ಬನ್ನಿರಿ ದೈವಗಳೇ

ಬನ್ನಿರಿ ದೈವಗಳೇ
~~~~~~~~~
ನನ್ನವ್ವನ ನೆನಪು ಜಿನುಗುತಿದೆ
ಆಷಾಡದ ಸೋನೆ ಮಳೆಯಂತೆ
ಮತ್ತೆ ಬಿಡದೇ ಸುರಿವ ಹನಿಯಂತೆ
ಒಮ್ಮೆ ಜಡಿ ಹಿಡಿದು ಒದ್ದೆಯಾದಂತೆ

ಮುಗ್ಧ ಸ್ನಿಗ್ಧ ಪೆದ್ದು ಮುದ್ದು ಮನದಮ್ಮ
ನೋವುಂಡು ವಿಧವೆ ಪಟ್ಟವ ಹೊತ್ತಮ್ಮ
ಎನ್ನಪ್ಪನ ಬಾಳಿನಲಿ ಬೆಳದಿಂಗಳಾದಾಕೆ
ಅಪ್ಪನಳಿವಿನ ಬಳಿಕ ಸಿಂಹಿಣಿಯಾದಳೇಕೆ 

ಎದೆಯ ಬೇರನು ಹೀರಿ ಬೆಳೆದೆವರಂದು
ಹಬ್ಬಿ ಹರಡಿಹೆವು ಬೀಳಲುಗಳ ತೆರನಿಂದು
ಇದ್ದೆರಡು ಕಂದಮ್ಮಗೆ ಆರು ಜೀವ ತಳೆದು
ಮರುಕಳಿಸಿ ಅನವರತ ನಿಮ್ಮ ಪ್ರೇಮವದು

ಅಪ್ಪನ ಒಲವಿನ ಬಾರುಕೋಲ ಜೋರು
ಅಮ್ಮನ ಸೆರಗಿನಿಂದ ನಾವಾದೆವು ಪಾರು
ಬೇಕೇ ಬೇಕೆಂದರೀಗಿಲ್ಲ ಹೆತ್ತಪ್ಪವ್ವನ ತವರು
ನೆನೆದೊಡೆ ಕನಸಲೂ ಸುರಿವುದು ಕಣ್ಣೀರು

ತನುವನಿತ್ತವರು ನೀವು ತಮ್ಮಿಂದಲೇ ನಾವು
ಬನ್ನಿರಿ ದೈವಗಳೇ ಒಲವ ತನ್ನಿರಿ ಕಾದಿಹೆವು
ಈರೇಳು ಜನುಮಕೂ ನೀವೇ ನಮ್ಮೊಲವು
ಅದೇನ ಕೊಟ್ಟಾರೂ ಋಣವನು ಕಳೆದೇವು?

ವೈ.ಕೊ.
ವೈಲೇಶ ಪಿ ಯೆಸ್ ಕೊಡಗು
೧೨/೮/೩೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ