ಬದಲಾಗಲಿ ದೃಷ್ಟಿ ಸರಿಯಾಗಲಿ ಸೃಷ್ಟಿ
ಬದಲಾಗಲಿ ದೃಷ್ಟಿ ಸರಿಯಾಗಲಿ ಸೃಷ್ಟಿ
~~~~~~~~~~~~~~~~~~~
ಹುಡುಕುತ್ತಾ ಹೊರಟ ದುರ್ಯೋಧನನಿಗೆ ಉತ್ತಮರ ದರ್ಶನ ಯೋಗ ಸಿಗಲಿಲ್ಲವಂತೆ. ತಡಕುತ್ತಾ ನಡೆದ ಧರ್ಮರಾಯರಿಗೆ ಸಕಲರೂ ಉತ್ತಮರೇ ಆಗಿದ್ದರಂತೆ ನಾವು ನಮ್ಮ ದೃಷ್ಟಿಯನುಸಾರ ಈ ಲೋಕವನ್ನು ಕಾಣಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ಇದಲ್ಲವೇ. ಕೊಡಗಿನ ಕೆಲವು ಸಂದರ್ಭಗಳ ಬಗ್ಗೆ ನನ್ನ ಇನ್ನೊಂದು ದೃಷ್ಟಿ ಕೋನ ನಿಮ್ಮ ಮುಂದೆ ಇಡಲಿದ್ದೇನೆ ಓದಿ ಅಭಿಪ್ರಾಯ ತಿಳಿಸಿ.
ಸಂತ್ರಸ್ತರಿಗೆ ನೆರವು ನೀಡಲು ತೆರೆದ ಸಂಘ ಸಂಸ್ಥೆಗಳಿಗೆ ಯಾರೋ ಐಷಾರಾಮಿ ಕಾರಿನಲ್ಲಿ ಬಂದರು ತಮಗೆ ಬೇಕಾದುದನ್ನು ಬೇಕಾದಷ್ಟು ಕೊಂಡೊಯ್ದರು. ಆದರೆ ಕೊಂಡೊಯ್ದವರು ಮುಂದಕ್ಕೆ ಏನು ಮಾಡಿದರೆಂಬುದು ನಮಗೆ ಅಸ್ಪಷ್ಟವಾಗಿದೆ ಯಾಕೆಂದರೆ ನಾವು ಅವರ ಹಿಂದೆ ಹೋಗಲಿಲ್ಲ ಅವರು ಬಿಡಿಸಿ ಹೇಳಲಿಲ್ಲ ಇವರು ಒಳಗಡೆಗೆ ಪ್ರವೇಶವನ್ನು ನಿರಾಕರಿಸಿದರು. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕೆಂದು ಬಲ್ಲವರು ನುಡಿದಿದ್ದಾರೆ. ಹೇಗೇ ಆಗಲಿ ಏನನ್ನಾದರೂ ಸರಿಯೆ ಕೊಂಡೊಯ್ದವರು ಅದನ್ನು ಸ್ವಾರ್ಥದ ಹಾದಿ ಬಿಟ್ಟು ಒಳ್ಳೆಯ ಕಾರ್ಯಗಳಿಗೆ ಬಳಸಿಕೊಂಡಿದ್ದರೆ ತುಂಬಾ ಸಂತೋಷ. ಏನೇ ಆದರೂ ನಾವು ಒಳ್ಳೆಯದನ್ನೇ ಬಯಸೋಣ.
ಯಾವುದೇ ಅಧಿಕಾರಿಗಳಾಗಿರಲಿ ಸಾರ್ವಜನಿಕ ಬಂಧುಗಳಾಗಿರಲಿ ತಮ್ಮ ಸ್ವಂತ ವಾಹನಗಳನ್ನು ಇಂತಹ ಸಂದರ್ಭಗಳಲ್ಲಿ ಬಳಸಿದಾಗ ಸಾರ್ವಜನಿಕವಾಗಿ ಏಕಾಂಗಿಯಾಗಿ ಈ ರೀತಿಯ ಕೆಲಸಗಳನ್ನು ಸಾರ್ವಜನಿಕರ ವಿಶ್ವಾಸವನ್ನು ಗಳಿಸಿಕೊಳ್ಳದೇ ಹೊರಗಿನಿಂದ ಬಂದು ನಮಗೆ ನೆರವು ನೀಡುವ ಮನವುಳ್ಳವರ ಎದುರು ಅನುಮಾನಾಸ್ಪದವಾಗಿ ನಡೆದು ಕೊಂಡಾಗ ಈ ರೀತಿಯ ಸಂಶಯಗಳು ಮೂಡುವುದು ಸಹಜ. ಆದರೆ ಈಗ ಸಿಸಿ ಟಿವಿ ಅಳವಡಿಸುವ ಮೂಲಕ ಈ ರೀತಿಯ ಅನೇಕ ಅನುಮಾನಗಳಿಗೆ ತೆರೆ ಎಳೆದಂತೆ ಮಾನ್ಯ ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನಡೆದಿದೆ ಎಂದರೆ ತುಂಬಾ ಸಂತಸದ ವಿಚಾರ ಅಲ್ಲವೇ. ಇನ್ನಾದರೂ ನಾವು ನಮ್ಮ ದೃಷ್ಟಿ ಕೋನವನ್ನು ಬದಲಾಯಿಸಿಕೊಳ್ಳಬೇಕಿದೆ.
ಇಲ್ಲಿ ನಾವು ಮತ್ತೊಂದು ಪ್ರಮುಖ ವಿಚಾರವನ್ನು ಗಮನಿಸಬೇಕಿದೆ. ಮಹಾಮಳೆಯ ಕಾರಣದಿಂದಾಗಿ ಅಂದು ದುಡಿದು ಅಂದಿನ ಒಲೆ ಹಚ್ಚುವ ಅಸಂಖ್ಯಾತ ಬಡಜನರು ಕೊಡಗಿನಲ್ಲಿ ಕೂಡ ಇದ್ದಾರೆ. ಮಳೆಯ ಕಾರಣದಿಂದಾಗಿ ಒಂದು ಹೊತ್ತಿನ ಕೂಳಿಗಾಗಿ ಕೂಲಿ ಕೂಡಾ ದೊರೆಯದೇ ಉಪವಾಸವಿರುವವರು ಹೊಟ್ಟೆಯ ಕೂಳಿನ ಜೊತೆಗೆ ಅನೇಕ ಸಂಘ ಸಂಸ್ಥೆಗಳ ಮೂಲಕ ಪಡೆದ ಸಾಲಗಳನ್ನು ತೀರಿಸುವ ಚಿಂತೆ ಕೂಡ ತಲೆಯೊಳಗೆ ಗುಂಗಿ ಹುಳುವಿನಂತೆ ಕೊರೆಯುತ್ತಿವೆ. ಇನ್ನು ತೋಟದ ಮಾಲೀಕರುಗಳ ಪರಿಸ್ಥಿತಿಯನ್ನು ಆ ದೇವರೇ ಕಾಪಾಡಬೇಕು ಎಂಬಂತಾಗಿದೆ. ಗದ್ದೆಗಳಲ್ಲಿ ಭತ್ತ ಬೆಳೆಯುವ ಕೃಷಿಯು ಕೈ ಕಚ್ಚುವುದೆಂಬ ಕಾರಣದಿಂದಾಗಿ ಕೊಡಗಿನ ಶೇಕಡಾ ೫೦ ಕ್ಕಿಂತ ಹೆಚ್ಚಿನ ಪ್ರಮಾಣದ ಗದ್ದೆಗಳನ್ನು ಬೇಸಾಯ ಮಾಡದೇ ಪಾಳು ಬಿಟ್ಟಿರುತ್ತಾರೆ. ಉಳಿದ ಗದ್ದೆ ಬಯಲುಗಳನ್ನು ಮನೆದಳಗಳನ್ನಾಗಿಸಿ ಅಥವಾ ಕಾಫಿ ತೋಟಗಳನ್ನಾಗಿ ಮಾರ್ಪಾಡಿಸಲಾಗಿದೆ. ಮಹಾಮಳೆಯಿಂದಾಗಿ ಅತ್ಯಂತ ಹುಲುಸಾಗಿ ಕಾಯಿಗಟ್ಟಿದ ಕಾಫಿಯ ಕಾಯಿಗಳು ಅಕಾಲಿಕವಾಗಿ ಉದುರಿ ಮುಂದಿನ ಕಾಫಿ ಬೆಳೆಯನ್ನು ಕೈಗೆ ಬಂದರೂ ಬಾಯಿಗೆ ಬಾರದಂತೆ ಮಾಡಿದೆ. ಕರಿಮೆಣಸಿನ ಬಳ್ಳಿಗಳು ಬಾಡುತ್ತಿವೆ
ತೋಟಗಳು ಮನೆಗಳು ಕೊಚ್ಚಿಹೋದವರ ಹಾಡು ಪಾಡು ಎಲ್ಲರ ಕಣ್ಣಿಗೆ ಕಾಣುತ್ತಿದೆ. ರಸ್ತೆಯ ಮೇಲೆ ಮನೆಗಳ ಮೇಲೆ ಬಿದ್ದ ಮಣ್ಣು ಇತ್ಯಾದಿಗಳನ್ನು ಜೇಸಿಬಿಯಂತಹ ಬೃಹತ್ ಯಂತ್ರಗಳ ಸಹಾಯದಿಂದ ತೆಗೆಯುವ ಪ್ರಯತ್ನ ಸಾಗುತ್ತಿದೆ. ಸಣ್ಣ ಪ್ರಮಾಣದ ಹಾಗೂ ದೊಡ್ಡ ಪ್ರಮಾಣದ ತೋಟ ಮಾಲೀಕರ ಪಾಡುಗಳು ಯಾರ ಕಣ್ಣಗೂ ಬೀಳದಾಗಿದೆ. ಕೊಡಗಿನ ಸರ್ಕಾರಿ ಬಸ್ಸುಗಳು ಮಾತ್ರವಲ್ಲದೆ ಖಾಸಗಿ ಬಸ್ಸುಗಳು ಸಹ ಭಣಭಣವೆನ್ನುತಾ ಖಾಲಿ ಖಾಲಿಯಾಗಿ ಓಡಾಡುತ್ತಿವೆ. ಯಾವುದೇ ವ್ಯಾಪಾರ ವಹಿವಾಟು ನಡೆಸುವ ಅಂಗಡಿ ಮುಟ್ಟುಗಳು ಬೆಳಿಗ್ಗೆ ಬಾಗಿಲು ತೆರೆಯುವುದು ಸಂಜೆಗೆ ಬಾಗಿಲು ಹಾಕುವ ಹೊರತಾಗಿ ಬೇರೆ ಕೆಲಸ ಇಲ್ಲದಾಗಿದೆ. ಹಬ್ಬ ಹರಿದಿನಗಳನ್ನು ಸಾಂಕೇತಿಕವಾಗಿ ಆಚರಿಸಲು ನಿರ್ಧಾರ ತಳೆಯುತ್ತಿದ್ದಾರೆ.
ಬಡಜನರ ಬವಣೆಯಂತೂ ಹೇಳತೀರದಾಗಿದೆ ಕೂಲಿ ಕಂಬಳ ಇಲ್ಲ ಮಕ್ಕಳು ಹಸಿವೆ ತಾಳಲಾರವಲ್ಲ ಸಾಲ ಎಲ್ಲೂ ಸಿಗುವುದಿಲ್ಲ. ಇರುವ ಸಂಘದ ಸಾಲಗಳನ್ನು ಭರಿಸಲಾಗುವುದಿಲ್ಲ. ಅದೆಷ್ಟೋ ಕಡೆಗಳಲ್ಲಿ ನೆಮ್ಮದಿಯಿಂದ ಮಲಗಲೂ ಮಳೆ ಮನೆ ಯಾವುದೂ ಸಹ ಬಿಡದಾಗಿದೆ ಮಳೆಗೆ ಸಿಲುಕಿ ನೇರವಾಗಿ ಸಂತ್ರಸ್ತರಾದವರಲ್ಲದೇ ಪರೋಕ್ಷವಾಗಿ ಸಂತ್ರಸ್ತರಾದ ಕಡುಬಡವರ ಬಗ್ಗೆ ಕೂಡ ಜಿಲ್ಲಾಡಳಿತ ಹಾಗೂ ಇನ್ನಿತರ ಸಂಘ ಸಂಸ್ಥೆಗಳು ಗಮನ ಹರಿಸಬೇಕಾಗಿ ಈ ಮೂಲಕ ಎಲ್ಲರಲ್ಲೂ ಸವಿನಯ ಪೂರ್ವಕವಾಗಿ ಕೋರಿಕೊಳ್ಳುತ್ತೇನೆ. ಇದರಿಂದಾಗಿ ಅಲ್ಪಸ್ವಲ್ಪ ಪ್ರಮಾಣದ ಬಡವರ ಹಸಿವನ್ನು ನೀಗಿಸುವ ಅಥವಾ ಅವರ ಮಕ್ಕಳು ಮರಿಗಳ ಜೀವ ಕಾಪಾಡುವ ಹಾಗೆ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಮುಖ ಮಾಡುವ ಪ್ರಯತ್ನ ಮಾಡಬಹುದೇ.
ಈ ಬಾರಿಯ ಮಹಾ ಮಳೆ ಕೊಡಗಿನ ಯಾವ ವರ್ಗದ ಜನರನ್ನೂ ಸಹ ಬಿಡದೆ ಕಾಡಿದೆ ಎಂಬುದು ಅಕ್ಷರಶಃ ಸತ್ಯವಾಗಿದೆ. ಹಾಗೂ ಮಳೆಯ ಪರಿಣಾಮವು ಪ್ರತ್ಯಕ್ಷವಾಗಿ ಪರೋಕ್ಷವಾಗಿ ತನ್ನ ಪ್ರಭಾವನ್ನು ಅತ್ಯಂತ ಅಚ್ಚುಕಟ್ಟಾಗಿ ಬೀರಿದೆ ಇನ್ನು ಸದಾ ಎಲ್ಲರ ಸುದ್ದಿಗಳನ್ನು ವಿಜೃಂಭಣೆಯಿಂದ ಸುದ್ಧಿ ಮಾಡುತ್ತಿದ್ದ ಪತ್ರಿಕೆಗಳು ಪತ್ರಕರ್ತರು ಸಹ ತಾವೇ ಸ್ವತಃ ಸುದ್ಧಿಯಾಗಿದ್ದಾರೆ ಇದಲ್ಲವೇ ವಿಪರ್ಯಾಸ.
ಕೊಡಗಿನ ಹೆಸರಾಂತ ಶಕ್ತಿ ಪತ್ರಿಕೆಯ ಕಟ್ಟಡದೊಳಗೆ ಹಾದಿ ತಪ್ಪಿದ ಮಳೆಯ ನೀರು ನುಗ್ಗಿ ಅಂದಾಜು ೫೦ ಲಕ್ಷದಷ್ಟು ನಷ್ಟವುಂಟಾಗಿದೆ ಎಂದು ತಿಳಿದು ಬಂದಿದೆ. ಪತ್ರಕರ್ತರಾದ ಕುಶಾಲನಗರದ ಕೆ.ಟಿ.ಶ್ರೀನಿವಾಸ, ಹಟ್ಟಿಹೊಳೆಯ ವಿನೋದ್ ಹೆಮ್ಮೆತ್ತಾಳುವಿನ ಕುಡೆಕಲ್ ಸಂತೋಷ್, ಕಾಟಿಕೇರಿಯ ಛಾಯಾಗ್ರಾಹಕ ಲೋಕೇಶ್, ನವೀನ್ ಡಿಸೋಜ, ಮಂಗಳಾದೇವಿನಗರದ ಉಜ್ವಲ್ ರಂಜಿತ್,ಮಹದೇವಪೇಟೆಯ ಎಂ ಎನ್ ನಾಸಿರ್, ಕ್ಯಾಮರಾ ಮೆನ್ ನವೀನ್ ಜೋಗಿ. ಮತ್ತೋರ್ವ ಕ್ಯಾಮೆರಾ ಮೆನ್ ಆರ್ ಆರ್ ಮನೋಜ್ ಇವರಲ್ಲದೆ ಇನ್ನೂ ಅನೇಕ ಪತ್ರಕರ್ತರು ಮಹಾಮಳೆಯ ಸಂತ್ರಸ್ತರಾಗಿದ್ದಾರೆ. ಮನೆ ಮಠ ಆಸ್ತಿ ಪಾಸ್ತಿ ಕಳೆದುಕೊಂಡರೂ ಸಹ ಕರ್ತವ್ಯ ನಿರತರಾಗಿದ್ದಾರೆ. ಅವರಿಗೂ ಸಹ ಎಲ್ಲರ ಸಹಕಾರ ಅಗತ್ಯವಿದೆ.
ಇನ್ನು ಕೊಡಗಿನ ಜಿಲ್ಲೆಗೆ ಸಂಪರ್ಕ ಸಾದಿಸುವ ಎಲ್ಲಾ ರಸ್ತೆಯ ಮರುನಿರ್ಮಾಣದ ಕಾರ್ಯ ಮಳೆ ಹಾಗೂ ವಾತಾವರಣದ ಪ್ರತಿರೋಧದ ನಡುವೆಯೂ ನಿಧಾನಗತಿಯಲ್ಲಿ ಸಾಗುತ್ತಿವೆ. ಮಡಿಕೇರಿ ಸುಳ್ಯದ ಮೂಲಕ ಮಂಗಳೂರಿಗೆ ಸಾಗುವ ರಸ್ತೆಯು ಸಂಪೂರ್ಣ ಹಾಳಾಗಿದ್ದು ಸುಳ್ಯದ ಕಡೆಗೆ ಬದಲೀ ಮಾರ್ಗವಾಗಿ ಭಾಗಮಂಡಲದ ಕಡೆಯಿಂದ ಸುಳ್ಯ ತಲುಪಿ ಅಲ್ಲಿಂದ ಮಂಗಳೂರು ತಲುಪುವ ವ್ಯವಸ್ಥೆಗಾಗಿ ಕರಾರಸಾಸಂಸ್ಥೆಯ ಮಡಿಕೇರಿ ಘಟಕದ ವತಿಯಿಂದ ಕೆಲವು ಮಿನಿ ಬಸ್ಸುಗಳನ್ನು ಓಡಿಸುತ್ತಿದೆ. ಹಾಗಾಗಿ ಮಡಿಕೇರಿ ಮಂಗಳೂರು ಕಡೆಗೆ ತುರ್ತಾಗಿ ಓಡಾಡುವ ಸಾರ್ವಜನಿಕರಿಗೆ ಅತ್ಯಂತ ಅನುಕೂಲವಾಗಿದೆ. ಮತ್ತು ಮಡಿಕೇರಿಯಿಂದ ಸುಳ್ಯಕ್ಕೆ ಸುತ್ತಿ ಬಳಸಿ ಹೋಗುವ ಕಿಮೀ ಪ್ರಕಾರ ಒಬ್ಬರಿಗೆ ೯೦ ರಿಂದ ೧೦೦ ರೂಪಾಯಿ ಮೌಲ್ಯದ ಟಿಕೇಟ್ ವಿತರಣೆ ಮಾಡಬೇಕಿದ್ದರೂ ಸಹ ಸನ್ಮಾನ್ಯ ಸಾರಿಗೆ ಸಚಿವರಾದ ಡಿ ಸಿ ತಮ್ಮಣ್ಣನವರ ಆದೇಶದ ಮೇರೆಗೆ ಕೇವಲ ೫೦ ರೂಪಾಯಿಗಳ ಟಿಕೇಟ್ ವಿತರಣೆ ಮಾಡುವ ಮುಖಾಂತರ ಕೊಡಗಿನ ಸಂತ್ರಸ್ತರಿಗೆ ಕರಾರಸಾಸಂಸ್ಥೆಯು ವಿಶಿಷ್ಠವಾದ ಸೇವೆ ಅಥವಾ ಸಹಾಯಹಸ್ತ ನೀಡುತ್ತಿದೆ ಎನ್ನಲು ಇಂತಹ ಸಂಸ್ಥೆಯ ನೌಕರನಾಗಿ ಈ ವಿಚಾರವನ್ನು ಹೆಮ್ಮೆಯಿಂದ ಹಂಚಿಕೊಳ್ಳಲು ಬಯಸುತ್ತೇನೆ.
ಎಂದೆಂದಿಗೂ ತಮ್ಮವ
ವೈಲೇಶ ಪಿ ಯೆಸ್ ಕೊಡಗು
೧/೯/೨೦೧೮
Comments
Post a Comment