ಸ್ವ ಅತಂತ್ರ್ಯ

ಸ್ವ ಅತಂತ್ರ್ಯ
~~~~~~
ದೊರಕಿದೆ ಸ್ವಾತಂತ್ರ್ಯ ನದಿ ತೊರೆಗಳಿಗೆ
ಮನ ಬಂದಂತೆ ಹರಿಯುತ ಜನವಸತಿಗೆ
ನವಯುಗದ ಸಕಲ ಟಾಂಗ ಕುದುರೆಗಳಿಗೆ
ನಿರ್ಜೀವ ಹೃದಯದ ಒಳ ಕವಾಟಗಳಿಗೆ

ನಮ್ಮಾಗತ್ಯಕೆ ಬೆಟ್ಟ ಗುಡ್ಡ ಮರಗಿಡಗಳ
ತರಿದುರುಳಿಸಿ ಹಾದಿ ಬೀದಿ ಗುಡಿಸಲುಗಳ
ಸಾಲದೇ ಕೆರೆ ಕುಂಟೆ ಮುಚ್ಚಿ ಮಹಲುಗಳ
ಜಲ ಹರಿವ ಹಾದಿಗೆಳೆದು ನೆಟ್ಟ ಮುಳ್ಳುಗಳ

ಸ್ವೆಚ್ಚಾಚಾರ ಅನುಭವಿಸಿದ ನಮಗಿಂದು
ಸ್ವಯಂಕೃತಾಪರಾಧದ ಉರುಳಲಿ ಸಿಲುಕಿ
ಮಲಮೂತ್ರ ಹೊಲಸು ರಸದಲಿ ಮಿಂದು 
ಯಾರೋ ಇತ್ತ ಗಂಜಿಯ ಅಂಜುತ್ತಾ ತಿಂದು

ನಮ್ಮದೇ ತಪ್ಪಿಗೆ ಅನ್ಯರ ದೂಷಿಸುತ
ನಾವರಿಯದೇ ನರಕವ ಅನುಭವಿಸಿ
ನ್ಯಾಯ ಅನ್ಯಾಯದ ತುಲನೆಯಲಿ
ಧರ್ಮ ಅಧರ್ಮವ ಯೋಚಿಸುತಲಿ

ಉಡಲು ಉಣಲು ಸ್ವಾತಂತ್ರ್ಯವಿಲ್ಲದ
ಉಪಸ್ಥಿತಿಯ ತಂದಿರಿಸಿ ಅಹಂಕಾರದ
ಬದುಕಿಗೆ ತಿಲಾಂಜಲಿಯನಿತ್ತು ಸಮದ
ಬಾಳ್ವೆ ಮಾಡೆಂದಿದೆ ಸುರಿವ ಮಳೆಯಂದ

ವೈ.ಕೊ.
ವೈಲೇಶ ಪಿ ಯೆಸ್ ಕೊಡಗು
೧೪/೮/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ