ಸ್ಪರ್ಧೆಗಾಗಿ
ಸ್ಪರ್ಧೆಗಾಗಿ
''''''''''''''''''''''''''''
ನೌಕರಿ ಬೇಟೆ
~~~~~~~
ಇದೀಗ ತಾನೇ ಪದವಿ ಮುಗಿಸಿದೆ. ಅಪ್ಪ ಅಮ್ಮನ ಹೆಗಲಿನ ನೊಗಕ್ಕೆ ಹೆಗಲು ಕೊಡುವ ಜವಾಬ್ದಾರಿ ನನ್ನ ಮೇಲಿದೆ. ತಂಗಿಯ ಮದುವೆಯ ಜವಾಬ್ದಾರಿ ಕೂಡ ಜತೆಗೂಡಿದೆ. ಪದವಿಯ ಪತ್ರದ ಜೊತೆಗೆ ಹುದ್ದೆಯ ಅರಸುತ್ತಾ ಸಾಗಿದೆ. ಸಧ್ಯಕ್ಕೆ ಇರಲೆಂದು ಅಟೋ ಓಡಿಸುತ್ತಿದ್ದೆ. ಏನಿಲ್ಲವೆಂದರೂ ನೌಕರಿ ಬೇಟೆಗೆ ಅರ್ಜಿ ಗುಜರಾಯಿಸಲು ನೌಕರಿಯ ಸಂದರ್ಶನದಲ್ಲಿ ಭಾಗವಹಿಸಲು ಇನ್ನಿತರ ಸ್ವಂತ ಖರ್ಚು ವೆಚ್ಚಗಳಿಗಾಗಿ ಅಪ್ಪ ಅಮ್ಮನ ಬಳಿ ಕೈಚಾಚುವುದು ತಪ್ಪಿದೆ. ಮೊದಲ ಬಾರಿಗೆ ಬೆಂಗಳೂರಿನ ಅದಾವುದೋ ಕಂಪನಿಯಲ್ಲಿ ಸಂದರ್ಶನದಲ್ಲಿ ಭಾಗವಹಿಸಿದಾಗ ಸಂದರ್ಶನದ ಬದಲು ಇತರ ದರ್ಶನದ ಬಗ್ಗೆ ಅರಿವಾಯಿತು. ನಮ್ಮೂರಿನ ರಾಜಕೀಯ ನಾಯಕರು ನೀಡಿದ ಪರಿಚಯ ಪತ್ರ ಕಿಸೆಯೊಳಗೇ ಕುಳಿತಿತ್ತು. ಪರಿಚಯ ಪತ್ರ ಕೊಟ್ಟರೆ ಏನಂದುಕೊಳ್ಳುವರೋ ಎಂದು ಕೈ ನಡುಗಿ ಮೈ ಬೆವರಿತ್ತು. ಉತ್ತಮ ಪ್ರಶ್ನೋತ್ತರ ನಡೆದು ಭರವಸೆ ಮೂಡಿ ಮನೆಯ ಹಾದಿ ಹಿಡಿದೆನು. ತಿಂಗಳ ನಂತರ ತಂಗಳು ಸುದ್ದಿ ಅದಾಗಲೇ ಆ ಹುದ್ದೆ ಬಿಕರಿಯಾಗಿತ್ತು.
ಆಟೋ ಓಡಿಸಿ ಗಳಿಸಿದ ಅಮೂಲ್ಯ ಹಣವದು ವ್ಯರ್ಥವಾಗಿ ಖರ್ಚಾಗಿತ್ತು. ಛಲಬಿಡದೆ ಮತ್ತೊಂದು ಸಹಕಾರಿ ಸಂಸ್ಥೆಯ ಸಂದರ್ಶನಕೆ ಆಹ್ವಾನ ಬಂತು. ನಮ್ಮೂರಿನಿಂದ ಮೂರು ಬಸ್ಸು ಬದಲಾಯಿಸಿ ಕರಾವಳಿಯ ನಗರಕ್ಕೆ ತೆರಳಿದ್ದೆ. ಹೇಗೆ ಹೋದರೂ ಹತ್ತು ಗಂಟೆಗೆ ಸಂದರ್ಶನ ಸ್ಥಳಕ್ಕೆ ತಲುಪಲಾರದ ಕಾರಣಕೆ ದಿನ ಮುಂಚಿತವಾಗಿ ಹೋಗಿ ವಸತಿ ಗೃಹ ಒಂದರಲ್ಲಿ ಕೊಠಡಿ ಪಡೆದು ಮಲಗಿ ಸರಿಯಾದ ಸಮಯಕ್ಕೆ ಸಂದರ್ಶನದಲ್ಲಿ ಭಾಗವಹಿಸಿದ್ದೆ. ಆದರೇನು ದಾಖಲೆಗಳನ್ನು ಪರಿಶೀಲಿಸಿ ಆ ಪತ್ರ ಸರಿ ಇಲ್ಲ. ಈ ಪತ್ರದ ಅವಧಿ ಮುಗಿದಿದೆ ಎಂಬ ಸಿದ್ದ ಉತ್ತರ ದೊರಕಿತು. ಸರಿ ನನ್ನದು ತಪ್ಪಾಗಿದೆ ಎಂದು ಭಾವಿಸಿ ಅವಧಿ ಮುಗಿದಿದ್ದ ಪತ್ರದ ಮರು ಸಕ್ರಿಯ ಕಾರ್ಯ ಮುಗಿಸಿಕೊಂಡು ತಯಾರಿರಿಸಿಕೊಂಡೆ. ಮುಂದಿನ ಎರಡು ಮೂರು ಸಂದರ್ಶನದಲ್ಲಿ ಇದೇ ರೀತಿಯ ಬೇಸರ ತರಿಸುವ ಬೇರೆ ಬೇರೆ ಕಾರಣದಿಂದ ಆಯ್ಕೆ ಆಗಲಿಲ್ಲ. ದೂರದ ಸಂಬಂಧಿ ಅಣ್ಣ ಅವರ ಕೃಪೆಯಿಂದ ಬೆಂಗಳೂರು ಸೇರಿದೆನಣ್ಣ. ಐಚ್ಛಿಕ ವಿಷಯಕ್ಕೂ ಮಾಡುವ ಕೆಲಸಕ್ಕೂ ಅಜಗಜಾಂತರ
ಮನ ಬಯಸಿದ ಕೆಲಸ ಸಿಗದೆ ಅಸಂತೋಷ. ಇರುವ ಕೆಲಸದ ಜೊತೆಯಲ್ಲಿ ಬೇರೆ ಕೆಲಸ ಹುಡುಕುವ ಕೆಲಸ ಮುಂದುವರೆಯಿತು. ಗೆಳೆಯರ ಸಹಾಯದಿಂದ ಮನ ಒಪ್ಪಿದ ಕೆಲಸ ದೊರೆಯಿತು. ವರ್ಷಗಳು ಮೂರು ಕಳೆದರೂ ಅನಿಶ್ಚಿತತೆ ಮುಂದುವರೆಯಿತು. ಈಗಲೂ ಉತ್ತಮ ಕೆಲಸದ ಹುಡುಕಾಟ ಮುಂದುವರೆದಿದೆ.
ವೈಲೇಶ ಪಿ ಯೆಸ್ ಕೊಡಗು
೧/೨/೨೦೧೮
Comments
Post a Comment