ಹೆಮ್ಮೆಯ ಜನುಮ ಬೇಡೋಣ

ಹೆಮ್ಮೆಯ ಜನುಮ‌ ಬೇಡೋಣ
~~~~~~~~~~~~~~~~
ಭಾಮಿನೀ ಷಟ್ಪದಿಯಲ್ಲಿ

ಹರಿವ ನದಿಯಿದು ಪೊರೆದು ನಮ್ಮಯ
ಸಿರಿಯ ಹೆಚ್ಚಿಸಿ ನಲಿದು ಸಾಗುತ 
ಧರೆಯ ಸೊಬಗಿನ ಸಕಲ ಜೀವಿಯ ಸಾಕಿ ಸಲಹುತಿರು|
ಕೊರೆವ ಚಳಿಯಲಿ ತೀರ್ಥ ಕುಂಡಿಕೆ
ಮೊರೆದು ಬರುವುದ ನೋಡೆ ನಡುಗುತ
ಪುರದ ಮಂದಿಯು ಪೂಜೆ ಮಾಡಲು ಕಾದು ನಿಂದಿಹರು|| 

ಕೊಡಗು ನಾಡಿನ ಮೊದಲ ದೇವಿಯೆ 
ಕೊಡುಗೆ ನಿನ್ನದು ನಮ್ಮ ಹಿರಿಮೆಗೆ
ಬಡವ ಬಲ್ಲಿದರೆಂದು ನೋಡದೆ ನೀಡಿ ಕಾಯುತಿರೆ|
ಗುಡುಗಿ ಮಿಂಚುವ ಮೋಡದಿಂದಲಿ
ಬೆಡಗು ತರಿಸುವ ಮಳೆಯು ಸುರಿಯಲು
ನಡುಕ ತರಿಸಿದ ನಿನ್ನ ಹರಿವನು ಮತ್ತೆ ತಾರದಿರೆ|| 

ನಾಡ ಮಂದಿಗೆ ಸಕಲ ಸೌಖ್ಯವ
ನೀಡು ಮಾತೆಯೆ ಕರವ ಮುಗಿಯುತ
ಬೇಡಿಕೊಳ್ಳುವೆ ಕೊಡಗು ಮಿನುಗಲಿ ಹೆಮ್ಮೆಯೆನುವಂತೆ| 
ಗೂಡಿನೊಳಿಗಿನ ಹಕ್ಕಿಯಂದದಿ
ಬಾಡಿ ಹೋಗಿಹ ನಮ್ಮ ಜನರನು
ನೋಡಿ ನೋಡದ ಹಾಗೆ ಮಾಡದೆ ಸಲಹು ಹೊಳೆವಂತೆ|| 

ಅಮ್ಮೆ ಕಾವೇರಿಯನು ನಾವ್ಗಳು
ಸುಮ್ಮನಿರದೆಲೆ ಹಾಡಿ ಹೊಗಳುತ
ಬೊಮ್ಮ ನೀಡಿದ ನಾಡು ಬೆಳಗಲಿಯೆಂದು ಕೇಳೋಣ|
ನಮ್ಮ ಕೊಡಗಿನ ಹಿರಿಮೆ ಹರಡಲು
ಜಮ್ಮ ಭೂಮಿಯ ಮೇಲೆ ಮುಂದಿನ
ಹೆಮ್ಮೆಯೆನಿಸುವ ಜನ್ಮ ನೀಡಲು ಮನವಿ ಮಾಡೋಣ|| 

ಪಶಿವೈ 
ಪಿಎಸ್ ವೈಲೇಶ ಕೊಡಗು
೧೭/೧೦/೨೦೧೯



Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ