ಮಳೆ
ಕೆಡಿಸದಿರು ಕಾಲ
~~~~~~~~~
ಅಮಿತ ವರ್ಷದ ವರ್ಷಧಾರೆಯಿದೆಂದು
ತಳುಕು ಕೊಳಕು ಕೊಳೆಗಳನು ತೊಳೆದು
ಸಕಲರಿಗೂ ಸಮಬಾಳ್ವೆಯ ನೀಡಲೆಂದು
ಬಂದವನೆಂದು ನಂಬಿದ್ದೆವು ನಾವಂದು !
ಬತ್ತಿದಾ ಬುವಿಯಲಿ ಉಕ್ಕಿ ಹರಿಯಲಿ
ಜಲವೆಂದು ಬೇಡಿದೆವು ನಾವು ಮನದಲಿ
ಜಲಾಶಯವ ತುಂಬಿಸಿ ಬೆಟ್ಟ ಗುಡ್ಡಗಳಲಿ
ಜಲ, ಹೊಳೆ ಹರಿಸಿ ಜೀವವನೊಯ್ದೆಯಿಲ್ಲಿ!
ಅನುದಿನ ಆಗಸ ದಿಟ್ಟಿಸಿ ನಿನ್ನನೇ ಕಾದಿದ್ದೆ
ನೀ ಬಂದೆ ಜೀವಸಂಕುಲಕೆ ಆನಂದ ತಂದೆ
ಸರ್ವರು ಹೊಗಳಿದರು ನೀನೆಮ್ಮತಂದೆ
ಶಾಂತ ಸ್ವಭಾವದ ಬಾನು ರುದ್ರ ನೀನೇಕಾದೆ?
ದಾಹವ ನೀಗುವವ ನೀನೇ ಕರುಣಾ
ಧರೆಯ ಉರುಳಿಸಿ ನೀಡಿದೆ ಮರಣ
ನಿನ್ನನೇ ನಂಬಿದ ಜೀವಿಗಳ ಚಣಚಣ
ರಣರಂಗದಲಿರಿಸಿ ಹರಣಗೈದೆ ಪ್ರಾಣ!
ಕೊಡುಗೈ ನಾಡು ಕೊಡಗಿನ ಜನರಿಂದು
ಕರವ ಚಾಚುತಿಹರು ಕೊಡು ಕೊಡೆಂದು
ಕಾಣಲಾರದಾಗಿದೆ ಜನರ ಸಂಕಟವಿಂದು
ಮತ್ತೆ ಕೆಡಿಸದಿರು ಕಾಲ, ಕಾಲಕೆ ಬಾರದೇ
ನಿಂದು ನಂಬಿರುವೆವು ನೀನೇ ಎಮ್ಮ ಬಂಧು!.
ವೈಲೇಶ ಪಿ ಯೆಸ್ ಕೊಡಗು
೧೯/೯/೨೦೧೮
Comments
Post a Comment