ಮಹಿಳಾ ದಿನಾಚರಣೆ
ಮಹಿಳಾ ದಿನಾಚರಣೆ
~~~~~~~~~~~
ಮಹಿಳಾ ದಿನಾಚರಣೆಯ ಶುಭಾಶಯ ಹೇಳುವ ಮೊದಲು ಒಂದು ಚಿಕ್ಕ ಬರಹ. ಧರಿತ್ರಿಯು ಹೆಣ್ಣು ಅದಿತಿಯು ಗಂಡು ಎಂದು ಎಲ್ಲರೂ ಒಪ್ಪುತ್ತಾರೆ. ಅದೇ ರವಿಯ ಕಿರಣಗಳ ಸಹಾಯ ಪಡೆದು ತನ್ನೊಡಲ ತುಂಬಾ ಬಸಿರು ಬೆಸೆದು ಹಸಿರು ಪಡೆದು ಉಸಿರು ನೀಡಿ ಅದೇ ಹಸಿರನ್ನು ಹೂವು ಹಣ್ಣು ಕಾಯಿ ಚಿಗುರು ಒಗರೆಂದು ಸಕಲ ಜೀವರಾಶಿಗಳಿಗೂ ಮೊದಲು ಆಹಾರವನ್ನು ನಿರ್ಮಿಸಿ ಅನಂತ ಜೀವಸಂಕುಲಗಳ ಹುಟ್ಟಿಗೆ ಕಾರಣವಾದ ಭೂದೇವಿಗೆ ನನ್ನ ಮೊದಲ ನಮನಗಳು.
ಬಳಿಕ ತನ್ನಂತೆ ಹೆಣ್ಣು ಎಂದು ಬಗೆದ ಭೂದೇವಿ ಎಲ್ಲಾ ಬಗೆ ಜೀವಿಗಳ ಸಂತಾನೋತ್ಪತ್ತಿ ಕಾರ್ಯದಲ್ಲಿ ಹೆರುವ ಅಥವಾ ಮೊಟ್ಟೆ ಇಡುವ ಅತ್ಯಂತ ಕಷ್ಟದ ಕೆಲಸವನ್ನು ಹೆಣ್ಣು ಜೀವಿಗಳಿಗೆ ದೇಹದ ಅಂಗರಚನೆ ಮೂಲಕ ನೀಡಿದೆ ಎಂದರೆ ತಪ್ಪಾಗಲಾರದು. ಇಲ್ಲಿ ಅನಾದಿ ಕಾಲದಿಂದಲೂ ಗಂಡು ಮತ್ತು ಹೆಣ್ಣಿನ ನಡುವೆ ಆಕರ್ಷಣೆ ಎಂಬುದು ಸಂತಾನೋತ್ಪತ್ತಿಯ ಕಾರಣ ಸಹಜವಾಗಿ ಮೂಡಿತು. ಮುಂದೆ ಅದೇ ಪ್ರೀತಿ ಪ್ರೇಮ ನಂಬಿಕೆ ವಿಶ್ವಾಸ ಎಂದು ಕರೆದೆವು.
ಪ್ರತಿ ಹಕ್ಕಿಗಳು ಸಂತಾನೋತ್ಪತ್ತಿಯ ಕ್ರಿಯೆಗಾಗಿ ಗೂಡು ಕಟ್ಟುತ್ತವೆ. ಅಲ್ಲಿ ಎರಡೂ ಸಮಾನವಾಗಿ ಕಾರ್ಯ ನಿರ್ವಹಿಸುತ್ತವೆ. ಮೊಟ್ಟೆಯಿಟ್ಟ ಹೆಣ್ಣು ಹಕ್ಕಿ ಮರಿಗಳ ಜನನಕ್ಕಾಗಿ ಮೊಟ್ಟೆಗೆ ಕಾವು ಕುಳಿತಾಗ ಅದರ ಆಹಾರದ ಜವಾಬ್ದಾರಿ ಗಂಡು ಹಕ್ಕಿ ಹೊರುತ್ತವೆ. ಇದನ್ನು ಯಾವ ಶಾಸ್ತ್ರ, ಸಂಪ್ರದಾಯ,ಜಾತಿ,ಧರ್ಮ, ಮನು,ಮುಲ್ಲಾ, ಪಾದರ್,ಅಥವಾ ಇನ್ಯಾರು ಕಲಿಸಿದರೋ ಇನ್ಯಾರು ಹಕ್ಕಿಗಳಿಗೆ ನೀತಿಯನ್ನು ಬೋಧಿಸಿದರೋ ನಾನರಿಯೆ.
ಇನ್ನೂ ಪ್ರಾಣಿಗಳ ವಿಚಾರದಲ್ಲಿ ಕೂಡ ಇದು ಅನ್ವಯಿಸುತ್ತದೆ. ಪ್ರತಿ ಪ್ರಾಣಿ ಪಕ್ಷಿಗಳಿಗೆ ಪ್ರತಿ ದಿನ ಕನಿಷ್ಟ ಮೂರು ಪ್ರಾಣಾಂತಿಕ ಗಂಡಾಂತರಗಳು ಇರುತ್ತವೆ. ಆದಿಮಾನವರು ಕೂಡ ಇದರಿಂದ ಹೊರತಾಗಿ ಇರಲಿಲ್ಲ ಎನ್ನುವ ಮಾತು ಸರಿ ಇದೆ.
ಹೆಣ್ಣಿಗಾಗಿ ಆಹಾರಕ್ಕಾಗಿ ನಡೆದ ಕದನಗಳು ಬುದ್ದಿವಂತ ಮಾನವನು ಕುಟುಂಬ ವ್ಯವಸ್ಥೆಯ
ಆಧ್ಯತೆ ಅರಿತು ಒಂದು ಪರಿಧಿಯನ್ನು ನಿರ್ಮಿಸಿಕೊಂಡು ಸಂಸಾರ ಎಂದು ಕಂಡು ಕೊಂಡನು ಅಂತೆಯೇ ಆ ಕಾಲದಲ್ಲಿ ಕೂಡ ಜನನ ಕಾರ್ಯವು ಮಹಿಳೆಯರ ಸೊಂಟಕ್ಕೆ ಅಂಟಿತ್ತು. ಪ್ರಾಣಿ ಪಕ್ಷಿಗಳ ಹಾಗೇಯೇ ಮಾನವರು ಸಹ ಕುಟುಂಬದ ರಕ್ಷಣಾ ಜವಾಬ್ದಾರಿಯನ್ನು ಪುರುಷರು ಹೊರ ಬೇಕಾಯಿತು.
ಮುಂದೆ ನಾಗರೀಕತೆಯು ನಗರೀಕತೆಯಾಗಿ ನಮ್ಮ ಆಸೆ ಆಕಾಂಕ್ಷೆಗಳು ಇಮ್ಮಡಿ ಮುಮ್ಮಡಿಯಾಗಿ ಗೂಡು ಬೃಹತ್ ಬಂಗಲೆಗಳಾಗಿ ಸ್ವಾರ್ಥ ಲೋಲುಪತೆ ಅಹಂ ಎಂಬುದು ಹೆಮ್ಮರವಾಗಿ ಬೆಳೆದು ಪ್ರೀತಿ ವಿಶ್ವಾಸ ಪರಸ್ಪರ ಸಹಕಾರದ ಕೊರತೆ ಎದುರಾಗಿ ಎದುರು ಬದುರು ವಾಸವಿದ್ದರೂ ಒಬ್ಬರನ್ನೊಬ್ಬರು ಅರಿಯದಂತಾಗಲು ನಮ್ಮ ಸಂಗ್ರಹಣಾ ಆಕಾಂಕ್ಷೆಗಳು ಕಾರಣ ಎನ್ನಬಹುದು.
ಬದುಕಿನ ಈ ನಾಗಾಲೋಟದಲ್ಲಿ ರಕ್ಷಣೆಯ ಹಲವು ವಿಚಾರಗಳು ಆವಿಷ್ಕಾರಗೊಂಡು ಗಳಿಕೆಯ ಹಾದಿಗೆ ಮುಖ ಮಾಡಿದ ಮನುಜ ಅನಿವಾರ್ಯವಾಗಿ ಮಹಿಳೆಯರು ಪುರುಷರು ಎಂಬ ಭೇದ ಭಾವ ಇಲ್ಲದೇ ದುಡಿಯಬೇಕಾಗಿದೆ. ದುಡಿಮೆಯ ಸ್ಥಳದಲ್ಲಿ ನಡೆವ ಅನಾಚಾರಗಳು ಆದಿಮಾನವರನ್ನು ಮೀರಿಸುವ ಮುಖಾಂತರ, ದುಡಿವ ಮಹಿಳೆಯರು ಎರಡೆರಡು ಜವಾಬ್ದಾರಿ ಹೊರುವ ಕಾಲಕ್ಕೆ. ಮಹಿಳಾ ಸಮಾನತೆಯ ಪ್ರಶ್ನೆ ಎದ್ದು ನಿಂತಿದೆ. ಇದು ತಪ್ಪಾಗಿ ಕಾಣುವುದಿಲ್ಲ. ಆದರೆ ಈ ವಿಚಾರವನ್ನು ಪುರುಷರು ಮಹಿಳೆಯರು ಎಂದು ವಿಂಗಡಿಸದೇ ಇಬ್ಬರೂ ಸಮಾನರು ಎಂಬ ಭಾವನೆಗಳನ್ನು ಇಬ್ಬರೂ ಹೊಂದಬೇಕಾಗಿದೆ. ದುಡಿದು ತರುವೆನೆಂದಾಕ್ಷಣ ಯಾರು ಹೆಚ್ಚು ಯಾರು ಕಡಿಮೆ ಎನ್ನುವ ಚಿಂತನೆ ಬೇಡ.
ಇಬ್ಬರೂ ದುಡಿಯುತ್ತಿರುವ ಅದೆಷ್ಟೋ ಸಂಸಾರಗಳು ಅನ್ಯೋನ್ಯತೆಯಿಂದ ಕೂಡಿಲ್ಲವೆ. ದುಡಿಯಲರಿಯದ ಅದೆಷ್ಟೋ ಗಂಡಸರು ಹೆಂಡತಿಯ ಸಂಬಳವನ್ನು ಪಡೆದು ದುಡಿಯದೇ ಕುಡಿದು ಬದುಕುತ್ತಿಲ್ಲವೇ. ಇಂದಿನ ದಿನಮಾನಗಳಲ್ಲಿ ಶೋಷಣೆ ಎಂಬುದು ಇಬ್ಬರ ಕಡೆಯಿಂದಲೂ ನಡೆಯುತ್ತಿದೆ. ಸ್ವಾತಂತ್ರ್ಯದ ದುರುಪಯೋಗ ಪುರುಷ ಮತ್ತು ಮಹಿಳೆಯರಿಂದಲೂ ನಡೆಯತ್ತಿದೆ. ನಾವುಗಳು ಎಲ್ಲಿಯವರೆಗೆ ತನ್ನಂತೆ ಪರರು ಎಂದು ಪರಸ್ಪರ ನೆನೆಯುವುದಿಲ್ಲವೋ ಅಲ್ಲಿಯವರೆಗೆ ತರತಮ ಮುಗಿಯದು. ಎಲ್ಲಿಯವರೆಗೆ ನಾನು ನನದೆಂಬ ಹುಚ್ಚು ಭಾವನೆ ಇರುವುದೋ ಅಲ್ಲಿಯವರೆಗೆ ವಿಚ್ಛೇದನ ನಿಲ್ಲದು.
ಎಲ್ಲಿಯವರೆಗೆ ದಾಂಪತ್ಯದಲ್ಲಿ ನಾವು ಪರಸ್ಪರ ಸಹಕಾರಿಗಳು ಪರಸ್ಪರ ಸಹಾಯ ಪಡೆಯಬೇಕಾದವರು. ಪರಸ್ಪರ ಹೊಂದಾಣಿಕೆಯೊಂದಿಗೆ ನಮ್ಮದೇ ಪೀಳಿಗೆ ಬೆಳೆಸಬೇಕಾದವರೂ ಎಂದು ಪುರುಷರು ಮಹಿಳೆಯರು ಅರಿಯುವುದಿಲ್ಲವೋ ಪರಸ್ಪರ ಗೌರವವನ್ನು ಕೊಟ್ಟು ಪಡೆಯುವುದಿಲ್ಲವೋ ಅಲ್ಲಿಯವರೆಗೂ ವಿಚ್ಛೇದನದ ಪಿಡುಗು ಅಳಿಯದು. ಈ ವಿಚ್ಛೇದನದಿಂದಾಗಿ ಮತ್ತೆ ನಾವು ಶಿಲಾಯುಗಕ್ಕೆ ಮರಳುತಿದ್ದೇವೆ ಎನಿಸುತ್ತದೆ. ವಿಚ್ಛೇದನದ ಸಂತ್ರಸ್ತರ ಗೋಳು ತುಂಬಾ ಇದೆ ಅದನ್ನು ಮುಂದೊಂದು ದಿನ ಬರೆಯುವೆ. ಎಲ್ಲಿಯವರೆಗೆ ನಾನು ನಾನೆಂಬ ಭಾವನೆ ನಮ್ಮಲ್ಲಿ ಅಳಿಯದೋ ಅಲ್ಲಿಯವರೆಗೆ ನಾವು ಕೇವಲ ನಗರೀಕರು ನಾಗರೀಕರಲ್ಲ.
ನನ್ನ ಪ್ರಕಾರ ಗಂಡಿಗೆ ಹೆಣ್ಣಿನ ಆಶ್ರಯ ಹೆಣ್ಣಿಗೆ ಗಂಡಿನ ಆಶ್ರಯ ಅತ್ಯಗತ್ಯ. ಉದಾಹರಣೆಗೆ ತಾಯಿ ಅಕ್ಕ ತಂಗಿಯರ ಸಹಾಯ ಇಲ್ಲದೇ ಯಾವ ಗಂಡುಮಗುವು ಸ್ವತಂತ್ರವಾಗಿ ಬೆಳೆಯಲಾರದು. ಯಾವುದೇ ಒಂದು ವಿಚಾರದಲ್ಲಿ ವರ್ಷಕ್ಕೊಮ್ಮೆ ದಿನಾಚರಣೆಯನ್ನು ಆಚರಿಸುವುದಕ್ಕಿಂತ ದಿನ ದಿನವೂ ಆಚರಣೆ ಎಂಬಂತೆ ನಮ್ಮ ನಡೆನುಡಿಯಲ್ಲಿ ಅಳವಡಿಸಿಕೊಳ್ಳಬೇಕಿದೆ. ಮತ್ತೊಮ್ಮೆ ನನ್ನ ಎಲ್ಲಾ ಅಕ್ಕ ತಂಗಿಯರಿಗೆ ಅಮ್ಮಂದೀರಿಗೆ ಸಮಾನ ಮನಸ್ಕರಿಗೆ ಮಹಿಳಾ ದಿನಾಚರಣೆಯ ಶುಭಾಶಯ ಕೋರುವ
ತಮ್ಮವ
ವೈಲೇಶ ಪಿ ಯೆಸ್ ಕೊಡಗು
೮/೩/೨೦೧೮
Comments
Post a Comment