ಇದೆಂತಹ ಬೇಡುವಿಕೆ

ಇದೆಂತಹ ಬೇಡುವಿಕೆ
~~~~~~~~~~~
ಕೊಡಗು ಹಾಸನ ಸಕಲೇಶಪುರ ಮತ್ತು ಕೇರಳ ಮಳೆಯ ಪ್ರಮಾಣವು ಹೆಚ್ಚಾಗಿ ನಡೆಯಬಾರದ ಅನಾಹುತಕ್ಕೆ ಸಾಕ್ಷಿಯಾದವರು ಸಾವಿಗೆ ಶರಣಾದವರು ಮನೆ ಮಠ ಕಳೆದುಕೊಂಡವರು ನೂರಾರು. ಅದೆಷ್ಟು ಪ್ರಾಣಿ ಪಕ್ಷಿಗಳು ಪ್ರಾಣ ಕಳೆದುಕೊಂಡವೋ ಬಲ್ಲವರಾರು. ಆದರೆ ಬದುಕಿರುವ ಕೆಲವು ಮಾನವ ಪ್ರಾಣಿಗಳು ಮಾಡುತ್ತಿರುವ ಅನ್ಯಾಯ ಅಕ್ರಮಗಳನ್ನು ತಮ್ಮ ಮುಂದಿಡುವ ಪುಟ್ಟ  ಪ್ರಯತ್ನ ಮಾಡುತ್ತಿರುವೆ ಹಾಗೆ ಓದುತ್ತಾ ಹೋಗಿ.

ಹಿಂದೆ ಉತ್ತರ ಕರ್ನಾಟಕ ಮಳೆಯಿಂದ ತತ್ತರಗೊಂಡಾಗ, ಜಪಾನ್ ದೇಶದ ನೆಲ ನಡುಗಿ ಪ್ರಾಣಗಳು ಉಡುಗಿ ಹೋದಾಗ, ಋಷಿಕೇಶದಲ್ಲಿ  ಶಿವನು ಅಭಿಷೇಕದ ಜೊತೆಗೆ ಜಲ ತಾಂಡವವಾಡಿದಾಗಲೆಲ್ಲಾ ಜನರ ತಾಳ್ಮೆ ಮತ್ತು ಹಣದ ಜೊತೆಗೆ ತಾಂಡವವಾಡುವವರ ಚಾತುರ್ಯದ ಒಂದು ಒಳನೋಟ ಹಾಗೂ ಇದರಿಂದಾಗಿ ನಿಜವಾದ ಅರ್ಥದಲ್ಲಿ ಸಹಾಯವನ್ನು ಮಾಡುವಂತಹ ಸಂಸ್ಥೆಗಳನ್ನು ಸಹ ನಂಬದಿರುವಂತೆ ಮಾಡುವ ಮೂಲಕ ಸಮಾಜದಲ್ಲಿ ಯಾರನ್ನೂ ನಂಬದಿರುವಂತೆ ಮಾಡುವ ದುರುಳರು ಇಂತಹ ಅವಕಾಶಗಳನ್ನು ಬಳಸಿಕೊಂಡು ದುರುಪಯೋಗ ಪಡಿಸಿಕೊಳ್ಳುವ ದುರಾತ್ಮರನ್ನು ಹೇಗೆ ಸಹಿಸುವುದು.

ಉದಾಹರಣೆಗೆ ಎಲ್ಲಿಯೇ ಆದರೂ ಪ್ರಕೃತಿ ವಿಕೋಪ
ಇನ್ನಿತರ ಯಾವುದೇ ಪರಿಹಾರದ ಅವಶ್ಯಕತೆ ಕಂಡು ಬಂದರೆ ಸಾಕು ಮೊದಲೇ ತೆಗೆದಿರಿಸಿದ ಖಾಲಿ ಡಬ್ಬಗಳಿಗೆ ವರ್ತಮಾನದ ಲೇಬಲ್ ಕೈಯಿಂದಲೇ ಬರೆದು ಅಂದವಾದ ಹೆಣ್ಣುಮಕ್ಕಳು ಗಂಡು ಮಕ್ಕಳು ಎಂಬ ಭೇದವಿಲ್ಲದೆ ಬೆಂಗಳೂರು ಮೈಸೂರು ಮುಂತಾದ ಪಟ್ಟಣದ ನಾಲ್ಕು ರಸ್ತೆಗಳು ಸೇರುವ ಸ್ಥಳದಲ್ಲಿ ಬಸ್ ನಿಲ್ದಾಣದ ಹೊರ ಆವರಣದಲ್ಲಿ ರೈಲು ನಿಲ್ದಾಣಗಳ ಹೊರಾವರಣದಲ್ಲಿ  ಅಕ್ಷರಶಃ ಬಿಕ್ಷೆಗೆ ನಿಂತು ಬಿಡುತ್ತಾರೆ. ಅವರ ಟಸ್ ಪುಸ್ ಇಂಗ್ಲಿಷ್ ಭಾಷೆಯಲ್ಲಿ ನಿಜ ಬಿಕ್ಷುಕರನ್ನು ನಾಚಿಸುವಂತೆ ಬೇಡುತಿರುತ್ತಾರೆ. ಆ ಹಣ ವಸ್ತುಗಳನ್ನು ನಿಜಕ್ಕೂ ಅದೆಲ್ಲಿ ತಲುಪಿಸುತ್ತಾರೋ ಬಲ್ಲವರಾರು.

ಹಾಗೇಯೇ ಇಂತಹ ದಿನಗಳವರೆಗೆ ಎಲ್ಲೂ ಯಾವ ರೀತಿಯಲ್ಲೂ ಕಾಣದಿರುವಂತಹ ಸಂಘ ಸಂಸ್ಥೆಗಳು ಹುಟ್ಟಿಕೊಳ್ಳುತ್ತವೆ. ಅಬ್ಬರದ ಪ್ರಚಾರದ ಜೊತೆಗೆ ದೊಡ್ಡ ಮಟ್ಟದಲ್ಲಿ ಹಣದ ಬೇಡಿಕೆ ಬೇಡುವಿಕೆ ಬೇಡುವ ಕಲೆಯನ್ನು ಕರಗತಗೊಳಿಸಿಕೊಂಡಿರುತ್ತಾರೆ.

ಇನ್ನೂ ಮುಂದುವರಿದ ಕೆಲವರು ಪ್ರಖ್ಯಾತ ಸಂಸ್ಥೆಯ ಬ್ಯಾನರ್ ಬಳಸುವುದು ಅವರ ಬ್ಯಾಂಕ್ ಖಾತಯ ಸಂಖ್ಯೆಯ ಮಾದರಿಯ ತಮ್ಮ ಖಾತೆಯ ಸಂಖ್ಯೆಯನ್ನು ನೀಡಿ ಮೂಲ ಸಂಸ್ಥೆಗೆ ವಂಚಿಸುವುದು. ಅಥವಾ ಮೂಲ ಸಂಸ್ಥೆಯ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡುವುದು ಇತ್ಯಾದಿ ಮೋಸ ವಂಚನೆಯ ಹಾದಿ ಹಿಡಿಯುತ್ತಾರೆ. ಅಂತಹ ಒಂದು ಉದಾಹರಣೆ ಚನ್ನರಾಯಪಟ್ಟಣದವನೆಂದು ಹೇಳಿಕೊಂಡು ಬೆಂಗಳೂರಿನ ಕೊಡವ ಸಮಾಜದ  ಜಾಹೀರಾತನ್ನು ತನ್ನ ಫೇಸ್ ಬುಕ್ ಖಾತೆಯಲ್ಲಿ ತನ್ನ ಸ್ವಂತ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ನೀಡಿ ಪ್ರಚಾರ ಮಾಡುತಿದ್ದ ವ್ಯಕ್ತಿಯ ಜೊತೆಗೆ ರೆಕಾರ್ಡ್ ಮಾಡಿದ ಸಂಭಾಷಣೆ ಹಾಗೂ ಮಂಗಳೂರಿನಲ್ಲಿ ಅದಾವುದೋ ಬೋರ್ಡ್ ತಗುಲಿಸಿಕೊಂಡು ಹಣ ವಸ್ತುಗಳ ಜಮಾವಣೆಗೆ ತೊಡಗಿದ್ದ ಯುವಕನನ್ನು ಪೋಲೀಸರು ಬಂದಿಸಿರುವ ದೃಶ್ಯ ತಮ್ಮ ಮುಂದೆ ಇರಿಸುತಿದ್ದೇನೆ.

ಇವೆಲ್ಲವೂ ಇರಲಿ ಸಂತ್ರಸ್ತರ ರಕ್ಷಣೆಯ ನಂತರದಲ್ಲಿ ಕಳ್ಳರ ಹಾವಳಿಯನ್ನು ಸಂತ್ರಸ್ತರಿಗೆ ನೆರವು ನೀಡಲು ಬಂದಂತಹ ಅನೇಕ ವಸ್ತುಗಳನ್ನು ಸಂತ್ರಸ್ತರಲ್ಲದವರು ಅಪಹರಿಸುತ್ತಿರುವುದು ಉದಾಹರಣೆಗೆ ಆಹಾರ ಸಾಮಗ್ರಿಗಳನ್ನು ಬಟ್ಟೆಗಳನ್ನು ಹೊದಿಕೆಯನ್ನು ಸಹ‌ ಕಾಣೆಯಾಗಿಸಿರುವುದು ಇವೆಲ್ಲವನ್ನೂ ನೋಡಿದಾಗ ಯಾರನ್ನೂ ನಂಬುವುದು ಯಾರನ್ನೂ ನಂಬದಿರುವುದು ಅರಿಯದಾಗಿದೆ.

ಆತ್ಮೀಯ ಬಂಧುಗಳೇ ನಾವೆಲ್ಲರೂ ಇತ್ತೀಚಿನ ದಿನಗಳಲ್ಲಿ ಇಷ್ಟೊಂದು ಅನಾಹುತಗಳನ್ನು ಹಾಗೂ ಇಷ್ಟೊಂದು ಅಪಸವ್ಯಗಳನ್ನು ಕಂಡರೂ ಸಹ ಅಪರಾಧಿಗಳಿಗೆ ಅತಿಯಾಸೆ ತೊಲಗಿ ಅಪರಾಧ ಪ್ರಜ್ಞೆಯು ಬಾರದಿರುವುದು. ನಿಜಕ್ಕೂ ಖೇದಕರ ಅಲ್ವೇ

ಇನ್ನಾದರೂ ಅವಕಾಶವನ್ನು ದುರುಪಯೋಗ ಪಡಿಸಿಕೊಳ್ಳುವ ದುರ್ಬುದ್ಧಿ ತೊಲಗಿ ಉಪಕಾರ ಮಾಡದಿದ್ದರೂ ತೊಂದರೆ ಇಲ್ಲ. ಉಪದ್ರವ ಮಾಡದಿದ್ದರೆ ಸಾಕೆಂದು ದುರುಳರಿಗೆ ಕಾಲವೇ ತಕ್ಕ ಶಿಕ್ಷೆಯನ್ನು ನೀಡಲೆಂದು ತಮ್ಮೆಲ್ಲರ ಮುಂದೆ ನಿವೇದಿಸುತ್ತಾ ಎಲ್ಲರಿಗೂ ಒಳಿತಾಗಲೆಂದು ಬಯಸುತ್ತೇನೆ.

ಎಂದೆಂದಿಗೂ ತಮ್ಮವ
ವೈಲೇಶ ಪಿ ಯೆಸ್ ಕೊಡಗು
೨೦/೮/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ