ಗೆಳೆಯ ಒಡೆಯ

೧. ಗೆಳೆಯ ಒಡೆಯ
=============

ಮನದ ತುಂಬಾ ನೀನಿರುವಾಗ
ದುಃಖ ತುಂಬುವದೇ ಗೆಳೆಯ(೨ಬಾರಿ)
ಹೃದಯದೊಡಲ ಛೇದಿಸಿದಾಗ
ನಿನ್ನಯ ರೂಪವದೇ ಒಡೆಯ (೨ಬಾರಿ).  ||ಪ||

ಹರೆಯ ತುಂಬಿದ ಬಿಸುಪಿನಲ್ಲಿ
ಮೋಹಕ ನಗೆಯ ಉಸುಕಿನಲ್ಲಿ
ರಾತ್ರಿಯ ಸುಂದರ ಕನಸಿನಲ್ಲಿ
ಮಾದಕ ನೆನಪಿನ ಉರುಳಿನಲ್ಲಿ ||೧||

ಮಾತೆಯ ಮಮತೆಯ ಮರೆತಿಲ್ಲ
ತಂದೆಯ, ಬಂಧುಗಳ ನೆನಪಿಲ್ಲ
ಭಾತೃ ದೇವರೂ ಎದುರಿಲ್ಲಾ
ಗೆಳೆಯ ಭಾತೃ ದೇವರೂ ಎದುರಿಲ್ಲಾ ||೨||

ಹೊನ್ನಿನ ಗೆಳೆತನ ನಿನದೆಂದು
ಜೇನಿನ ಒಡಲನು ನಿನಗಿಂದು
ಅರ್ಚಿಸಿ ಅರ್ಪಿಸಿ ಸೇವಿಸಿದೆ
ನನ್ನದೆಲ್ಲವನೂ ನೀ ಪಡೆದೆ
ಗೆಳೆಯ ನನ್ನದೆಲ್ಲವಾ.. ನೀ.. ಪಡೆದೆ ||೩||

ದಿನದಿನ ಕಳೆದು ನಡೆದಿರಲು
ಉದರವು ಮುಂದಕೆ ಬೆಳೆದಿರಲು
ಅಮ್ಮನ ಪ್ರಶ್ನೆಗೆ ಬಿಗುವಾಗಿ
ಅಪ್ಪನ ದೊಣ್ಣೆಗೆ ಬೆನ್ನಾಗಿ
ಗೆಳೆಯ ಬೆನ್ನು ಹುರಿಯು ಚೂರಾಗಿ||೪||

ಸೋದರ ಪ್ರೀತಿಯು ಮುಳ್ಳಾಗಿ
ನೆರೆಕೆರೆ ಮಾತಿಗೆ ಹೊಲಸಾಗಿ
ಅವನಿ ದೇವಿಗೆ ಹೊರೆಯಾಗಿ
ಬಾಳಲಿ ಹೇಗೆ ಬರಡಾಗಿ ಗೆಳೆಯ
ಬಾಳಲಿ ಹೇಗೆ ಬರಡಾಗಿ ||೫||

ನಿನ್ನಯ ತಪ್ಪು ಎಷ್ಟಿಹುದೊ
ನನ್ನಯ ಒಪ್ಪು ಎರಡಿಹುದು
ಭಂಡ ಬದುಕು ಬೇಡಯ್ಯಾ
ಅಲ್ಪ ವಿಷವನು ತಾರಯ್ಯ
ಗೆಳೆಯ ಅಲ್ಪ ವಿಷವನು ತಾರಯ್ಯ ||೬||

ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೨೦/೮/೨೦೧೭

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ