ಮುಕ್ತಕದ ಅಲೆ ಮಾಲೆ ೨

ಮುಕ್ತಕದ ಅಲೆ ೬೧

ಮಳೆಗಾಲ ಬಂದಾಗ ಕಳೆಯೆಲ್ಲ ಜತೆಗೂಡಿ
ಹೊಳೆಯಂತೆ ಗುಡಿಸಲದು ಕೊಚ್ಚಿಹೋಯ್ತು
ಬಳಿಬರದ ನೀವುಗಳು ಕಳೇಬರ ತರಹದವ-
ಗೊಳಿತು ಮಾಡುವಿರೇನು ಬೊಮ್ಮಲಿಂಗ

ಮುಕ್ತಕದ ಅಲೆ ೬೨

ಅಪ್ಪನನು ಮರೆಯದಿರಿ ತಪ್ಪುಗಳ ನೆನೆಯದಿರಿ
ತುಪ್ಪ ತಿನಿಸುವ ನಿಮಗೆ ಮರೆಯಬೇಡಿ
ಒಪ್ಪದೋರಣವ ಮಿಗೆ ತಪ್ಪದೇ ತರಲೆಂದು
ಸಪ್ಪಗಿರದೆ ದುಡಿದಿಹನು ಬೊಮ್ಮಲಿಂಗ

ಮುಕ್ತಕ ಕುಸುಮ ೬೩

ಅಪ್ಪನೇ ಮೊದಲಾಗಿ ತೆಪ್ಪವನು ನಡೆಸುತಿರೆ
ತಪ್ಪಿಸದೆ ತುತ್ತನಿಡುತಿರುವಳಮ್ಮ
ಒಪ್ಪುವುದು ಜಗವಿಂದು ಮುಪ್ಪುದುವೆ ಬರಲೇನು
ತಪ್ಪದೆಲೆ ಕಾಯುವನು ಬೊಮ್ಮಲಿಂಗ

ಮುಕ್ತಕ ಕುಸುಮ ೬೪

ದಾರದೊಳು ತಾಳಿಯನು ತೂರಿಸುತ ವಧುವಿವಳು
ಭಾರವೆಂದು ತಾಳದಲೆ ಕಟ್ಟಿಸಿದರು
ಹಾರಹಾಕಿಸಿ ಬೇಗ ಹಾರೆಂದು ಸಾಗರಕೆ
ದಾರೆಯೆರೆದರು ಕಾಣಿ ಬೊಮ್ಮಲಿಂಗ

ಮುಕ್ತಕ ಕುಸುಮ ೬೫

ಪರರಾಸ್ತಿ ನಮದೆನದೆ  ಪರಸತಿಯ ತಾಯೆಂದು
ಪರಿಗಣಿಸಿ ನಡೆಯುತಿರೆ ನಾಕಬದುಕು
ಹರನವನು ಬಲವೀಯೆ ಪರಿಪರಿಯ ವಿಧದಲ್ಲಿ
ಪರೀಕ್ಷೆಯ ಮಾಡುವನು ಬೊಮ್ಮಲಿಂಗ

ಮುಕ್ತಕದ ಅಲೆ ೬೬

ಪರನಾರಿ ದೇನಿಸುತ ನರಿಮತಿಯ ಸಾಧಿಸುತ
ಮಿರಮಿರನೆ ಮಿಂಚುವುದು ತರವೆ ನಿನಗೆ
ಪರಿಚಯವು ಬೇಕಿಲ್ಲ ಪರಸತಿಯ ಸೋದರತೆ
ಪರಧರ್ಮವದುಕೇಳು ಬೊಮ್ಮಲಿಂಗ

ಮುಕ್ತಕದ ಅಲೆ ೬೭

ನಮ್ಮವರು ಶೋಭಕ್ಕ ಹೆಮ್ಮೆಯಿಂ ಬರೆದಿಹರು
ಘಮ್ಮೆಂದು ಪಸರಿಸುವ ರಾಮಗೀತೆ||
ಒಮ್ಮನದಿ ನಮ್ಮೊಳಗೆ ಹೊಮ್ಮುತಿರೆ ಬಾವಗಳು
ಚಿಮ್ಮುತಲಿಯೋದಿದೆವು ಬೊಮ್ಮಲಿಂಗ||

ಮುಕ್ತಕದ ಅಲೆ ೬೮

ಶೋಭಿಸುವ ಗೀತೆಯನು ಶೋಭಕ್ಕ ವಿನಯದಲಿ
ಲಾಭಿಯನು ಮಾಡದೆಲೆ ಬರೆದಿರುವರು|
ಶೋಭಿತದ ಸೋದರಿಯು ಲೋಭವನು ತೋರದೆಲೆ
ನಾಭಿಯಿಂ ಪಾಡಿದರು ಬೊಮ್ಮಲಿಂಗ||

ಮುಕ್ತಕದ ಅಲೆ ೬೯

ನರರಾಗಿ ಬದುಕುವರೆ ನಿರೀಕ್ಷೆಗೆ ಮಿತಿಯಿರಲಿ
ನರಿಬುದ್ಧಿ ಬಿಡಿರೆನುವ ದೇವಕೇಳಿ|
ಹರನವನು ಜಗವೆಲ್ಲ ತಿರುಗುವರೆ ತನಗೆಂದು
ತುರುವದುವೆ  ಸಾಕೆಂದ ಬೊಮ್ಮಲಿಂಗ||

ಮುಕ್ತಕದ ಅಲೆ ೭೦

ದಟ್ಟಡವಿಯೆಂದವರು ಕಟ್ಟಕಡೆಯದಾಗಿಯು
ಕುಟ್ಟಿ ಕೆಡವಿದರು ಹಸಿ ಮರಗಳನ್ನು
ಇಟ್ಟಂಗಿರಲಾರದ ಭಟ್ಟಂಗಿಗಳಿಗಿವರು
ಕೊಟ್ಟಿಹರು ಹುಸಿ ಭಾಷೆ ಬೊಮ್ಮಲಿಂಗ

ಮುಕ್ತಕದ ಅಲೆ ೭೧

ತಟ್ಟೆಯಲಿ ಬಿದ್ದಿರುವ ತುಟ್ಟಿಯದೆ ವಸ್ತುಗಳ
ತಟ್ಟಿಡುತ ಕಾಪುವುದು ಮನುಜಮತವೆ
ಅಟ್ಟಿಡುವ ಶಿವನವನು ಕಟ್ಟಿಟ್ಟ ಬುತ್ತಿಗಳ
ಮೆಟ್ಟುವುದು ಸಾಧ್ಯವೇ ಬೊಮ್ಮಲಿಂಗ

ಮುಕ್ತಕದ ಅಲೆ ೭೨

ನೀಡುತಲೆ ಪಡೆಯತಿರೆ ಕಾಡದೆಲೆ ನಡೆಯುತಿರೆ
ಕೂಡಿ ಬಾಳುವ ಮನ ಮಾಡಿರುವರು
ಮೂಡಿಸುತ ಸದ್ಬಾವ ನಾಡಿಮಿಡಿತವ ನೋಡಿ
ಪಾಡುತಿದೆ ಜಗವಿಂದು ಬೊಮ್ಮಲಿಂಗ

ಮುಕ್ತಕದ ಅಲೆ ೭೩

ಪುರಜನರೆ ಬೇಡುವೆನು ಸುರಪಾನ ಸುಖತರದು
ಸರಿಸಿದರೆ ನೀವದನು ಸುಖದ ಬಾಳ್ವೆ
ಸುರಿಯಿತಲಿ ಬಟ್ಟಲಲಿ ಬೆರೆಸುತಲಿ ಕೆನ್ನೀರು
ಸರಿಯುವಿರಿ ಸಾವಿನೆಡೆ ಬೊಮ್ಮಲಿಂಗ

ಮುಕ್ತಕದ ಅಲೆ ೭೪

ಯೋಗವನು ಮಾಡುತಿಹ ಲೋಗರನು ನೋಡಿದೊಡೆ
ರೋಗವದು ಕಾಣದೆಲೆ ಮಾಯವಾಯ್ತು
ಯೋಗದಾ ಹಾದಿಯೊಳು ಭಾಗ್ಯವನು ಪಡೆಯಲದು
ಭಾಗಿಯಾಗಿರಿ ನೀವು ಬೊಮ್ಮಲಿಂಗ

ಮುಕ್ತಕದ ಅಲೆ ೭೫

ಭಾವಗಳ ಬದುಕಿನಲಿ ನೋವುಗಳ ಸಹಿಸುವರೆ
ನೀವೇನು ಮಾಡದಿರಿ ಪುರದಜನರೆ
ಸಾವ ತರುತಿರಲವನು ದೇವ ತಾ ರಕ್ಷಿಪನೆ
ನಾವೇನ ಮಾಡುವುದು ಬೊಮ್ಮಲಿಂಗ

ಮುಕ್ತಕದ ಅಲೆ ೭೬

ಮಾವಿನೆಲೆ ತೋರಣವ ಮಾವನದೆ ಮನೆಯೆನುತ
ಭಾವಗಳ ಜೊತೆಗೂಡಿ ಕಟ್ಟುತಿಹಳು
ಭಾವಣಿಸೆ ಮಗಳೊಂದು ಜೀವಿತಕೆ ಮಗನೊಬ್ಬ
ಯಾವುದಕೆ ಕೊರೆಹೇಳು ಬೊಮ್ಮಲಿಂಗ

ಮುಕ್ತಕದ ಅಲೆ ೭೭

ಅತ್ತೆಯಾ ಮನೆಯಲ್ಲಿ ಮುತ್ತಂತೆ ನುಡಿಬೇಕು
ಹೊತ್ತಾಗಿ ನೀಡಿದರು ಹೊಗಳಬೇಕು
ಮತ್ತೇನೂ ನುಡಿಯದೆಲೆ ಕತ್ತೆಯನು ಹೋಲುತಲೆ
ಸೊತ್ತಾಗಿ ದುಡಿಬೇಕು ಬೊಮ್ಮಲಿಂಗ

ಮುಕ್ತಕದ ಅಲೆ ೭೮

ಹತ್ತು ಜನ ಹಡೆವಂತೆ ಹೆತ್ತಿಹಳು ನಮ್ಮಮ್ಮ
ಹೊತ್ತಿಹಳು ಭೂದೇವಿ ಬೇಧವಿರದೆ
ಮತ್ತೇನೂ ಬೆಳೆಯದೆಲೆ ಹೊತ್ತು ಹೊತ್ತಿಗೆ ಕವಳ
ಕತ್ತರಿಸಿ ಸತ್ತುಬಿಡು ಬೊಮ್ಮಲಿಂಗ

ಮುಕ್ತಕದ ಅಲೆ ೭೯

ಸಾಸಿರದ ಲೋಗರೊಳು ಕಾಸಿನದೆ ಬೇಳೆಯನು
ಬೇಸಿಗೆಯ ಮಳೆಯಂತೆ ನೋಡಬೇಡಿ
ವೇಷಗಳ ತಾಳದೊಳು ದಾಸರಾಗದೆ ನಾವು
ದೋಷಗಳ ಮರೆತಿರುವ ಬೊಮ್ಮಲಿಂಗ.

ಮುಕ್ತಕದ ಅಲೆ ೮೦

ಕನಸಿನಲಿ ಕಂಡುದನು ಮನಸಿನಲಿ ಮೂಡಿಸುತ
ನನಸಾಗಿ ಮಾಡುವರೆ ಶಕ್ತಿ ಬೇಕು
ಅನವರತ ದುಡಿಮೆಯಲಿ ಕನವರಿಸಿ ಕನಸುಗಳ
ಮನವರಿಕೆ ಮಾಡಿಬಿಡಿ ಬೊಮ್ಮಲಿಂಗ

ಮುಕ್ತಕದ ಅಲೆ ೮೧

ದೇಹದೊಳು ನೆತ್ತರನು ದೇಹಕಿದು ಜೀವವನು
ದೇಹಿಯೆನ್ನದೆಯೀದ ನಮ್ಮ ಬಂಧು
ದೋಹವನು ತೋರದೆಲೆ ದಾಹ ನೀಗಿದ ತಾಯ
ದೇಹಿಯೆನಿಸಲೆಬೇಡಿ ಬೊಮ್ಮಲಿಂಗ

ಮುಕ್ತಕದ ಅಲೆ ೮೨

ಆದಿಮಾನವನಾಗೆ ಸಾಧಿಸುವ ಛಲವಿರಲು
ಭೋಧನೆಯು ಬೇಕಿಲ್ಲ ಮನುಜಮನಕೆ
ಬಾದಿಸುತ ಗುರುಗಳನು ಬೇದವನು ಬಗೆಯುತಲಿ
ಬೀದಿಯಲಿ ನಿಲಿಸದಿರು ಬೊಮ್ಮಲಿಂಗ

ಮುಕ್ತಕದ ಅಲೆ ೮೩

ಅವನಿಯದು ಚಿರಯುವತಿ ನವಯುವಕ ರವಿಯೊಡನೆ
ಸವೆಯದಿಹ ಮೋಹದಲಿ ಕಾಯುತಿಹರು|
ಅವಗಣನೆ ಯಾಕಯ್ಯ ಬುವಿಗಿಳಿಯೆ ಮಳೆರಾಯ
ಸವಿಯುವೆವು ನಾವೆಂದು ಬೊಮ್ಮಲಿಂಗ||

ಮುಕ್ತಕದ ಅಲೆ ೮೪

ನುಡಿಯುತಿರೆ ಮತ್ತೊಂದು ನಡೆಯುವುದು ಮಗದೊಂದು
ಹಿಡಿಯುತಲಿ ತನಗಾಗಿ ಕತ್ತೆಕಾಲು|
ಕೆಡವುತಲಿ ಪರರಮನ ಬಡಿಯುತಿರೆ ಮನದೊಳಗೆ
ಪಡೆಯುವುದದೇನೆಂಬ ಬೊಮ್ಮಲಿಂಗ||

ಮುಕ್ತಕದ ಅಲೆ ೮೫

ಮಂಡೆಯಲಿ ಹುಳವಿಟ್ಟು ಮಂಡಿಸುತ ಹಿರಿತನವ
ಮಂಡಿಯನು ಮುರಕೊಂಬ ಬಾಳದೇಕೆ
ಮಂಡಿಯೊಳು ತಾ ಕುಳಿತು ಮಂಡಕವ ಮೆಲ್ಲುತಲಿ
ಮಂಡಳಿಯ ದೂರುವುದೆ ಬೊಮ್ಮಲಿಂಗ

ಮುಕ್ತಕದ ಅಲೆ ೮೬

ಕಾಡುತಿವೆ ನೆನಪಾಗಿ ಕಾಡುಗಳು ಕನಸಿನಲಿ
ಹಾಡುತಲಿ ಹಾರುತಿಹ ಹಕ್ಕಿಯಂತೆ
ಗೂಡುಗಳ ಕಟ್ಟದಿರೆ ಹಾಡೆಂತು ಮೂಡುವುದು
ಕಾಡಿಂದು ಕಾಣದಿರೆ ಬೊಮ್ಮಲಿಂಗ

ಮುಕ್ತಕದ ಅಲೆ ೮೭

ಮಾತೆಯರ ಪೂಜಿಸುವ ಜಾತರದು ನೀವಾಗೆ
ಯಾತರದು ನೋವುಗಳು ಬಾರದೆಂಬೆ
ಮಾತಿನಲಿ ಜಾಡಿಸುತ ದಾತರನು ನೋಯಿಸೆ ವಿ-
ದಾತನೂ ಮನ್ನಿಸನು ಬೊಮ್ಮಲಿಂಗ

ಮುಕ್ತಕದ ಅಲೆ ೮೮

ಸೋದರನು ಸಕಲರಿಗು ಬೇದವನು ಮಾಡದೆಲೆ
ವೇದವಾಕುಗಳನ್ನು ಹಂಚುತಿಹನು
ಬೋಧಿಸುವ ಮನದೊಳಗೆ ಶೋಧಿಸಲು ಬರಿಮಾತು
ಖೇದವದು ಮೂಡಿಸಿತು ಬೊಮ್ಮಲಿಂಗ

ಮುಕ್ತಕದ ಅಲೆ ೮೯

ಬಾಳಿಸುವೆ ನಾನೆನುತ ಗೋಳುಗಟ್ಟಿಸಿ ಜೀವ
ಹಾಳುಗೆಡುವುದದೇಕೆ  ಮಾನವಂತ
ಪಾಳುಮನೆಯದು ನಿನದು ಬೀಳುವುದನರಿಯದೆಲೆ
ಗೀಳಿನೊಳು ಬೀಳದಿರು ಬೊಮ್ಮಲಿಂಗ

ಮುಕ್ತಕದ ಅಲೆ ೯೦

ಏಳುಬೀಳದು ಸಹಜ ಗಾಳಿಮಾತಿಗೆ ಸಿಲುಕಿ
ದಾಳಿಯನು ಮಾಡದಿರಿ ಪುರದಜನರೆ
ಏಳೇಳು ಲೋಕದಲಿ ಗಾಳಿ ಗಂಟುಗಳುಂಟು
ದೂಳಾಗಿ ಹೋಗದಿರಿ ಬೊಮ್ಮಲಿಂಗ

ಮುಕ್ತಕದ ಅಲೆ ೯೧

ಅವನಿಯೊಳು ಬೆಳೆಯುವರು ದವಸಗಳ ಬಹುವಿಧದಿ
ಹವಳಗಳು ಮೊಳೆಯುವುದು ಕಡಲಿನಲ್ಲಿ
ಅವರಿವರ ಛೇಡಿಸುತ ಭವದೊಳಗೆ ಕೇಡಿಗರು
ತವರೊಳಗೆ ಮಡಿಯುವರು ಬೊಮ್ಮಲಿಂಗ

ಮುಕ್ತಕದ ಅಲೆ ೯೨

ಅನುಗಾಲ ಮಳೆರಾಯ ತನುವಾಗಿ ಸುರಿದಿರಲು
ತನನನನ ಪಾಡುವರು ಲೋಗರೆಲ್ಲ
ಮನತುಂಬಿ ಸಂತೋಷ ತನಿಯಾಗಿ ಮೆರೆದಿರಲು
ನೆನೆಯವರೆ ದೇವರನು ಬೊಮ್ಮಲಿಂಗ 

ಮುಕ್ತಕದ ಅಲೆ ೯೩

ಇಂದಿಗದು ನಮದಲ್ಲ ಮುಂದೆಮನು ಬಿಡದಲ್ಲ
ಮಂದಿಯೊಳು ಕುರಿಮಂದೆ ಹಿಂದೆ ಮುಂದೆ
ಎಂದಿಗೋ ಬರುವುದಕೆ ನಿಂದಳುತ ಮರುಗಿರುವೆ
ಮಂದಮತಿ ನೀನಾಗಿ ಬೊಮ್ಮಲಿಂಗ 

ಮುಕ್ತಕದ ಅಲೆ ೯೪

ಬಂದಾರೆ ಬರಲಣ್ಣ ನಿಂದಾರೆ ನಿಲಲಣ್ಣ
ತಂದಾರೆ ಭಾಗ್ಯವನು ತಾರೆಯೇನು
ಒಂದಾದ ಮನಗಳನ ಮುಂದಿಟ್ಟು ನೀನಿಂದು
ನಂದಾಗಿ ಬಾಳಿಸಲಿ ಬೊಮ್ಮಲಿಂಗ

ಮುಕ್ತಕದ ಅಲೆ ೯೫

ಬಂಧಗಳು ಬೇಕಿಲ್ಲ ಬಂಧುಗಳ ಹಾಗಿರಲು
ಬಂಧನವಿರದೆಲೆ ನಾವ್ ಬಾಳಬಹುದು
ಅಂದ ತುಂಬಿದ ಮನವದೆಂದಿಗೂ ಘಮಿಸುತಿಹ
ಚಂದನದ ತುಂಡಂತೆ ಬೊಮ್ಮಲಿಂಗ

ಮುಕ್ತಕದ ಅಲೆ ೯೬

ದಂಡಿನಂದದಿ ನಿಂದ ಬಂಡೆದುಂಬಿದ ಬೆಟ್ಟ-
ದುಂಡೆಗಳ ನಡುವೆ ರವಿ ಮೂಡುತಿಹನು|
ದಂಡು ದಂಡಲಿ ನಡೆದು ದುಂಡಗಾಗಲು ದುಡಿಯೆ
ದಂಡನೆಯ ಭಯವಿರದು ಬೊಮ್ಮಲಿಂಗ||

ಮುಕ್ತಕದ ಅಲೆ ೯೭

ಬರಗಾಲ ಮೂಡಿಹುದು ಬರಿದಾದ ನಾಡಿನಲಿ
ಬರಗೆಟ್ಟ ನಾಯಕರ ಬವಣೆಗಾಗಿ|
ಬರಬಹುದು ಗಂಟುಗಳು ತೆರಳುತಲಿ ನಂಟುಗಳು
ತರಹದೀ ವೇಷದಲಿ ಬೊಮ್ಮಲಿಂಗ||

ಮುಕ್ತಕದ ಅಲೆ ೯೮

ಬೇಕು ಬೇಕೆಂದಾಗ ಸಾಕು ಸಾಕೆನುವಂತೆ
ನೂಕು ನುಗ್ಗಲದನುವು ರಾಜಕೀಯ|
ಬೇಕಿತ್ತಾ ನಮಗಿವರು ಸೋಕದೆಲೆ ಕಷ್ಟದಲಿ
ಶೋಕಿ ಮಾಡುವ ಮಂದಿ ಬೊಮ್ಮಲಿಂಗ||

ಮುಕ್ತಕದ ಅಲೆ ೯೯

ಬಸವಳಿದು ಮಲಗಿಲ್ಲ ಹಸಿವೆಯಿಂ ಸೊರಗಿಲ್ಲ
ಹುಸಿನಿದಿರೆ ತೋರುತಲಿ ಕಾಯುತಿರುವೆ
ಹಸಿಗಣ್ಣ ಕಾವಲಿಗೆ ಬಸವನಾಗಮನವದು
ಹುಸಿಯಾಗದಂತೆ ಕಾಯ್ ಬೊಮ್ಮಲಿಂಗ

ಮುಕ್ತಕದ ಅಲೆ ೧೦೦

ಗಲ್ಲಿ ಗಲ್ಲಿಗಳಲ್ಲಿ ಲಿಲ್ಲಿ ಹೂಗಳು ಬೆಳೆದು
ನಿಲ್ಲಲಲ್ಲಿ ಮಹಿಳೆಯು ಮೆರೆಸುತಿಹಳು.|
ಮಳ್ಳಿ ಸುಮವದು ಮೆಲ್ಲ ಮೆಲ್ಲನೆನುತ ಮನದೊಳ-
ಗಿಳಿಯುತಲಿ ನಡೆಯುತಿರೆ ಬೊಮ್ಮಲಿಂಗ

ಮುಕ್ತಕದ ಅಲೆ ೧೦೧

ಹದವರಿತ ಮಾತುಗಳು ಮುದವನ್ನು ನೀಡುವವು
ಮದದಿಂದ ನುಡಿಯುತಿರೆ ತಿರುವು ಮುರುವು|
ಮೃದುವಾಗಿ ನುಡಿದಿರಲು ವದೆಗೆಂದು ನಿಂದವರ
ಗದೆಯದುವೆ ಬಾಗುವುದು ಬೊಮ್ಮಲಿಂಗ||

ಮುಕ್ತಕದ ಅಲೆ ೧೦೨

ಕಿಸಿಯಲಾಗದಿರೇನು ಕಸಿವುದಕೆ ಕೊನೆಯಿರದೆ
ಹುಸಿಯ ನಡೆಯಲಿ ನಾವು ಬದುಕಲೇಕೆ
ಹಸಿಹಸಿಯ ಸುಳ್ಳುಗಳ ಮಸಿಯಂತೆ ಬಳಿಯುತಲಿ
ಕುಸಿವಂತೆ ಮಾಡುವರು ಬೊಮ್ಮಲಿಂಗ

ಮುಕ್ತಕದ ಅಲೆ ೧೦೩

ಚಾಡಿ ನುಡಿಯದು ಕಿವಿಗೆ ಮೋಡಿಯನು ಮಾಡುತಲಿ
ರಾಡಿಯನು ಹೆಚ್ಚಿಸಿತು ನಮಗರಿಯದೆ
ಕೋಡುಗಳ ಬಯಸಿರುವ ಹೇಡಿಗಳು ಹೂಡಿರುವ
ವಾಡಿಕೆಯ ನುಡಿಗಳಿವು ಬೊಮ್ಮಲಿಂಗ

ಮುಕ್ತಕದ ಅಲೆ ೧೦೪

ಬರೆದಿಹೆನು ನಾನೆನುತ ಹರೆಯವನು ಕಳೆಯದಿರು
ಹೆರವರದು ಹೊಗಳುತಿರೆ ಭಾರ ನಿನಗೆ
ಬರಿದೆ ನೀ ನುಡಿಯುತಿರೆ ಬರೆಗಳನ್ನೆಳಯುತಲಿ
ಸರಸತಿಯು ದೂಡುವಳು ಬೊಮ್ಮಲಿಂಗ

ಮುಕ್ತಕದ ಅಲೆ ೧೦೫

ಯಾರಿತ್ತರೀ ನಭಕೆ ತಾರೆಗಳ ತೋಟವನು
ಮಾರು ಹೋಗಿದೆ ಜಗವು ಸೊಬಗ ಪರಿಗೆ
ಭಾರಿ ಚೆಲುವಿನ ಬಾನ ದಾರಿಯಲಿ ಸೂರಿಯನ
ಮೋರೆ ಬೆಳಗಿದ ಫಲವು ಬೊಮ್ಮಲಿಂಗ

ಮುಕ್ತಕದ ಅಲೆ ೧೦೬

ಬಾನಿನಂಗಳದಲ್ಲಿ ಯಾನದಿಹ ಮೋಡಗಳು
ಗಾನವಂ ಪಾಡುತಿವೆ ನೀವು ಕೇಳಿ
ತಾನನದಿ ತಾ ಗುಡುಗಿ ಹಾನಿಯನು ತಾರದಿರೆ
ಮಾನವನು ಸುಖಿಯಿಲ್ಲಿ ಬೊಮ್ಮಲಿಂಗ

ಮುಕ್ತಕದ ಅಲೆ ೨೦೭

ಅದಟುತನಕೆದುರಾಗಿ ಮೆದುತನವು ನಡೆಯುವುದೆ
ಹದವಿರುವ ಮಾತಿನಲಿ ನಡೆಯದೇನು
ಭೋದನೆಯ ಬದಿಗಿರಿಸಿ ಭೇಧವನು ತೋರದೆಲೆ
ನಾದಿದೊಡೆ ಸಮವೆನುವ ಬೊಮ್ಮಲಿಂಗ

ಮುಕ್ತಕದ ಅಲೆ ೧೦೮

ಅತಿಶಯದ ಮಾತಲ್ಲ ಕಥೆಗಳಲಿ ನುಡಿದಿಲ್ಲ
ಸತಿಯ ಮಾತನು ಕೇಳೆ ಬಾಳು ಹೊನ್ನು
ಪತಿಯ ಮನದಿಂಗಿತವ ಸತಿಸುತರು ತಿಳಿದಿರಲು
ರಥವೆಂಬ ಜೀವನವು ಬೊಮ್ಮಲಿಂಗ

ಮುಕ್ತಕದ ಅಲೆ ೧೦೯

ಲಕ್ಷಿಸುತ ಬಾರಮ್ಮ ಲಕ್ಷ್ಯವನು ತಾರಮ್ಮ
ರಕ್ಷಿಸುತ ಬಡತನವ ನೀಗಿಸಮ್ಮ
ಲಕ್ಷ್ಯ ಕೋಟಿಯದಲ್ಲ ಬಿಕ್ಷೆ ಬೇಡುವುದಿಲ್ಲ
ರಕ್ಷಿಪಳು ನೀನೆಂಬ ಬೊಮ್ಮಲಿಂಗ

ಮುಕ್ತಕ ಕುಸುಮ ೧೧೦

ನಾನೆಂದು ನುಡಿಯುತಲಿ ನೀನೆಂದು ನುಡಿಯದೆಲೆ
ಕಾನನಕೆ ನಡೆದಿಹರು ನೀವು ಕಾಣಿ
ಬಾನಿನಲಿ ಸದ್ದಿರದೆ ಭಾನುವವ ಜೀವಿಗಳ
ಬೋನಕ್ಕೆ ಬೆಳಕೀವ ಬೊಮ್ಮಲಿಂಗ

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ