ಅಯ್ಯೋ ಮಳೆಯೆಂತು

ಮಳೆಯೆಂತು
~~~~~~~
ನೋಡುವ ಕಣ್ಣನು ಸೆಳೆಯುವ ತೆರದಲಿ
ಜಾಡಿಸಿ ಸುರಿದಿಹೆ ನೀನಿಲ್ಲಿ|
ದಾಡಿಯೆ ನಿನಗದು ಸಮಯದಿ ಬರುವರೆ
ಬಾಡುತ ನಡೆವೆವು ನಾವಿಲ್ಲಿ||೧||

ನೋಡುತಲಿರುತಿರೆ ಬಡವರ ಗುಡಿಸಲ 
ಮಾಡನು ಮುಳುಗಿಸಿ ಬೀಗುತಿಹೆ|
ಹಾಡುತ ಮಹಡಿಯ ಸಿರಿಯಲಿ ಕುಳಿತರು
ಪಾಡಿದು ಸಮಸಮವೆನ್ನುತಿಹೆ||

ಮೂಲವದಿರದೆಲೆ ಸಾಲದ ಧನದಲಿ
ಹಾಲನು ನೀಡುವ ಹಸು ತಂದೆ|
ಬೇಲಿಯ ಹಾರುತ ಬಂದವ ನಮ್ಮಯ
ಕಾಲನು ಕಡಿದವ ನೀನೆಂದೆ||

ನಂದನದಂದದಿ ನಗುವನು ತಂದಿಹ
ಕಂದನ ಸೆಳೆಯುತ ಕೊಂಡೊಯ್ದೆ|
ತಂದೆಯ ಮಸಣದಿ ಮಲಗಿಸಿ ಬಾಳಿನ 
ಸುಂದರ ಚಣಗಳ ಕದ್ದೊಯ್ದೆ||

ಎಳೆಯರ ಬೆಳೆಸಲು ಛಲದಲಿ ಬದುಕಿನ
ಬೆಳೆಯನು ಹೊಲದಲಿ ಹರಡಿದ್ದೆ|
ಮೊಳೆಯುವ ಸಸಿಯನು ಕಾಯದೆ ಜೊತೆಯಲಿ
ಹೊಳೆಯುವ ಜೀವವ ಕಸಿದೊಯ್ದೆ||

ಸಕಲವ ಜಲದಲಿ ಹೋಮವ ಮಾಡಿದೆ
ಮುಖದಲಿ ಕಳೆಯದು ಬರಲೆಂತು|
ಸುಖವನು ಕಾಣದೆ ನಡೆದಿಹ ಬದುಕಿನ
ಸಖರನು ಕಳೆದವ ಮಳೆಯೆಂತು||

ಪಶಿವೈ 
ಪಿ ಎಸ್ ವೈಲೇಶ ಕೊಡಗು
೧೯/೧೧/೨೦೧೯

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು