ಗಝಲ್ : ೪೨
ಗಝಲ್ : ೪೨
~~~~~~~~
ಬುವಿಯಂದ ಸಹಜ ಸುಂದರ ನಾವೇ ವಿಕೃತಿ ಗೊಳಿಸದಿದ್ದೊಡೆ
ಮಾನವ ಜನ್ಮ ಮಿಗಿಲು ಉಳಿದ ಜೀವಿಗಳು ಧರೆಯೊಳಿದ್ದೊಡೆ
ಪಾನಕೆ ಸೀಮಿತವಾಗದೆ ಸಕಲ ಚಟುವಟಿಕೆಗೂ ಬೇಕು ನೀರು
ಗಂಗೆಯು ಪಾವನೆಯೆ ನಮ್ಮಿಂದ ಮಾಲಿನ್ಯ ಹೊಂದದಿದ್ದೊಡೆ
ಜಗತ್ತಿನ ಜೀವಿಗಳ ಆಧಾರ ನಿರಾಕಾರ ನಿರ್ಗಂಧಮಯ ವಾಯು
ಸ್ವಾರ್ಥದ ಸಾಧನೆಗೆ ವಾತಾವರಣವನು ಮಲಿನಗೊಳಿಸದಿದ್ದೊಡೆ
ಸರ್ವ ಜನಾಂಗದ ಶಾಂತಿಯ ತೋಟವಿದು ಮನಸ್ಸಿದು ಕೆಡದಿದ್ದರೆ
ನಾವೆಲ್ಲರೂ ಬುದ್ಧಿವಂತಿಕೆಯ ಹರಿಕಾರರೆ ಪ್ರತಿಕಾರವಿಲ್ಲದಿದ್ದೊಡೆ
ನಾವೆಂದಿಗೂ ರಾಮ ರಹೀಮ ಯೇಸು ಬುದ್ಧ ವಿವೇಕಾನಂದರೆ
ನಮ್ಮೊಳಗ ಅವಿವೇಕದ ನಡೆಗಳ ತೊರೆದು ಬಾಳುವವರಾದೊಡೆ
ಒಳಗಿನ ತಿಳಿಯನು ಕಡೆ ಕಡೆದು ನವನೀತವ ಬಯಸಬೇಕಾಗಿದೆ
ಸಾಧ್ಯವಿದು ಬಗ್ಗಡಗಳ ಕಡೆಯದೇ ಬಯಕೆಗಳು ಮೊಸರಾದೊಡೆ
ಮನದ ಮಾತಿದು "ಸಿಡಿಲ"ನದು ನಾಲಿಗೆ ಮೇಲಿನ ನುಡಿಯಿದಲ್ಲ
ನುಡಿದಂತೆ ನಡೆವ ಸಾಧಿಸುತಾ ಸರ್ವ ಜನರ ಸಹಕಾರವಿದ್ದೊಡೆ
ಸಿಡಿಲು
ವೈಲೇಶ ಪಿ ಯೆಸ್ ಕೊಡಗು
೬/೯/೨೦೧೮
Comments
Post a Comment