ಗಝಲ್ : ೪೧
ಗಝಲ್ : ೪೧
~~~~~~~~
ಹಗಲು ಮುಗಿದು ಹೆಗಲು ಏರುವ ಮುನ್ನವೇ ಮನವ ನೀಡಬಾರದೇ ಸಖಿ
ತೊಗಲ ತೆವಲಲ್ಲವಿದು ಮನವನಷ್ಟೇ ಬೇಡುವೆ ಒಲಿದು ಬರಬಾರದೇ ಸಖಿ
ನನ್ನೊಳಗಣ್ಣಿನೊಳಗಣ ಬಿಂಬ ಕಣ್ತುಂಬಿ ಹಾದಿ ಕಾಣದೆ ಮಂಜಾಗುತಿದೆ
ನೀನಿಲ್ಲದ ಬದುಕು ಕಣ್ಣಿದ್ದು ಕುರುಡಂತೆ ಕರಪಿಡಿದು ನಡೆಸಬಾರದೇ ಸಖಿ
ಕಂಡು ಕಾಣದಂತೆ ಹೃದಯವ ತುಳಿದು ನಡೆದವಳು ನೀನೆಂದರೆ ತಪ್ಪಾಗದು
ಒಡೆದೆದೆಯ ಚಿಮ್ಮಿದ ನೆತ್ತರು ನಿನ್ನ ವದನಾರವಿಂದವ ಸೋಕಲಾರದೇ ಸಖಿ
ನಾನು ನೀನು ಬೇರೆ ಏನು ಎಂಬ ಯಕ್ಷ ಪ್ರಶ್ನೆ ಇಟ್ಟವಳು ನೀನೇ ಅಲ್ಲವೇನೇ
ನನ್ನ ಶವದ ಮೆರವಣಿಗೆಯ ದಾರಿಯಲಿ ಕಾಣದಂತಾಗಿ ನೀನೆಲ್ಲಿ ಅಡಗಿದೆ ಸಖಿ
ನಿನ್ನೆದೆಯ ಸ್ವಾರ್ಥಕೆ ಎನ್ನಮ್ಮನೆದೆಯನೊಡೆದೆ ನೀನೂ ಅಮ್ಮನಾಗುವವಳೆ
ಎನ್ನಮ್ಮನೆದೆಯನೊಡೆದಂತೆ ನಿನ್ನೆದೆಯನ್ಯಾರು ಒಡೆಯಬಾರದಾಗಿದೆ ಸಖಿ
ಸಿಡಿಲನ ಮನದೊಳು ನೂರಾಸೆ ಮಿಂಚಿ ಮರೆಯಾಗಿ ನಿನ್ನನೇ ನೆನೆಯುತಿವೆ
ಸಮಾಧಿಗೆ ಹಿಡಿ ಮಣ್ಣನೊಗೆಯಲು ಎಲ್ಲಿದ್ದರೂ ಧಾವಿಸಿ ಬರಬಾರದೇ ಸಖಿ
ವೈಲೇಶ ಪಿ ಯೆಸ್ ಕೊಡಗು
೨೨/೯/೨೦೧೮
Comments
Post a Comment