ಬರಲಿ ಮಳೆ

ಮಳೆ ಕರೆದಿದೆ ಇಳೆ ಕಳೆಯಲು ಕೊಳೆ
ಕಲ್ಯಾಣ ಮಂಟಪದ ಸುತ್ತಮುತ್ತ ಒಂದು
ಕೈಯಲ್ಲಿ ಮೂಗು ಇನ್ನೊಂದು ಕೈಯಲ್ಲಿ ಸ್ಟೇರಿಂಗು

ಮಳೆಯಿಲ್ಲದೇ ಊರ ಮೋರಿಯಾ ತುಂಬ
ನಿಂತ ನೀರಿಗೆ ಸೊಳ್ಳೆ ತತ್ತಿ ಇಟ್ಟು ಮೈಕೈ ತುಂಬ
ಬಿರಿದೆದ್ದ ಸೊಳ್ಳೆ ಕಚ್ಚಿದೆ ಹೆಗ್ಗುರುತುಗಳು
ಜಗದ ಮನೆ ಮನೆ ಮಂದಿಗೆ ಮಲೇರಿಯಾ
ಡೆಂಗ್ಯೂ ರೋಗಗಳ ಬಿರುಗಾಳಿ ಮಳೆ
ಮಳೆರಾಯ ನೀ ಬಂದೊಮ್ಮೆ ಮೋರಿ ತೊಳೆ

ವನ್ಯಜೀವಿ ಪಶುಪಕ್ಷಿ ಕ್ರಿಮಿಕೀಟಾದಿಗಳಿಗಿಲ್ಲ
ಕುಡಿಯುವ ನೀರು ಕರೆ ಕಟ್ಟೆಗಳ ನೀರು ಬತ್ತಿ
ಜಲಚರಗಳ ಮಾರಣಹೋಮ. ಜಲಚರಗಳೇ
ಆಹಾರವಾದ ಹಕ್ಕಿಪಕ್ಕಿಗಳ ಆಹಾರಾದಿಗೂ
ತಾರಮ್ಮಯ್ಯ ಮಳೆರಾಯ ನೀ ಬಾರಯ್ಯ 

ಹಸಿರೇ ಉಸಿರೆಂದೆನುವ ಹೆಸರು
ಹೆಸರು ಹೇಳಲೂ ಇಂದಿಲ್ಲ ಹಸಿರು
ಮಧ್ಯೆ ಕಾಳ್ಗಿಚ್ಚು ಬೆಂಕಿಯ ಕೊಸರು
ಮೇ ತಿಂಗಳೊಳಗೆ ನಿರ್ನಾಮ ಹಸಿರು 
ಮಳೆರಾಯ ಬೇಗ ಬಂದೊಮ್ಮೆ ಒಸರು

ಸಕಲ ಚರಾಚರಗಳಿಗೂ ಮೂಲ ಉಸಿರು
ಉಸಿರ ವಾಯುವಿಗೆ ಮೂಲ ಹಚ್ಚಹಸಿರು
ಮೇಘಗಳೆ ಬೇಗನೇ ತುಂಬಿಕೊಂಡು ಬಸಿರು
ಧರೆಯ ತಣಿಸಿ ಕಾದಿದೆ ಇಳೆ ಹಿಡಿದು ಉಸಿರು
ನೀನಲ್ಲದೇ ಮತ್ಯಾರು ತರಲಾರರು ಧರಣಿಗೆ
ತುಂಬು ಪ್ರೇಮದಿ ನಿರಂತರ ಹಸಿರ ಉಸಿರು

ವೈಲೇಶ ಪಿ ಯೆಸ್ ಕೊಡಗು
22/2/2017

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ