ಜಗವಿಲ್ಲ ಜಲವಿಲ್ಲ
ಜಲವಿಲ್ಲದಿರೆ ಜಗದಲಿ ಜನವಿರಲಹುದೆ
ಪಶುಪಕ್ಷಿ ಕ್ರಿಮಿಕೀಟಗಳ ಜನನವುಂಟೇ
ಉರಗ ತುರಗ ಕಶೇರುಕ ಅಕಶೇರುಕವಲ್ಲದೇ
ಜನಕೆ ಜಲವಿಲ್ಲದೇ ಮಲವೂ ಬಾರದೆಂದರೆ
ಬದುಕದು ನಿಂತಿಹಿದು ಜಲದ ಮೇಲಹುದೆ
ಜಲದ ಮೂಲವು ಇಳೆಗೆ ಸುರಿವ ಮಳೆ
ಮಳೆಯಿಲ್ಲದೇ ಕಳೆಯಲಾರದು ಕೊಳೆ
ಮಳೆಯ ಜಲವದು ಹಿಂಗಿ ಅಂತರ್ಜಲ
ಹರಿವ ನದಿಯ ಕಟ್ಟಿಟ್ಟ ಅಣೆಕಟ್ಟೆ ಬಲ
ಕಡಲ ತಡಿ ಸೇರಿ ಮೇಘದಾ ಮೂಲ
ಜಲವಿಲ್ಲದೇ ವಿದ್ಯುತ್ ಬಲವಿಲ್ಲ
ವಿದ್ಯುತ್ ಇಲ್ಲದೆಲೆ ಬೆಲೆ ಯಂತ್ರಕ್ಕಿಲ್ಲ
ವಿದ್ಯುತ್ ವಿದ್ವತ್ತು ಬಲ್ಲವನೇ ಬಲ್ಲ
ಬರಿಗಣ್ಣಿಗೆ ತಾ ಕಾಣುವುದಿಲ್ಲ
ಬರ ನೀಗಿಸೆ ಬಾರಯ್ಯ ಮಳೆರಾಯ
ಬಸವಳಿದ ರೈತ ಸಂಕುಲದ ಆಶಯ
ನೀನುಳಿಸಿ ಇಳೆಗೆ ನೀರುಣಿಸುವೆಯ
ಆಗಸದಿ ನೆಟ್ಟ ದೃಷ್ಟಿ ಭುವಿಗಿಳಿಸುವೆಯ
ನೊಂದು ಬೆಂದೊಡಲಿಗೆ ತಂಪೆರೆವೆಯ
ಕರಮುಗಿದು ಬೇಡುವೆ ಶಿವ ವರವ ನೀನೀಡು
ಜಟೆಯಲ್ಲಡಗಿದ ಗಂಗೆಯ ಇಳೆಗೆ ಹರಿಬಿಡು
ಪಾಪಗೈದೋರ ಸುಖದ ಸುಪ್ಪತ್ತಿಗೆ ನೋಡು
ಅಂದಿಗಂದಿಗೆ ದುಡಿಯುವವರದೊಂದು ಪಾಡು
ನಿತ್ಯ ಜೀವಸಂಕುಲಕೆ ಆನಂದವ ನೀನೀಡು
ಅವರಿವರೆನ್ನದೆಲೆ ಸರ್ವರ ಸಲಹಿ ಕಾಪಾಡು
ವೈಲೇಶ ಪಿ ಯೆಸ್ ಕೊಡಗು
#ಚಾಲಕ_ಕರಾರಸಾಸಂಸ್ಥೆ_ಮಡಿಕೇರಿ_ಘಟಕ
೧೨/ ೫/೨೦೧೭
Comments
Post a Comment