ಮಾನವರು ಮುಂದುವರಿದಂತೆ ಕಾಡು ಬೆಳೆಯಬೇಕಿತ್ತು.

ನಾವು ಮುಂದುವರಿದಂತೆ ಕಾಡು ಬೆಳೆಯಬೇಕಿತ್ತು ಆದರೀಗ?????
~~~~~~~

ಕಾಡುಗಳಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದ ನಾವುಗಳು ಕಾಡಿನ ಎಲ್ಲ ಬಗೆಯ ಪ್ರಯೋಜನಗಳನ್ನು ಪಡೆದುಕೊಂಡು ಕಾಡಿನಿಂದ ನಮಗಿರುವ ಪ್ರಯೋಜನಗಳನ್ನು ಅರಿತುಕೊಂಡು ಪ್ರಕೃತಿಯೇ ದೇವರು ಗಿಡ ಮರಗಳ ಜೊತೆಗೆ ನಾವು ಬಳಸುವ ಎಲ್ಲ ಪ್ರಕೃತಿದತ್ತ ವಸ್ತುಗಳು ದೈವದ ಕಾಣಿಕೆಯೆಂದು ಪೂಜಿಸುವ ಪರಿಪಾಠವನ್ನು ನಮ್ಮ ಹಿರಿಯರು ನಡೆಸಿಕೊಂಡು ಬರುತ್ತಿದ್ದರು. ಪ್ರಕೃತಿಯ ಮಡಿಲಲ್ಲಿ ನಾವು ಸುರಕ್ಷಿತ "ವೃಕ್ಷೋ ರಕ್ಷತೀ ರಕ್ಷಿತಃ" ಎಂಬ ಮಾತನ್ನು ಅರಿತುಕೊಂಡು ಅದನ್ನು ಉಳಿಸಿಕೊಂಡು ಬಂದವರು ಅದನ್ನು ಮುಂದೆ ವಿಜ್ಞಾನ ಕೂಡ ಅರಿತುಕೊಂಡು ಹೊಸ ಹೊಸ ಪ್ರಯೋಗಗಳನ್ನು ನಡೆಸಿ ಧೃಡಪಡಿಸಿಕೊಂಡಿವೆ ಎಂದರೆ ತಪ್ಪಾಗಲಾರದು. ಮಂಗನಿಂದ ಮಾನವನಾದ ಮನುಷ್ಯ ಕಾಡಿನಲ್ಲಿಯೇ ವಾಸ ಮಾಡುತ್ತಿದ್ದ ಮತ್ತು ವಿಕಾಸಗೊಳ್ಳುತ್ತಾ ಬಂದಂತೆ ಅತ್ಯಲ್ಪ ಪ್ರಮಾಣದಲ್ಲಿ ಕಾಡನ್ನು ತನ್ನ ಬಳಕೆಗೆ ಬಳಸುತ್ತಾ ತಾನು ಬಳಸಿದ ಕಾಡಿಗೆ ತಕ್ಕಂತೆ ಹೆಚ್ಚುವರಿ ಕಾಡನ್ನು ಬೆಳೆಸುತ್ತಾ ಬಂದ ಎಂಬುದನ್ನು ಅರಿಯಲು ಆಧಾರಗಳು ಸಾಕಷ್ಟಿವೆ.
ಆದಾಗ್ಯೂ ಮಿತಿಮೀರಿದ ಬಳಕೆಯನ್ನು ತಪ್ಪಿಸಲೊಸುಗ ಪ್ರಕೃತಿಯಲ್ಲಿ ಇರುವ ಎಲ್ಲದರಲ್ಲೂ ದೇವರನ್ನು ಕಂಡುಕೊಂಡ ಹಾಗೆ ಭಯ ಭಕ್ತಿ ಬೆಳೆಸಿಕೊಂಡ ಪರಿಣಾಮವಾಗಿ ಇಂದಿನವರೆಗೂ ಈ ಜಗತ್ತು ಉಳಿದಿದೆಯೆಂದರೆ ತಪ್ಪಾಗಲಾರದು.

"ವೇದ ಸುಳ್ಳಾದರೂ ಗಾದೆ ಸುಳ್ಳಾಗದು" ಎಂಬ ಹಿರಿಯರು ನುಡಿದ ಮಾತುಗಳು ಅಕ್ಷರಶಃ ಸತ್ಯ ಎಂಬುದನ್ನು ವೈಜ್ಞಾನಿಕವಾಗಿ ಅಲ್ಲಗಳೆಯುವಂತಿಲ್ಲ. ಇದೆಲ್ಲಾ ಮಾನವರು ಕಾಡಿನಿಂದ ನಾಡಿನೆಡೆಗೆ ಬರುವಾಗ ಕಂಡುಕೊಂಡ ಸತ್ಯಗಳು. ಆದರೆ
ಕಾಡಿನಿಂದ ನಾಡಿಗೆ ಬಂದ ನಂತರ ನಾವು ಕಾಡಿನ ದುರ್ಬಳಕೆಯನ್ನು ಹೆಚ್ಚಿಸಿಕೊಂಡೆವು. ಅದಕ್ಕೆ ವಸತಿ ಕೃಷಿ ಇತ್ಯಾದಿ ಕಾರಣಗಳನ್ನು ತೋರಿಸಬಹುದು ಮುಂದೆ ಇದು ಸಂಪರ್ಕ ಸಂವಹನ ಎಂದು ಬೆಳೆಯುತ್ತಾ ಹೋಯಿತು. ಇಷ್ಟೇ ಆಗಿ‌ ಉಳಿದಿದ್ದರೆ ಈ ಲೇಖನ ಬರೆಯುವ ಅಗತ್ಯ ಬರುತ್ತಿರಲಿಲ್ಲವೇನೋ. ಇಂದಿನ ಹೆಚ್ಚಿನ ಪ್ರಮಾಣದಲ್ಲಿ ನಾವುಗಳು ಮುಂದಿನ ಪೀಳಿಗೆಗೆ ಆಸ್ತಿ ಮಾಡಿಡುವ ಮರ್ಜಿಗೆ ಬೀಳುವ ಜೊತೆಗೆ ಐಷಾರಾಮಿ ನಗರೀಕರಣ ಎಂಬ ದುರ್ವ್ಯಾಮೋಹವನ್ನು ಬೆನ್ನಿಗೆ ಕಟ್ಟಿಕೊಂಡು ಪ್ರಕೃತಿಯ ಎಲ್ಲವೂ ನಮ್ಮದೇ ಎಂಬ ನೆಪದಲ್ಲಿ ಮುಂದಿನ ಪೀಳಿಗೆಗೆ ಆಸ್ತಿಯನ್ನು ಉಳಿಸಲು ಹೋಗಿ ಮುಂಪೀಳಿಗೆಯ ಅಸ್ತಿತ್ವವನ್ನೇ ಕನಸು ಕಾಣುವಂತೆ ಮಾಡುತ್ತಿದ್ದೇವೆ.

ಹೇಗೆಂದರೆ ನಾವಿಂದು ಕಾಡಿನ ಸರ್ವನಾಶದ ಜೊತೆಗೆ ನಮ್ಮ ಅವಸಾನದ ಕಡೆಗೆ ಮೋರೆ ತಿರುಗಿಸಿರುವುದು ನಮಗೆ ಅರಿವಿಲ್ಲವಾಗಿದೆ. ಹೋಗಲಿ‌ ಈಗ ಅರಿವಾಗಿದೆ ಎಂದರೆ ‌ಪ್ರಯೋಜನವಿಲ್ಲದಾಗಿದೆ. ಏಕೆಂದರೆ ನಮ್ಮ ಮಿತಿಯನ್ನು ಮೀರಿ ನಾವು ಹಿಂದಿರುಗಲಾರದಷ್ಟು ತಪ್ಪು ಹೆಜ್ಜೆಗಳನ್ನು ಇಟ್ಟು ನಡೆದು ಬಹಳಷ್ಟು ಮುಂದೆ ಬಂದುಬಿಟ್ಟಿದ್ದೇವೆ. ಹೇಗೆ ಎಂದು ಒಮ್ಮೆ ಕಣ್ಣಾಡಿಸಿಕೊಂಡು ಬರುವ ಮುನ್ನ ಈ ಕಾಡು ಹೇಗೆ ಮತ್ತು ಯಾರು ವಿಸ್ತರಣೆ ಮಾಡಿದರು ಎನ್ನುವುದನ್ನು ಸ್ವಲ್ಪ ಗಮನಿಸುವ ಬನ್ನಿ. ನಮ್ಮ ಮೂಲ ಅಥವಾ ನದಿ ಮೂಲ ಯಾ ಋಷಿ ಮೂಲದ ತರಹವೇ ಆದರೂ ಕಾಡಿನ ಮೂಲ ಹಿರಿದು . ಕಾಡಿಲ್ಲದೇ ಆಮ್ಲಜನಕ ಇಲ್ಲವೆಂದ ಮೇಲೆ ನಮಗಿಂತ ಮೊದಲು ಕಾಡು, ವನ್ಯಜೀವಿಗಳು ಇದ್ದವೆಂದು ಅರ್ಥ ಅಲ್ವೇ. ಆದರೆ ಆ ಕಾಡನ್ನು ಉಳಿಸಿ ಬೆಳಸಿದ ಕೀರ್ತಿ ಪ್ರಾಣಿ ಪಕ್ಷಿಗಳು ಪಾಲಿನದು ಎನ್ನಲು ಪುರಾವೆಗಳಿವೆ.

ಜೀವಿಗಳಿಗೆ ಗಾಳಿ ನೀರಿನ ಜೊತೆಗೆ ಆಹಾರದ ಅಗತ್ಯವನ್ನು ಸಹ ಈ ಪ್ರಕೃತಿ ನೀಡಿದೆ. ಅಂತೆಯೇ ವಿಸರ್ಜನೆಯ ಅಗತ್ಯವನ್ನು ನಾವು ಮನಗಾಣಬೇಕಿದೆ ಆದರೆ ಜೀವಿಗಳು ಸೇವಿಸುವ ಆಹಾರದಲ್ಲಿ ಬಳಸುವ ವಸ್ತುಗಳ ಸಹಾಯದಿಂದ ಪ್ರಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಪಶುಪಕ್ಚಿಗಳ ಆಹಾರ ಮತ್ತು ವಿಸರ್ಜನೆಯ ವರ್ತುಲದಲ್ಲಿ ನಾವು ನೋಡಬಹುದಾಗಿದೆ. ಉದಾಹರಣೆಗೆ ಹಕ್ಕಿಗಳು ಹಣ್ಣನ್ನು ತಿಂದರೆ ಹೊಟ್ಟೆ ತುಂಬುತ್ತದೆ ಪುಟ್ಟ ಹೊಟ್ಟೆಯಲ್ಲಿ ಕರಗದ ಹಣ್ಣಿನ ಬೀಜಗಳು ಕಾಳುಗಳು ವಿಸರ್ಜನೆಯ ಮೂಲಕ ಮತ್ತೆ ಮಣ್ಣನು ಸೇರಿ ಮೊಳೆತು ಬೆಳೆದು ಗಿಡವಾಗಿ ಮರವಾಗಿ ಕಾಡಾಗಿ ಬೆಳೆಯುತ್ತವೆ. ವಿಸರ್ಜನೆಯಲ್ಲಿ ಯಾವುದೇ ರೀತಿಯ ಹಿಡಿತವಿಲ್ಲದ ಪಕ್ಷಿಗಳು ಎಲ್ಲೆಂದರಲ್ಲಿ ಹಿಕ್ಕೆ ಹಾಕುವ ಮುಖಾಂತರ ತಮಗೆ ಅರಿಯದೇ ಗಿಡ ನೆಡುವ ಕೆಲಸವನ್ನು ಮಾಡುತ್ತವೆ. ಆದರೆ ಪಕ್ಷಿಗಳು ಹಾಕಿದ ಹಿಕ್ಕೆಗಳು ನೆಲ ತಲುಪಲು ಪ್ರಾಣಿಗಳು ನೆಲದಲ್ಲಿ ನಡೆದಾಡುವಾಗ ತರಗೆಲೆಗಳ ಮೇಲೆ ಕುಳಿತ ಬೀಜಗಳನ್ನು ಕಾಲಿನಿಂದ ಮೆಟ್ಟಿ ಅಥವಾ ತಿರುಗಾಡುವ ಮುಖಾಂತರ ಇನ್ನಾವುದೋ ರೀತಿಯಲ್ಲಿ ಬೀಜಗಳು ನೆಲದಲ್ಲಿ ಅಡಗಿ ಮುಂದಿನ ಮಳೆಗೆ ಮೊಳೆತು ಚಿಗುರಿ ಕಾಡು ಮೇಡು ಬೆಳೆಯಲು ಸಹಕಾರಿಯಾಗಿವೆ.

ಪುಟ್ಟ ಅಳಿಲು ತನ್ನ ಅಳಿಲು ಸೇವೆಯನ್ನು ಮಾಡುವ ಪರಿ ನೋಡಿ. ಸಾಧಾರಣವಾಗಿ ಹಣ್ಣುಗಳು ಯಥೇಚ್ಛವಾಗಿ ದೊರಕುವ ಕಾಲದಲ್ಲಿ ಅಳಿಲುಗಳು ಹಣ್ಣುಗಳನ್ನು ತಿನ್ನುತ್ತವೆ ಆದರೆ ಹಣ್ಣುಗಳು ಸಿಗದ ಕಾಲಕ್ಕೆ ಇರಲೆಂದು ಹಣ್ಣಿನ ಬೀಜಗಳನ್ನು ಮಣ್ಣಿನ ಒಳಗಡೆ ಗುಂಡಿ ತೋಡಿ ಹೂತಿಡುವ ಅಭ್ಯಾಸ ಅಳಿಲುಗಳಿಗೆ ಇದೆ ಹಾಗೆ ಹೂತಿಟ್ಟ ಅಸಂಖ್ಯಾತ ಬೀಜಗಳಲ್ಲಿ ಕೆಲವನ್ನು ಮರು ಬಳಕೆ ಮಾಡಿಕೊಳ್ಳುವ ಅಳಿಲು ಅದೆಷ್ಟೋ ಬೀಜಗಳನ್ನು ಮರೆತು ಬಿಡುತ್ತದೆ ಅಥವಾ ಅದಕ್ಕೆ ಅಗತ್ಯವೆನಿಸದೆ  ಬಿಟ್ಟು ಬಿಡುತ್ತದೆ. ಹಾಗೆ ಅಳಿಲು ತನ್ನ ಅಗತ್ಯಕ್ಕೆ ತಕ್ಕಂತೆ ಬಳಸಿ ಬಿಟ್ಟ ಬೀಜಗಳು ಮೊಳೆತು ಹಣ್ಣಿನ ಮರವಾಗಿ ಮತ್ತೆ ಅಳಿಲಿಗೆ ಆಹಾರವಾಗಲು ಹಣ್ಣು ಬಿಡತೊಡಗುತ್ತದೆ. ತಮಗೆಲ್ಲರಿಗೂ ತಿಳಿದಿರುವಂತೆ ಡೋಡೋ ಎಂಬ ಪಕ್ಷಿಯು ಒಂದು ಜಾತಿಯ ಮರದ ಹಣ್ಣನ್ನು ಬೀಜಸಮೇತವಾಗಿ ನುಂಗುತ್ತಿತ್ತು. ಡೋಡೋ ನುಂಗಿದ ಹಣ್ಣಿನ ಬೀಜವು ಆ ಹಕ್ಕಿಯ ಹೊಟ್ಟೆಯಲ್ಲಿ ಸಂಸ್ಕರಣಗೊಂಡು ಹಕ್ಕಿಯ ಮಲದಿಂದ ಹೊರಬಂದ ಬೀಜವು ಮಾತ್ರ ಮೊಳಕೆಯೊಡೆಯಲು ಸಾಧ್ಯವಿತ್ತು. ಮಾನವನ ಜಿಹ್ವೆಯ ಚಪಲಕ್ಕೆ ಸಿಲುಕಿ ಡೋಡೋ ಪಕ್ಷಿಯ ಸಂತತಿಯು ನಿರ್ನಾಮವಾಯಿತು. ಡೋಡೋ ಪಕ್ಷಿಯ ಜೊತೆಗೆ ಆ ಜಾತಿಯ ಮರದ ಬೀಜಗಳಿಗೆ ಸಂಸ್ಕರಣೆ ಇಲ್ಲದೆ ಮರದ ಸಂತತಿ ಕೂಡ ಅಳಿವಿನ ಅಂಚಿಗೆ ತಲುಪಿತು ಅಲ್ವೇ. ಇತ್ತೀಚೆಗೆ ಪ್ರಯೋಗಗಳನ್ನು ನಡೆಸಿ ಮತ್ತೆ ಪುನರುತ್ಥಾನ ಮಾಡುವ ಯತ್ನಗಳು ನಡೆಯುತ್ತಿವೆ ಆದಾಗ್ಯೂ ಈ ಪರಿಸ್ಥಿತಿಯನ್ನು ನಮಗೆ ನಾವೇ ತಂದುಕೊಂಡೆವು ಎಂಬುದರಲ್ಲಿ ಯಾವುದೇ ರೀತಿಯ ತಪ್ಪಾಗಲು ಸಾಧ್ಯವಿಲ್ಲ ಅಲ್ವೇ.

ಮಾನವ ಆದಿಮಾನವನಾಗಿದ್ದಾಗಲು ಸಹ ಶಕ್ತಿ ಯುಕ್ತಿಗಳನ್ನು ಮೂಲಮಂತ್ರ ಮಾಡಿಕೊಂಡು ಬೇಟೆಯಾಡಿ ಬದುಕಿದ ಎನ್ನುವ ಮಾತು‌ ಸತ್ಯ. ಅದೇ ಕಾಡಿನಲ್ಲಿ ಕ್ರೂರಮೃಗಗಳ ಜೊತೆಗೆ ಸಾಧುಪ್ರಾಣಿಗಳು ಕೂಡ ಇದ್ದವೆಂಬುದನ್ನು ನಾವೆಲ್ಲರೂ ಬಲ್ಲೆವು ಅಂತೆಯೇ ಋಷಿಮುನಿಗಳು ಬೇಟೆಗಾರರು ಎಲ್ಲ ವಿಧದ ಜೀವಿಗಳು ಇದ್ದರು ಎನ್ನಬಹುದು. ಕ್ರೂರ ಎಂಬ ಪದವನ್ನು ನಾವು ಪ್ರಾಣಿಗಳಿಗೆ ಬಳಸುವಾಗ ಅದು ತನ್ನ ಅಗತ್ಯವಾದ ಆಹಾರಕ್ಕಾಗಿ ಬೇಟೆಯಾಡುವ ಕಾರಣದಿಂದಾಗಿ ಕೊಲ್ಲುವ ಸ್ವಭಾವವನ್ನು ಗಮನದಲ್ಲಿಟ್ಟುಕೊಂಡು ಹೇಳುತ್ತೇವೆ. ಅದೇ ರೀತಿ ಸಾಧು ಪ್ರಾಣಿ ಎಂದರೆ ಕೇವಲ ಸಸ್ಯಾಹಾರಿ ಪ್ರಾಣಿಗಳು ಎನ್ನಲು ಅಡ್ಡಿಯಿಲ್ಲ ಆದರೆ ಅವು ಕೂಡ ತಮ್ಮ ಪ್ರಾಣರಕ್ಷಣೆಗೆ ಒಮ್ಮೊಮ್ಮೆ ಕ್ರೂರವಾಗಿ ನಡೆದುಕೊಳ್ಳುತ್ತವೆ. ಆದರೆ ಇಂದು ನಾವುಗಳು ಅಳಿಲಿನಂತೆ ಮುಚ್ಚಿಡುವ ಬಚ್ಚಿಡುವ ಯತ್ನದಲ್ಲಿ ಪ್ರಕೃತಿಯ ಉಳಿಸುವಿಕೆ ಬೆಳೆಸುವಿಕೆಯಲ್ಲಿ ಪೂರಕವಾಗದೇ ಮಾರಕವಾಗಿ ಪರಿಣಮಿಸಲು ಕಾರಣರಾಗುತ್ತಿದ್ದೇವೆ. ಅಂತೆಯೇ "ಕೊಂದ ಪಾಪವನ್ನು ತಿಂದು ತೀರಿಸು" ಎಂಬುದೊಂದು ಗಾದೆ ಮಾತು ಇದು ಹುಟ್ಟಿಕೊಳ್ಳಲು ಕಾರಣವು ಸಹ ಆಹಾರಕ್ಕಾಗಿ ಕೊಂದರೆ ಅದು ತಪ್ಪಲ್ಲವೆಂಬ ಮಾತುಗಳು. ಆದರೆ ನಾವಿಂದು ನಮ್ಮ ನಾಲಗೆಯ ಚಪಲಕ್ಕಿಂತ ಅದೆಷ್ಟು ದಾರಿಗಳಿಂದ ಹಣ ಸಂಪತ್ತನ್ನು ಹೆಚ್ಚಿಸಲು ಸಾಧ್ಯವಿದೆ ಎಂದು ಗಮನಿಸುತ್ತಾ ಎಲ್ಲವೂ ನಮಗಿರಲಿ ಎಂದು ಕೂಡಿಡಲು ಪ್ರಾರಂಭಿಸತೊಡಗಿದೆವೋ ಅಂದಿನಿಂದಲೇ ನಮ್ಮ ಅವನತಿಗೆ ನಾವು ಹೊಂಡ ತೋಡಿಕೊಳ್ಳುತ್ತಿದ್ದೇವೆ. ಹಾಗಾಗಿ  ನಮ್ಮೊಡನೆ ಪ್ರಕೃತಿ ಬೆಳೆಯದೇ ಅಳಿಯುತ್ತಿದೆ. ತನ್ನ ತಾನು ಕಾಪಾಡಿಕೊಳ್ಳಲು ಪ್ರಕೃತಿ ನಮ್ಮನ್ನು ಅಳಿಸುವ ಪ್ರಯೋಗಗಳನ್ನು ಮಾಡುತ್ತಿದೆ.

ನಿಮ್ಮವ ಪಿ ಎಸ್ ವೈಲೇಶ
ಪಶಿವೈ
೧೨/೮/೨೦೧೯

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ