ಹಳ್ಳಿ ಜಾಯಮಾನ

ಹಳ್ಳಿ ಜಾಯಮಾನ
~~~~~~~~~~
ಹಳ್ಳಿಯ ಜೀವನ ಪ್ರತಿ‌ ನಿತ್ಯ ನಡೆಯುವ ಗಾಯನ
ಇದು ಇಂದಿನ ದಿನಮಾನ  ಹಳ್ಳಿ ಜಾಯಮಾನ
ರಾತ್ರಿಯ ನೀರವತೆಗೆ ಕುಡುಕರ ಗಾನ ಬಜಾನ
ಮೂಲೆಯಲಿ ಕುಳಿತ ಅಜ್ಜನ ಗೂರಲು ರೋದನ
ಅತ್ತೆ ಸೊಸೆಯರ ಪರಸ್ಪರ ಬೈಗುಳದ ತನನನ
ಮತ್ತೆ ಕೆಲವು ಸೊಸೆಯತ್ತೆಯರ ಪ್ರೀತಿಯ ಗಾನ

ಬೆಳಗೆದ್ದು ಸಗಣಿ ಗಂಜಲದಿಂದ ಹಟ್ಟಿಗೆ ಸ್ನಾನ
ಚುಕ್ಕಿ ರಂಗೋಲಿಯ ಬಗೆ ಬಗೆ ಚಿತ್ತಾರ
ಬೇವಿನಕಡ್ಡಿ ಯಾ ಇಜ್ಜಲಿನಿಂದ ದಂತ ಚೂರ್ಣ
ದೇಸಿ ಬೆಲೆಯ ಚಹದಂಗಡಿಯಲಿ ಬೀಡಿ ನಾತ
ಅಲ್ಲಿ ಕುಳಿತೇ ಇಡಿ ಜಗತ್ತಿನ ಅವಲೋಕನ
ಮನೆಗೆ ಸಾಗಿ ಮುದ್ದೆ ಉಪ್ಸಾರಿನ ಭೋಜನ

ಹೊತ್ತಾರೆ ಆಡು ಕುರಿ ಜಾನುವಾರು ಜೊತೆಗೆ ಪಯಣ
ಹೊಲದ ಹಾದಿಯಲಿ ಅನ್ಯರ ಹೊಲದ ಗುಣಗಾನ
ಬಡಿಸಿದ ಪಾತ್ರೆಗಳ ಜೊತೆಗೆ ಬಟ್ಟೆಗಳ ಹೊತ್ತು ಮಣ
ಕೆರೆಯ ಹಾದಿಯ ಕಡೆಗೆ ಮಹಿಳೆಯರ ಪ್ರಯಾಣ
ಕೆರೆಯಲ್ಲಿ ಇವರಿಗೆ ಎಂದು ಸೋಪಾನ ಕಟ್ಟೆ ಹಾಸಲು
ಜಾನುವಾರು ನೀರು ಕುಡಿಯಲು ಸ್ಥಳ ಮೀಸಲು

ನಿತ್ಯ ಬದುಕಿನ ರಸ್ತೆಯದು ಜಲ್ಲಿಕಲ್ಲಿನ ಗುದ್ದಾಟ
ಅವಸರದ ಪಯಣಕ್ಕೆ ಬಗೆ ಹರಿಯದ ಸಂಕಟ
ಉಳ್ಳವರ ಹೊಲದಲ್ಲಿ ಅಂತರ್ಜಲದ ಎರಚಾಟ
ಕೆಲವೆಡೆ ಕುಡಿಯುವ ನೀರಿಗೂ ವ್ಯರ್ಥ ಅರಚಾಟ ಬದುಕೆಂಬುದು‌ ದಿನನಿತ್ಯವೂ ಮುಗಿಯದ ಪರದಾಟ

ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೧೩/೧೧/೨೦೧೭

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ