ಹೀಗೂ ಒಂದು ಪ್ರಸಂಗ
ಹೀಗೂ ಒಂದು ಪ್ರಸಂಗ
~~~~~~~~~~~~
ನಿನ್ನೆ ರಾತ್ರಿ ೯ರ ವೇಳೆಗೆ ಮಡಿಕೇರಿ ಬಿಟ್ಟಾಗ ಅವಸರವಾಗಿ ಒಬ್ಬ ಯುವಕ ಮತ್ತು ಒಬ್ಬ ಯುವತಿ ಜೊತೆಯಾಗಿ ಬಂದು ಬಸ್ ಹತ್ತಿದರು. ಯುವಕ ಟಿಕೆಟ್ ಖರೀದಿಸಿದ ಇಬ್ಬರೂ ಒಟ್ಟಿಗೆ ಕುಳಿತು ಪ್ರಯಾಣಿಸಿದರು. ಮಾರ್ಗ ಮಧ್ಯದಲ್ಲಿ ಬರುವ ಗುಡ್ಡೆಹೊಸೂರು ಎಂಬಲ್ಲಿಗೆ ತಲುಪುವ ಮುನ್ನ ಯುವತಿ ಗುಡ್ಡೆಹೊಸೂರಿನಲ್ಲಿ ನಿಲುಗಡೆ ಕೊಡುವಿರಾ ಎಂದು ನಿರ್ವಾಹಕರ ಬಳಿ ಕೇಳಿದರು. ನಿರ್ವಾಹಕರು ಹೊಸಬರಾದ ಕಾರಣ ನನ್ನ ಬಳಿ ಬಂದು ನಿಲುಗಡೆ ಕೊಡಬಹುದೇ ಎಂದು ಕೇಳಿದರು. ಅದಕ್ಕೆ ಹೌದು ಕೋರಿಕೆ ನಿಲುಗಡೆ ಇದೆ ಕೊಡುವ ಎಂದು ಹೇಳಿದೆ
ಮರಳಿ ನಿರ್ವಾಹಕರು ಅವರ ಬಳಿ ತಲುಪಿದಾಗ ಬೇಡ ನಾವು ಕುಶಾಲನಗರದಲ್ಲಿ ಇಳಿಯುತ್ತೇವೆ ಎಂದರು. ಆದಾಗ್ಯೂ ಗುಡ್ಡೆಹೊಸೂರು ತಲುಪಿದಾಗ ಇಳಿಯುವವರು ಇದ್ದಾರೆಯೇ ಎಂದು ನಿರ್ವಾಹಕರಲ್ಲಿ ಮತ್ತೆ ಕೇಳಿದಾಗ ಇಲ್ಲ ಅವರು ಕುಶಾಲನಗರದಲ್ಲಿ ಇಳಿಯುತ್ತಾರೆ ಎಂದು ತಿಳಿಸಿರುತ್ತಾರೆ. ತದನಂತರ ಕುಶಾಲನಗರ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದಾಗ ಪ್ರಯಾಣಿಕರು ಇಳಿದು ಅವರವರ ಪಾಡಿಗೆ ಹೋದರು.
ಯುವತಿಯ ತಂದೆ ಮಗಳನ್ನು ಕರೆದೊಯ್ಯಲು ಅಟೋದಲ್ಲಿ ಬಂದವರು ಮಗಳನ್ನು ಗುಡ್ಡೆಹೊಸೂರಿನಲ್ಲಿ ಇಳಿಯದೆ ಇರುವ ಕಾರಣ ಕೇಳಿದಾಗ ಬಸ್ಸು ನಿಲ್ಲಿಸಲಿಲ್ಲ ಎಂಬ ಹಸಿ ಸುಳ್ಳು ಆರೋಪ ಮಾಡಿದ್ದಾರೆ. ಮೊದಲೇ ಕಂಠಮಟ್ಟ ಪಾನಮತ್ತರಾಗಿ ಏನು ಹೇಳಿದರೂ ಅರ್ಥವಾಗದ ಸ್ಥಿತಿಯಲ್ಲಿ ಇದ್ದರೂ ನಿರ್ವಾಹಕರ ಬಳಿ ಗುಡ್ಡೆಹೊಸೂರಿನಲ್ಲಿ ನಿಲುಗಡೆ ಕೊಡದ ಬಗ್ಗೆ ವಿಚಾರಿಸಿದ್ದಾರೆ. ನಿರ್ವಾಹಕರ ಸಮಜಾಯಿಷಿ ಅವರ ತಲೆಗೆ ಹೋಗದೇ ಬಸ್ಸಿಗೆ ಅಡ್ಡಲಾಗಿ ತನ್ನ ಆಟೋರಿಕ್ಷವನ್ನು ನಿಲ್ಲಿಸಿ ನನ್ನೊಂದಿಗೆ ಮೊಂಡು ವಾದಕ್ಕೆ ಇಳಿದಿದ್ದಾರೆ. ನನಗೆ ಈ ಎಲ್ಲಾ ವಿಚಾರಗಳು ತಿಳಿಯದೇ ಇರುವುದರಿಂದ ನಿಜಕ್ಕೂ ತಬ್ಬಿಬ್ಬಾಗಿದ್ದೆ. ಅವರ ಅಟಾಟೋಪವನ್ನು ಕಂಡು ಸಾರ್ವಜನಿಕರು ಸೇರಿದ್ದಾರೆ. ಇವರ ಮಾತುಗಳನ್ನು ನಂಬಿದ ಆಟೋಚಾಲಕನೊಬ್ಬ ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟರಲ್ಲಿ ಬಸ್ಸಿನೊಳಗಿದ್ದ ಕೆಲವು ನೇರ ಪ್ರಯಾಣಿಕರು ಇಳಿದು ಬಂದು ನಿರ್ವಾಹಕರು ತಮ್ಮ ಮಗಳನ್ನು ಗುಡ್ಡೆಹೊಸೂರು ತಲುಪಿದಾಗ ಇಳಿಯುವಿರಾ ಎಂದು ಕೇಳಿದರೂ ಸಹ ನಾವು ಕುಶಾಲನಗರದಲ್ಲಿ ಇಳಿಯುವೆವು ಎಂದಿದ್ದಾರೆ. ಇದರಲ್ಲಿ ಚಾಲಕ ನಿರ್ವಾಹಕರ ಏನೇನೂ ತಪ್ಪಿಲ್ಲವೆಂದು ಸಾರ್ವಜನಿಕರಿಗೆ ಮನವರಿಕೆ ಮಾಡಿದ ಬಳಿಕ ಸಾರ್ವಜನಿಕರು ಆ ಯುವತಿಯ ತಂದೆಗೆ ತಿಳಿಹೇಳಿ ಕಳುಹಿಸಿ ಕೊಟ್ಟಿದ್ದಾರೆ.
ಇಲ್ಲಿ ನನ್ನ ಪ್ರಶ್ನೆ ಇಷ್ಟೇ. ತನ್ನ ಸ್ವಾರ್ಥಕ್ಕಾಗಿ ತಂದೆ ತಾಯಿಗಳಿಗೆ ಸುಳ್ಳು ಹೇಳುವುದರೊಂದಿಗೆ ಒಂದು ವ್ಯವಸ್ಥೆಯ ಮೇಲೆ ಪ್ರಭಾವ ಬೀರುವ ಹಸಿ ಹಸಿ ಸುಳ್ಳುಗಳನ್ನು ಹೇಳುವ ಇಂತಹ ಮಕ್ಕಳು ಮುಂದಿನ ಪ್ರಜೆಗಳು ಹೇಗೆ ಆಗುವರು. ಇಂತಹ ಮಕ್ಕಳು ಇದ್ದರೆಷ್ಟು ಬಿಟ್ಟರೆಷ್ಟು ಅಲ್ವೇ. ಇಂತಹ ಮಕ್ಕಳ ಮಾತುಗಳನ್ನು ನಂಬಿ ಸಂಸ್ಥೆಯ ನೌಕರರ ವಿರುದ್ಧ ದೂರುಗಳನ್ನು ಸಲ್ಲಿಸುವ ಪೋಷಕರಿಗೆ ಕೊರತೆಯಿಲ್ಲ ಎನಿಸುತ್ತದೆ.
ವೈಲೇಶ ಪಿ ಯೆಸ್ ಕೊಡಗು
೫/೧೦/೨೦೧೮
Comments
Post a Comment