ಪ್ರಕೃತಿ ಪಾಠ ಕಲಿಸಲಿದೆ.
ಪ್ರಕೃತಿ ಪಾಠ ಕಲಿಸಲಿದೆ.
```````````````````````````
ಅಬ್ಬಾ ಏನು ಧಗೆ ಎಂಬುದು ಬೆಳಿಗ್ಗೆ ಏಳು ಗಂಟೆಗೆ ನಮ್ಮ ಉದ್ಗಾರ ಇನ್ನು ಮಠ ಮಠ ಮಧ್ಯಾಹ್ನ ಹೇಗಿರಬಹುದು ಅಲ್ವೇ. ನಾವು ಸವಲತ್ತುಗಳನ್ನು ಏಳಿಗೆಯೆಂಬಂತೆ ಬಿಂಬಿಸುವ ಮರೀಚಿಕೆಯ ಬೆನ್ನು ಹತ್ತಿ ಏಸಿ, ಓಸಿ, ಪ್ಯಾನು, ಪ್ರಿಜ್ಜು ,ತಂಪಾದ ಪಾನಿಯ, ಎಂದು ಪ್ರಕೃತಿ ನಾಶ, ಪರಿಸರ ವಿನಾಶ, ಓಜೋನ್ ಪದರದ ಮೇಲೆ ಅತ್ಯಾಚಾರ ಇತ್ಯಾದಿಗಳನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಾ ನೆಲ, ಜಲ, ದೇಶ,ಭಾಷೆಯ ರಕ್ಷಣೆ ಎನ್ನುವ ನಿತ್ಯ ಪ್ರಹಸನಗಳನ್ನು ಅತ್ಯಂತ ನಾಜೂಕಿನ, ಅತ್ಯಂತ ಅಗತ್ಯವಾದ ಸಂಗತಿಗಳು ಎನ್ನುವುದನ್ನು ಮರೆತು ಪರಮಾವಧಿ ಎನ್ನುವ ಹಾಗೆ ಪ್ರಕೃತಿ ದತ್ತ ನೀರು ನಿಡಿಗಳ ಮಿತಿಮೀರಿದ ಬಳಕೆ ಮಾಡುತ್ತಾ ನಮ್ಮ ಅವನತಿಗೆ ನಾವೇ ಬುನಾದಿಯನ್ನು ಹಾಕಿಕೊಳ್ಳುತ್ತಿದ್ದೇವೆ. ನಮ್ಮ ಹಿರಿಯರು ಬಾಳಿ ಬದುಕಿದ ಈ ನೆಲದಲ್ಲಿ ಈ ರೀತಿಯ ಪ್ರಕೃತಿಯ ವಿನಾಶಕ್ಕೆ ಆಧುನಿಕ ಉಪಕರಣಗಳನ್ನು ಬಳಸಿ ನಮ್ಮ ಸೌಕರ್ಯಗಳನ್ನು ನಮಗೆ ಅನುಕೂಲಕರವಾಗುವಂತೆ ಮಾಡಿ ಬಳಸುತ್ತಾ ನಾಗರಿಕತೆ ಎಂಬ ಮರೀಚಿಕೆಯ ಹಿಂದೆ ಸಾಗಿ ಮುಂದುವರೆಯುತ್ತಿರುವುದು(?) ಬಲವಾದ ಕಾರಣ ಎನ್ನಬಹುದೇ? ಜೊತೆಗೆ ನಮ್ಮವರ ಮಿತಿಮೀರಿದ ಧನದಾಹ ಧನಮದದ ಸಂಗಡ ಮನೆಯೊಳಗೆ ಹಾವು ಬಂದರೆ ಗೂಗಲ್'ನಲ್ಲಿ ಬಡಿಗೆ ಹುಡುಕುವ ಪ್ರಯತ್ನ ಮಾಡುವಷ್ಟು ಮುಂದುವರೆದಿರುವ ನಮ್ಮ ವಿಜ್ಞಾನವೆಂಬ ಅಜ್ಞಾನದ ವ್ಯವಹಾರ ಜ್ಞಾನ ಅರಿಯದ ಇಂದಿನ ನಮ್ಮವರು ಕಾರಣವೆಂದರೆ ತಪ್ಪಾಗಲಾರದು ಅಲ್ಲವೇ. ಪ್ರಕೃತಿಯಲ್ಲಿ ಕಂಡು ಬರುವ ಎಲ್ಲದರಲ್ಲೂ ದೇವರು ದಿಂಡಿರು ಎಂಬ ಭಾವನೆಗಳನ್ನು ಹುಟ್ಟು ಹಾಕಿ ಪ್ರಕೃತಿ ಸಂಪತ್ತಿನ ಮೇಲೆ ಒಂದು ಅವ್ಯಕ್ತ ಭಯ ಭಕ್ತಿ ಉಂಟು ಮಾಡಿದ್ದ ಹಿರಿಯರ ರೀತಿ ನೀತಿಗಳನ್ನು ಅಲ್ಲಗಳೆಯುತ್ತಾ ಸಾಗುತ್ತಿರುವುದು ಕೂಡ ಇದಕ್ಕೊಂದು ಕಾರಣವೇ? ಇನ್ಯಾರೊ ಬುದ್ಧಿಜೀವಿ ಎಂದು ಸ್ವಯಂ ಘೋಷಿಸಿಕೊಂಡಿರುವವರು ಇಲ್ಲಿರುವ ಅಗೋಚರ ಶಕ್ತಿಯಂಥ ಎಲ್ಲಗಳನ್ನು ಇಲ್ಲಗಳನ್ನಾಗಿಸಿ ಹೇಳಿಕೆಗಳನ್ನು ಕೊಟ್ಟು ಹೆಸರು ಮಾಡುತ್ತಿರುವುದರ ಜೊತೆ ಜೊತೆಗೆ ಹೆಸರು ಕೆಡಿಸಿಕೊಂಡು ಮನೆಯ ಹೊರಗಿಡುವ ಪದಾರ್ಥಗಳಿಂದ ಪ್ರತಿಕೃತಿಯನ್ನು ನಿರ್ಮಿಸಿ ಬಳಸಿ ಎಸೆದ ಹಳೆಯದಾದ ವಸ್ತುಗಳಿಂದ ತಯಾರಿಸಿದ ಸೊಗಸಾದ ಹಾರಗಳನ್ನು ಹಾಕಿ ಎಲ್ಲಿಯೋ ಇರುವ ಜೀವಂತ ಭಗವಾನ್'ಗಳ ಮೈಮೇಲೆ ಬಾಸುಂಡೆ ಬರುವಂತೆ ಬಾರಿಸಿ ಬೆಂಕಿ ಹಚ್ಚಿ ಸುಟ್ಟರೂ ತಮ್ಮ ಹೀನಗುಣಗಳನ್ನು ಬಿಡದಿರುವುದರ ಪರಿಣಾಮವೇ?
ಇದ್ಯಾವುದೂ ಅಲ್ಲವೆಂದೂ ಹೌದೆಂದೂ ಹೇಳಲಾಗದ ಪರಿಸ್ಥಿತಿಯನ್ನು ನಮಗೆ ನಾವೇ ತಂದುಕೊಂಡಿದ್ದೇವೆ. ಹಿಂದೆ ಆರಂಭ ಎಂಬುದನ್ನು ಆರಂಭಿಸಿದಾಗ ಹೇಗಿದ್ದೀತು ಎಂದು ನಾವು ಕಣ್ಣಾರೆ ಕಾಣಲಿಲ್ಲ. ಇತಿಹಾಸ ಓದಿದವರಿಗೆ ತಿಳಿದಿರಬಹುದು. ಆದರೆ ಸುಮಾರು ಐವತ್ತು ವರ್ಷಗಳ ಹಿಂದೆ ವ್ಯವಸಾಯ ಎಂದರೆ ಅದೊಂದು ಭೂಮಿ ಪೂಜೆಯ ಹಾಗೆ ಎಲ್ಲವನ್ನೂ ಅಳೆದು ತೂಗಿ ಬಳಸಿ ಬೆಳೆಸಿ ಬೆಳೆ ಬೆಳೆಯುವ ಬಳಕೆ ಮಾಡುವ ಅರಿವು ಹಿರಿಯರಿಗೆ ಇದ್ದಿತೆಂದು ಖಡಾಖಂಡಿತವಾಗಿ ಹೇಳಬಹುದು. ಮಿತಿಮೀರಿದ ಬಳಕೆಯನ್ನು ಆ ಕ್ಷಣದಲ್ಲಿ ಖಂಡಿಸುತ್ತಾ ಅದಕ್ಕೆ ತಕ್ಕುದಾದ ಮರುಪೂರಣವನ್ನು ಮಾಡುವಂತಹ ವ್ಯವಸ್ಥೆಗಳನ್ನು ರಾಜಾದಿರಾಜರ ಕಾಲದಿಂದಲೂ ಮಾಡುತ್ತಿದ್ದರು ಎನ್ನುವುದಕ್ಕೆ ಅತ್ಯಂತ ನಿಖರವಾದ ಸಾಕ್ಷಿಗಳು ನಮ್ಮ ನಿಮ್ಮೆಲ್ಲರ ಕಣ್ಣಿನ ಮುಂದೆ ಬೇಕಾದಷ್ಟು ಪ್ರಮಾಣದಲ್ಲಿ ಇದೆ ಅಲ್ವೇ. ಆದರೆ ಈಗಿನ ನಮ್ಮವರು ಹಿಂದಿನ ಕಾಲದಲ್ಲಿ ಕಟ್ಟಿದ ಬಾವಿ ಕೆರೆ ಕಟ್ಟೆಗಳನ್ನು ಮುಚ್ಚಿ ಸೈಟ್ ಪ್ಲಾಟ್ ಮಾಲ್ ಎಂದು ಭಾರತವನ್ನು ಸಿಂಗಾಪುರ್ ಮಾಡಲು ಮಾಡುವತ್ತ ಸಾಗುತ್ತಿದ್ದಾರೆ. ಈಗಾಗಲೇ ಅರ್ಧ ಸಿಂಗಾಪುರ್ ನಂತೆ ಆಗಿರುವ ಬೆಂಗಳೂರಿನಲ್ಲಿ ಕನಿಷ್ಟ ಒಂದು ವಾರ ನಲ್ಲಿಯಲ್ಲಿ ನೀರು ಬಾರದಿದ್ದರೆ ಕೇವಲ ಶೌಚಾಲಯ ಬಳಸುವ ನೀರಿಗಾಗಿ ಮತ್ತೊಂದು ಯುದ್ಧವೇ ನಡೆಯುವುದೇನೋ ಎಂಬ ಭಯ ಬೆಂಗಳೂರಿನಲ್ಲಿ ವಾಸಿಸುವ ಎಲ್ಲರಿಗೂ ಇದೆ. ಈಗಾಗಲೇ ಕೆರೆಗಳ ನಗರಿ ಎಂಬುದನ್ನು ಮರೆತು ಮಾಲ್'ಗಳ ಕಮಾಲ್'ಗಳ ನಗರಿ ಎಂದು ನಗಾರಿ ಬಾರಿಸಿ ಹೇಳವಂತಹ ಮಟ್ಟದಲ್ಲಿ ಮಾಲ್ ಪ್ಲಾಟ್ ಇನ್ನಿತರ ಕಾಂಕ್ರೀಟ್ ಕಾಡಾಗಿ ಮುಂದೆ ನಮ್ಮನ್ನು ಕಾಡದೇ ಇರಲಾರೆ ಎನ್ನುತ್ತಿದೆ. ಕೇವಲ ಒಂದು ಹಿಡಿಯಷ್ಟು ಮಲದ ನಿರ್ವಹಣೆಗೆ ಕನಿಷ್ಠ ಎರಡು ಕೊಡ ನೀರಿರಬೇಕು. ಹಣ ಉಳಿಸಲೆಂದು ಸ್ವಯಂ ಸೇವಿಂಗ್ (ಚೌರ) ಮಾಡಿಕೊಳ್ಳುವವರು ನಲ್ಲಿ ತಿರುಗಿಸಿ ಬಿಟ್ಟು ಸೇವಿಂಗ್ ಮಾಡಿಕೊಳ್ಳುವ ಭರದಲ್ಲಿ ಮಹಡಿಯ ಮೇಲಿರುವ ತೊಟ್ಟಿಯ ನೀರು ಚೌರವಾಗಿರುತ್ತದೆ. ನೂರಾರು ರೂಪಾಯಿ ವೆಚ್ಚದಲ್ಲಿ ನಲ್ಲಿ ರಿಪೇರಿ ಮಾಡಿಸದೇ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ನೀರು ನಮಗರಿಯದೇ ಪೋಲಾಗಿರುತ್ತದೆ. ನಾವು ಬಳಸಿದರಷ್ಟೇ ಸಾಲದು ನಮ್ಮ ಮುಂದಿನ ಪೀಳಿಗೆಗೆ ಕೂಡ ನಾವು ನೀರಷ್ಟೇ ಅಲ್ಲ ಪ್ರಕೃತಿಯಲ್ಲಿ ದೊರೆಯುವ, ಬದುಕಿರುವ ಎಲ್ಲಗಳನ್ನೂ ಇಲ್ಲಗಳನ್ನಾಗಿಸದೆ ಕಾಪಿಡಬೇಕಾದ ಜರೂರತ್ತು ನಮಗಿದೆ ಎಂದು ನಾವೆಲ್ಲರೂ ಅರಿಯಬೇಕಿದೆ.
ಏನಪ್ಪ ಇವನು ಬರೀ ಬೆಂಗಳೂರಿಗರ ಬಗ್ಗೆ ಮಾತ್ರ ಬರೆಯುತ್ತಾನೆ ಹಳ್ಳಿಗರ ರೈತರ ಬಗ್ಗೆ ಏನೂ ಹೇಳುವುದಿಲ್ಲ ಎನ್ನಬೇಡಿ ಇದೀಗ ನಿಮ್ಮ ಬಳಿಯೇ ಬರುತ್ತಿದ್ದೇನೆ. ನಮ್ಮಪ್ಪ ಕೂಡ ರೈತರು ಎಂದು ಈಗಾಗಲೇ ನಿಮಗೆಲ್ಲಾ ತಿಳಿದಿರುವ ವಿಷಯ. ಆಗಿನ ಕಾಲದ ವ್ಯವಸಾಯದ ಬಗ್ಗೆ ಈಗಾಗಲೇ ಒಂದು ಕಂತಿನ ಬರಹ ಬರೆದಿರುವೆ ಮುಂದೆ ಅದರ ಬಗ್ಗೆ ಇನ್ನಷ್ಟು ಹೆಚ್ಚಿನ ಪ್ರಮಾಣದ ಮಾಹಿತಿಯನ್ನು ನೀಡುವ ಬರಹವನ್ನು ಬರೆಯಲು ಪ್ರಯತ್ನಿಸುವೆ. ಹಾಗೆ ಹಿಂದೆ ಹಳ್ಳಿಗಳಿಗೆ ಸರಿಯಾದ ರಸ್ತೆ, ವಿದ್ಯುತ್ ಶಕ್ತಿಯ ವಿತರಣೆ ಕೂಡ ಇರಲಿಲ್ಲ. ಆಗೆಲ್ಲಾ ತಲೆಯ ಮೇಲೆ, ಸೊಂಟದ ಮೇಲೆ ಕೊಡ ಹೊತ್ತು ದೂರದಿಂದ ನೀರನ್ನು ಹೊತ್ತು ತರುವ ವ್ಯವಸ್ಥೆ ಇತ್ತು. ಕ್ರಮೇಣ ಎತ್ತಿನ ಗಾಡಿಗಳಲ್ಲಿ ತಗಡಿನ ಡ್ರಮ್ ಅಥವಾ ದೊಡ್ಡದಾದ ಪಾತ್ರೆಗಳಲ್ಲಿ ಹತ್ತಿರದ ನದಿ ಕೆರೆಗಳಿಂದ ನೀರು ತಂದು ಹಬ್ಬ ಹರಿದಿನಗಳಲ್ಲಿ ಮದುವೆ ಮನೆಗಳಲ್ಲಿ ಬಳಸಿ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ಎಂದಿಗೆ ಹಳ್ಳಿಗಳಿಗೆ ವಿದ್ಯುತ್ ಪೂರೈಕೆ, ತಕ್ಕಮಟ್ಟಿನ ರಸ್ತೆ ಸಾರಿಗೆ ಇವೆಲ್ಲವೂ ಆಗಮಿಸಿದವೋ ಅವುಗಳ ಜೊತೆಯಲ್ಲಿಯೇ ಕೆಲವು ದುರುಪಯೋಗಗಳೂ ಆಗಮಿಸಿದವು. ಇತ್ತೀಚೆಗೊಂದು ಹಳ್ಳಿಯ ಮದುವೆಯಲ್ಲಿ ಭಾಗವಹಿಸುವ ಸಂದರ್ಭ ಕಂಡ ಕೆಲವು ದುರುಪಯೋಗದ ಕುರಿತು ಬರೆಯಬೇಕಿದೆ. ಆಧುನಿಕತೆಯ ಹೆಸರಿನಲ್ಲಿ ಹಳ್ಳಿಗಳಲ್ಲಿ ಸಹ ಭರ್ಜರಿ ಮದುವೆಗಳು ನಡೆಯುತ್ತಿವೆ. ಹಳ್ಳಿಗಳಲ್ಲಿ ಹಿಂದಿನಂತೆ ವಾರಗಟ್ಟಲೆ ಮದುವೆಗಳು ನಡೆಯುವ ಕಾಲ ಕಳೆದು ಹೋಗಿದೆ. ಅವಸರದ ಮದುವೆಗಳು ನಡೆಯುತ್ತಿರುವ ಈ ಕಾಲದಲ್ಲಿ ಪ್ರೀತಿಯಿಂದ ಭಕ್ತಿಯಿಂದ ಕಾರ್ಯಗಳನ್ನು ನಿರ್ವಹಿಸುವವರು ಕಾಣಸಿಗುವುದಿಲ್ಲ. ಹೋಗಲಿ ಪಡೆದ ಹಣಕ್ಕೆ ತಕ್ಕಂತೆ ಯಾವುದೇ ನೀತಿ ನಿಯಮಗಳನ್ನು ಹೊಂದದೇ ಕೇವಲ ಯಂತ್ರದ ತರಹದ ಕೆಲಸ ಪಕ್ಕದಲ್ಲಿ ಇರುವ ಅನ್ನದ ಬುಟ್ಟಿಯಲ್ಲಿ ಗಲೀಜು ಬಿದ್ದರೂ ತಲೆ ಕೆಡಿಸಿಕೊಳ್ಳದೇ ತನ್ನ ಕರ್ತವ್ಯ ಪೂರೈಕೆಯ ಕಡೆಗೆ ಮಾತ್ರ ಗಮನವನ್ನು ನೀಡುವವರು ಅಧಿಕವಾಗಿದ್ದಾರೆ.
ಅದರಲ್ಲೂ ನಮ್ಮ ಕೆಲಸದಿಂದ ಹರಿಯುವ ನೀರು ಎತ್ತಕಡೆಗೆ ಹೋಗುತ್ತಿದೆ ಎಂದಾಗಲಿ ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದರೆ ಉಪಯೋಗ ಇದೆ ಕೂಡ ಅರಿವಿರದವರಂತೆ ವರ್ತಿಸುವವರು ಅಧಿಕವಾಗಿದ್ದಾರೆ. ಹಿಂದೆ ಕೊಡಗಿನ ಹೆಚ್ಚಿನ ಭಾಗಗಳಲ್ಲಿ ಕೇವಲ ಎರಡಡಿ ಭೂಮಿಯನ್ನು ಅಗೆದು ಹೊಂಡ ತೋಡಿದರೆ ಯಥೇಚ್ಛವಾಗಿ ನೀರು ದೊರಕುತ್ತಿತ್ತು. ನೀರಿಗೆ ಹತ್ತಿರವಿರುವಲ್ಲಿ ಸ್ನಾನದ ಮನೆ ಬಟ್ಟೆ ಒಗೆಯುವ ಸ್ಥಳ ಹಸುಕರುಗಳಿಗೆ ನೀರು ಕುಡಿಸುವ ಮೈತೊಳೆಯುವ ಸ್ಥಳವೆಂದು ಗುರುತಿಸಿ ಅಕ್ಕಪಕ್ಕದಲ್ಲಿ ಎಲ್ಲಾ ಕಡೆ ಶುದ್ಧವಾಗಿರುವಂತೆ ನೋಡಿಕೊಳ್ಳಲಾಗುತ್ತಿತ್ತು. ಅಂದು ಕುಡಿಯುವ ನೀರಿನ ಅವಶ್ಯಕತೆ ಎಂದು ಹತ್ತಿರದ ಬಾವಿಗೆ ಹತ್ತರಿಂದ ಐವತ್ತು ಎಪ್ಪತ್ತು ಅಡಿ ಉದ್ದದ ನೀರು ಸೇದುವ ಹಗ್ಗದ ಸಹಾಯದಿಂದ ನೀರನ್ನು ಸೇದಿ ಬಳಸುತ್ತಿದ್ದರು ಆಗ ಆರೋಗ್ಯ ಭಾಗ್ಯ ಚೆನ್ನಾಗಿ ಇತ್ತು. ನೀರನ್ನು ಕಷ್ಟಪಟ್ಟು ಸೇದಿ ಬಳಸುತ್ತಿದ್ದ ಕಾರಣ ಯಥೇಚ್ಛವಾಗಿ ನೀರು ಇದ್ದರೂ ಬಳಸುವಿಕೆಯಲ್ಲಿ ಮಿತಿ ಇರುತ್ತಿತ್ತು. ಇಂದು ನೀವು ಬೆರಳಿನ ತುದಿಯಿಂದ ಒಂದು ಸ್ವಿಚ್ ಅಮುಕಿದರೆ ಆರನೇಯ ಮಹಡಿಯ ಮೇಲ್ಗಡೆ ಇರುವ ಎಲ್ಲಾ ಸಿಂಟೆಕ್ ಟ್ಯಾಂಕ್ ಗಳು ತುಂಬಿ ಹೋಗುತ್ತವೆ. ಕಾರು ತೊಳೆಯಲು ಸೇವಿಂಗ್ ಮಾಡಲು ಹೂಕುಂಡಗಳಿಗೆ ನೀರು ಹಾಕಲು ನಿಯಂತ್ರಿಣವಿಲ್ಲದ ನೀರು ಹರಿಯುತ್ತಿರುತ್ತದೆ. ನೀರು, ಕಾಡು, ಪ್ರಕೃತಿಯ ಸಮತೋಲನವನ್ನು ಕಾಯ್ದುಕೊಳ್ಳಲು ನಾವೆಲ್ಲರೂ ಹೇಗೆ ನಡೆದುಕೊಳ್ಳಬೇಕೆಂಬ ಅರಿವು ಮೂಡಿಸುವ ಕೆಲಸವನ್ನು ಪ್ರಕೃತಿಯು ನಮಗೆ ಕಲಿಸುವ ಏರ್ಪಾಡುಗಳನ್ನು ಈ ಧರೆ ಮುಂದಿನ ದಿನಗಳಲ್ಲಿ ಕಲಿಸಲಿ ತಯಾರಾಗಲಿದೆ. ನಾವು ನೀವು ಕಲಿಯಲು ಆದಷ್ಟೂ ಬೇಗ ತಯಾರಾಗೋಣ. ಏಕೆಂದರೆ ಮಾನವ, ಸರಕಾರ, ಬುದ್ಧಿಜೀವಿಗಳು, (ಬುದ್ಧಿಜೀವಿಗಳು ಎಂದು ಹೇಳಿಕೊಂಡ ಸಮಯ ಸಾಧಕರಲ್ಲ) ಯಾರು ಏನಂದರೂ ನಮಗೆ ಗೋರ್ಕಲ್ಲ ಮೇಲೆ ಮಳೆ ಬಂದಂತೆ. ಕೆಸರಿನಲ್ಲಿ ಮಲಗಿದ ಎಮ್ಮೆಗಳಂತಹ ನಮ್ಮನ್ನು ಎಚ್ಚರಿಸಲು ಭೂದೇವಿಯ ಆಜ್ಞೆಯಂತೆ ಸಕಲವೂ ತಯಾರಾಗಿದೆ ಸಿದ್ಧರಾಗಿ.
ವೈ.ಕೊ.
ವೈಲೇಶ ಪಿ ಎಸ್ ಕೊಡಗು
೨/೬/೨೦೧೯
Comments
Post a Comment