ್ಕಳಿಸಿ ಬರುತಲಿದೆ ಬೊಮ್ಮಲಿಂಗ||೧೭೮||

ತಮ್ಮದೇ ಕಮ್ಮದಲಿ 
ಸುಮ್ಮನೇ ನರಳಿದವು 
ನಿಮ್ಮನೆಯ ಗೂಡಿನಲಿ ಹಾಡೊ ಹಕ್ಕಿ|
ಒಮ್ಮೊಮ್ಮೆ ನಮ್ಮಂತೆ
ನೆಮ್ಮದಿಯ ತಡಕುತಲಿ 
ಕಿಮ್ಮೆನದೆ ಕುಳಿತಿಹವು ಬೊಮ್ಮಲಿಂಗ||೧೭೯||

ಕೋಟಿಗಳ ಕೋಟವನು 
ದಾಟಿ ಹೋಗಿಹ ಧನಿಕ
ಮೇಟಿಯನು ಮೀಟುವಗೆ ಸಾಟಿಯಲ್ಲ|
ಊಟವೇ ಸಿಗದಿರಲು 
ನೋಟುಗಳ ರಾಶಿಯಲಿ
ನೋಟವಿಟ್ಟೇನು ಫಲ ಬೊಮ್ಮಲಿಂಗ|೧೮೦||

ನಾಯಕರು ತಾವಾಗಿ 

ಕಾಯಕದಿ ಸವೆಯುವಾ
ಮಾಯಕರ ವಂಚಿಪುದು ಸರಿಯೆ ನಿಮಗೆ|
ಗೇಯುತಿಹ ಕಾರ್ಮಿಕರ
ಬೇಯುವರೆ ದೂಡದೆಲೆ
ಬಾಯಿ ತುಂಬಿಸೆ ನೋಡಿ ಬೊಮ್ಮಲಿಂಗ||೧೮೧||

ಮುಕ್ತಕವೆ ಮೊದಲಾಗಿ
ಶಕ್ತ ಗೋಷ್ಠಿಯ ನಾವು 
ಯುಕ್ತಿಯಿಂ ಮನದೊಳಗೆ ನಡೆಸುತಿಹೆವು|
ಮುಕ್ತ ಮನವನು ಮಾಡಿ
ಭಕ್ತಕವಿ ನಾವ್ ಬರೆದ 
ಮುಕ್ತಕ ಪ್ರಾರ್ಥನೆಯು ಬೊಮ್ಮಲಿಂಗ||೧೮೨||

ಒಮ್ಮನದಿ ನಾವೆಲ್ಲ
ತಮ್ಮ ಪೆಸರುಚ್ಚರಿಸಿ 
ಹೆಮ್ಮೆಯೆನುತಲಿ ಪಾಡಿ ಪೊಗಳಿ ನೆನೆಯೆ|
ನಿಮ್ಮನ್ನು ನಮ್ಮೊಳಗ
ಕಮ್ಮದೊಳು ಸೇರಿಸಲು
ಸಮ್ಮತಿಯ ಬೇಡುವೆನು ಬೊಮ್ಮಲಿಂಗ||೧೮೩||

ಮುಕ್ತಕವಿ ಪರಿವಾರ ಬಾನಿನೆತ್ತರದಿಯೇರಿ
ವ್ಯಕ್ತವಾಗುತಿರಲಿ ನಿತ್ಯ ಹರುಷವೆಂಬೆ|
ಶಕ್ತವಾಗಿಹ ಬಳಗ ತಾನಾಗಿ ಬೆಳೆಬೆಳೆಯು
ತುಕ್ತಿಯಲಿ ಪೇಳೆ ಜನ ಬೊಮ್ಮಲಿಂಗ || ೧೮೪||

ಸಲ್ಲಿಸಿರಿ ಕರ್ತವ್ಯ ತುಂಬುತಲಿ ನಿಮ್ಮೊಲವ
ಗಲ್ಲಿಗಲ್ಲಿಯಲಿ ಪೆಸರುಳಿಯುವಂತೆ|
ಬಲ್ಲವರು ನಿರುತದಲಿ ಕನ್ನಡವ ನುಡಿಯುತಿರೆ 
ಮಲ್ಲಿಗೆಯ ಮಾಲೆಯದು ಬೊಮ್ಮಲಿಂಗ ||೧೮೫||

ಕನ್ನಡದ ದೀಪವನು ಹಚ್ಚೋಣ ಬಾರಣ್ಣ
ಭಿನ್ನತೆಯ ದೂಡುತಲಿ ಬೆರೆಯುವಂತೆ |
ಮುನ್ನಡೆಯು ನಿಮದಿರಲಿ ಹಿನ್ನಡೆಯು ಬರದಂತೆ
ಹೊನ್ನಡೆಯ ಹಾಕುವೆವು ಬೊಮ್ಮಲಿಂಗ||೧೮೬||

ಸುಮ್ಮನಿರದೆಲೆ ನಾವು 
ನಮ್ಮದೇ ಹಿರಿದೆಂದು
ಗುಮ್ಮನನು ತಂದು ನಿಲ್ಲಿಸುವುದೇಕೆ|
ಒಮ್ಮತವ ಬಯಸುವರೆ
ಸಮ್ಮತವದಿರಬೇಕು
ತಮ್ಮವರುರೆಂದೆನುತ ಬೊಮ್ಮಲಿಂಗ||೧೮೭||

ಎತ್ತರಕ್ಕೇರುವರೆ
ಮೆತ್ತಗಿದ್ದರೆ ಸಾಕೆ 
ಸುತ್ತಲಿನರಿವದಿರಲಿ ಬಂಧುವರ್ಗ|
ಸತ್ತವರ ಹಾಗಿರದೆ
ಗೊತ್ತಿರುವದೆಲ್ಲವನು
ಹೊತ್ತಿನಲಿ ಬಳಸುತಿರಿ ಬೊಮ್ಮಲಿಂಗ||೧೮೯||

ಒಪ್ಪಿಕೊಂಡೆನು ನಾನು
ತಪ್ಪುಗಳನಿನ್ನು ತಮ-
ಗೊಪ್ಪುವುದ ಮಾತ್ರವೇ ಬರೆದುತರುವೆ|
ಅಪ್ಪಿತಪ್ಪಿಯು ಛಂದ
ತಪ್ಪಿದವುಗಳು ಮುಂದೆ
ಬಪ್ಪುದಿಲ್ಲವೆಂಬೆನು ಬೊಮ್ಮಲಿಂಗ||೧೯೦||

ಅಪ್ಪಿಕೊಂಡಿರಿ ನೀವು
ತುಪ್ಪ ಕದ್ದವನನ್ನು
ಬೆಪ್ಪನಂಥ ಪೆಚ್ಚುನಗು ಮೊಗವ ಕಂಡು|
ಒಪ್ಪವದು ತಾನುಡಿದು
ತಪ್ಪುಗಳ ಕಂಡುಂಡು 
ಚಪ್ಪರಿಸಿ ತಳ್ಳುವನ ಬೊಮ್ಮಲಿಂಗ||೧೯೧||

ಮನದೊಳಗೆ ಚಿಂತೆಯದು 

ಮದದುಂಬಿ ಕುಳಿತಾಗ

ಮುದದಿಂದ ಕವನಗಳು ಹೊಮ್ಮುವುದೇ|

ಮನಬಿಚ್ಚಿ ನಗುತಿರಲು

ಕನವರಿಕೆಯಲಿ ಕೂಡ

ನನಸಾಗ ಹೊರಡುವುದು ಬೊಮ್ಮಲಿಂಗ||೧೯೨||








 














ಮನದೊಳಗೆ ಚಿಂತೆಯದು 
ಮದದುಂಬಿ ಕುಳಿತಾಗ
ಮುದದಿಂದ ಕವನಗಳು ಹೊಮ್ಮುವುದೇ|

ಮನಬಿಚ್ಚಿ ನಗುತಿರಲು

ಕನವರಿಕೆಯಲಿ ಕೂಡ

ನನಸಾಗ ಹೊರಡುವುದು ಬೊಮ್ಮಲಿಂಗ||೧೯೨||







 










Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು