ಗಝಲ್ : ೩೪
ಗಝಲ್ : ೩೪
~~~~~~~~
ಜನನದೊಳು ಹೊಕ್ಕುಳು ಬಳ್ಳಿಯ ಕತ್ತರಿಸಿ ಮೊದಲಾಯ್ತು ಜೀವನ
ಕಣ್ಣ ಬಿಡದೇ ತಡಕಾಡಿ ಅಮ್ಮನೆದೆ ಹಾಲನೆಳೆದಾಗ ನಕ್ಕಿತು ಜೀವನ
ಅಂಬೆಗಾಲಿನ ನಡೆಯೊಂದಿಗೆ ಅನ್ನಪ್ರಾಸನವು ಜೊತೆಗೂಡಿ ಬೆಳೆದೆ
ಬೆಳೆದಂತೆಲ್ಲಾ ಭಾವದುಸಿರ ಮಾತು ಮೂಡಿ ಹಸನಾಯ್ತು ಜೀವನ
ಶೃಂಗೇರಿ ಶಾರದಾಂಭೆ ಎದುರಲಿ ತೀಡುತಾ ಕಲಿತೆ ಅಕ್ಷತೆಯಲಿ ಅಕ್ಷರ
ಅಕ್ಕರದ ಅಕ್ಕರೆಯ ಸಕ್ಕರೆಯನು ನೆಕ್ಕುತಲಿ ಸಿಹಿಯಾಯ್ತು ಜೀವನ
ಭವದ ಬಂಧನದ ಬಂಧುಗಳ ಬನದೊಳು ಬಾಡಿಹೋಗಿದೆ ಭಾವನೆ
ವಿಧಿ ಬರಹ ಅರಿಯದೆಲೇ ಇಹಪರದ ವಿರಹ ತಾಳದಾಯ್ತು ಜೀವನ
ಬೆಟ್ಟ ಹೊತ್ತು ಅಟ್ಟ ಅಟ್ಟಿ ನಾನು ನಾನೆಂಬ ಹಮ್ಮು ನೆಟ್ಟು ನೆಟ್ಟಗಾದೆ
ಚಟ್ಟ ಕಟ್ಟುವರೆ ಕಾಲ್ಬೆರಳ ಕಟ್ಟಿ ಕಾಷ್ಟವ ಒಟ್ಟಿ ಸುಟ್ಟರಾಯ್ತು ಜೀವನ
ಏನ ಗೈದರೇನು ದೇಶವನಾಳಿ ಕೋಶವನು ಕೂಡಿಟ್ಟರೆ ಬಂದುದೇನು
"ಸಿಡಿಲು"ನು ನಡೆವಾಗ ಕೌಪೀನವನೂ ಕಳಚುತಾ ಹೋಯ್ತು ಜೀವನ
ಸಿಡಿಲು
ವೈಲೇಶ ಪಿ ಯೆಸ್ ಕೊಡಗು
೧೪/೬/೨೦೧೮
Comments
Post a Comment