ಗಝ಼ಲ್ : ೧೫

ಗಝ಼ಲ್: ೧೫
~~~~~~~~
ಮನವೇ ನಿನ್ನೊಲವ ಸವಿ ಭಾವಗಳು ಏನೆಂಬುದು ಗೊತ್ತಿರಲಿಲ್ಲ.
ತನುವ ಮೋಹಿಸಿ ಮೋಸ  ಮಾಡುವೆಯೆಂಬುದು ಗೊತ್ತಿರಲಿಲ್ಲ. 

ಜಗದೊಳಗೆ ಮೋಸ ಕಪಟ ದುರುಳತನ ತುಂಬಿ‌ ತುಳುಕುತಿದೆ ನಿಜ.
ಹೂವಿನಂತಹ ಪ್ರೀತಿಯಲಿ ಅಡಗಿದ ವಂಚಕತನವದು ಗೊತ್ತಿರಲಿಲ್ಲ.

ಹೆತ್ತೊಡಲ ನೋವು ನಲಿವು ಸಂಕಟವನ್ನರಿಯದ ಜಗದ ಜನರಿಲ್ಲ.
ಜಗದೇಕ ಅಪ್ಪನ ಅನುದಿನದ ತ್ಯಾಗ ಕಡು ಕಷ್ಟವದು ಗೊತ್ತಿರಲಿಲ್ಲ.

ಸಾಧನೆಯ ಹಾದಿಯಲಿ ಮೈ ಮುರಿಯದೆಲೆ ಜಯ ದೊರಕುವುದಿಲ್ಲ.
ಸಾಧಿಸಿದ ಬಳಿಕ ಮೈಯ ಮರೆತರೆ ನಿಂತಲ್ಲೇ ನಿಲ್ಲುವುದು ಗೊತ್ತಿರಲಿಲ್ಲ.

ನಗುಮೊಗದ ಹಿಂದೆ ನಾವರಿಯದ ಅನಂತ ನೋವಿರುವುದ ಅರಿತಿರುವೆ.
ಉಪಕಾರಕ್ಕಿಂತ ಅಪಾಯ ತರುವ ಮುಖವಾಡವಿರುವುದು ಗೊತ್ತಿರಲಿಲ್ಲ.

ಪ್ರೇಮವೇ ತುಂಬಿದೆಯೆಂದರಿತ ಸುಂದರ ಸುಮಗಳು ಇರುವುದನು ಬಲ್ಲೆ.
ನವ ಕುಸುಮಗಳು ನಿತ್ಯವೂ ಅರಳುತಲೇ ಬಿಕ್ಕುತ್ತಿರುವುದು ಗೊತ್ತಿರಲಿಲ್ಲ. 

ಹಸಿವಿನೊಳು ಅಳುವ ಕಂದನ ಕರೆಗೆ ಓಗೊಡದಿರೊ ಅಮ್ಮ ಇರುವುದಿಲ್ಲ
ಅಮ್ಮ ಎತ್ತಿಕೊಂಡು ಮುದ್ದಿಸಿದ ಮಗುವ ನಗುವ ಬೆಲೆಯದು ಗೊತ್ತಿರಲಿಲ್ಲ

ಬಾಳೆಂಬ ಸಾಗರದಿ ಸಾಗುತಿಹ ನೌಕೆಯಲಿ "ಸಿಡಿಲು"ನಿಗೇನೂ ಚಿಂತೆ ಇರಲಿಲ್ಲ.
ಮಧು ಬಟ್ಟಲಲಿ‌ ಮುಳುಗಿದ ಪ್ರೇಮ ವಂಚಿತಗೆ ಚಿಂತೆ ಇರುವುದು ಗೊತ್ತಿರಲಿಲ್ಲ

ವೈಲೇಶ ಪಿ ಯೆಸ್ ಕೊಡಗು
೧೭/೨/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ