ನಿನ್ನೆ ಮತ್ತು ಇಂದು

ಅಂದು ಮತ್ತು ಇಂದು
~~~~~~~~~~~
ನಮ್ಮ ತಂದೆಯ ಕಾಲದಲ್ಲಿ ಹಿರಿಯರು
ನಮ್ಮಪ್ಪ ಮಾಡಿದ್ದು ನನಗೆ ತಾನು ಮಾಡಿದ್ದು ಮಗನಿಗೆ ಎಂದೆಲ್ಲಾ ಹೇಳುತಿದ್ದರು. ಈಗ ಹಾಗಿಲ್ಲ ಮೊನ್ನೆ ಮಾಡಿದ್ದು ಇಂದಿಗೆ ಇಂದು ಮಾಡಿದ್ದು ನಾಳೆಗೆ ಎಂಬಂತೆ ಅದಕ್ಕಾಗಿ ಕೆಲವು ನಿದರ್ಶನಗಳು. .

ಇಂದಿನ ದಿನಮಾನಗಳಲ್ಲಿ ನನ್ನನ್ನು ಸೇರಿಸಿದಂತೆ
ಜಗದ ಜನರಿಗೆಲ್ಲಾ ಇಂದು ಎಲ್ಲವೂ ದಿಢೀರ್ ಎಂದಾಗಬೇಕು. ದುಡಿಯದೇ ಹಣವಾಗಬೇಕು ಬದುಕದೇ ಹೆಣವಾಗಬೇಕು. ದಿಢೀರ್ ಆಹಾರ ಪದಾರ್ಥಗಳು ದಿಢೀರ್ ಮಳೆ ಬೆಳೆ  ದಿಢೀರ್ ಮೋಜು ಮಜ ಮಸ್ತಿ ದಿಢೀರ್ ದಿಢೀರ್ ಎಲ್ಲವೂ ದಿಢೀರ್ ಎಂದಾಗಬೇಕು. ಈ ರೀತಿಯ ಮನಸ್ಥಿತಿಯೇ ಇಂದು ಕೊಡಗನ್ನು ತೊರೆದು ಐಟಿಬಿಟಿಯ ಕೆಲಸ ಹುಡುಕುತ್ತಾ ಅನ್ಯರ ಆಸ್ತಿಯ ಬಾಗಿಲು ಕಾಯುವ ಹಾಗಾಗಿದೆ. ಊರಿನಲ್ಲಿ ಉಳಿದಿರುವ ಅಲ್ಪ ಸ್ವಲ್ಪ ಆಸ್ತಿಯನ್ನು ಕಾಡುಗೂಡಿಸಿ ಹೊರನಾಡಿನ ಉದ್ಯಮಿಗಳ ಗೇಟು ಕಾಯುವ ಕೆಲಸ ಮಾಡುತಿದ್ದಾರೆ. ಅಳಿದುಳಿದ ಆಸ್ತಿಯನ್ನು ಊರಲ್ಲೇ ಉಳಿದ ಸಹೋದರರು ಕಷ್ಟ ಸುಖವನ್ನು ನೀಗಿಸಿ ಉನ್ನತಿಗೇರಿಸಿದ ಬಳಿಕ ಆಸ್ತಿಗಾಗಿ ಅಣ್ಣ ತಮ್ಮಂದಿರು ಹಾವು ಮುಂಗುಸಿಯಾಗುತ್ತಾರೆ ಕೆಲವೊಮ್ಮೆ ಮತ್ತೇನೋ ಆಗುತ್ತಾರೆ.

ಈ ಮಧ್ಯೆ ಐಟಿಬಿಟಿಯ ಅವಸರದ ಹಣವಂತರು ಐದು ನಕ್ಷತ್ರಗಳ ಶ್ರೇಯಾಂಕ ಪಡೆದ ವಸತಿಗೃಹಗಳಲ್ಲಿ ತಂಗಿ ದುಬಾರಿ ಬೆಲೆಯ ಕಾರು ಬೈಕು ಬಿಸಿಲೇರಿ ನೀರಿನ ಸ್ನಾನ ಇತ್ಯಾದಿ ಎಲ್ಲವನ್ನೂ ಮುಗಿಸಿದ ಬಳಿಕ ಉಳಿಕೆ ಹಣವನ್ನು ವೆಚ್ಚ ಮಾಡಲು ದಾರಿಕಾಣದೆ ಸ್ವಂತ ಮನೆಯಿಲ್ಲದಿದ್ದರೂ ಸತಿ ಯಾರೋ ಪತಿ ಯಾರೋ ಎಂದರಿಯದೇ ಡೇಟಿಂಗ್ ಹೋಗುವ ಹವ್ಯಾಸ ಶುರು ಹಚ್ಚಿಕೊಂಡು ಊಟಿ ಕೊಡೈಕೆನಾಲ್ ಸುತ್ತ ಮುತ್ತ ಮುಗಿದ ನಂತರ ಕೊಡಗಿನ ಕಡೆಗೆ ಮುಖ ಮಾಡಿದರು. ತಂಪಾದ ವಾತಾವರಣದಲ್ಲಿ ಕಾಡಿನ ನಡುವೆ ರೆಸಾರ್ಟ್ ಗಳಲ್ಲಿ ಕುಡಿದು ಕುಣಿದು ಕುಪ್ಪಳಿಸಿ ಹುಚ್ಚಾಟವಾಡಿದರೂ ಕೇಳುವವರು ಯಾರಿಲ್ಲವೆಂದು ನಮ್ಮ ಸಂಸ್ಕೃತಿಯ ಮರೆತು ಲಲ್ಲೆ ಹೊಡೆಯತೊಡಗಿದರು.

ಇನ್ನು ಅವರ ಸಂಸ್ಕೃತಿಯ ನೋಡಿ ಹೀಗಿದೆ. ಇಡೀ ಕರ್ನಾಟಕವೇ ಅವರ ಶರೀರವೆಂದಾದರೆ ಅವರ ವಸ್ತ್ರಗಳು ಹಾಸನದಿಂದ ಅರಕಲಗೂಡಿನವರೆಗೆ ಮಾತ್ರ ಐಷಾರಾಮಿ ವಾಹನಗಳಲ್ಲಿ ಅವರು ಕುಳಿತು ಸಂಚರಿಸುವ ಬಗೆ ನೋಡಿದರೇ ವಾಕರಿಕೆ ವಾಂತಿ ಭೇದಿ ಎಲ್ಲವೂ ಸಭ್ಯರಿಗೆ ಖಂಡಿತವಾಗಿ ಬರುವುದು. ಯಾವ ಹೋಟೆಲ್ ರೆಸಾರ್ಟ್ ದೇವಾಲಯ ಪ್ರವಾಸಿ ತಾಣಗಳಲ್ಲಿ ಇವರದೇ ಟಸ್ ಪುಸ್‌ ಅಂಗ್ರೇಜಿ ಭಾಷೆಯೊಂದಿಗೆ ವಿದೇಶಿ ವಾತಾವರಣ ಕುಲಗೆಡಿಸುತ್ತಾ ಪರಿಸರ ನಾಶಕ್ಕೆ ಕಾರಣರಾಗುತ್ತಿರುವರು.

ಕೊಡಗಿನ ಮೂಲನಿವಾಸಿಗಳಲ್ಲದವರಿಂದ ಹೊರಗಿನಿಂದ ಬಂದವರು ಕೋಟಿ ಕೋಟಿ ಕಪ್ಪು ಹಣ ತಂದು ಆಸ್ತಿ ಖರೀದಿಸಿ ರೆಸಾರ್ಟ್ ಇತ್ಯಾದಿಗಳನ್ನು ಕಟ್ಟಿ ಅಲ್ಲಿಗೊಬ್ಬ ಮ್ಯಾನೇಜರ್ ಇಟ್ಟು ಅವರಿಷ್ಟದಂತೆ ಕೊಡಗಿನ ಹೆಸರು ಕೆಡಿಸಲು ಪುಟವಿಟ್ಟರು. ಬೆಟ್ಟಗಳ ನೆತ್ತಿಗೆ ಜೇಸಿಬಿ ಹತ್ತಿಸಿ ತಮಗಿಷ್ಟ ಬಂದಂತೆ ಹಳ್ಳ ತೆಗೆಸಿ ಬೋರು ಹೊಡೆಸಿ ಬಂಗಲೆಗಳನ್ನು ನಿರ್ಮಿಸಿ ಕೊಡಗಿನ ನಿರ್ನಾಮಕೆ ನಾಂದಿ ಹಾಡಿದರು. ಉದಾಹರಣೆಗೆ ಈಗ್ಗೆ ಎಂಟ್ಹತ್ತು ವರ್ಷಗಳ ಹಿಂದೆ ಮಡಿಕೇರಿಯ ಮಂಗಳಾದೇವಿನಗರದಲ್ಲಿ ವಿದೇಶಿ ಬಂಡವಾಳ ಹೂಡಿ ಮನೆ ನಿರ್ಮಿಸಿ ಜೇಸಿಬಿ ಮುಖಾಂತರ ಮಣ್ಣು ತೆಗೆದು ವಿಸ್ತಾರಗೊಳಿಸುವ ಭರದಲ್ಲಿ ಮಡಿಕೇರಿ ವಿರಾಜಪೇಟೆ ರಸ್ತೆಯ ಮೇಲೆ ಮಳೆಗಾಲದ ಒಂದು ದಿನ ಅಲ್ಲಿದ್ದ ಮನೆಯ ಸಮೇತವಾಗಿ ಬಿದ್ದ ಮಣ್ಣಿನ ರಾಶಿಗೆ ಒಂದಿಡೀ ಕುಟುಂಬದ ಸದಸ್ಯರು (ಕೇವಲ ಒಬ್ಬ ಹೆಣ್ಣು ಮಗಳ ಹೊರತಾಗಿ) ಕಣ್ಮುಚ್ಚುವಂತೆ ಮಾಡಿ ಇಂದು ನಾವು ಕಾಣುತ್ತಿರುವ  ಅನಾಹುತಗಳನ್ನು ಕುರಿತು ಮುನ್ನೆಚ್ಚರಿಕೆಯನ್ನು ನೀಡಿತು ಎಂಬುದನ್ನು ಯಾರು ಅಷ್ಟಾಗಿ ಗಮನಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಲಿಲ್ಲ. 

ಅಲ್ಪ ಹಣದಾಸೆಗೆ ಅಪ್ಪನ ಅಜ್ಜಂದೀರು ಮಾಡಿದ ಆಸ್ತಿಯನ್ನು ಮಾರಿ ಕೊಡಗಿನ ಸಂಸ್ಕೃತಿಯ ಬಗ್ಗೆ ಏನೇನೂ ಅರಿಯದ ಹೊರಗಿನ ಜನತೆಗೆ ಮನೆ ಮಠ ಮಾರಿ ಹೋದ ಅದೆಷ್ಟೋ ಕುಟುಂಬಗಳ ಸದಸ್ಯರು ಕ್ಷಣಿಕ ಸುಖದಾಸೆಗೆ ದಾಸರಾಗಿ ನಗರಗಳಲ್ಲಿ ಅಕ್ಷರಶಃ ಎಲ್ಲಾ ಕಳೆದುಕೊಂಡು ಸತಿ ಪತಿಯರು ದುಡಿದರೂ ಸಾಲ ಸಾಲವಾಗಿಯೇ ಇದೆ. ಚಟ್ಟ ಹತ್ತಿದರೂ ಮುಗಿಯಲಾರದ ಚಟಗಳ ಕಾರಣ ಭಿಕಾರಿಗಳಂತಾಗಿದ್ದಾರೆ. ಎಲ್ಲೋ ಒಂದಷ್ಟು ಮಂದಿ ಉದ್ಧಾರವಾಗಿದ್ದಾರೆ ಮಕ್ಕಳು ಮರಿ ಎಂದು ದುಡಿದು ಹಣವೆಲ್ಲವನ್ನೂ ಬಾಡಿಗೆಗೆಂದು ಉಳ್ಳವರ ಸಲಹುತಿದ್ದಾರೆ. ಕೋಟಿ ಕೋಟಿ ಉಳ್ಳವರು ಅಪಾರ್ಟ್ಮೆಂಟ್ ಹೋಮ್ ಸ್ಟೇ ಇತ್ಯಾದಿ ಕಟ್ಟಿ ಹಣ ದೋಚುತ್ತಾ ಐಷಾರಾಮಿ ಜೀವನ ನಡೆಸುತಿಹರು. 

ಹೀಗೆ ರಜಾದಿನಗಳಲ್ಲಿ ಹಿಂಡು ಹಿಂಡಾಗಿ ಬಂದು ತಂಗಲು ಸ್ಥಳ ಸಿಗದೆ ಅವರಿವರ ಮನೆಯಲ್ಲಿ ಹೋಮ್ ಸ್ಟೇ ಎಂಬ ಹೆಸರಿನ ಉದ್ಯಮ ಪ್ರಾರಂಭಿಸಿದರು. ನಂತರ ಅದು ಎಸ್ಟೇಟ್ ಸ್ಟೇ ಎಂದು ಹಿಲ್ ಸ್ಟೇ ಜಂಗಲ್ ಸ್ಟೇ ಎಂತಲೂ ಮುಂದುವರೆಯಿತು ಇದೆಲ್ಲದರ ಪರಿಣಾಮವಾಗಿ ಬೆಟ್ಟದ ಶಿರ ಉರುಳಿ ಬುಡದಲ್ಲಿ ಮನೆ ಕಟ್ಟಿದ ಬಡವರ ಮನೆಯ ಜೊತೆಗೆ ಸರ್ವಸ್ವವನ್ನೂ ನಾಶಮಾಡುವತ್ತ ನಡೆದಿದೆ. 

ಯಾರದೋ ಮೋಜಿಗೆ ಯಾರದೋ ಧನದಾಹಕೆ ಕೊಡಗಿನ ಬಡಜನರು ಬಡವಾದರು ಅಲ್ವೇ.
ಹಿಂದಿನಿಂದಲೂ ಹೊಳೆ ಅಂಚು ಯಾವುದೇ ಜಾತಿಮತ ಬೇಧವಿಲ್ಲದೇ ಸರ್ವೇಸಾಮಾನ್ಯ ಸ್ಮಶಾನವಾಗಿತ್ತು. ಯಾವಾಗ ಕಾಫಿಯ ಬೆಲೆ ಹೆಚ್ಚಾಯಿತೋ ಕಾಫಿತೋಟಗಳಿಗೆ ನೀರು ಹಾರಿಸಿ ಉತ್ತಮ ಇಳುವರಿ ತರುವ ಉದ್ದೇಶದಿಂದ ಉಳ್ಳವರೇ ಹೊಳೆ ಅಂಚುಗಳನ್ನು ಆಕ್ರಮಿಸತೊಡಗಿದರು. ಇದನ್ನು ಕಂಡು ಹೊರರಾಜ್ಯದಿಂದ ಬಂದ ಬಡಜನರು ಅದೇ ಹೊಳೆ ಅಂಚಿನಲ್ಲಿ ಮನೆ ಮಠ ಕಟ್ಟಿ ಹೊಳೆಯ ನೀರಿನ ಹರಿವನ್ನು ತಮಗರಿಯದೇ ಅಡ್ಡಗಟ್ಟಿದರು.
ಒಂದೆಡೆ ಬೆಟ್ಟ ಗುಡ್ಡದ ನೆತ್ತಿಯು ಹಳ್ಳವಾಯಿತು. ನೆತ್ತಿಗೆ ಬಿದ್ದ ನೀರು ಗುಡ್ಡಗಳಲ್ಲಿ ಬಿರುಕು ಮೂಡಿಸಿತು.
ಮತ್ತೊಂದು ಕಡೆ ಹರಿಯುವ ನೀರಿನ ಹಾದಿ ಮುಚ್ಚಿ ಹೊಳೆಯು ಹಳಿ ತಪ್ಪಿದ ರೈಲಿನಂತಾಯಿತು.

ನಾಳೆಗೆ ಮುಂದುವರೆಯುತ್ತದೆ

ವೈಲೇಶ ಪಿ ಯೆಸ್ ಕೊಡಗು
೨೨/೮ /೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ