ಯುಗಾದಿ ಹಬ್ಬ
ಲೇಖನ ಸ್ಪರ್ಧೆಗೆ
ಯುಗಾದಿ ಹಬ್ಬ
~~~~~~~~
ಯುಗಾದಿ ಹಬ್ಬ ಎಂದರೆ ಹೊಸ ವರ್ಷದ ಆಚರಣೆ ಎಂದು ಎಲ್ಲರೂ ಬಲ್ಲವರೇ. ಹಿಂದೆಲ್ಲಾ ಹಳ್ಳಿಗಳಲ್ಲಿ ವ್ಯವಸಾಯದ ಕೆಲಸಗಳನ್ನು ಮುಗಿಸಿದ ಬಳಿಕ ಬಿಡುವಿನ ಸಮಯ ಇದಾಗಿದ್ದು ಹಬ್ಬ ಹರಿದಿನಗಳ ಆರಂಭಿಕ ಹಂತ ಎನ್ನಬಹುದಿತ್ತು. ಏಪ್ರಿಲ್ ೪ ರಂದು ಬರುವ ಹೊನ್ನಾರು ಎಂಬ ಹೊಲ ಗದ್ದೆಗಳಿಗೆ ನೇಗಿಲು ಹೂಡುವ ಹೊಸ ವ್ಯವಸಾಯದ ಪ್ರಾರಂಭದ ಮುನ್ನ ಊರ ದೇವರ ಹಬ್ಬ ಜಾತ್ರೆ ಇವುಗಳ ಪ್ರಾರಂಭಿಕ ಹಂತ ಎನ್ನಲು ಉದಾಹರಣೆ ಮುಂದಿಡುವೆ.
ಯುಗಾದಿ ಹಬ್ಬದ ದಿನ ಬೆಳಿಗ್ಗೆ ಬೇಗ ಎದ್ದು ಎಂದಿಗಿಂತ ವಿಶೇಷವಾಗಿ ಮನೆ ಕೆಲಸದ ಜೊತೆಗೆ ವಿಶೇಷ ರಂಗವಲ್ಲಿ ಹಾಕಿ ಮನೆಯ ಬಾಗಿಲಿಗೆ ಮಾವಿನ ಎಲೆಗಳ ಜೊತೆಗೆ ಬೇವಿನ ಎಲೆಗಳನ್ನು ಬೆರೆಸಿ ತೋರಣ ಕಟ್ಟುವರು. ಸ್ನಾನ ಮಾಡಿ ಮಡಿಯಾಗಿ ಹೊರ ಜಿಲ್ಲೆಯಿಂದ ತಂದು ಮಾರುವಂತಹ ( ಗಮನಾರ್ಹ ಸಂಗತಿ ಎಂದರೆ ಕೊಡಗಿನಲ್ಲಿ ಕಹಿ ಬೇವಿನ ಮರಗಳು ಇಲ್ಲವೇ ಇಲ್ಲ ಎನ್ನುವಷ್ಟು ವಿರಳ) ಕಹಿಬೇವಿನ ಸೊಪ್ಪು ಬೆಲ್ಲ ಬಾಳೆಹಣ್ಣನ್ನು ಸೇರಿಸಿ ತಯಾರಿಸಿದ ಬೇವು ಬೆಲ್ಲವನ್ನು ದೇವರ ಪೂಜೆಗೆ ನೈವೇದ್ಯ ಮಾಡಿ ನಾವು ಸೇವಿಸಿ ತದಾ ನಂತರ ಕಾಫಿ ತಿಂಡಿಯ ಸೇವನೆ ಮಾಡುವುದು ವಾಡಿಕೆ.
ಮನೆಯ ಮಹಿಳೆಯರು ಅಂದಿನ ಮಧ್ಯಾಹ್ನದ ಊಟಕ್ಕೆ ವಿಶೇಷವಾಗಿ ಅನ್ನ ಸಾರು ಪಾಯಸ ಕೋಸಂಬರಿ ಪಲ್ಯ ವಡೆ ಒಬ್ಬಟ್ಟಿನ ಜೊತೆಗೆ ಇನ್ನಿತರ ಖಾದ್ಯ ಪದಾರ್ಥಗಳನ್ನು ತಯಾರಿಸಿ ಮತ್ತೆ ದೇವರಿಗೆ ನೈವೇದ್ಯ ಮಾಡಿ ಊಟದ ತಯಾರಿ ನಡೆಸುತ್ತಾರೆ.
ಬೆಳಿಗ್ಗೆ ೧೦/೧೧ ಗಂಟೆಗೆ ಊರಿನ ಗ್ರಾಮ ದೇವತೆಯ ಜೊತೆಗೆ ಇತರ ದೇವರ ವಿಗ್ರಹ ಇತ್ಯಾದಿಗಳನ್ನು ಜಲಮೂಲ ಅಂದರೆ ಹತ್ತಿರದ ನದಿಯ ದಡದಲ್ಲಿರುವ ನಿಗದಿತ ಸ್ಥಳಕ್ಕೆ ಕೊಂಡೊಯ್ದು ವಿಗ್ರಹವನ್ನು ಇನ್ನಿತರ ಸಂಭಂದಿಸಿದ ವಸ್ತುಗಳನ್ನು ತೊಳೆದು ಮುಳುಗಿಸಿ ಜೊತೆಗೆ ತೊಳೆಯಲು ಹೋದವರು ಸಹ ಮುಳುಗಿ ನದಿಯ ದಂಡೆಯಲ್ಲಿ ಇಟ್ಟು ಅಷ್ಟು ದಿಕ್ಕುಗಳಿಗೆ, ಸೂರ್ಯ ಚಂದ್ರಾದಿ ನೆಲ ಜಲ ವಾಯು ವರುಣ ಇನ್ನಿತರ ಪ್ರಕೃತಿ ಪ್ರಾಣಿಗಳಿಗೆ ವನ್ಯಜೀವಿಗಳಿಗೆ ಪ್ರಾರ್ಥನೆ ಕೋರಿಕೆ ಸಲ್ಲಿಸಿ ಹೋಗಿ ಬರುವ ಹಾದಿಯಲ್ಲಿ ಸಿಗುವ ಎಲ್ಲಾ ದೇವಳಗಳಿಗೂ ಇಡುಗಾಯಿ ಸಮರ್ಪಿಸಿದ ನಂತರ ಊರಿನ ದೇವಾಲಯದಲ್ಲಿ ವಿಗ್ರಹ ಹಾಗೂ ಇನ್ನಿತರ ವಸ್ತುಗಳನ್ನು ಇರಿಸಿ ಮನೆಗೆ ತೆರಳಿ ಮಧ್ಯಾಹ್ನದ ವಿಜ್ರಂಭಣೆಯ ಊಟ ಮುಗಿಸಿ ಅರಾಮಾಗುತ್ತಾರೆ.
ಸ್ವಲ್ಪ ತಂಪಾದ ನಂತರ ಅಂದರೆ ಮೂರು ಗಂಟೆಯ ಹೊತ್ತಿಗೆ ಊರಿನ ಅರಳಿ ಕಟ್ಟೆಯ ಸಮೀಪದಲ್ಲಿ ತೆಂಗಿನಕಾಯಿಗೆ ಕಲ್ಲು ಹೊಡೆಯುವ ಮತ್ತು ತೆಂಗಿನಕಾಯಿ ಕೀಳುವ ಕಾರ್ಯಕ್ರಮ ಇರುತ್ತಿತ್ತು. ತೆಂಗಿನಕಾಯಿ ಕೀಳುವ ಸಮಯದಲ್ಲಿ ಜಗಳಕ್ಕೆ ನಾಂದಿಯಾಗುವ ಕಾರಣದಿಂದ ಬಹುವರ್ಷಗಳ ಹಿಂದೆಯೇ ಅದನ್ನು ನಿಲ್ಲಿಸಲಾಗಿದೆ. ತೆಂಗಿನಕಾಯಿಯನ್ನು ನೆಲದ ಮೇಲೆ ಜುಟ್ಟು ಮೇಲ್ಮುಖವಾಗಿ ನಿಗದಿತ ದೂರದಲ್ಲಿ ಇಟ್ಟು ಕೈಯಿಂದ ಉಂಡೆಕಲ್ಲನ್ನು ಎಸೆದು ತೆಂಗಿನಕಾಯಿ ಒಡೆಯಬೇಕು. ಒಂದು ಎಸೆತಕ್ಕೆ ಇಂತಿಷ್ಟು ಹಣ ಎಂದು ಮೊದಲೇ ನಿರ್ಧಾರ ಆಗಿರುತ್ತದೆ. ತೆಂಗಿನಕಾಯಿ ಯಾರು ಹೊಡೆಯುತ್ತಾರೋ ಅವರಿಗೆ ಸಲ್ಲುತ್ತದೆ. ಹಣ ತೆಂಗಿನಕಾಯಿಯನ್ನು ಪಣಕ್ಕಿಟ್ಟವರಿಗೆ ಸಲ್ಲುತ್ತದೆ. ಇದರ ವಿಚಾರವಾಗಿ ವೈಯಕ್ತಿಕ ಜೂಜು ಕಟ್ಟಿಕೊಳ್ಳುವವರು ಇರುತ್ತಿದ್ದರು. ಈಗ ಇಲ್ಲ ಬಿಡಿ.
ತದಾ ನಂತರ ಯುವಕರು ದೇವರ ಕುದುರೆ ಹೊರತಂದು ಶೃಂಗಾರ ಮಾಡಿ ವಿಗ್ರಹವನ್ನು ಇರಿಸಿ ದೇವರನ್ನು ವಾಹನ ಹತ್ತಿಸುವ ಕಾರ್ಯಕ್ರಮ. ಮರದ ಕುದುರೆಯನ್ನು ದೇವಾಲಯದ ಅಟ್ಟದಿಂದ ಇಳಿಸಿ ಶುಚಿಗೊಳಿಸಿ ಶೃಂಗಾರ ಮಾಡಿ ರಾತ್ರಿ ಊಟದ ನಂತರ ಊರಿನ ಮನೆ ಮನೆಗೆ ಕುದುರೆ ಸಮೇತವಾಗಿ ದೇವರನ್ನು ಹೊತ್ತೊಯ್ದು ಮಡಿಲಕ್ಕಿ ತೆಂಗಿನಕಾಯಿ ಇಡುಗಾಯಿ ಪಡೆದು ನಂತರ ಪುನಃ ದೇವಾಲಯ ಸೇರಿಸಿ ಮನೆಗೆ ಬಂದು ಮಲಗುವಾಗ ರಾತ್ರಿ ಒಂದು ಗಂಟೆಗಳ ಸಮಯ ಆಗಿರುತ್ತದೆ.
ಮಾರನೇ ದಿನ ವರ್ಷದ ತೊಡಕು ಬಾಡೂಟ ಸಾಧಾರಣವಾಗಿ ಎಲ್ಲರ ಮನೆಯಲ್ಲಿ ಇದ್ದರೂ ಪರಸ್ಪರರ ಮನೆಗೆ ಹೋಗಿ ಊಟ ಮಾಡಿ ಬರುತ್ತೇವೆ
ಈ ಮಧ್ಯ ಜೂಜಾಡುವವರು ಆಡುತ್ತಾರೆ. ಬಂದು ಹೋಗುವ ಬಂಧುಗಳು ಇರುತ್ತಾರೆ. ಒಟ್ಟಾರೆ ಮನಸ್ಸು ಮನಸ್ಸುಗಳ ಸಮಾಗಮ ಎಲ್ಲರೂ ಬೆರೆಯುವ ಸಂಗಮ ಹಬ್ಬದ ನೆಪದಲ್ಲಿ ಪರಸ್ಪರ ಬೇಟಿ ನಗು ಮಾತು ತಮಾಷೆ ಜೀವನೋಪಾಯಕ್ಕಾಗಿ ಹೊರಗೆ ವಾಸಿಸುವ ಬಂಧುಗಳ ಆಗಮನ ಎಲ್ಲವೂ ಯುಗಾದಿ ಮತ್ತೆ ಮತ್ತೆ ಬರಲೆಂದು ಮನ ಆಶಿಸುತ್ತದೆ.
*ವೈಲೇಶ ಪಿ ಯೆಸ್ ಕೊಡಗು*
*೧೪/೩/೨೦೧೮*
Comments
Post a Comment