ಮಡಿಲು-ದಿಗಿಲು

ಮಡಿಲು-ದಿಗಿಲು
~~~~~~~~~
ನೀನಿತ್ತ ಬದುಕಿಗೆ ನಾನು ಸಾಕ್ಷಿಯಾಗಿದ್ದೆ
ಜಗವ ಕಂಡು ಬಹು ಸಂತಸ ಹೊಂದಿದ್ದೆ
ನಿನ್ನಯ ನಡೆ ನುಡಿಯ ಕೇಳಿ‌ ನೊಂದಿದ್ದೆ
ಮಡಿಲಿನೊಳಗಡೆ ಅಸಹಾಯಕಳಾಗಿದ್ದೆ

ಅಮ್ಮ ನಿನ್ನೊಡಲು ಅಮೃತದ ಕಡಲು 
ಬಯಸಿದೆ ನಗುತಾ ನಿನ್ನೊಡನೆ ಇರಲು 
ಬಿಸುಟು ಹೆಚ್ಚಿಸಿದೆ ಅಂತರಂಗದ ದಿಗಿಲು
ಭೂದೇವಿ ಮಡಿಲು ಎನಗಿಂದು ತೊಟ್ಟಿಲು

ಚುರುಕ್ ಎನಲಿಲವೇನಮ್ಮ ಹೆತ್ತ ಕರುಳು
ಕಾಡಿತ್ತೇ ಹೂಮನಕೆ ವೇದನೆ ಹಗಲಿರುಳು
ನಿಂದನೆಗೆ ನೊಂದು ಎಸೆದೆಯೇನು ತಂದು
ಚರಂಡಿಯ ತೋರಿದೆಯಾ ಚಂದಿರನೆಂದು

ಇರುವೆ ಮುತ್ತಿದರೂ ಕೊರಗದೇ ಇರುವೆ
ನೊಣ ತಿಳಿದಿದೆಯಮ್ಮ ನಾನು ಸತ್ತ ಹೆಣ
ನೋಯದಿರು ತಾಯಿ ಬರುತಿದೆ ನಾಯಿ
ಕೊರಳ ಮೆಚ್ಚಿದರೆ ಮುಚ್ಚುವುದು ಬಾಯಿ

ಯಾತರ ಯಾತನೆ ಯಾರಿಗೇತಕೆ ಬೇಕಿತ್ತು
ಅದ್ಯಾವ ತಾಯಿ ನೀನು ಹೃದಯವಾ ಕಿತ್ತು
ಎಸೆದು ಹೋದೆ ಮನ ಹೋಯಿತೇ ಸತ್ತು
ಇನ್ನೂ ಬರಲಿಲ್ಲ ಏಕೆ ಪಾಪಿ ಪ್ರಾಣಕ್ಕೆ ಕುತ್ತು

ವೈಲೇಶ ಪಿ ಯೆಸ್ ಕೊಡಗು
೯/೩/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ