ಕತ್ತಲು ಬೆಳಕು
ಕತ್ತಲು ಬೆಳಕು
~~~~~~~~
ಚುಮು ಚುಮು ಚಳಿಯಲ್ಲಿ
ಘಮ ಘಮ ಹೂ ಕಂಪಿನಲಿ
ಹಾಲು ಚೆಲ್ಲುವ ಬೆಳದಿಂಗಳಲಿ
ಹಾದಿ ಗುಂಟ ನಡೆದಿದ್ದೆ ನಾನಲ್ಲಿ
ರವಿಯ ಕಿರಣಗಳ ಸ್ಪರ್ಶದಾಸೆಗೆ
ಮಂಜಿನ ಹನಿಹನಿ ಚೆಲ್ಲಿ ಹಾಸುಗೆ
ಬೇಡಿ ಬಯಸಿದೆ ಒಲವಿನ ಒಸಗೆ
ಬರದಿರಲಾರ ರವಿ ತಂಪಿನ ಆಸೆಗೆ
ಹಾದಿಯು ಸಾಗಿರಲು ಬೆಳದಿಂಗಳು
ಮೂಡಿಸಿತು ಮುಂಭಾಗದಿ ನನ್ನ ನೆರಳು
ಹಾದಿ ದೀಪದ ಬೆಳಕಲಿ ಇನ್ನೊಂದು
ಕಡುಕಪ್ಪಿನ ಚಲಿಸುವ ಹಾಗೆ ಕರಿನೆರಳು
ಬೀದಿ ದೀಪದ ಛಾಯೆಗೆ ಇದು ಮಾಯೆ
ಬೆಳಕಿನ ವರ್ತುಲ ಕಳೆದರೆ ಅದು ಕಾಣೆ
ಪ್ರತಿಸ್ಪರ್ಧಿಗಳಾದವು ನೆರಳುಗಳೆರಡು
ಕತ್ತಲು ಬೆಳಕಿನಾಟ ಇರದಿರೆ ಬಾಳೆ ಬರಡು
ನನಗನಿಸಿತು ಬಾಳ ನಿಯಮಗಳು ಹೀಗೆ
ತೀರಲಾರದ ಬದುಕಿನ ಬೇಗೆ ಬಹು ಬಗೆ
ನಗುತ್ತಿರುವ ಮನ ಮೂಕವಾಯ್ತು ಹೇಗೆ
ಬದುಕುವ ನಾವು ಬದುಕು ಕಲಿಸಿದ ಹಾಗೆ
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೬/೧೨/೨೦೧೭
Comments
Post a Comment