ಮುಕ್ತಕದ ಮುತ್ತಿನಲೆ ೦೧
ಮುಕ್ತಕದ ಅಲೆ -೦೧
ನಮ್ಮನಾಡಿಸುವ ನಾಭೀಜನಿತನೀ ದೇವ
ಬೊಮ್ಮನು ಬರೆದ ಹಣೆಬರಹ ಜನನ ಮರಣ|
ನಮ್ಮಿಚ್ಚೆಯಂದದಲಿ ತಿದ್ದಲದು ಸಾಧುವೇ
ಕಮ್ಮವದು ಕಳೆವುದೇ ಬೊಮ್ಮಲಿಂಗ||
ಮುಕ್ತಕದ ಅಲೆ ೦೨
ಕಡಲಿನಲೆ ಮೂಡಿರಲು ಹಗಲಿರುಳು ನೇಮದಲಿ
ದಡದಮರಳಿನೊಳು ನೀರುಳಿವುದೇ ಮನುಜ
ಕಡುಕಷ್ಟಗಳನೀಗಿ ನಡೆಯುತಿರೆ ನೀನೆಂದು
ನಡುಮುರಿವೆ ಕಮ್ಮಗಳ ಬೊಮ್ಮಲಿಂಗ
ಮುಕ್ತಕದ ಅಲೆ ೦೩
ಹೆತ್ತವಳ ನೋವುಗಳ ಮತ್ತವಳ ಭಾವದೊಳ
ಮೆತ್ತನೆಯ ಮನವರಿತು ಬಾಳುತಿರು ಮನುಜ
ವಿತ್ತದಾ ಮದದಲ್ಲಿ ಮಾತೆಯನು ಮರೆತಿರಲು
ಮತ್ತೆಂದು ಬರಳಮ್ಮ ಬೊಮ್ಮಲಿಂಗ
ಮುಕ್ತಕದ ಅಲೆ ೦೪
ಮೋಡದೊಳು ಬಿಸಿಲುಮಳೆ ಗುದ್ದಾಡಿ ನಲಿಯದಿರೆ
ನೋಡಲದು ಮಳೆಯಂಬು ಸಾಧ್ಯವೇ ಮರುಳೆ|
ಮೂಡದಿರೆ ಸಮರಸವು ಬಾಳೆಂಬ ಬಂಡಿಯಲಿ
ಕಾಡುವುದೆ ಸಿಹಿಸೊಬಗು ಬೊಮ್ಮಲಿಂಗ||
ಮುಕ್ತಕದ ಅಲೆ-೫
ಸತಿಸುತರ ಸಲಹುವರೆ ಮೋಹಿಸುತ ಸಕಲವನು
ಮತಿಗೆಟ್ಟು ಕುಳಿತಿರಲು ತರವೇನು ಬದುಕು|
ಮತಿಹೀನ ನಾವಾಗಿ ಮಿತಿಮೀರಿ ನಡೆಯುತಿರೆ
ಗತಿಕೇಡು ಕಾದಿಹುದು ಬೊಮ್ಮಲಿಂಗ||
ಮುಕ್ತಕದ ಅಲೆ ೦೬
ಸಿರಿಬಂದ ಸಮಯಕ್ಕೆ ಸರಿಯಾಗಿ ಸವೆಯದಿರೆ
ಸರಿದು ಧನ ನಡೆಯುವುದು ನೀಕೇಳು ಮನುಜ|
ಕರೆಕರೆದು ದಾನವನು ಯೋಗ್ಯರಿಗೆ ಮಾಡಿದೊಡೆ
ಹರನೊಲುಮೆ ದೊರಕುವುದು ಬೊಮ್ಮಲಿಂಗ||
ಮುಕ್ತಕದ ಅಲೆ ೦೭
ಹಟ್ಟಿಯಲಿ ಕರಿಹಸುವು ನೊರೆಹಾಲು ಕರೆದಿರಲು
ರಟ್ಟೆಯಲಿ ಬೆಟ್ಟವನು ಕರಗಿಸುವ ಕಸುವು|
ದಿಟ್ಟತನ ಹುಟ್ಟುಗುಣವಾಗಿರಲು ಜಗದಗಲ
ದಟ್ಟಿಯನು ನೀನುಡುವೆ ಬೊಮ್ಮಲಿಂಗ
ಮುಕ್ತಕದ ಅಲೆ ೦೮
ಮನೆಯಲ್ಲಿ ಮಗುವಾಗು ಊರೊಳಗೆ ಪೆಸರಾಗು
ಕೊನೆಯವನ ಮನದಲ್ಲಿ ನೆಲೆಯಾಗು ನೀನು
ಹನಿನೀರು ನೀಡುತಿರು ಹಸಿವೆನಗೆ ಎಂಬುವರ
ದನಿಯಾಗು ದಮನಿತರ ಬೊಮ್ಮಲಿಂಗ
ಮುಕ್ತಕದ ಅಲೆ ೦೯
ತರಣಿಯದು ಧರಣಿಗಿಳಿಯುವಸಮಯ ಮಂಜಿನಿಂ
ಧರೆಯೆಲ್ಲ ಕಗ್ಗತ್ತಲು ಕವಿದಂತೆ ಬದುಕು
ಬೆರಣಿಯೊಳು ಕಿಡಿಯನಿಡುತಲೆ ಕವಿದಿರುವಿರುಳದು
ಕರಗುವುದ ನೀನರಿಯೆ ಬೊಮ್ಮಲಿಂಗ
ಮುಕ್ತಕದ ಅಲೆ-೧೦
ಅಡವಿಯೊಳು ನಡೆಯುತಿರೆ ಕಾರಿರುಳ ಕತ್ತಲಲಿ
ಅಡಗಿರುವ ಮಿಗಗಳಿಗೆ ಬಲಿಬೀಳ್ವೆ ನೀನು
ಕುಡುಗೋಲ ಜತೆಗಿರಲಿ ಬೆಳಕನೀಯುವದೊಂದಿ
ಕುಡಿನೀರು ಇರಲೆಂಬ ಬೊಮ್ಮಲಿಂಗ
Comments
Post a Comment