ದವಾಖಾನೆ
ದವಾಖಾನೆ
~~~~~~~
ದವಾಖಾನೆ ಎಂದರೆ ದೇಗುಲ
ಅದೇನು ನಮ್ಮಮ್ಮನ ಮಡಿಲ
ಹತ್ತಿಳಿದಿರಬೇಕು ನೀವೊಂದ್ಸಲ
ಮತ್ತೆ ಮಲಗಿರಬೇಕು ಕೆಲ ಕಾಲ
ನಾಕದ ನರಕದ ದರ್ಶನ ಸಕಲ
ದೇವತೆಗಳ ವಾಸದ ಗುರುಕುಲ
ಹುಟ್ಟಿದ ಲೆಕ್ಕಪತ್ರ ಬ್ರಹ್ಮನ ಬಲ
ಸಾವು ಯಮನಿಗೆ ಅಳತೆಗೋಲ?
ಜಗದ ಜನರೆಲ್ಲ ಒಂದೇ ಜಾತಿ ಇಲ್ಲಿ
ರೋಗವೊಂದೆ ಮಾನದಂಡಗಳಿಲ್ಲಿ
ಹೆರಿಗೆಯ ಸಮಯದ ನಿರೀಕ್ಷೆಯಲ್ಲಿ
ಭೇದ ಭಾವವಿಲ್ಲ ನೋವು ನಲಿವಿನಲ್ಲಿ
ಯಾರನ್ನೂ ಯಾರೂ ರಕ್ಷಿಸಲಾರರಿಲ್ಲಿ
ವೈದ್ಯರ ಭರವಸೆಗೆ ಜಗದೀಶ ನಕ್ಕನಲ್ಲಿ
ಪರಿಸ್ಥಿತಿ ಹದಮೀರಿ ವೈದ್ಯರು ಕೈ ಚೆಲ್ಲಿ
ಕ್ಷಮಿಸಿ ಎಂದು ಕೊರಗುತ್ತಾ ನಡೆದರಲ್ಲಿ
ಅರಿಯದಾದೆವು ನಮ್ಮ ಅಳತೆಗೋಲು
ತಡೆಯದಾದೆವು ಮಿತಿ ಮೀರಿದ ಪಾಲು
ಇಲ್ಲಿಯೇ ಇರಲೆಂದು ಬಂದವರು ಯಾರು
ಮುಗಿಸಿ ಹೊರಡಲೇಬೇಕು ನಮ್ಮ ದರ್ಬಾರು
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೮/೧೨/೨೦೨೭
Comments
Post a Comment