ನಿಮಿತ್ತ ಮಾತ್ರ

ನಿಮಿತ್ತ ಮಾತ್ರ
~~~~~~~~
ಒಂದು ದಿನ ಮೆಸೆಂಜರ್ ನಲ್ಲಿ ಒಂದು ಸಂದೇಶ ಬಂದಿತ್ತು. ಸರ್ ನಮಸ್ಕಾರ ಮಹಾರಾಷ್ಟ್ರದ ಅಕ್ಕಲಕೋಟೆಯಿಂದ ಗಿರೀಶ್ ಜಕಾಪುರೆ ಎಂದು ನನ್ನ ಹೆಸರು ತಮ್ಮ ದೂರವಾಣಿ ಸಂಖ್ಯೆ ಬೇಕಾಗಿತ್ತು ದಯವಿಟ್ಟು ನೀಡುವಿರಾ ಎಂದರು. ತಕ್ಷಣವೇ ದೂರವಾಣಿ ಸಂಖ್ಯೆ ನೀಡಿದೆ. ಅತ್ತ ಕಡೆಯಿಂದ ಕರೆ ಮಾಡಿದ ಅವರು ಉಭಯಕುಶಲೋಪರಿಯ ಬಳಿಕ ಕೊಡಗಿನ ಸಧ್ಯದ ಪರಿಸ್ಥಿತಿಯನ್ನು ವಿಚಾರಿಸಿ ಸರ್ ಕೊಡಗು ಮಹಾಮಳೆಯ ಸಂತ್ರಸ್ತರಿಗೆ ಸಹಾಯ ನೀಡುವ ನಿಟ್ಟಿನಲ್ಲಿ ಒಂದಷ್ಟು ವಸ್ತುಗಳನ್ನು ಸಂಗ್ರಹಿಸುತ್ತಿದ್ದೇವೆ.
ನಮ್ಮ ಆದರ್ಶ ಕನ್ನಡ ಬಳಗದ ಸ್ವಯಂ ಸೇವಕರು ಖುದ್ದಾಗಿ ಬಂದು ಸಂತ್ರಸ್ತರನ್ನು ವೈಯಕ್ತಿಕವಾಗಿ ಬೇಟಿ ಮಾಡಿ ನೇರವಾಗಿ ಸಹಾಯ ಮಾಡಲು ಬಯಸಿದ್ದೇವೆ. ತಮ್ಮಿಂದ ಸಹಾಯ ಬೇಕಿದೆ ಎಂದರು. ಒಬ್ಬನಿಗಿಂತ ನಮ್ಮ #_ಸಮರ್ಥ_ಕನ್ನಡಿಗರು ಬಳಗ ಅಥವಾ #_ಜಿಲ್ಲಾಡಳಿತ ಮುಖಾಂತರ ಮಾಡಬಹುದೇ ಎಂದು ವಿಚಾರಿಸಲಾಗಿ ನಮ್ಮ ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ ಇದರ ಮುಖಾಂತರವೇ ಹಂಚಬೇಕಿದೆ ಎಂದರು. ಹಾಗಾಗಿ ಫೇಸ್ ಬುಕ್ ಗೆಳೆಯರು ಎರಡನೇ ಮೊಣ್ಣಂಗೇರಿಯ ಮೂಲ ನಿವಾಸಿಗಳು ಆದ ವಸಂತಕುಮಾರ್ ಅವರೊಡನೆ ಸಂಪರ್ಕ ಸಾಧಿಸಿ ನಿಗದಿತ ದಿನಕ್ಕಾಗಿ ಕಾದಿದ್ದೆವು.

ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ ಅಹ್ ಕೇಳಲು ಅದೆಷ್ಟು ಚೆಂದ ನಮ್ಮದಲ್ಲದ ನಾಡಿನಲ್ಲಿ ನಮ್ಮವರ ಕನ್ನಡ ಕಲರವ ಮಹಾರಾಷ್ಟ್ರದ ಮೂಲೆಮೂಲೆಗಳಲ್ಲಿ ಕನ್ನಡದ ಕಂಪು ಸೂಸುವ ನಮ್ಮ ಬಳಗ. ಬರಿದೇ ಕನ್ನಡ ಕಟ್ಟುವುದಷ್ಠೇ ಅಲ್ಲ ಎಲ್ಲಿಯೇ ಆದರೂ ಸರಿಯೇ ಕಷ್ಟಕ್ಕೆ ಸಿಲುಕಿ ನೊಂದು ಬೆಂದವರ ಸಹಾಯಕ್ಕೆ ಧಾವಿಸಿ ಬರುವ ಕನ್ನಡ ಮನಸ್ಸುಗಳ ಬಳಗ ಈ ಬಾರಿ  ಮಹಾ ಮಳೆಗೆ ಸಿಲುಕಿದ ಕೇರಳ ಮತ್ತು ಕರ್ಣಾಟಕದ ಕಾಶ್ಮೀರ ಎಂಬ ಕೊಡಗು ಜಿಲ್ಲೆಯ ಬೆಟ್ಟ ಗುಡ್ಡಗಳ ನಡುವೆ ಮಹಾಮಳೆಗೆ ಸಿಲುಕಿ ಮನೆ ಮಠ ಆಸ್ತಿ ಪಾಸ್ತಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಜನರ ನಡುವೆ ಬೆರೆತು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಮರೆತು ತಮ್ಮೊಂದಿಗೆ ತಂದಿದ್ದ ಸರಿಸುಮಾರು ೯ ಲಕ್ಷ ಬೆಲೆ ಬಾಳುವ ಆಹಾರ ಧಾನ್ಯ ಪದಾರ್ಥಗಳು,  ಹೊದಿಕೆ, ಬಿಸ್ಕತ್ತು, ಪೇಸ್ಟ್, ಸೋಪ್, ಅಡುಗೆ ಎಣ್ಣೆ, ಜೋಳದ ರೊಟ್ಟಿ, ಜೋಳ, ಎಲ್ಲಾ ಸೈಜಿನ ಬಟ್ಟೆ, ಸೀರೆ, ರವಿಕೆ ಕಣಗಳು, ಮಕ್ಕಳ ಬಟ್ಟೆಗಳನ್ನು ಪುರುಷರ ಪ್ಯಾಂಟ್ ಅಂಗಿ ಪಂಚೆ, ಕಾರದ ಪುಡಿ, ಕೊನೆಗೆ ಪೌಡರ್ ಆದಿಯಾಗಿ ಚಿಕ್ಕ ಪುಟ್ಟ ಪದಾರ್ಥಗಳನ್ನು ದೊಡ್ಡ ಐಶರ್ ೩೦೧೪ ಲಾರಿಯಲ್ಲಿ ತುಂಬಿಸಿಕೊಂಡು ಬಂದು ಪ್ರತಿಯೊಬ್ಬ ಸಂತ್ರಸ್ತರಿಗೆ ಹಂಚಲು ಕಾರ್ಯಕ್ರಮ ರೂಪಿಸಿಕೊಂಡಿರುತ್ತಾರೆ.

ಅವರ ಹಾಗೂ ನನ್ನ ಸಮಯದ ಹೊಂದಾಣಿಕೆಯ ನಂತರ ದಿನಾಂಕ ೮/೯/೨೦೧೮ ರಂದು ಬೆಳಿಗ್ಗೆ ಮಡಿಕೇರಿಗೆ ಸರಕು ತುಂಬಿದ ವಾಹನ ತಲುಪುವ ವ್ಯವಸ್ಥೆಯನ್ನು ಮಾಡಿಕೊಂಡೆವು.ಆ ದಿನ ಮುಂಜಾನೆ ೪ ಗಂಟೆಗೆ ಕರೆ ಮಾಡಿದಾಗ ಇನ್ನೂ ನೂರು ಕಿಮೀ ದೂರದಲ್ಲಿ ಇದ್ದೇವೆ. ಈಗ ಹೊರಡುವೆವು ಎಂದರು.
ನನ್ನ ಕರ್ತವ್ಯವನ್ನು ಪೂರೈಸಲು ಮುಂಜಾನೆ ಆರೂವರೆ ಗಂಟೆಯವರೆಗೆ ಕಾಯಲೇಬೇಕಿತ್ತು. ಕರ್ತವ್ಯ ಮುಗಿಸಿ ಅವರ ದಾರಿ ಕಾಯುವ ಸಮಯದಲ್ಲಿ ಕವಿಗಳು ಸಾಹಿತಿಗಳು ಆದ ಶ್ರೀಯುತ ನಾಗೇಶ್ ಕಾಲೂರು ಇವರ ಬೇಟಿಯಾಗಿ ವಿಷಯ ತಿಳಿಸಿದಾಗ ಇಂದು ರಾಮಕೃಷ್ಣ ಆಶ್ರಮದ ವತಿಯಿಂದ ಸ್ವಾಮೀಜಿಯವರು ನಮ್ಮ ಗ್ರಾಮಸ್ಥರನ್ನು ಭೇಟಿ ಮಾಡುವ ಹಾಗೂ ಸಂತ್ರಸ್ತರಿಗೆ ನೆರವು ನೀಡುವ ಕಾರ್ಯಕ್ರಮವಿದೆ ತಾವು ಮಹಾರಾಷ್ಟ್ರದ ಗೆಳೆಯರನ್ನು ಕರೆತನ್ನಿ ಎಂದರು.

  ಒಂಬತ್ತು ಗಂಟೆಯ ಸುಮಾರಿಗೆ ಒಂದು ಬೊಲೆರೋ ವಾಹನದ ಪರಿವೀಕ್ಷಣೆಯ ಜೊತೆಗೆ ಲಾರಿ ಬಂದಿತು ಅವಸರದಲ್ಲಿ ತಿಂಡಿ ಕೂಡ ತಿನ್ನದೇ ನನ್ನೊಂದಿಗೆ ವಸಂತಕುಮಾರ್ ಕಳುಹಿಸಿದ ವ್ಯಕ್ತಿಯ ಜೊತೆಗೆ ಬೊಲೆರೋ ಹಾಗೂ ಲಾರಿಯೊಂದಿಗೆ ಕಾಲೂರು ಬಳಿಯ #ಪಾಟಿ  ಎಂಬ ಸ್ಥಳಕ್ಕೆ ತಲುಪಿದೆವು. ಅಲ್ಲಿಂದ ಮುಂದೆ ಜೀಪಿನ ಹೊರತಾಗಿ ಬೇರೆ ವಾಹನಗಳು ಚಲಿಸುವುದು ಕಷ್ಟಕರ ಆದ ಕಾರಣ ಅಲ್ಲಿಯೇ ಟೀಕಾಣಿ ಹಾಕಿ ಅಲ್ಲಿಯ ಜೀಪಿನಲ್ಲಿ ಆಹಾರ ಪದಾರ್ಥಗಳನ್ನು ಒಳಗೊಂಡಂತೆ ಇತರ ವಸ್ತುಗಳನ್ನು ನಮ್ಮ ಸ್ವಯಂ ಸೇವಕರ ನೇತೃತ್ವದಲ್ಲಿ ಸಭೆಯ ಸ್ಥಳಕ್ಕೆ ಕಳುಹಿಸಿ ಕೊಟ್ಟೆವು. ಎಲ್ಲಾ ವಸ್ತು ಸಾಮಾಗ್ರಿಗಳನ್ನು ಪಡಿತರ ವಿತರಣೆ ವ್ಯವಸ್ಥೆಯ ಕೊಠಡಿಯಲ್ಲಿ ದಾಸ್ತಾನು ಇರಿಸಿ ( ಆ ದಿನ ರಾಮಕೃಷ್ಣ ಮಠದ ವತಿಯಿಂದ ನೀಡಲಾದ ಪದಾರ್ಥಗಳನ್ನು ವಿತರಿಸಿದ ಕಾರಣ) ದಿನಾಂಕ ೧೧/೯/೨೦೧೮ ರಂದು ಸುಮಾರು ೧೪೦ ಕುಟುಂಬಗಳಿಗೆ ಪಂಡಿತರ ವಿತರಣಾ ವ್ಯವಸ್ಥೆಯ ಮೂಲಕ ಕುಟುಂಬದ ಸದಸ್ಯರ ಆಧಾರದ ಮೇಲೆ ಗ್ರಾಮಸ್ಥರಿಗೆ ಹಂಚಲಾಯಿತು. ಇನ್ನುಳಿದಂತೆ ೧೧೯ ಕುಟುಂಬಗಳಿಗೆ ಈ ವಾರದ ಅವಧಿಯಲ್ಲಿ ಅವರಿಗೆಂದು ಮೀಸಲಿರಿಸಿದ ವಸ್ತುಗಳನ್ನು ವಿತರಿಸಲಾಗುತ್ತದೆ ಎಂದು ಶ್ರಿಯುತ ನಾಗೇಶ್ ಕಾಲೂರು ತಿಳಿಸಿರುತ್ತಾರೆ.

ಇಷ್ಟಾಗುವಾಗ ಮಧ್ಯಾಹ್ನ ಸುಮಾರು ಎರಡು ಗಂಟೆಯ ಸಮಯವಾಗಿದೆ. ನಂತರ ಕಾಲೂರಿನ ಒಬ್ಬ ವ್ಯಕ್ತಿ ನಮ್ಮೊಂದಿಗೆ ಸೇರಿಕೊಂಡು ಮಕ್ಕಂದೂರಿಗೆ ತೆರಳಿದೆವು. ನಾವು ತಲುಪಿದ ಐದು ನಿಮಿಷಗಳಲ್ಲೇ ಎರಡು ದೊಡ್ಡ ಸಾಲುಗಳಲ್ಲಿ ಸಂತ್ರಸ್ತರು ಕ್ರಮವಾಗಿ ನಿಂತು ವಸ್ತುಗಳನ್ನು ಪಡೆಯಲು ಕಾತರದಿಂದಿದ್ದರು.
ಅವರವರ ಅನುಕೂಲಕ್ಕೆ ತಕ್ಕಂತೆ ಬಟ್ಟೆಗಳನ್ನು ಬಿಸ್ಕತ್ತು ಇನ್ನಿತರ ಸಾಮಾಗ್ರಿಗಳನ್ನು ನೀಡುದೆವು.
ಬೆಳಗಿನಿಂದ ಒಂದೇ ಸಮನೆ ನಿಂತು ಸಾಮಾಗ್ರಿಗಳನ್ನು ಹಂಚುತ್ತಿದ್ದ ಬಳಗದ ಸ್ವಯಂ ಸೇವಕರಿಗೆ ದಣಿವು ಇಲ್ಲವೇನೋ ಎಂಬಂತೆ ಕಂಡುಬರುತ್ತಿತ್ತು. ನನಗೆ ಆಗಲೇ ಸೊಂಟನೋವು‌ ಪ್ರಾರಂಭವಾಗಿತ್ತು.  ಕ್ಷಣಕ್ಷಣಕ್ಕೆ ಸರದಿಯ ಸಾಲು ದೊಡ್ಡದಾಗುತ್ತಿತ್ತು. ಕೊನೆಯಲ್ಲಿ ಜೋಳದ ಚೀಲವನ್ನು ಬಿಚ್ಚಿ ಅದನ್ನು ಹಂಚುವ ವೇಳೆಗೆ ಮಳೆ ಬರುವ ಲಕ್ಷಣಗಳು ಕಂಡುಬರುತ್ತಿದ್ದ ಕಾರಣ ಮಡಿಕೇರಿ ಕಡೆಗೆ ವಾಪಾಸು ಹೊರಟೆವು. ಮಡಿಕೇರಿಯಲ್ಲಿ ಸಮಯ ನೋಡಿದರೆ ಆಗಲೇ ಅರೂವರೆಯಾಗಿತ್ತು. 

ಬೆಳಗಿನಿಂದ ನಮ್ಮೊಂದಿಗೆ ಇದ್ದು ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಹಕರಿಸಿದ ಇಬ್ಬರು ಸಂತ್ರಸ್ತರಲ್ಲಿ ಒಬ್ಬರು ಅವರ ಮನೆಯ ಬಳಿಯಲ್ಲಿ ಕಿಟ್ ಪಡೆದುಕೊಂಡರು. ಇನ್ನೊಬ್ಬಾತರಿಗೆ ಮಡಿಕೇರಿ ತಲುಪಿದ ಬಳಿಕ ನೀಡಿದೆವು. ಆ ಸಂದರ್ಭದಲ್ಲಿ ಕೆಲವು ಸಾರ್ವಜನಿಕ ಬಂಧುಗಳು ಅನುಮಾನಾಸ್ಪದವಾಗಿ ನಮ್ಮನ್ನು ನೋಡಲು ಪ್ರಾರಂಭಿಸಿದರು. ಆ ಬಳಿಕ
ಇನ್ನೂ ಒಂದಷ್ಟು ಪದಾರ್ಥಗಳು ಉಳಿದಿದ್ದವು. ಅದನ್ನು ಅತ್ಯಂತ ಜತನದಿಂದ ಸಂತ್ರಸ್ತರಿಗೆ ಅನುಕೂಲವಾಗುವಂತೆ ಸೂಕ್ತ ರೀತಿಯಲ್ಲಿ ಸರಿಯಾದ ಸ್ಥಳ ಸೇರಿಸಬೇಕಿತ್ತು. ಮದೆನಾಡು ಮೊಣ್ಣಂಗೇರಿಯ ಕಡೆಗೆ ರಸ್ತೆ ಸಂಪರ್ಕ ತುಂಡಾಗಿದ್ದ ಕಾರಣ ವಿರಾಜಪೇಟೆ ಕಡೆಗೆ ಸುತ್ತಿ ಬಳಸಿ ಹೋಗುವಷ್ಟು ಸಮಯ ಸಹ ಇಲ್ಲದ ಕಾರಣಕ್ಕೆ ಕುಶಾಲನಗರ ಬಳಿಯ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಉಳಿದಿರುವ ಸಂತ್ರಸ್ತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಸಾಪ ಜಿಲ್ಲೆಯ ಅಧ್ಯಕ್ಷರಾದ ಲೋಕೇಶ್ ಸಾಗರ್ ಇವರ ನೇತೃತ್ವದಲ್ಲಿ ಕುಶಾಲನಗರದ ಆರ್ ಎಂ ಸಿ ಯಾರ್ಡಿನಲ್ಲಿರುವ ಗೋದಾಮಿಗೆ ಹಸ್ತಾಂತರಿಸಲಾಯಿತು. ಬಳಿಕ ಲೋಕೇಶ್ ಸಾಗರ್ ಇವರ ಜೊತೆಗೆ ಗಂಜಿಕೇಂದ್ರಕ್ಕೆ ತೆರಳಿ ಸಂತ್ರಸ್ತರಿಗೆ ಸಮಾಧಾನ ಹೇಳಿ ವಾಪಾಸು ಕುಶಾಲನಗರ ತಲುಪಿ ಬಳಗವನ್ನು ಬೀಳ್ಗೊಟ್ಟಾಗ ರಾತ್ರಿ ಹತ್ತೂವರೆ ಸಮಯವಾಗಿತ್ತು. 

ಎಲ್ಲಿಂದಲೇ ಆಗಿರಲಿ ಒಂಬತ್ತು ಲಕ್ಷದಷ್ಟು ಬೆಲೆ ಬಾಳುವ ವಸ್ತುಗಳನ್ನು ಸಂಗ್ರಹಿಸುವುದೆಂದರೆ ಅಷ್ಟು ಸುಲಭವಲ್ಲ. ಹಾಗೆ ಅದನ್ನು ವಿಲೇವಾರಿ ಮಾಡುವುದು ಕೂಡ ನಾವು ಅಂದುಕೊಂಡಷ್ಟು ಸುಲಭವಲ್ಲ. ಅಕ್ಕಲಕೋಟೆಯ ಪ್ರತಿ ಶಾಲೆಯ ಹೆಸರು ಸಣ್ಣ ಪುಟ್ಟ ಸಂಘ ಸಂಸ್ಥೆಗಳ ಹೆಸರು ಪ್ರತಿಯೊಂದು ಅಕ್ಕಿಯ ಚೀಲ ಹಾಗೂ ರಟ್ಟಿನ ಪೆಟ್ಟಿಗೆಯಲ್ಲಿ ಬರೆದ ಬರಹಗಳು ಹೇಳುತ್ತಿದ್ದವು. 
ಇನ್ನು ನನ್ನ ಆತ್ಮೀಯ ಮಿತ್ರರಾದ ಹನ್ನೆರಡು ಜನ ಶಿಕ್ಷಕರು ನಿಜಕ್ಕೂ ಅಭಿನಂದನಾರ್ಹರು. ಇಷ್ಟೊಂದು ಕಷ್ಟಪಟ್ಟು ನಿಜವಾದ ಸಂತ್ರಸ್ತರಿಗೆ ತಲುಪಿಸಲೆಂದು ತಂದ ವಸ್ತುಗಳನ್ನು ನಿಜವಾದ ಸಂತ್ರಸ್ತರಿಗೆ ತಲುಪಿಸುವ ಜವಾಬ್ದಾರಿ ನಮ್ಮದಾಗಿದೆ.

ಅದನ್ನು ಯಾವುದೇ ಪ್ರತಿಫಲದ ಆಸೆಯಿಲ್ಲದೇ   ಮಾಡಿದ ತೃಪ್ತಿ ಕೂಡ ನನಗೆ ದೊರೆತಿದೆ. ಹನ್ನೆರಡು ಜನ ಮಿತ್ರರು ನನ್ನ ಬಳಿ ಬಂದು ಸರ್ ನಿಮಗೆ ಏನೇನು ಬೇಕು ಹಾಗೂ ಎಷ್ಟು ಬೇಕು ಪಡೆದುಕೊಳ್ಳಿ ಎಂದರು. ನಾನಾಗ ಅವರಿಗೆ ಈ ರೀತಿಯಲ್ಲಿ ಹೇಳಿದೆ ಸರ್ ಸಂತ್ರಸ್ತರಿಗೆ ವೈಯಕ್ತಿಕವಾಗಿ ಹಂಚಲು ಬಂದವರು ನೀವು ನಿಮಗೆ ಸಹಾಯ ಮಾಡಲೆಂದು ಬಂದವನು ನಿಜವಾಗಿಯೂ ನಾನು ಸಂತ್ರಸ್ತನಲ್ಲ ನಿಮ್ಮ ಪ್ರೀತಿ ವಿಶ್ವಾಸದ ಹೊರತು ನನಗೇನೂ ಬೇಕಿಲ್ಲ. ಎಂದು ತಿಳಸಿದೆ.

ತಮ್ಮವ
ವೈಲೇಶ. ಪಿ. ಯೆಸ್ ಕೊಡಗು

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ