ಅಳಿದ ಅಪ್ಪನಿಗೊಂದು ಬಿನ್ನಹ

ಅಳಿದ ಅಪ್ಪನಿಗೊಂದು ಬಿನ್ನಹ
=====================

ಅಪ್ಪ ಎನ್ನನ್ನು ಬಾಲ್ಯದಲೇ ಬಿಟ್ಟು ಹೋದೆಯಲ್ಲ ನಾನೇನು ಮಾಡಿದೆ ತಪ್ಪಾ?
ವರಿಸಿದ ಹದಿಮೂರು ವರುಷದಿ ಎನ್ನಮ್ಮನನೂ ವಿಧವೆಯಾಗಿಸಿ ಸಮಾಜದಿ ದೂಡಿದೆಯಲ್ಲಪ್ಪ.
ಐದು ವರುಷದ ತಂಗಿ ಏಳು ವರುಷದ ತಮ್ಮ ಒಂಬತ್ತು ವರುಷದ ನನ್ನನ್ನು ಹೇಗೆ ಸಾಕಿರಬೇಕು ಎನ್ನಮ್ಮ.

ಅಪ್ಪ ನೀನಿರಬೇಕಿತ್ತಪ್ಪ ದುಷ್ಟ ಸಮಾಜದಿ ಕಾಮುಕ ಕಣ್ಣುಗಳಿಂದ ನನ್ನಮ್ಮನನು ಕಾಪಾಡಲು ನೀನೇ ಇರಬೇಕಿತಪ್ಪ. ಏನರಿಯದ ನಮ್ಮ ತಿದ್ದಿ ತೀಡಿ ಮುದ್ದಾಡಿ ಬುದ್ಧಿ ಕಲಿಸದೇ ಎಲ್ಲಿ ಹೋದೆಯಪ್ಪಾ. ತಮ್ಮ ತಂಗಿಯರಿಗೆ ಸರಿಯಾದ ಆಹಾರದ ಜೊತೆಗೆ ನೀತಿ ರೀತಿಯ ಕಲಿಸಲು ನಿನ್ನ ಅಗತ್ಯವಿತ್ತಪ್ಪಾ.

ಅಪ್ಪಾ ನೀನಿದ್ದಿದ್ದರೆ ಹದಿಹರೆಯದ ಬಾಲಕ ನಾ ಶಾಲೆಯ ತೊರೆದು ಸ್ವತಃ ದುಡಿದು ತಿನ್ನಬೇಕಿತ್ತೇನಪ್ಪ
ಅಪ್ಪ ನೀನಿದ್ದಿದ್ದರೆ ದುಡಿಯಲೆಂದು ಹೋದ ಎನ್ನಮ್ಮ ಸಮಾಜದ ಕೆಂಗಣ್ಣಿಗೆ ಬಲಿಯಾಗುತ್ತಿದ್ದರೇನಪ್ಪ. ದುಡಿಯದೇ ಏನು ಸಿಗಲಾರದೆಂದರಿತ ಎಮ್ಮ ಅಮ್ಮ ಮಕ್ಕಳ ಜವಾಬ್ದಾರಿಯ ಸರಿಯಾಗರಿಯದೆ  ತಪ್ಪುಮಾಡಿದರಪ್ಪ.

ಮೂರು ಮಕ್ಕಳ ಉದರ ಪೋಷಣೆಗೆ ಹಗಲಿರುಳು
ದುಡಿವ ಭರದಲ್ಲಿ ದಾರಿ ತಪ್ಪಿದ ಮಕ್ಕಳ ಗಮನಿಸಲು ಎನ್ನಮ್ಮನಿಗೆ ಅಸಾಧ್ಯವಾಯಿತು ಅಪ್ಪಾ. ಯಾವ ಜನುಮದ ಪಾಪ ನಾವುಗಳು ನಿನ್ನ ಕಳೆದುಕೊಂಡು ಅನಾಥರಾದೆವಪ್ಪ. ಅಪ್ಪನಿಲ್ಲದ ಬಾಳು ಎಷ್ಟು ಗೋಳೆಂದು ಬಲ್ಲವನು ನಾವೆಂದರೆ ತಪ್ಪೇನಪ್ಪ.

ನಾವಿಂದು ಪಟ್ಟ ಕಷ್ಟವನು ಹಿಂದೆಯೇ  ಅನುಭವಿಸಿದ ನಿನಗೆ ನಮಗಾ ಕಷ್ಟ ಬರಬಾರದೆಂಬ ಅರಿವಿರಲಿಲ್ಲವೇನಪ್ಪ. ಅರಿತರಿತು ತಪ್ಪು ಮಾಡಲು
ಸಾಧ್ಯವೇ ನಿಮಗೆ. ಆ ದೇವನಿಗೂ ಕರುಣೆ ಬಾರದಾಯಿತಲ್ಲಪ್ಪ. ನಿನ್ನ ಮಗನಿಗೆ ಮಾರಣೆ ದಿನ ನೆರೆಯೂರಿಗೆ ಪಿಕ್ನಿಕ್ ಇದೆಯೆಂದರಿತು ಹಸಿರು ಬಣ್ಣದ ಚಣ್ಣ ಬಿಳಿ ಅಂಗಿ ತಂದಿರಿಸಿ ಮಗ ಹೊರಡುವ ಮುನ್ನಿನ ರಾತ್ರಿಯೇ ನಿನಗರಿಯದೇ ನೀನೇ ಬಿಳಿ ವಸ್ತ್ರ ಧರಿಸಿ ನದಿ ದಡದಿ ಮಣ್ಣಲ್ಲಿ ಮಣ್ಣಾದೆಯಲ್ಲಪ್ಪ.

ಇದೋ ಇಂದೀಗ ಅಂದಿನ ಪಿಕ್ನಿಕ್ ತಾಣ ನೀರ ಹಾದಿಯಂತಾಗಿಹುದು ಎನಗೆ ಕಣ್ತುಂಬಿಕೊಳೆ
ನನ್ನವರಾರೂ ಎಂದಿಗೂ ಇಲ್ಲದಾದಿರಲ್ಲಪ್ಪ
ಆ ದೈವದ ಕಣ್ಣಿಗೂ ಕರುಣೆಯಿಲ್ಲದಾಯಿತಲ್ಲಪ್ಪ.
ಏಳೇಳು ಜನುಮದಲೂ ಎನ್ನ ಶತ್ರುವಿಗೂ ಈ ಪರಿ
ಕಷ್ಟ ಬಾರದಿರಲೆಂದು ಆ ದೇವನ ಬೇಡುವೆನಪ್ಪ.

ವೈಲೇಶ ಪಿ ಯೆಸ್ ಕೊಡಗು
7/3/2017

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ