ಕನ್ನಡದ ಬಗ್ಗೆ ಎರಡು ಮಾತುಗಳು

ಮಿತ್ರಾತ್ಮೀಯರೇ ನಾಗರೀಕ ಮಾನವ ಇಂದು ಈ ಮಟ್ಟಿಗೆ ಬೆಳೆಯುವ ಮುನ್ನ ಕಾಡಿನಲ್ಲಿ ಮೃಗಗಳ
ಜೊತೆಗೆ ತಾನೂ ವನ್ಯಮೃಗಗಳಂತೆ ಬೇಟೆಯಾಡಿ ಗೆಡ್ಡೆ ಗೆಣಸು ಪ್ರಾಣಿಗಳ ಮಾಂಸ ಭಕ್ಷಣೆ ಮಾಡುತ್ತಾ ತನ್ನದೇ ಜೀವಕೂ ರಕ್ಷಣೆ ಇಲ್ಲದೇ ಬದುಕುತ್ತಿದ್ದ ಎಂದು ನಾವೆಲ್ಲರೂ ಓದಿ ಕೇಳಿ ಬಲ್ಲೆವು. ಅದೇ ರೀತಿ ಆದಿ ಮಾನವರ ದೇಹ ರಚನೆ ದೇಹದ ಅಂಗಾಂಗಗಳ ರಚನೆ ಕೂಡ ಅಂದಿನ ದಿನಮಾನಗಳಿಗೆ ತಕ್ಕಂತೆ ಇತ್ತು ಎಂಬುದರಲ್ಲಿ ಸಂಶಯವಿಲ್ಲ. ಉದಾಹರಣೆಗೆ ಆದಿ ಮಾನವರು ವಿಶಿಷ್ಟವಾದ ಕೋರೆ ಹಲ್ಲುಗಳನ್ನು ಕೈ ಕಾಲುಗಳ ವಿನ್ಯಾಸ, ವಿಶಿಷ್ಟ ರೀತಿಯ ಗಟ್ಟಿಯಾದ ಉಗುರು ಅದರ ಸಹಜ ಬಳಕೆ ಹೊಂದಿದ್ದರು. ಶಿಲಾಯುಗದ ಕಾಲದಿಂದಲೂ ಮಾನವ ಬೇಟೆಯ ಜೊತೆಗೆ ನಿತ್ಯ ಜೀವನದಲ್ಲಿ ಆಯುಧ ತಯಾರಿಕೆ ಕಲಿಯುವವರೆಗೂ ತನ್ನ ಹಲ್ಲು ಬೆರಳು ಉಗುರು ಜೊತೆಗೆ ಕಲ್ಲುಗಳು ಮರದ ರೆಂಬೆಗಳನ್ನು ಬಳಸಿ ಬೇಟೆಯಾಡಿ ಜೀವನ ಸಾಗಿಸುತ್ತಿದ್ದನು. ಕಾಲಕ್ರಮೇಣ ಆಯುಧ ತಯಾರಿಕೆಯ ಜೊತೆಗೆ ಬೆಂಕಿ ಬಳಸಿ ಬೇಯಿಸಿದ ಅಹಾರ ತಿನ್ನುವ ಹಾಗೂ ತನ್ನ ಸುರಕ್ಷತೆಗಾಗಿ ಪುಟ್ಟ ಗೂಡುಗಳನ್ನು ನಿರ್ಮಾಣ ಮಾಡುವ ಮೂಲಕ ಇಂದಿನ ಈ ಹಂತಗಳನ್ನು ನಿಧಾನವಾಗಿ ತಲುಪಿದ ಎನ್ನಬಹುದು. ಈ ಎಲ್ಲಾ ವಿಚಾರಗಳನ್ನು ನಾವೆಲ್ಲರೂ ತಿಳಿದಿರುವಿರಿ. ಅದರೆ ಈಗ ಹೇಳ ಹೊರಟಿರುವ ವಿಚಾರ ಬೇರೆಯೇ ಇದೆ.

ಸುಮಾರು ಎರಡೂವರೆ ಸಾವಿರ ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆಯ ಕುರಿತು ಕೆಲವು ಮಾತುಗಳು.  ಶತಾಯುಷ್ಯದ ಆಚೀಚೆ ಬದುಕಿದ ಹಲವು ಕವಿಗಳು ರನ್ನ ಪೊನ್ನನ ಶೈಲಿಯ ಜೊತೆಗೆ ಅಂದಿನ ಭಾಷಾ ಸಾಮರ್ಥ್ಯ  ಭಾಷಾ ಶೈಲಿಯು‌ ಕೂಡ ವಿಭಿನ್ನ ಎಂದೇ ಹೇಳಬಹುದು. ಕಾಲ ಕಳೆದಂತೆ ಭಾಷೆಯಲ್ಲಿ ನೂತನ ರೀತಿಯ ಅನೇಕ ಪದವನ್ನು ಸೇರಸುತ್ತಾ ಕ್ಲಿಷ್ಟಕರ ಪದಗಳನ್ನು ಕೈ ಬಿಡುತ್ತಾ ಹಳೆಗನ್ನಡ ನಡುಗನ್ನಡ ಹೊಸಗನ್ನಡ ಎಂಬ ಹೆಸರಿನಿಂದ ಕನ್ನಡ ಭಾಷೆಯ ಮೇಲೆ ಪ್ರಭಾವ ಬೀರುತ್ತಿದೆ. ಈಗ ಒಬ್ಬರು ನನಗೊಂದು ಪುಸ್ತಕ ಕಳುಹಿಸಿರುವರು. ಅದರಲ್ಲಿ ಅವರು ಎಲ್ಲಿಯೂ ಅರ್ಕಾವತ್ತು ೯ ಚಿಹ್ನೆಗಳನ್ನು ಬಳಸದೆ ಸರ್ಕಾರ ಸ್ವರ್ಗ ಸ್ವರ್ಣ ಈ ರೀತಿಯಲ್ಲಿ ಬರೆಯದೇ ಈ ಹಿಂದೆ ಅನೇಕ ಕಡೆಗಳಲ್ಲಿ ಓದಿರುವಂತೆ ಸ್ವರ್ಗ ಬರೆಯಲು ರ ಗೆ ಗ ಒತ್ತು ಕೊಟ್ಟು ಬರೆದಿದ್ದಾರೆ. ಅವರಲ್ಲಿ ಇದರ ಬಗ್ಗೆ ಚರ್ಚಿಸಿದಾಗ ಅರ್ಕಾವತ್ತು ೯ ಚಿಹ್ನೆ ಬಳಸದೇ ಮೂರು ಕೃತಿಗಳನ್ನು ಬರೆದಿರುವೆ ಎಂದು ಸಮಜಾಯಿಷಿ ನೀಡಿದರು. ಜೊತೆಗೆ ೯ ಈ ಚಿಹ್ನೆ ಬಳಸದೇ ಕನ್ನಡದಲ್ಲಿ ಬರೆಯಬಹುದು. ಹಾಗೂ ಕುವೆಂಪುರವರು ಕೂಡ ಎಲ್ಲೋ ಒಂದು ಕಡೆ ೯ ಈ ಚಿಹ್ನೆ ಬಳಕೆಯ ಅಗತ್ಯತೆ ಇಲ್ಲ ಎಂದಿರುತ್ತಾರೆ ಎಂದು ತಿಳಿಸಿದರು. ಇವೆಲ್ಲವೂ ಅದೆಷ್ಟು ಸರಿಯೋ ತಪ್ಪೋ ನನಗೆ ತಿಳಿಯದು.  ಹಾಗೆಯೇ ಇಂದು ಒಂದು ವಾಟ್ಸ್ ಆಪ್ ಬಳಗದಲ್ಲಿ ಋಣ ಋತು ಋಷಿ ಈ ಪದಗಳನ್ನು ಕೂಡ ರುಣ ರುತು ರುಷಿ ಎಂಬಂತೆ ಬರೆಯಬಹುದು ಎಂದರು. ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟಿನಲ್ಲಿ ಕೂಡ ಇದರ ಉಲ್ಲೇಖವಿದೆ ಎಂಬುದು ಅವರ ಸಮಜಾಯಿಷಿ. ಇದೆಲ್ಲವನ್ನೂ ಗಮನಿಸಿದಾಗ ಆದಿಮಾನವನಿಗೆ ಇದ್ದಂತಹ ವಿಶೇಷ ಕೋರೆ ಹಲ್ಲುಗಳನ್ನು ಕಳೆದುಕೊಂಡು ಕೇವಲ ಚಾಕಲೇಟ್ ಮೃದು ಆಹಾರದ ಸೇವನೆಗಷ್ಟೇ ಉಳಿದು ಕೊಂಡಿರುವ ನಮ್ಮ ಹಾಲು ಹಲ್ಲುಗಳಂತೆ ಕನ್ನಡ ಲಿಪಿ ಕೂಡ ಅನೇಕ ಪದಗಳನ್ನು ಅಕ್ಷರಗಳನ್ನು ಚಿಹ್ನೆಗಳನ್ನು ಕಳೆದುಕೊಂಡು ಚಾಕಲೇಟ್ ಬೇಬಿ ಆಗುವ ದಿನ ದೂರವಿಲ್ಲ‌ಎನಿಸುತ್ತದೆ.

ಏನೇ ಆಗಲಿ ‌"ಸಿರಿಗನ್ನಡಂ ಗೆಲ್ಗೇ ಸಿರಿಗನ್ನಡಂ‌ ಬಾಳ್ಗೆ "

ದಯವಿಟ್ಟು ಇದರ ಬಗ್ಗೆ ಅರಿತವರು ಮಾಹಿತಿ ನೀಡಲು ಕಳಕಳಿಯ ಕೋರಿಕೆ.

ತಮ್ಮವನೇ
ವೈಲೇಶ ಪಿ ಯೆಸ್ ಕೊಡಗು
೧೬/೨/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ