ಸಲಗನಿಗಿಲ್ಲ ಸವಲತ್ತು

ಸಲಗನಿಗಿಲ್ಲ ಸವಲತ್ತು
~~~~~~~~~~~~
ಸಲಗನು ನಾನು ಸಬಲನಾಗಿದ್ದೆ ಅಂದು
ಅಡವಿಯ ಬಡತನಕೆ ಬಡವಾದೆನಿಂದು
ನಮ್ಮ ಕುರಿತು ಯೋಚನೆ ನಿಮಗೇನೆಂದು
ನಾಡಿನ ಫಸಲು ನಾಶವಾಗುತ್ತಿದೆ ತಿಂದು
ಮರೆತಿರುವಿರಿ ನಾವೂ ಜೀವಿಗಳೆಂಬುದು

ಶಾಂತಿಯುತ ಜೀವನ ನಮ್ಮದಾಗಿತ್ತು
ಹಸಿರಿನಿಂದ ವನವೆಲ್ಲಾ ಕಂಗೊಳಿಸಿತ್ತು
ಸಾಲಿಲ್ಲದ ಮರಗಳ ನಡುವೆ ಬಳ್ಳಿಯಿತ್ತು
ಬಳ್ಳಿಗಳೆಡೆಯಲಿ ನಮ್ಮ ಆಹಾರ ಅವಿತಿತ್ತು
ಹಿಂಡಿನ ಜೊತೆ ಉಂಡು ನಲಿಯಬಹುದಿತ್ತು

ನಾಡು ಬೆಳೆಯುತ್ತಾ ಕಾಡು ಅಳಿಯುತಿದೆ
ಕಾಡು ಜೊತೆಗೆ ನಾವೂ ಅಳಿಯುತ್ತಿದ್ದೇವೆ
ಹಲಸು ಹೆಬ್ಬಲಸು ಮರ ಮಾವು ಕಾಡಿನಲಿಲ್ಲ
ಆಹಾರದ ಮರ ಕಡಿದು ಸಾಲು ತೇಗ ನೆಟ್ಟಿರಲ್ಲ
ನಮ್ಮ ಹೊಟ್ಟೆಗೆ ಕಿಂಚಿತ್ತೂ ಉಪಯೋಗವಿಲ್ಲ

ವನದ ಕೆರೆ ಕಟ್ಟೆ ಬತ್ತಿ ನೀರು ಕಾಣೆಯಾಗಿದೆ
ಆಹಾರ ನೀರು ಹುಡುಕುತ್ತಾ ಬಂದರೆ ಏನಿದೆ
ಎಲ್ಲವನು ನೀವೇ ಬಳಸುವುದು ಕಾಣುತ್ತಿದೆ
ನದಿಯ ನೀರು ಎಲ್ಲೆಲ್ಲೋ ಎಗರಾಡುತ್ತಿದೆ
ದಾಹದಿ ಹಿರಿಯರ ಮರಿಗಳ ಸಾವಾಗುತ್ತಿದೆ

ಹೇಳಿ ನಾಡಿಗಲ್ಲದೇ ನಾವು ಮತ್ತೆಲ್ಲಿ ಹೋಗಲಿ
ಇನ್ನೇನು ನಿಮ್ಮಿಚ್ಚೆ ಅನ್ಯಜೀವಿಗಳು ಅಳಿಯಲಿ
ಮನುಜರಷ್ಟೇ ನೆಮ್ಮದಿಯ ಬದುಕು ಸಾಗಿಸಲಿ
ನಮಗೂ ಹಸಿವು ನೀರಡಿಕೆ ಇದೆ ಜ್ಞಾಪಕವಿರಲಿ
ದೇವನು ನಿಮ್ಮಂತೆ ನಮ್ಮ ಸೃಷ್ಟಿಸಿದ ನೆನಪಿರಲಿ

ವೈಲೇಶ ಪಿ ಯೆಸ್ ಕೊಡಗು
೧೫/೩/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ