ಮನದಾಳದ ಮಾತು ಭಾಗ 05 ದೇಶಪಾಂಡೆ ಅಣ್ಣ

ಮನದಾಳದ ಮಾತು ಭಾಗ 05
=======%%%%%%=======

ಮಿತ್ರಾತ್ಮೀಯರೆ ನನ್ನ ಗೀತೆ ನನ್ನವರ ಗಾಯನ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಮ್ಮ ತಂಡದ ಸಿದ್ರಾಮ ಹೊನ್ಕಲ್ ಇವರ ಕವಿತೆಯನ್ನು ಮೆಚ್ಚಿ
ಬರೆದ ಬರಹಕ್ಕೆ ತಾವೆಲ್ಲರೂ ನೀಡಿದ ಪ್ರೋತ್ಸಾಹ ಉತ್ಸಾಹಧಾಯಕವಾಗಿತ್ತು. ತಮಗೆಲ್ಲರಿಗೂ ತಿಳಿದಿರುವ  ಹಾಗೆ ಧ್ವನಿಸುರುಳಿಯಲ್ಲಿರುವ ಹಾಡಿಗಳಿಗೆ ಉತ್ತಮ 
ಪ್ರತಿಕ್ರಿಯೆ ದೊರತಿದೆ.

ಸಾಹಿತ್ಯಾಸಕ್ತರೆ ನಮ್ಮ ತಂಡದಿಂದ ಇನ್ನೂ ಹೆಚ್ಚಿನ ದ್ವನಿಸುರುಳಿಯ ಪ್ರಕ್ರಿಯೆಯ ಅಗತ್ಯವಿದೆ.  ಅದಕ್ಕೆ  ತಮ್ಮೆಲ್ಲರ ಸಹಾಯ ಅಗತ್ಯ ನನ್ನ ಗೀತೆ ನನ್ನವರ ಗಾಯನದ ಮೂಲ ದ್ವನಿಸುರುಳಿಯು ನಮ್ಮ ತಂಡದ ಎಲ್ಲರ ಬಳಿ ಸಿಗುತ್ತದೆ ಸಣ್ಣ ಮೊತ್ತದ ಪಾವತಿ ಅಗತ್ಯವಿದೆ.

ಈ ಮನದಾಳದ ಮಾತು 05 ರಲ್ಲಿ ಸನ್ಮಾನ್ಯ ಎಂದರೆ ಕಡಿಮೆಯೇ ಏಕೆಂದರೆ ಕರುನಾಡ ಮಣಿಮುಕುಟ ಬೀದರಿನ ಸಾಹಿತ್ಯ ಲೋಕದ ಅಪ್ಪಾಜಿ ಖ್ಯಾತನಾಮರು ಆದ  M G deshpande ಸರ್ ಇವರ ಕವಿತೆ   ಬಾಳು                  
ಇದರ ಬಗ್ಗೆ ನನ್ನ ಮನದಲ್ಲಿ ಮೂಡಿದ ಭಾವನೆಗಳನ್ನು ಬಿಚ್ಚಿಡುವ ಮುನ್ನ  ನಿಜವಾಗಿಯೂ  ಇದು ಹೊಗಳಿಕೆ ಅಲ್ಲ ವಾಸ್ತವ. ಮಾನ್ಯ ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ ಸರ್ ಬೀದರಿನ ಸಹಕಾರ ಬ್ಯಾಂಕಿಂಗ್ ವ್ಯವಸ್ಥೆಯಡಿ ದುಡಿದವರು

ತಮ್ಮ 20ರ ಬಾಲ್ಯದಿಂದಲೇ ಕವಿತೆ, ಕಥೆ, ಚಿಂತನೆ, ವಚನ,ಅಂದಿನ ಕಾಲದಲ್ಲಿ 'ಕನ್ನಡಾಂಭೆ' ವಾರಪತ್ರಿಕೆ  'ಖ್ಯಾತಿ'ಎಂಬ ಕಲ್ಲಚ್ಚಿನ ಕನ್ನಡ ಕೈ ಬರಹ ಪತ್ರಿಕೆ, ಸಂಪಾದಕೀಯ, ಕಾದಂಬರಿ, ಧಾರಾವಾಹಿ, ಪ್ರಶ್ನೋತ್ತರ,ಬೀದರ್ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಕುರಿತು ಚಿತ್ರಸಮೇತ ಲೇಖನಗಳನ್ನು, ಚುಟುಕು,ಭಕ್ತಿಗೀತೆಗಳು,ಶಿಶುಕವನಗಳು,ಇನ್ನೂ ಅನೇಕ ಮಾದರಿ ಬರಹಗಳು ಇವರ ಕೃತಿಗಳು ಸುಮಾರು 70ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವವರು.

ಇವರು ದ್ವಿತೀಯ ಪಿಯುಸಿ ಓದುತ್ತಿರುವಾಗಲೇ ಬರೆದ ಕವಿತೆಯೊಂದಕ್ಕೆ ಅವರ ಅಭಿಮಾನಿಯೊಬ್ಬರು ರಾಗ ಸಂಯೋಜಿಸಿ ಬೀದರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಬಹು ಭಾಷಾ ಕವಿಗೋಷ್ಠಿಯ ಸಂದರ್ಭದಲ್ಲಿ ವೇದಿಕೆಯಲ್ಲಿ  ಇವರಿಗರ್ಪಿದ್ದಾರೆ.
ಬರೆದರೆ ಇವರ ಹಿರಿಮೆ ಸಾವಿರ ಪುಟಗಳು ಸಾಲದು ಒಟ್ಟಿನಲ್ಲಿ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಸಾಹಿತ್ಯದಲ್ಲಿ ಇವರರಿಯದ ಪ್ರಾಕಾರವೇ ಇಲ್ಲ ಅನಿಸುತ್ತದೆ.

ಇಂತಹ ಮಹಾನ್ ಸಹೃದಯತೆ ತುಂಬಿದ ವ್ಯಕ್ತಿಗಳು ನನಗೆ ಫೇಸ್ಬುಕ್ಕಿನಲ್ಲಿ ಗೆಳೆಯರಾಗಿರುವುದು ನನ್ನ ಹೆಮ್ಮೆ.  ಅವರ ಮನೆ ಎಂದರೆ ಅದು ಜ್ಞಾನದೇಗುಲ ಪ್ರಶಸ್ತಿಗಳ  ಆಗರ ಅಷ್ಟೇ ಅಲ್ಲ ತಾನಷ್ಟೇ ಪ್ರಶಸ್ತಿ ಪಡೆದರೆ ಸಾಲದೆಂದು ಎಂ ಜಿ ದೇಶಪಾಂಡೆ ಹೆಸರಿನ ಪ್ರತಿಷ್ಠಾನವನ್ನು ಸ್ಥಾಪಿಸಿ ರಾಜ್ಯದ ವಿವಿಧೆಡೆಗಳಲ್ಲಿ ಪ್ರತಿಭಾವಂತರನ್ನು ಗುರುತಿಸಿ ರಾಜ್ಯ ಪ್ರಶಸ್ತಿ ನೀಡಿರುತ್ತಾರೆ. ಅದರಲ್ಲಿ ನಾನು ಕೂಡ ಒಬ್ಬ ಎಂಬ ಹೆಮ್ಮೆ ಎನಗಿದೆ.

ಇವರ ಒಂದು ಕವನ ನನ್ನ ಗೀತೆ ನನ್ನವರ ಗಾಯನ ಕಾರ್ಯಕ್ರಮದಲ್ಲಿ  ಹಾಡಾಗಲು ಕಾರಣರಾದ ಸಂಚಾಲಕರಾದ ಶ್ರೀ ಪ್ರಕಾಶ್ ಅಂಬರಕರರು, ರೋಟರಿ ಕ್ಲಬ್ ಚಿಮಣಿ ಹಿಲ್ ಸಾರಥಿ ಮಿತ್ರಾತ್ಮೀಯರಾದ ಶಶಿಕಾಂತರಾವ್, ಬೊಮ್ಮಣ್ಣರು ಆಡಳಿತ ವರ್ಗಗಳು, ಸಾಪ್ಟ್ ವೇರ್ ಇಂಜಿನಿಯರ್ ಆದ ರಾಜ್ ಆಚಾರ್ಯ, ಗಾಯಕಿಯರು ರಾಗಸಂಯೋಜಿಸಿದ ಸಂಧ್ಯಾಲಕ್ಷ್ಮೀಯವರು ತಾಳಮೇಳಗಳ ಕೂಟಗಳು ಧ್ವನಿ ನೀಡಿದವರಲ್ಲರಿಗೂ ವಂದನೆಗಳು ಅಭಿನಂದನೆಗಳು.

ಈಗ  ಚಿಂತನ ಗಮನಿಸೋಣ.

ಬದುಕು ನಿನ್ನ ಕರದಲ್ಲಿದೆ ಮಾಡಬೇಡ ಹಾಳು
ಶಿವನ ನಿತ್ಯ ಭಜಿಸು ಮಾಡು ಹಸನಾದ ಬಾಳು

( ಈ ಸಾಲುಗಳಲ್ಲಿ ಬದುಕನ್ನು ಒಳಿತು ಕೆಡುಕುಗಳ ಕಡೆಗೊಯ್ಯುವ ಸಾಮರ್ಥ್ಯ ನಮ್ಮ ಕೈಯಲ್ಲಿಯೇ ಇದೆ ಭಕ್ತಿಭಾವದಿಂದ ಸಾತ್ವಿಕ ಬದುಕು ಬದುಕಿದರೆ ಜೀವನದ ಸಕಲವನ್ನು ಗೆಲ್ಲಬಹುದಾಗಿದೆ ಎಂಬ ಭಾವವಿದೆ)

ಗುಲಾಬಿ ಕೆಳಗೆ ಮುಳ್ಳು ಆದರೂ ಅರಳಿದೆ
ಆನಂದ ನೀಡುತ್ತಿದೆ ದುಃಖ ತಾನು ಹೇಳದೆ
ಹಸಿರ ಮರವ ನೋಡು ಬಿಸಿಲಲ್ಲಿ ಬೆಳಗಿದೆ
ಬಂದ ಜನರಿಗೆಲ್ಲ ನೆರಳು ಹಣ್ಣು ನೀಡಿದೆ
ಇನಿತು ಕಷ್ಟಕೆ ನೀನೇಕೆ ಹೇಳುವೆ ಗೋಳು

( ಈ ಸಾಲುಗಳಲ್ಲಿ ಪ್ರಕೃತಿಯ ಪ್ರತಿ ಗಿಡಮರಗಳು ಸಹ ನೋವನ್ನುಂಡು ನಗುನಗುತ್ತಾ ತನ್ನ ಪಾಲಿನ ಕರ್ತವ್ಯವನ್ನು ಮಾಡುತ್ತಿವೆ ಮಾನವರು ಮಾತ್ರ ಕಡ್ಡಿ ಗುಡ್ಡ ಮಾಡಿಕೊಂಡು ಗೋಳಾಡುತ್ತಿದ್ದಾರೆ ಇದು ಅಗತ್ಯವೇ ಎಂಬರ್ಥವಿದೆ)

ಜಲವು ಪಂಕದಲ್ಲಿದ್ದರೂ ತಿಳಿಯಾಗಿ ಹರಿದಿದೆ
ಜೀವ ಸಂಕುಲಕ್ಕೆ ತಾನು ದಾಹ ನೀಗಿಸಿದೆ
ಕೋಗಿಲೆ ತಾನೇನು ಪಡೆಯದೆ ಹಾಡಿದೆ
ಕುಹೂ ಕುಹೂ ಎಂದು ಸಕಲರ ಮನವ ತಣಿಸಿದೆ
ನೀನೇಕೆ ಲೋಭಿಯಾದೆ ಎಲೆ ಮನುಜ ಹೇಳು

( ಕಡು ಕೆಸರಿನ ಮೇಲೆ ತಿಳಿಯಾಗಿ ನೀರು ಹರಿಯುತ್ತಿದೆ. ಪಶು ಪಕ್ಷಿಗಳು ಸಹ ಯಾವ ಕಾಮನೆಗಳಿಲ್ಲದೇ ತನ್ನ ಪಾಲಿನ ಕರ್ತವ್ಯ ಮಾಡುತ್ತಿವೆ  ಮಾನವನ ಹೊರತು ಜಗದ ಜೀವ ಸಂಕುಲವು ಯಾವ ಮೋಹವಿಲ್ಲದೇ ಸಕಲರಿಗೂ ಒಳ್ಳೆಯದು ಬಯಸಿವೆ ಮನುಜರು ಮಾತ್ರ ಸ್ವಾರ್ಥದ ಲೋಭಿಯಾಗಿ ಬಾಳುತ್ತಿದ್ದಾರೆ ಎಂಬ ಭಾವ. )

ಸಂತ ಶರಣರು ಈ ಲೋಕವೇ ಬೆಳಗಿದರು
ತಮದೆಲ್ಲವ ತ್ಯಾಗಿಸಿ ಆನಂದವ ನೀಡಿದರು
ನಿಸರ್ಗದ ಐಸಿರಿಯು ಜಗಕೆ ತಾ ಅರ್ಪಿಸಿದೆ
ನೀನು ಲೋಕಕಾರ್ಯದಲಿ ಮುಂದಾಗಬೇಕಿದೆ
ಮಾಣಿಕ್ಯ ವಿಠಲತ ಸ್ಮರಿಸು ಆಗಲಿ ಸುಬಾಳು.

( ಅನಾದಿ ಕಾಲದಿಂದ ಋಷಿ ಮುನಿಗಳು ಸಂತ ಶರಣರು ತ್ಯಾಗ ಮನೋಭಾವದಿಂದ ಆನಂದವನ್ನು ಹಂಚುತಿರುವರು. ಪ್ರಕೃತಿಯು ಸಹ ತನ್ನ ಪೂಜಿಸುವವರನ್ನೂ ನೋಯಿಸಿದವರನ್ನೂ ಏಕ ಪ್ರಕಾರವಾಗಿ ಕಂಡು ನಮ್ಮ ಬಾಳಿಗೆ ನೀಡುವ ಕೊಡುಗೆ ಕಡಿಮೆಯೇನಲ್ಲ
ಮಾನವರೇ ತಾವು ಕೂಡ ಭಗವಂತನ ಸ್ಮರಣೆಯೊಂದಿಗೆ ಲೋಕಕಾರ್ಯಕ್ಕೆ ಅನುವಾಗಬೇಕಾದ ಅಗತ್ಯವಿದೆ ಆಗ ಮಾತ್ರವೇ ಸುಂದರ ಬಾಳುವೆ ಸಾಧ್ಯ ಎಂದಿದ್ದಾರೆ ಹಿರಿಯ ಸಹೃದಯಿ ಸಾಹಿತಿಗಳಾದ ಶ್ರೀ M.G. Deshpande
ಬೀದರಿನ ಸಾಹಿತ್ಯ ಲೋಕದಲ್ಲಿ ಅಪ್ಪಾಜಿ ಖ್ಯಾತನಾಮರು.)

ಎಂದೆಂದಿಗೂ ಕನ್ನಡಮ್ಮನ ಸೇವೆಯಲಿ
ತಮ್ಮೆಲ್ಲರ
ವೈಲೇಶ ಪಿ ಯೆಸ್
ವಿರಾಜಪೇಟೆ 
ದ. ಕೊಡಗು
3/1/2017

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ