ರಸ್ತೆ ಹೀಗಿರಬೇಕು ಅಲ್ವೇ

ರಸ್ತೆ ಹೀಗಿರಬೇಕು ಅಲ್ವೇ
~~~~~~~~~~~~

ನಾವು ಪ್ರತಿದಿನವೂ ನಡೆದಾಡುವಾಗ, ಬೈಕು, ಕಾರು, ಬಸ್ಸಿನಲ್ಲಿ ಸಂಚರಿಸುವಾಗ ಆಲೋಚನೆ ಮಾಡದೇ ಇರುವ ವಿಚಾರವಿದು. ಏಕೆಂದರೆ ಎಲ್ಲವೂ ಸರಿಯಿದ್ದಾಗ ಬೇರೆ ಚಿಂತೆ ಇರುವುದಿಲ್ಲ. ಏನೋ ಒಂದು ಕೊರತೆ ಎದುರಾದಾಗ ಮಾತ್ರ ಅಯ್ಯೋ ನಾವು ಇಷ್ಟು ದಿನ ಇದನ್ನು ಗಮನಿಸಲೇ ಇಲ್ಲ ಅಲ್ವೇ ಅಂದುಕೊಳ್ಳುತ್ತೇವೆ.  ಹಾಗಾಗಿ ನನ್ನ ಕೆಲವು ಅನಿಸಿಕೆಗಳನ್ನು ತಮ್ಮಗಳ ಮುಂದೆ ಹಂಚಿಕೊಳ್ಳುವ ಬಯಕೆ.

ಯಾರೇ ಆಗಲಿ ಎಲ್ಲಿಗೇ ಹೋಗಬೇಕೆಂದರೂ ಮೊದಲ ಹೆಜ್ಜೆ ಮನೆಯಿಂದಲೇ ನಂತರ ವಾಹನ ಇತ್ಯಾದಿ ಎಲ್ಲವೂ ಅಲ್ಲವೇ ಹಾಗಾಗಿ ಮನೆಗೆ ಸರಿಯಾದ ಮೆಟ್ಟಿಲು, ರಸ್ತೆ ಮೊದಲಿರಬೇಕು. ಮನೆಯಿಂದ ಹೊರಟು ಗಲ್ಲಿ ದಾಟಿ ಪೇಟೆ, ಪಟ್ಟಣ, ಜಿಲ್ಲೆಯ ಮುಖ್ಯ ರಸ್ತೆಗೆ ತಲುಪಿದೆವೆಂದರೆ ವಿಶ್ವ ಪರ್ಯಟನೆ ಮಾಡಬಹುದು.

ರಸ್ತೆ ಏಕೆ ಬೇಕು ಎಂಬುದು ಒಂದು ಯಕ್ಷ ಪ್ರಶ್ನೆ ಮಾನವನಿಗಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ರಸ್ತೆಯ ಅವಶ್ಯಕತೆ ಇದೆ. ಆದರೆ ಆನೆ ನಡೆದದ್ದೇ ಹಾದಿ ಎಂಬಂತೆ ಪ್ರಾಣಿಗಳು ತಮ್ಮ ತಮ್ಮ ಪ್ರಾಣ ರಕ್ಷಣೆ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮದೇ ಆದ ರೀತಿ ರಿವಾಜುಗಳನ್ನು ಅಳವಡಿಸಿಕೊಂಡು ರಸ್ತೆ ಅಥವಾ ದಾರಿ ಕಂಡುಕೊಂಡಿವೆ. ಇರಲಿ ಅದರ ಬಗ್ಗೆ ಮುಂದೊಮ್ಮೆ ಮಾತನಾಡುವ‌. ಆದರೆ ನಾವುಗಳು ಆದಿಮಾನವರ ಕಾಲದಿಂದಲೂ ಆಹಾರ, ಬೇಟಿ, ಬೇಟೆ, ರಕ್ಷಣೆಗಾಗಿ ತಮ್ಮದೇ ರೀತಿಯಲ್ಲಿ ದಾರಿ ಕಂಡುಕೊಂಡಿದ್ದೇವೆ.

ಆದಿಮಾನವರು ಬುದ್ಧಿವಂತರಾಗುತ್ತಾ ಬಂದಂತೆ ವ್ಯವಸಾಯ ಹಾಗೂ ಆಹಾರದ ವಿವಿಧ ಕೋನಗಳನ್ನು ಮನಗಂಡು ಅದಕ್ಕೆ ಪೂರಕವಾದ ಸಾಮಾಗ್ರಿಗಳನ್ನು ಸಂಗ್ರಹಿಸಲು ಹಾಗೂ ಬೆಳೆದ ಬೆಳೆಗಳನ್ನು ತಲೆ ಹೊರೆಯ ಮತ್ತು ಸಾಕು ಪ್ರಾಣಿಗಳ ಮೂಲಕ ಸಾಗಿಸಲು ಕಂಡುಕೊಂಡ ಬಳಿಕ ರಸ್ತೆಯ ಉಪಯೋಗ ಹೆಚ್ಚು ಹೆಚ್ಚಾಯಿತು. ಮುಂದೆ ಇದು ರಾಜ ಮಹಾರಾಜರ ರಾಜ್ಯಭಾರದ ಕುದುರೆ ಸವಾರಿ, ಮೇನೆ, ದಂಡು, ದಾಂಗುಡಿಗಳಿಗೆ ಓಡಾಡಲೆಂದು ಕಾಲುಹಾದಿಯಾಗಿದ್ದ ರಸ್ತೆಯು ಅಗಲವಾಗುತ್ತಾ ಬಂತು ಎನ್ನಬಹುದು.

ಬ್ರಿಟೀಷರ ಆಗಮನದ ನಂತರ ಅವರ ಸಾಮ್ರಾಜ್ಯದ ವಿಸ್ತರಣೆಗಾಗಿ ಅವರ ಅಧಿಕಾರಿಗಳು ಸೈನ್ಯದ ಓಡಾಟಕ್ಕೆಂದು ಅಗತ್ಯ ವಸ್ತುಗಳ ಪೂರೈಕೆಗೆಂದೂ ರಸ್ತೆಯ ವಿಸ್ತರಣೆ ಅನಿವಾರ್ಯ ಎಂಬಂತೆ ಬೆಳೆಯುತ್ತಾ ಹೋಗುತ್ತದೆ. ಸ್ವಾತಂತ್ರ್ಯ ನಂತರದಲ್ಲಿ  ರಸ್ತೆ ಬೆಳೆಯುತ್ತಾ ಬಂದಿದೆ. ಈಗಂತೂ ದೊಡ್ಡ ಗಾತ್ರದ ವಾಹನಗಳು ಅದಕ್ಕೆ ತಕ್ಕಂತೆ ರಸ್ತೆಗಳು ರಸ್ತೆಯ ನಿರ್ಮಾಣ ನಿರ್ವಹಣೆ ಇದಕ್ಕಾಗಿ ದೊಡ್ಡ ಗಾತ್ರದ ಯಂತ್ರಗಳು ಇವೆಲ್ಲವೂ ಸಾಮಾನ್ಯ ವಿಷಯ ಆಗಿದೆ.

ಹೀಗಿದ್ದರೂ ನಾಯಿ ಬಾಲ ಡೊಂಕು ಎಂಬಂತೆ ಪ್ರತಿ ವರ್ಷವೂ ಶಿರಾಡಿ ಘಟ್ಟದ ರಸ್ತೆ ದುರಸ್ತಿಗಾಗಿ ಬಂದ್ ಮಾಡಲಾಗಿದೆ. ಚಾರ್ಮಾಡಿ ಘಟ್ಟದಲ್ಲಿ ರಸ್ತೆ ದುರಸ್ತಿಗಾಗಿ ಇಂತಿಷ್ಟು ದಿನ ರಸ್ತೆ  ಬಂದ್ ಮಾಡಲಾಗಿದೆ ಬಳಸು ದಾರಿಯಲ್ಲಿ ಚಲಿಸಲು ಸೂಚನೆ ಎಂಬ ಫಲಕಗಳು ಪ್ರತಿವರ್ಷವೂ ಕಾಣಸಿಗುತ್ತವೆ. ಇನ್ನು ಬೆಂಗಳೂರು ಮೈಸೂರು ಮುಂತಾದ ಮಹಾನಗರಗಳಲ್ಲಿ ರಸ್ತೆ ವಿಸ್ತರಣೆ, ನಲ್ಲಿ ದುರಸ್ತಿ, ಇಂತತಹವುಗಳು ದಿನನಿತ್ಯದ ಕಥೆಗಳು. ಇನ್ನು ಲೋಕೋಪಯೋಗಿ ಇಲಾಖೆಯವರಿಗೆ ರಸ್ತೆ ರಿಪೇರಿ ಮಾಡುವುದೇ ಕೆಲಸ. ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿಯವರಿಗೆ ಒಡೆದ ಪೈಪುಗಳನ್ನು  ದುರಸ್ತಿ ಮಾಡಲು ರಸ್ತೆ ಅಗೆಯುವುದೇ ಕೆಲಸ. ನಮಗಂತೂ ಎಲ್ಲಾ ಇಲಾಖೆಗಳನ್ನು ಸುಖಾಸುಮ್ಮನೆ ಸರ್ಕಾರವನ್ನು ತೆಗಳುತ್ತಾ ವಾಹನಗಳನ್ನು ದುರಸ್ತಿಗೆ ಒಳಪಡಿಸುವುದೆ ಕೆಲಸ.

ಇನ್ನು ಖಾಸಗಿ ವಲಯದ ಟೆಲಿಫೋನ್ ಕಂಪೆನಿಗಳು ತಮ್ಮ ಕಾರ್ಯಾಚರಣೆಯನ್ನು ವಿಸ್ತರಿಸಿಕೊಳ್ಳುವ ಸಲುವಾಗಿ ರಸ್ತೆ ಬದಿ ಅಗೆದು ಚರಂಡಿಯನ್ನು ವೈಜ್ಞಾನಿಕವಾಗಿ ಮುಚ್ಚದೇ ವಾಹನಗಳು ಅವುಗಳಲ್ಲಿ ಸಿಲುಕಿ ಹೂತು ಹೋಗಿ ಪಡಬಾರದ ಪಾಡು ಪಡಲು ಕಾರಣವಾಗುತ್ತಾರೆ. ಮುಂದುವರೆದು ಚಿಕ್ಕ ಪುಟ್ಟ ಸೇತುವೆಯ ಮೇಲೆ ವಾಹನಗಳು ಚಲಿಸುವ ಭಾಗದಲ್ಲಿಯೇ ಆಪ್ಟಿಕಲ್ ಫೈಬರ್‌ ಕೇಬಲ್ಗಳನ್ನು ಅಳವಡಿಸಿ ಅದನ್ನು ಸಿಮೆಂಟ್ ಕಾಂಕ್ರೀಟನ್ನು ತುಂಬಿ ಎರಡು ವಾಹನಗಳು ಸಲೀಸಾಗಿ ಹೋಗುತ್ತಿದ್ದ ಸೇತುವೆಯ ಮೇಲೆ ಒಂದೇ ವಾಹನ ಹೋಗಲು ಅವಕಾಶ ಇರುವಂತೆ ಮಾಡಿಬಿಡುತ್ತಾರೆ. ಇದರ ಬಗ್ಗೆ ಯಾರ ಬಳಿ ದೂರು ಸಲ್ಲಿಸಬೇಕು ಎಂದು ಯಾರಿಗೂ ತಿಳಿದಿಲ್ಲ.

೧೯೮೦ ನೆಯ ದಶಕದಲ್ಲಿ ಮುಂಬಯಿ ಹೋಗುವ ದಾರಿಯಲ್ಲಿ ಸಿಗುವ ಮಹಾರಾಷ್ಟ್ರದ ಖಂಡಾಲ ಘಾಟ್ ನಲ್ಲಿ ಅತಿ ಚಿಕ್ಕ ಕಡಿದಾದ ರಸ್ತೆ ಇದ್ದು ಸರಕುಗಳನ್ನು ತುಂಬಿಕೊಂಡು ಸಾಗುವ ಎರಡೂ ಬದಿಯ ಲಾರಿಗಳು ಇನ್ನಿತರ ಎಲ್ಲಾ ವಾಹನಗಳು ಕೂಡ ಒಂದೇ ರಸ್ತೆಯಲ್ಲಿ ಸಾಗಬೇಕಾದ ಅನಿವಾರ್ಯತೆ ಇತ್ತು. ಅಷ್ಟೇ ಅಲ್ಲದೆ ಭೀಕರವಾದ ಅಪಘಾತಗಳು ಸಾಮಾನ್ಯವಾಗಿತ್ತು. ಒಂದು ಅಪಘಾತ ಸಂಭವಿಸಿದರೆ ಅದನ್ನು ತೆರವುಗೊಳಿಸಲು ಸಾಕಷ್ಟು ಸಮಯಾವಕಾಶ ಕೂಡ ಬೇಕಿತ್ತು ಹಾಗೂ ಬಹುತೇಕ ಸಿಕ್ ಹಾಗೂ ತಮಿಳುನಾಡು ಮೂಲದ ಚಾಲಕ ವರ್ಗದವರೇ ಹೆಚ್ಚಾಗಿ ಕಂಡು ಬರುತ್ತಿದ್ದರು ಮತ್ತು ಅವರ ಲಾರಿಗಳಲ್ಲಿ ಅಡುಗೆಗೆ ಬೇಕಾದ ಎಲ್ಲಾ ರೀತಿಯ ಸಾಮಾನು ಸರಂಜಾಮುಗಳನ್ನು ಹೊಂದಿರುತ್ತಿದ್ದರು. ಎಲ್ಲೆಂದರಲ್ಲಿ ಅಡಿಗೆ ಮಾಡಿ ಊಟ ಮಾಡಿ ವಾರಗಟ್ಟಲೆ ತಂಗಿದ್ದು ಮತ್ತೆ ಅಪಘಾತದ ವಾಹನಗಳನ್ನು ತೆರವುಗೊಳಿಸಿದ ಬಳಿಕ ಮುಂದೆ ಪಯಣಿಸುವ ಹಾಗಿತ್ತು.

ಆ ನಂತರ ೧೯೯೦ ರ ದಶಕದ ಆರಂಭದಲ್ಲಿ ಇದ್ದುದರಲ್ಲಿ  ಏಕಮುಖಮಾರ್ಗ (one way) ಮಾಡಿ ಹೋಗುವ ದಾರಿಯೇ ಬೇರೆ ಬರುವ ದಾರಿಯೇ ಬೇರೆ ಮಾಡಿದರು. ಆದಾಗ್ಯೂ ವಾಹನಗಳ ಅಪಘಾತದ ಸನ್ನಿವೇಶಗಳು ಹೇಗಿದ್ದವೆಂದರೆ ಮಕ್ಕಳು ಮನೆಯಲ್ಲಿ ಆಟವಾಡುವ ಸಂದರ್ಭದಲ್ಲಿ ಆಟಿಕೆಯ ವಾಹನಗಳ ಬೊಂಬೆಗಳನ್ನು ಎಲ್ಲೆಂದರಲ್ಲಿ ಎಸೆದಂತೆ ನೈಜವಾದ ವಾಹನಗಳು ಬಿದ್ದಿರುತ್ತಿದ್ದವು‌. ಅಪಾರವಾದ ಸಾವುನೋವುಗಳು ಸಂಭವಿಸುತ್ತಿದ್ದವು. ರಸ್ತೆ ಸಹ ಒಂಟಿ ರಸ್ತೆಯಲ್ಲಿ ಎದುರು ಬದುರಾಗಿ ಜೋಡಿ ವಾಹನಗಳು ಚಲಿಸುತ್ತಿದ್ದವು. ಅಪಘಾತಗಳು ಸರ್ವೇಸಾಮಾನ್ಯವಾಗಿತ್ತು. ೧೯೯೦ ರ ದಶಕದಲ್ಲಿ ಮಹಾರಾಷ್ಟ್ರ ರಾಜ್ಯ ಸರ್ಕಾರ ಮೊದಲಿಗೆ ಪುಣೆ-ಮುಂಬಯಿ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಂಡಿತು. ೧೯೯೦ ರ ದಶಕದ ಕೊನೆಯ ಭಾಗದ ಬಳಿಕ ಇಡೀ ಖಂಡಾಲ ಘಾಟ್ ರಸ್ತೆಯನ್ನು (ಪ್ಲೈ ಓವರ್) ಮೇಲ್ಸೇತುವೆಯ ಮೂಲಕ ಹಾಗೂ ಸುರಂಗ ಮಾರ್ಗದ ಮೂಲಕ ಅದೊಂದು ಘಾಟ್ ರಸ್ತೆ ಎಂಬುದನ್ನು ಹಾಗೂ ಹಿಂದಿನ ದಿನಮಾನಗಳಲ್ಲಿ ವಾಹನಗಳ ಚಾಲಕರು ಅಷ್ಟೊಂದು ಕಷ್ಟಪಟ್ಟಿದ್ದಾರೆ ಎಂಬುದನ್ನು ಇಂದಿನ ಯುವ ಪೀಳಿಗೆಯು ನಂಬಲು ಸಾಧ್ಯವಿಲ್ಲದಂತೆ ಬದಲಾಯಿಸಿಬಿಟ್ಟಿದ್ದಾರೆ. ಸುರಂಗಮಾರ್ಗದ ಒಳಗೆ ಉತ್ತಮ ಗಾಳಿ‌ಬೆಳಕಿನ ವ್ಯವಸ್ಥೆಯನ್ನೂ ಮಾಡಿದ್ದಾರೆ.

ಹೊಸ ಪುಣೆ ಮುಂಬಯಿ ರಸ್ತೆಯು ಹೇಗಿತ್ತು ಎಂದರೆ ಎರಡೂ ಬದಿಯಲ್ಲಿ ನಾಲ್ಕು ನಾಲ್ಕು ಪಥದ ವಾಹನಗಳು ಚಲಿಸುವ ರಸ್ತೆ. ದುರಸ್ತಿಗೆ ಒಳಗಾದ ವಾಹನಗಳನ್ನು ದುರಸ್ತಿ ಮಾಡುವ ತನಕ ನಿಲ್ಲಿಸಲು ಹಾಗೂ ದುರಸ್ತಿ ಕಾರ್ಯ ಕೈಗೊಳ್ಳಲು ಮತ್ತೊಂದು ಪಥ, ಪಕ್ಕದಲ್ಲಿ ಒಂದು ನಾಯಿ,ಬೆಕ್ಕು ಕೂಡ ನುಸುಳದಂತೆ ಆಳೆತ್ತರಕ್ಕೂ ಮಿಗಿಲಾದ ತಂತಿಯ ಬೇಲಿ. ದಾರಿಯ ಇಕ್ಕೆಡೆಗಳಲ್ಲಿ ಸಿಗುವ ಹಳ್ಳಿಗಳಿಗೆ ರಸ್ತೆ ದಾಟುವ ಸಲುವಾಗಿ ಮೇಲ್ಸೇತುವೆ. ರಸ್ತೆಯ ಮಧ್ಯದಲ್ಲಿ ನಾಲ್ಕು ಪಥದ ರಸ್ತೆ ಮಾಡುವಷ್ಟು ಸ್ಥಳವನ್ನು ಗಿಡ ನೆಟ್ಟು ಉದ್ಯಾನವನದ ರೀತಿಯಲ್ಲಿ ಮಾಡಿರುತ್ತಾರೆ. ಅಂದಿನ ಕಾಲದಲ್ಲಿ ಸಚಿನ್ ತೆಂಡೂಲ್ಕರ್ ಅವರ ಫೆರಾರಿ ಕಾರಿನಲ್ಲಿ ರೈಡಿಂಗ್ ಎಂದು ಈ ರಸ್ತೆಗೆ ಬರುತ್ತಿದ್ದರು ಕಾರಣ ಈ ರಸ್ತೆಯ ಹೊರತು ಬೇರೆ ರಸ್ತೆಯಲ್ಲಿ ಫೆರಾರಿ ಕಾರಿನ ವೇಗದ ಸಾಮರ್ಥ್ಯವನ್ನು ತಡೆಯಬಲ್ಲ ರಸ್ತೆ ಇರಲಿಲ್ಲವೆಂಬುದಾಗಿ ನಮ್ಮ ಸಹೋದ್ಯೋಗಿಗಳು ಮಾತನಾಡಿಕೊಳ್ಳುತ್ತಿದ್ದೆವು. ೧೯೮೦ ರ ದಶಕಕ್ಕೂ ಮೊದಲು ಇಲ್ಲಿನ ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸಿದ ಚಾಲಕರಿಗೆ ಈಗಿನ ರಸ್ತೆಯೊಂದು ಸೋಜಿಗವೆನಿಸುತ್ತದೆ ಯಾವುದೇ ರೀತಿಯ ಅಡೆತಡೆಗಳಿಲ್ಲದೇ ನೇರವಾಗಿ ಚಲಿಸುವ ವಾಹನಗಳ ಚಾಲನೆ ಮತ್ತಷ್ಟು ಸುಲಭವಾಗಿದೆ.

ಇಂದಿನ ದಿನಗಳಲ್ಲಿ ಮಳೆಯಿಂದಾಗಿ ಕರ್ನಾಟಕದ ಮೂಲೆಮೂಲೆಗಳಲ್ಲಿ ರಸ್ತೆಗಳು ಗುಂಡಿ ಬಿದ್ದ ಜರಡಿಯಂತಾಗಿವೆ. ಅದು ಬೆಂಗಳೂರು ನಗರ ಇರಬಹುದು ಅಥವಾ ಶಿರಾಡಿ ಘಟ್ಟದ ರಸ್ತೆ ಇರಬಹುದು ಅಥವಾ ಕೊಡಗು ಜಿಲ್ಲೆಯ ಸ್ಥಳೀಯ ರಸ್ತೆ ಅಥವಾ ಮಡಿಕೇರಿ ಮಂಗಳೂರು ರಸ್ತೆಯಿರಬಹುದು ಎಲ್ಲವೂ ಒಂದೇ ಎಂಬಂತೆ ಆಗಿದೆ. ಪ್ರತಿವರ್ಷವೂ ಒಂದಷ್ಟು ಹಣ ಮತ್ತು ಸಮಯವನ್ನು ನಿರಂತರವಾಗಿ ಶಿರಾಡಿ ಘಟ್ಟದ ರಸ್ತೆಗೆ ಮೀಸಲಿಡುವ  ಬದಲಿಗೆ ಕೇಂದ್ರ ಸರ್ಕಾರದ ಯಾವುದಾದರೂ ಯೋಜನೆಯ ಅಡಿಯಲ್ಲಿ (ಪ್ಲೈ ಓವರ್) ಮೇಲ್ಸೇತುವೆ ಹಾಗೂ ಮಹಾರಾಷ್ಟ್ರದ ಮಾದರಿಯಲ್ಲಿ ಸುರಂಗಮಾರ್ಗಗಳಂಥ ರಸ್ತೆಯನ್ನು ನಿರ್ಮಾಣ ಕಾರ್ಯವನ್ನು ಕೈಗೊಳ್ಳುವ ಮುಖಾಂತರ ಪ್ರತಿ ವರ್ಷದ ತೊಂದರೆಗಳಿಗೆ ಇತಿಶ್ರೀ ಹಾಡಬಹುದು ಎನಿಸುತ್ತದೆ. ಆ ಮೂಲಕ ಪರ್ಯಾಯ ರಸ್ತೆಗಳಾದ ಮಂಗಳೂರು-ಮಡಿಕೇರಿ-ಬೆಂಗಳೂರು ರಸ್ತೆ ಹಾಗೂ ಚಾರ್ಮಾಡಿ ಘಟ್ಟದ ರಸ್ತೆಯ ಮೇಲೆ ಪ್ರತಿವರ್ಷದ ವಾಹನಗಳ ಒತ್ತಡವನ್ನು ಕಡಿಮೆ ಮಾಡುವಂತಹ ಅದ್ಭುತ ಕಾರ್ಯವನ್ನು ಮಾಡಬಹುದಾಗಿದೆ. 

ಯಾವುದೇ ನೆಪದಲ್ಲಿ ಒಂದು ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿದಾಗ ತಾತ್ಕಾಲಿಕವಾಗಿ ಓಡಾಡುವ ರಸ್ತೆಗಳಿಗೆ ಅನಗತ್ಯ ಒತ್ತಡ ಹಾಗೂ ಆ ರಸ್ತೆಯ ಸಾಮರ್ಥ್ಯವನ್ನು ಮೀರಿದ ಅತಿದೊಡ್ಡ ವಾಹನಗಳ ಸಂಚಾರದಿಂದಾಗಿ ಉತ್ತಮ ಗುಣಮಟ್ಟದಲ್ಲಿ ಇರುವ ರಸ್ತೆಗಳು ಕೂಡ ಹದಗೆಡುತ್ತವೆ ಆ ನಂತರ ರಸ್ತೆಯ ನಿರ್ಮಾತೃಗಳನ್ನು ಅನವಶ್ಯಕ ನಿಂದಿಸುವುದು ತಪ್ಪುತ್ತದೆ ಹಾಗೆಯೇ ಮೈಸೂರಿನಿಂದ ಬಂಡಿಪುರ ಮಾರ್ಗವಾಗಿ ಕೇರಳದ ಕಡೆಗೆ ತೆರಳುವ ರಸ್ತೆಯ ಸಮಸ್ಯೆಯನ್ನು ಪರಿಹರಿಸಲು ಕೂಡ ನಾಡಿನ ನಡುವೆ ಬೇಲಿ ಹಾಗೂ ಕಂದಕವನ್ನು ನಿರ್ಮಿಸಿ ಇಂತಿಷ್ಟು ಕಿಮೀ ಅಂತರದಲ್ಲಿ ಮೇಲ್ಸೇತುವೆ ಹಾಗೂ ಸುರಂಗಮಾರ್ಗದ ರಸ್ತೆಗಳ ನಿರ್ಮಾಣ ಮಾಡಿದರೆ ವನ್ಯಜೀವಿಗಳ ಪ್ರಾಣವನ್ನು ರಕ್ಷಿಸಬಹುದು. ಪರಿಸರ ನಾಶವನ್ನು ತಪ್ಪಿಸಬಹುದು. ಪರಿಸರವಾದಿಗಳ ಹಾಗೂ ಇತರೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಬಹುದು ಎಂದೆನಿಸುತ್ತದೆ.

ಕೊನೆ ಹನಿ :- ರಸ್ತೆ ದಿಬ್ಬಗಳನ್ನು ಕಂಡು ಹಿಡಿದ ಅಭಿಯಂತರರು ( ಇಂಜಿನಿಯರ್)  ಅದು ಯಾರೇ ಆಗಿರಲಿ ಆತನನ್ನು ಟ್ರ್ಯಾಕ್ಟರ್ ಟ್ರೈಲರ್ ನ ಹಿಂಬದಿಯಲ್ಲಿ ತಪ್ಪಿಸಿಕೊಳ್ಳದಂತೆ ಕುಳ್ಳಿರಿಸಿ ಟ್ರ್ಯಾಕ್ಟರ್ ನ ಅತಿ ಹೆಚ್ಚಿನ (maximum speed) ವೇಗದಲ್ಲಿ ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಮಡಿಕೇರಿಗೆ ಕರೆತಂದು ನಂತರ ಮಡಿಕೇರಿಯಿಂದ ಹೊಳೆನರಸೀಪುರ ಚನ್ನರಾಯಪಟ್ಟಣ ಮಾರ್ಗದಲ್ಲಿ ಕರೆದೊಯ್ಯಬೇಕು. ಆಗ ಆತನಿಗೆ ತಾನು ಎಂತಹ ತಪ್ಪು ಮಾಡಿದ್ದೇನೆ ಎಂಬ ಅರಿವಾಗುತ್ತದೆ.

ವೈಲೇಶ ಪಿ ಯೆಸ್ ಕೊಡಗು
೩೦/೧೦/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ