ಹಚ್ಚಲೇ ಬೇಕೆ ಪಟಾಕಿ

ಹಚ್ಚಲೇಬೇಕೆ ಪಟಾಕಿ
~~~~~~~~~~~

ಅದೊಂದು ಸಾವಿರ ಜೋಪಡಿ ಮನೆಗಳುಳ್ಳ ಕೊಳಗೇರಿ. ಎಲ್ಲರೂ ಪಟಾಕಿ ಕಾರ್ಖಾನೆಯ ಕೆಲಸಗಾರರು. ತಮ್ಮ ಕೆಲಸದ ಕಾರಣದಿಂದಾಗಿ ಮಾರಕವಾದ ರೋಗದ ಗೂಡಾಗಿರುವ ಅನೇಕರು. ಅದೇ ಕಾರಣದಿಂದಾಗಿ ಅಂಗವಿಕಲರಾದ ಹಲವರು‌ ಶಾಲೆ ಕಾಣದ ಬಾಲ ಕಾರ್ಮಿಕರು ಇವರೇ ಅಲ್ಲಿನ ನಿವಾಸಿಗಳು. ಇಲ್ಲಿರುವ ಜೋಪಡಿಗಳು ಅವರ ಸೊತ್ತಲ್ಲ ಪಟಾಕಿ ಕಾರ್ಖಾನೆಯ ಮಾಲೀಕರು ತಾತ್ಕಾಲಿಕವಾಗಿ ಕೊಡಮಾಡಿದ ಆಸರೆ.

ಅಲ್ಲಿ ಎಲ್ಲವೂ ಸರಿಯಿದ್ದಿದ್ದರೆ ಹಬ್ಬದ ಸಂತೋಷ ಪಡಲು ಉಪಕ್ರಮಿಸಬೇಕಿತ್ತು. ಆದರೆ‌ ಮನೆಯ ಯಜಮಾನರುಗಳ ಜೊತೆಗೆ ಐವತ್ತು ಮಕ್ಕಳು ಹಾಗೂ ಅರವತ್ತು ಪುರುಷರು ನಲವತ್ತು ಮಹಿಳೆಯರು ಒಂದೇ ದಿನ ಪ್ರಾಣ ತ್ಯಾಗ ಮಾಡಿದ್ದರು. ಸುಮಾರು ಐನೂರು ಕಾರ್ಮಿಕರು ದುಡಿಯುವ ಪಟಾಕಿ ಕಾರ್ಖಾನೆಯಲ್ಲಿ ನಡೆದ  ಘಟನೆಯಲ್ಲಿ ಕೈಕಾಲು ಕಣ್ಣು ಕಳೆದುಕೊಂಡು ಅಂಗವಿಕಲರಾದವರು ಮುಖವೆಲ್ಲಾ ಬೆಂದು ವಿರೂಪಗೊಂಡವರು ಒಂದು ಕಡೆಯಾದರೆ ತಮ್ಮವರ ಕಾಣದೆ ಹುಡುಕುತ್ತಾ ಅಳುತ್ತಿರುವವರು‌ ಒಂದೆಡೆಯಾದರೆ ಇನ್ನೊಂದೆಡೆ ಮೈಯ ಬೆಂಕಿ ತಾಕಿ ಎದ್ದ ನೀರ್ಗುಳ್ಳೆಗಳ ಉರಿ‌ತಾಳಲಾರದೆ ಸಹಾಯಕ್ಕಾಗಿ ಅಂಗಲಾಚುವವರು‌‌ ಮತ್ತೊಂದು ಕಡೆ.

ಬೆಂಕಿಯ ಕೆನ್ನಾಲಗೆ ಗಗನಕ್ಕೇರುತ್ತಿದ್ದರೂ ಬೆಂಕಿ ಹರಡದಂತೆ ತಡೆಯುವುದಷ್ಟೇ ಇಲ್ಲಿ ಅಗ್ನಿಶಾಮಕ ದಳದವರ ಕೆಲಸ. ಇನ್ನೊಂದು ಕಡೆ ತುರ್ತುವಾಹನ ಬಂದರೂ ಸಿಬ್ಬಂದಿಗಳು ಯಾರನ್ನೂ ಮುಟ್ಟುವಂತಿರಲಿಲ್ಲ. ಉರಿ‌ಉರಿಯೆಂದು ಹೊರಳಾಡುತ್ತಿರುವ ಮೈಗೆ ನೀರು ಸುರಿಯುವುದೋ ಅಥವಾ ಅಂಟಿದ ನೈಲಾನ್ ಬಟ್ಟೆಗಳನ್ನು ಎಳೆಯುವುದೋ ಒಂದು ಅರ್ಥವಾಗುವ ಮುನ್ನವೇ ಪ್ರಾಣವಾಯುವಿಗಾಗಿ ಒದ್ದಾಡುತ್ತಿರುವವರನ್ನು ಹೇಗೆ ರಕ್ಷಿಸುವುದೆಂದು ಎಂದು ಅರಿಯಲಾಗದ ಸ್ವಯಂ ಸೇವಕ ವರ್ಗದವರು.

ಬೆಂಕಿಗೆ ಸಿಲುಕಿದವರ ಆಕ್ರಂದನ, ಸಂಪೂರ್ಣ ವಾತಾವರಣವನ್ನು ತನ್ನ ಕಬಂಧ ಬಾಹುಗಳಿಂದ ಆವರಿಸುತ್ತಿರುವ ಗಂಧಕದ ಅಂಶ ಹೊಂದಿರುವ ವಿಷಯುಕ್ತ ಹೊಗೆಗೆ ನೆಲಕಚ್ಚಿದಂತೆ ಸರಿದಾಡುತ್ತಾ ಮಾನವ ಜೀವಗಳ ರಕ್ಷಣೆಗೆ ತೊಡಗಿರುವ ಆಪತ್ ರಕ್ಷಕರು. ಅತೀವವಾದ ತರಬೇತಿ ಹೊಂದಿದ್ದರೂ ಸಧ್ಯದ ಪರಿಸ್ಥಿತಿಯಲ್ಲಿ ಯಾರ ಮಾತುಗಳು ಯಾರಿಗೂ ಕೇಳದಂತಹ ಪರಿಸ್ಥಿತಿಯಲ್ಲಿ ಕ್ಷಣ ಕ್ಷಣಕ್ಕೂ ಆವರಿಸುತ್ತಿರುವ ಹೊಗೆಯಿಂದ ತಪ್ಪಿಸಿಕೊಳ್ಳುವುದು ಹೇಗೆಂದು ಪರಿತಪಿಸುತ್ತಿರುವ ಗೃಹರಕ್ಷಕ ದಳದ ಸಿಬ್ಬಂದಿಗಳು. ಬೆಂಕಿಗೆ ಸಿಲುಕಿ ಒದ್ದಾಡುವವರನ್ನು ರಕ್ಷಿಸಬಹುದಾದ ಸಾಧ್ಯತೆಗಳಿದ್ದರೂ ಕಣ್ಣಿಗೆ ಬೀಳುತ್ತಿರುವ ದೃಶ್ಯಗಳನ್ನು ಸೆರೆಹಿಡಿದು ಲೈವ್ ಶೋ ಕಳುಹಿಸುತ್ತಿರುವ ದೃಶ್ಯ ಮಾಧ್ಯಮದ ಕೆಲವರು ಸುದ್ದಿಗಾಗಿ ಅವಸರದಲ್ಲಿ ಓಡೋಡಿ ಬಂದು ಅಪಘಾತದ ಸುಳಿಗೆ ತಾವೇ ಸ್ವತಃ ಸುದ್ದಿಯಾದ ಪತ್ರಿಕಾ ವರದಿಗಾರರೊಬ್ಬರು.

ವಿಚಾರ ತಿಳಿದು ನಗರದ ಎಲ್ಲಾ ಆಸ್ಪತ್ರೆಯ ತುರ್ತು ವಾಹನಗಳನ್ನು ವಶಕ್ಕೆ ತೆಗೆದುಕೊಂಡು ಘಟನಾ ಸ್ಥಳಕ್ಕೆ ಕಳುಹಿಸಿದ ಜಿಲ್ಲಾಧಿಕಾರಿಗಳು. ಟಿವಿ ಪರದೆಯ ಮೇಲೆ ಘಟನೆಯ ವಿವರ ತಿಳಿದು ಕೇವಲ ಕುತೂಹಲಕ್ಕಾಗಿ ಘಟನೆಯ ಸ್ಥಳಕ್ಕೆ ಲಗ್ಗೆಯಿಡುವ ದಾವಂತದಲ್ಲಿ ತಮಗರಿಯದೆ ವೃಥಾ ವಾಹನ  ಸಂಚಾರವನ್ನು ಹೆಚ್ಚಿಸಿ ತುರ್ತು ವಾಹನಗಳಿಗೆ ದಾರಿ ಇಲ್ಲದಿರುವಂತಹ ಪರಿಸ್ಥಿತಿಯನ್ನು ನಿರ್ಮಿಸಿದ ಸಾರ್ವಜನಿಕ ಬಂಧುಗಳು. ಇಂತಹ ಸಂದರ್ಭದಲ್ಲಿ ಕೂಡ ಸ್ವಾರ್ಥ ಸಾಧನೆಗಾಗಿ ಏನೇನೋ‌ ಬಡಬಡಿಸುತ್ತಿರುವ ರಾಜಕೀಯ ಸಾಮಾಜಿಕ(?) ನಾಯಕರು. ತಮ್ಮ ಜೀವದ ಹಂಗು ತೊರೆದು ಒಬ್ಬ ಕೇವಲ ಒಬ್ಬ ವ್ಯಕ್ತಿಯನ್ನಾದರೂ ಉಳಿಸಬೇಕೆಂದು ಶತಾಯಗತಾಯ ಅನುಕ್ಷಣವೂ ಮಿಡಿಯುತ್ತಿರುವ ಹೃದಯಗಳು.

ತಾಯಿಯ ಆರೋಗ್ಯ ಸರಿಯಿಲ್ಲವೆಂದು ಔಷಧಿ ತರಲು‌ ಹಣವಿಲ್ಲವೆಂದು ತನ್ನ ಪುಟ್ಟ ತಂಗಿಯನ್ನು ಅಮ್ಮನ ಉಸ್ತುವಾರಿಗೆ ಬಿಟ್ಟು ಕೆಲಸಕ್ಕೆ ತೆರಳಿದ ೧೪ ರ ಬಾಲೆ ಇಳವರಸಿಯನ್ನು ಅರಸಿಕೊಂಡು ಬಂದಿದ್ದ ಯಮರಾಯ. ಅವಳ ಮನೆಯಲ್ಲಿ ಆಕ್ರಂದನದ ಹೊರತಾಗಿ ಇರುವವರು ಇಬ್ಬರೇ ಕಾಯಿಲೆ ಬಿದ್ದಿರುವ ತಾಯಿ ಹಸಿವಿನಿಂದ ಕಂಗೆಟ್ಟಿರುವ ತಂಗಿ. ತಡಿಕೆ ಗೋಡೆಯ ಕಳೆದ ತಿಂಗಳಷ್ಟೇ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಮೃತಪಟ್ಟ ತಂಗವೇಲುವಿನ ಪೋಟೋ ಯಾಕೋ ನಗುವಂತಿತ್ತು. ಅನಾರೋಗ್ಯದಿಂದ ನಿತ್ರಾಣಗೊಂಡಿದ್ದ ಸೆಲ್ವಿ‌ ಪುಟ್ಟ ಮಗುವನ್ನು ಎತ್ತಿಕೊಳ್ಳಲಾಗದಷ್ಟು ಶಕ್ತಿಯಿಲ್ಲದಿದ್ದರೂ ತನ್ನ ಮಗಳು ಇಳವರಸಿಯನ್ನು ಹುಡುಕಲು ಕಾಲೆಳೆಯುತ್ತಾ ಹೊರಟಳು.

ಪಟಾಕಿ ಕಾರ್ಖಾನೆಯ ಮಾಲೀಕರು ತಾತ್ಕಾಲಿಕವಾಗಿ ನೀಡಿರುವ ಜೋಡಿಗಳಿಂದ ಅಳಿದುಳಿದ ವೃದ್ದ ಮಹಿಳೆಯರ ಅಳುವಿನ ಜೊತೆಗೆ ತನ್ನ ಹರಿದ ಚಪ್ಪಲಿಯ ಸದ್ದನ್ನು ಬೆರೆಸುತ್ತಾ ಮುಖ್ಯ ರಸ್ತೆಗೆ ಬಂದ ಸೆಲ್ವಿಗೆ ಎದುರಾದವರು ಕಳೆದ ವರ್ಷ ನಡೆದ ಪಟಾಕಿ ಕಾರ್ಖಾನೆಯ ಸ್ಪೋಟದಲ್ಲಿ ತನ್ನ ಮಗನನ್ನು ಕಳೆದುಕೊಂಡ ಮುನಿಯಮ್ಮ ಅದೇ ಸ್ಫೋಟದಲ್ಲಿ ತನ್ನ ಮಗ ಮುರುಗ ಎಡಗೈಯ ನಾಲ್ಕು ಬೆರಳುಗಳನ್ನು ಕಳೆದುಕೊಂಡವನನ್ನು ಮಾಲೀಕ ಭಡ್ತಿ ನೀಡಿ ಸೂಪರ್ವೈಸರ್ ಆಗಿ‌ ನೇಮಿಸಿಕೊಂಡಿದ್ದರು.
ಪಟಾಕಿ ಗೋದಾಮಿನಲ್ಲಿ ಈ ದಿನದ ಉತ್ಪಾದನೆಯನ್ನು ಅಚ್ಚುಕಟ್ಟಾಗಿ ಜೋಡಿಸುತ್ತಿದ್ದ ತನ್ನದೇ ಗೆಳೆಯರ ಜೊತೆಗೆ  ದಾಸ್ತಾನುಗಳ ಪಟ್ಟಿಯನ್ನು ಪರಿಶೀಲಿಸುವ ಕಾರ್ಯವನ್ನು ಅತ್ಯಂತ ಶೃಧ್ದೆಯಿಂದ ನಿರ್ವಹಿಸುತ್ತಿದ್ದ ಮುರುಗನನ್ನು ಗೆಳೆಯ ಅನ್ಬುನಾಥನ್  ಹತ್ತಿರ ಬಂದು ಗೋದಾಮಿನ ಇನ್ನೊಂದು ಬದಿಗೆ ಬೆಂಕಿ ಬಿದ್ದಿರುವುದನ್ನು ತಿಳಿದಾಗಲೇ ಅರಿವಾಯಿತು. ಆದರೆ ಅಷ್ಟರಲ್ಲಿ ಆಗಲೇ ಬೆಂಕಿಯ ಜೊತೆಗೆ ಪೈಪೋಟಿ ನಡೆಸಿದ ಪಟಾಕಿಗಳು ತನ್ನ ಜೀವವನ್ನು ಕಸಿಯುವುದೆಂಬ ಅರಿವು ಆತನಿಗಿರಲಿಲ್ಲ. ಮುನಿಯಮ್ಮನ ಹರಕೆಗೆ ಆಂಡವ ಮುರುಗ ಮರುಕ ಪಡಲಿಲ್ಲ. ಇಂತಹ ಹತ್ತೆಂಟು ಹೆಂಗಸರು ಕಾರ್ಖಾನೆಯ ಬಳಿ ತಲುಪಿದಾಗ  ಕಾರ್ಖಾನೆಗೆ ಕೆಲಸಕ್ಕೆ ತೆರಳಿದ ಮತ್ತಷ್ಟು ನೌಕರರ ಸಂಬಂಧಿಗಳ ಆಕ್ರಂದನ ಮುಗಿಲು ಮಟ್ಡುತ್ತಿರುವ ಹೊಗೆಯೊಂದಿಗೆ ಪೈಪೋಟಿಗೆ ಇಳಿದಂತಿತ್ತು.

ಅಪ್ಪ ಪಟಾಕಿ ತರುವುದು ಬೇಡವೆಂದರೂ ಕೇಳದೆ ತನ್ನ ಗೆಳೆಯರ ಜೊತೆ ಪಟಾಕಿ ಖರೀದಿಸಿ ವಾಪಸ್ಸು ಬರುವ ಹಾದಿಯಲ್ಲಿ ಜನಜಂಗುಳಿ ಮುಗಿಲೆತ್ತರದ ಹೊಗೆ ಟ್ರಾಪಿಕ್ ಜಾಮ್ ಇವೆಲ್ಲವನ್ನೂ ಕಂಡ ವಿನೋದ್ ಏನೆಂದು ನೋಡಿದಾಗ ಕಂಡ ದೃಶ್ಯ ಮನಕಲಕುವಂತಿತ್ತು. ಪಟಾಕಿ ಕಾರ್ಖನೆಗೆ ಬೆಂಕಿ ಬಿದ್ದ ಪರಿಣಾಮವಾಗಿ ಅದೆಷ್ಟು ಸಾವುನೋವುಗಳು ಸಂಭವಿಸಿದವು. ಅದೆಷ್ಟು ಪುಟ್ಟ ಮಕ್ಕಳು ತಂದೆ ತಾಯಿಯರನ್ನು ಕಳೆದುಕೊಂಡರು. ಅದೆಷ್ಟು ಬಾಲಕಾರ್ಮಿರು ಪ್ರಾಣ ತೆತ್ತರು ಎಂದು ಗಮನಿಸಿದ ವಿನೋದ್ ನಮ್ಮ ಕ್ಷಣಿಕ ಹರುಷಕ್ಕಾಗಿ ಇಷ್ಟೆಲ್ಲಾ ಜನರು ಮಕ್ಕಳು ಪ್ರಾಣತ್ಯಾಗ ಮಾಡಬೇಕಿದೆಯೆ ಎಂದು ಚಿಂತಿಸಿ ತಂದಿದ್ದ ಪಟಾಕಿಯನ್ನು ಮನೆಗೆ ಒಯ್ದು ತಂದೆಗೆ ತೋರಿಸಿ ಈ ಪಟಾಕಿಗಳನ್ನು ತುಂಬಾ ಆಸೆಯಿಂದ ತಂದೆನು. ಆದರೆ ಬರುವಾಗ ನನಗಾದ ಅನುಭವಗಳಿಂದ ಇನ್ನು ಮುಂದೆ ಪಟಾಕಿ ಖರೀದಿಸುವುದಿರಲಿ ಪುಕ್ಕಟೆ ಕೊಟ್ಟರೂ ಪಟಾಕಿ ಹಚ್ಚಲಾರೆ. ಈ ಪಟಾಕಿಗಳನ್ನು ಯಾರಿಗೆ ಕೊಟ್ಟರು ಅವರು ಹಚ್ಚಿ ವಾತಾವರಣದ ಮೇಲೆ ಅರಿಯದ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವುದು ಖಚಿತ. ಆದುದರಿಂದ ಇವುಗಳನ್ನು ನೀರಿನಲ್ಲಿ ಅದ್ದಿ ಬಿಸಾಡುವೆ. ಪಟಾಕಿ ಖರೀದಿಸಿ ಉಳಿದ ಹಣವನ್ನು ದೀಪಾವಳಿ ಪಟಾಕಿ ಸಂತ್ರಸ್ತರಿಗೆ ನೆರವು ನೀಡುವ ಮೂಲಕ ಈ ವರ್ಷದ ಹಬ್ಬವನ್ನು ಆಚರಿಸುವೆನು ಎಂದು ತಂದೆಗೆ ತಿಳಿಸಿದಾಗ ತಂದೆಗೆ ನಿಜವಾಗಿಯೂ ತನ್ನ ಮಗನ ಮೇಲೆ ಅಭಿಮಾನ ಮೂಡಿತ್ತು.

ಹಚ್ಚದಿರಿ ಪಟಾಕಿ ಹಚ್ಚಿರಿ ನಗೆ ಚಟಾಕಿ
ಮಣ್ಣಿನ ಹಣತೆಗೆ ಮಾನವೀಯತೆಯ ಎಣ್ಣೆಯ ಸುರಿದು ಜ್ಞಾನ ಜ್ಯೋತಿಯ ಬೆಳಗಿ ಮನುಕುಲವನು ಉದ್ದರಿಸಲು ನಾವೇ ಮೊದಲ ಹೆಜ್ಜೆಯಿಡುವ ಎಲ್ಲರೂ ಒಂದಾಗಿ ಬನ್ನಿ.

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ