ಜಗದ ಕಾರಣ
ಮೂಡಲೂರಿನ ರವಿ ಕಂಡಂತೆ ಕವಿ
ರವಿ ಕಾಣದ್ದು ಕವಿ ಕಂಡನೆಂಬುವರು
ನಿತ್ಯ ರವಿ ಬಾರದಿರೆ ಕವಿಕಿವಿಗಳೆಲ್ಲಿಹರು
ರವಿತೇಜದಲ್ಲಡಗಿಹುದು ಚರಾಚರ ತವರು
ಅನುದಿನವು ಪಥವ ಬಿಡದ ರವಿ
ಹೊಸ ಜೀವ ಹೊಸ ಭಾವ ಜಡಚೇತನಕ್ಕೀವ
ಭಾನಿಗೊಂದು ಭೂಷಣ ಧರೆಗೀತನೇ ವಿಭೂಷಣ
ರವಿಯಾಗಮನ ಅಗತ್ಯ ಜಗದ ಸಕಲ ಕಾರಣ
ಮೂಡಣದರಮನೆಯ ರವಿರಾಜ
ಚೆಲ್ಲುತಾ ಬಂದನಾ ರವಿಕಿರಣ ತೇಜ
ನೆಲಮುಗಿಲ ಮಿಲನಕೆ ಸಾವಿರ ರಂಗು
ಕೆಸರ ಕಮಲಕೆ ಮೈದಡವಿದಾ ಗುಂಗು
ಮಂಜಿನ ನಿವಾರಣೆಗೆ ಇಲ್ಯಾರ ಹಂಗು
ಆವಿಯಾಗಿಸಿ ಮುಗಿಲಿಗೆಸೆದನಾ ಅದಿತಿ
ದಟ್ಟ ಕಾನನದಿ ಕತ್ತಲು ಬೆಳಕಿನಾಟ
ಕುಕಿಲ ಕೂಜನದ ಗಾನ ರಸದೂಟ
ಕಾಡುಮೇಡುಗಳಂಗಳದ ಪಸಿರು ಪಚ್ಚೆಯು
ಧ್ಯುತಿಸಂಶ್ಲೇಷಣೆಗೆ ರವಿಯ ನಿರೀಕ್ಷೆಯು
ಎದ್ದು ಬಾರಯ್ಯ ರವಿ ನಿಮಗೆ ಸುಪ್ರಭಾತವು
ಬಂದನಾ ಬಂದನಾ ಭಾನರವಿ ಬಂದನಾ
ಬಂದವನೇ ಬಾಚಿ ತಬ್ಬಿದನಾ ಭೂದೇವಿ ತನುವನಾ
ಮತ್ತೆ ಮುತ್ತಿಕ್ಕಿದನಾ ಸಪ್ತ ಸಾಗರದೊಡಲ
ರವಿಯ ಕಾವಿಗೆ ತಲ್ಲಣಿಸಿದ ಕಡಲ
ಜಲವು ಜಿಗಿಯಿತು ಮೇಘದೊಡಲ
ಇಂತಿಪ್ಪ ರವಿಗೂ ವೈರಿಗಳ ಅತೀ ಕಾಟ
ಕಾಲಕಾಲಕೆ ಮೇಘದೊಡನೆ ಕಾದಾಟ
ತಪ್ಪದು ರವಿಗೂ ಓಝೋನ್ ಕಿರಣದಾಟ
ಕಡಲತಡಿಯ ಮರೆಯಲ್ಲಡಗಿ ಮೆಲ್ಲನೆ
ಮರೆ ಮರೆ ಮರೆಯಾಗುತಲಿಹನಾ ರವಿ
ವೈಲೇಶ ಪಿ ಯೆಸ್ ಕೊಡಗು
24/02/2017
Comments
Post a Comment