ಧಾವಿಸಿ ಬನ್ನಿ
ಧಾವಿಸಿ ಬನ್ನಿ ನೀವು
~~~~~~~~~~
ಕೊಡಗಿನ ಬೆಡಗು ಅನ್ಯರಿಗೆ ಬೆರಗು
ಕೇಳಿ ಮೂಲವಾಸಿಗಳ ಸ್ವರ ಗುನುಗು
ಮೇ ಮಾಸದಲಿ ಬರಲೇಬೇಕು ಗಡುಗು
ಮಿಂಚು ಸಂಚಿನ ಮಳೆ ಇಲ್ಲಿಯ ಮೆರುಗು
"ಮೇ"ಯ ಮಳೆ ಸಕಲವನು ಮೇಯುತಿದೆ
ಜೂನ್ ಜುಲೈ ಆಗಸ್ಟ್ ನಲ್ಲೂ ಆದಷ್ಟೂ
ಸುರಿದಿದೆ ಗುಡ್ಡ ಬೆಟ್ಟ ಮನೆ ಮಠ ದಿಟವಾಗಿ
ಸರಿಯುತಿದೆ ಆದರೂ ಮಳೆ ಸುರಿಯುತಿದೆ
ಹರಿದಿದೆ ಮೇಘದೊಡಲು ಸುರಿದಿದೆ ಜಲ
ಅಮೋಘ ಕಡಲ ಸೇರಲು ಇನಿಯನ ಸೇರೆ
ಬಯಕೆಯ ರಭಸಕೆ ಜೊತೆಗೂಡಿ ಚಲಿಸುತಿದೆ
ಬಂಗಲೆ ನಡೆಯುತಿದೆ ಗುಡಿಸಲಾಗಿ ತರಗೆಲೆ
ತನುವಿನೆದೆಯಲಿ ಅಡಗಿದ ಜೀವದ ಕನಸಿಗೆ
ಒಡಲ ಕಸುವ ಕಳೆದು ದುಡಿದ ಸಕಲವೂ
ಕಣ್ಣೆದುರೇ ಮಳೆ ನೀರಿಗಾಹಾರವಾದರೂ
ಕೈ ಕೈ ಹಿಸುಕಿ ಕಂಗಾಲಾಗಿರುವೆವು ನಾವು
ಕಾಫಿ ಕರಿಮೆಣಸು ಏಲಕ್ಕಿ ಭತ್ತ ಬಾಳೆ
ಜಲದಬ್ಬರದ ಕಾರಣ ಸಕಲವೂ ಹಾಳೆ
ಹೇಗೋ ನಡೆದಿತ್ತು ಮೂರ್ಹೊತ್ತಿನ ಕೂಳು
ಇಂದು ಕೇಳುವವರಾರು ನಮ್ಮಯ ಗೋಳು
ಜಲದ ರೊಚ್ಚಿಗೆ ಕೊಚ್ಚಿ ಹೋದವರೆಷ್ಟು
ಮಣ್ಣು ಮಾಡುವ ಮುನ್ನ ಮಣ್ಣೊಳಗೆ
ಮಣ್ಣಾಗಿ ಮರಣ ಹೊಂದಿದವರೆಷ್ಟೋ
ಜೀವಸಂಕುಲದ ಪ್ರಾಣಹಾನಿಗಳೆಷ್ಟೋ
ಕೂಲಿ ಇಲ್ಲ ಕೂಳು ಇಲ್ಲ ಕಾಳು ಇಲ್ಲ
ಸೂರು ದೂರವಾಗಿದೆ ಮಕ್ಕಳೆಲ್ಲಾ
ಅಳುತ್ತಿವೆಯಲ್ಲಾ ಆಧಾರ ಯಾರಿಲ್ಲ
ಆದಾಯದ ದಾರಿ ಮುಚ್ಚಿದೆಯಲ್ಲ
ಕೊಡಗಿನ ಮಳೆ ತುಂಬಿದರೆ ಹೊಳೆ
ಮಂಡ್ಯದಲಿ ಬೆಳೆ ಬೆಂಗಳೂರಿನ ಕಳೆ
ಕಳೆಯಲು ಬೇಕು ಬಡಜನರ ಗುಳೆ
ಮಳೆ ಬಂತೆಂದು ನಿಮ್ಮ ಕೊಂಬು ಕಹಳೆ
ಏಕ ಋತುವಿನ ಮಳೆ ಬಾರದಿದ್ದರೆ ಇಳೆ
ಓಡಿ ಬರುವಿರಿ ತಲಕಾವೇರಿ ಮೂಲಕೆ
ಜಲಪ್ರಳಯಕೆ ಸಿಲುಕಿ ನಮ್ಮ ಜನರ
ಮೊಗದಿ ತುಂಬಿದಂತಿದೆ ವಿಧವಾ ಕಳೆ
ನೊಂದು ಬೆಂದಿರುವ ಕಷ್ಟದ ಕ್ಷಣಗಳಿವು
ಕೊಡಗಿನ ಜನರ ಜೀವನದ ಅಳಿವು ಉಳಿವು
ನಿಮ್ಮ ಏಳಿಗೆಗಾಗಿ ನೊಂದಿರುವೆವು ನಾವು
ಸಹಾಯಹಸ್ತ ನೀಡೆ ಧಾವಿಸಿ ಬನ್ನಿ ನೀವು
ವೈ.ಕೊ.
ವೈಲೇಶ ಪಿ ಯೆಸ್ ಕೊಡಗು
೧೭/೮/೨೦೧೮
Comments
Post a Comment