ಕವಯಿತ್ರಿ ಮತ್ತು ಬಹುಮುಖ ಪ್ರತಿಭೆ ಪ್ರೇಮಾ ಆರ್ ಶೆಟ್ಟಿ

ರಾಜ್ಯ ಮಟ್ಟದ ಕವಯಿತ್ರಿ ಶ್ರೀಮತಿ ಪ್ರೇಮಾ ಆರ್ ಶೆಟ್ಟಿ.


ಶ್ರೀಮತಿ ಪ್ರೇಮಾ ಆರ್ ಶೆಟ್ಟಿ. ಇವರು ಪ್ರಸ್ತುತ ಸರಕಾರಿ ಪದವಿಪೂರ್ವ ಕಾಲೇಜು ಮೂಲ್ಕಿಯ ಪ್ರೌಢ ಶಾಲಾ ವಿಭಾಗದಲ್ಲಿ ಕಳೆದ 3 ವರ್ಷಗಳಿಂದ ಆಂಗ್ಲ ಭಾಷಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿಸುತ್ತಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾದ ಇವರು ಪ್ರವೃತ್ತಿಯಲ್ಲಿ ಬರಹಗಾರರು, ಕವಯಿತ್ರಿ, ಅಂಕಣಕಾರರು, ಕಾರ್ಯಕ್ರಮ ನಿರ್ವಾಹಕರು, ಫ್ಯಾಷನ್ ಡಿಸೈನರ್, ಕೌನ್ಸಿಲರ್, ಸಾಹಿತಿ, ಸ್ಪೋಕನ್ ಇಂಗ್ಲಿಷ್ ಟ್ರೈನರ್, ಮಾಸ್ಟರ್ ರಿಸೋರ್ಸ್ ಪರ್ಸನ್, ತುಳು ಕಲಿಸುವವರು ಹಾಗೂ ನಿತ್ಯ ಕಲಿಕಾರ್ಥಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.           
            ಇವರು "ಹನಿ ಬಿಂದು" ಎಂಬ ಕಾವ್ಯ ನಾಮದಿಂದ ಕನ್ನಡ, ತುಳು ಹಾಗೂ ಆಂಗ್ಲ ಭಾಷೆಗಳ ಸಾಹಿತ್ಯದಲ್ಲಿ ಪಳಗಿದ ಕೈ ಆಗಿದ್ದಾರೆ. ಅವರು ದಿ. ರಮೇಶ್ ಶೆಟ್ಟಿ  ಮತ್ತು ಗುಲಾಬಿ ಶೆಟ್ಟಿ ಇವರ ಮಗಳಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ಜನಿಸಿದವರು. ಶ್ರೀ ಮೂಜಿಲ್ನಾಯ ಹಿರಿಯ ಪ್ರಾಥಮಿಕ ಶಾಲೆ ಈದು ಕಾರ್ಕಳ ತಾಲೂಕು, ಉಡುಪಿ ಜಿಲ್ಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ, ಸರಕಾರಿ ಪದವಿ ಪೂರ್ವ ಕಾಲೇಜು ಕುದುರೆಮುಖದಲ್ಲಿ ಪ್ರೌಢ ಶಿಕ್ಷಣ ಪಡೆದು ಹತ್ತನೇ ತರಗತಿಗೆ ಶಾಲೆಯಲ್ಲೇ ಅತಿ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದವರು. ತಮ್ಮ ವಿದ್ಯಾಭ್ಯಾಸದ ಸಮಯದಲ್ಲಿ ಶಾಲಾ ಮಟ್ಟದ, ಅಂತರ್ ಶಾಲಾ ಮಟ್ಟದ ನಡೆದಿದ್ದ ಎಲ್ಲಾ ಕವನ, ಲಘು ಪ್ರಬಂಧ, ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ  ಇವರಿಗೆ ಮೊದಲ ಸ್ಥಾನ ಸಿಗುತ್ತಿತ್ತು. ಬಳಿಕ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ತಮ್ಮ ಪಿಯುಸಿಯನ್ನು ಪಿ ಸಿ ಎಮ್ ಬಿ ವಿಷಯದಲ್ಲಿ  ಪೂರೈಸಿದರು. ಅಲ್ಲಿನ ಆಗ ಕನ್ನಡ ಉಪನ್ಯಾಸಕ ಹಾಗೂ ಬರಹಗಾರರಾದ   ಶ್ರೀಯುತ ಚೇತನ ಸೋಮೇಶ್ವರ ಅವರಿಂದ ಪ್ರಭಾವಿತಾರಾಗಿ ತಮ್ಮ ಬರವಣಿಗೆಯನ್ನು ಮುಂದುವರೆಸಿದರು. ಜೊತೆಗೆ ಕಂಪ್ಯೂಟರ್ ಕೂಡಾ ಕಲಿತಿದ್ದಾರೆ.    
  ಬಳಿಕ ಮೈಸೂರಿನ ಸುಪ್ರಸಿದ್ಧ ಮಹಾರಾಣಿ ಮಹಿಳಾ ಶಿಕ್ಷಕ ಶಿಕ್ಷಣ ಸಂಸ್ಥೆಯಲ್ಲಿ ಡಿ.ಎಡ್ ಶಿಕ್ಷಣದಲ್ಲಿ ರಾಜ್ಯಕ್ಕೇ ಮೊದಲ ರ‌್ಯಾಂಕ್ ಪಡೆದು ಉತ್ತೀರ್ಣರಾದರು. ಕಾಲೇಜಿನ ಮ್ಯಾಗಝಿನ್ "ಮಹಾರಾಣಿ"ಯಲ್ಲಿ ಹಲವಾರು ಕಥೆ, ಕವನ, ಲೇಖನಗಳು ಆಗಲೇ ಪ್ರಕಟಗೊಂಡಿದ್ದವು.  ಕಾಲೇಜಿನ ವರ್ಷದ ಅತ್ಯಂತ ಚಟುವಟಿಕೆಯ ವಿದ್ಯಾರ್ಥಿನಿ ಆಗಿಯೂ ಆಯ್ಕೆ ಆಗಿದ್ದರು. ಆ ವೇಳೆಗಾಗಲೇ  ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದವರು ಸಾಕಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು.    
      ತದನಂತರ 2004ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿಗೆ ಒಳಪಟ್ಟ ಹಿರಿಯ ಶಾಲೆ ಉಳಿಬೈಲು, ಬಂಟ್ವಾಳ ತಾಲೂಕು ಇಲ್ಲಿ ವಿಜ್ಞಾನ ಶಿಕ್ಷಕರಾಗಿ ಸರಕಾರಿ ಸೇವೆಗೆ ಪಾದಾರ್ಪಣೆಗೈದರು. ಆ ಶಾಲೆಯಲ್ಲಿ ಬೋಧಕರಾಗಿ ತೊಡಗಿಸಿ ಕೊಂಡಿರುವಾಗಲೇ ದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವ ವಿದ್ಯಾನಿಲಯದಿಂದ ಆಂಗ್ಲ ಭಾಷೆಯಲ್ಲಿ ಪದವಿ ಮತ್ತು ಬಿ.ಎಡ್ ಪದವಿ ಪಡೆದರು. ಜೊತೆಗೆ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ವಿಶೇಷ ಶ್ರೇಣಿಯ ಅಂಕಗಳೊಂದಿಗೆ  ಸ್ನಾತಕೋತ್ತರ ಪದವಿ ಪಡೆದರು.
ನಂತರ ತಮ್ಮ ಬಿ.ಎಡ್ ಶಿಕ್ಷಣವನ್ನೂ ಕೂಡ ಉನ್ನತ ಶ್ರೇಣಿಯ ಅಂಕಗಳೊಂದಿಗೆ ಪಡೆದರು.  ಇಂದಿರಾ ಗಾಂಧಿ ಮುಕ್ತ ವಿಶ್ವ ವಿದ್ಯಾನಿಲಯದ ಆಂಗ್ಲ ಭಾಷಾ ಬೋಧನೆಯಲ್ಲಿ ಸರ್ಟಿಫಿಕೇಟ್ ಕೋರ್ಸ್ ಕೂಡಾ ಪೂರ್ಣಗೊಳಿಸಿದರು. ಬೋಧನಾ ಕಾರ್ಯ, ಕಲಿಕೆ, ಶಾಲೆ ಬಿಟ್ಟ ಹಳ್ಳಿಯ ಬಡ ಹೆಣ್ಣು ಮಕ್ಕಳಿಗೆ ಟೈಲರಿಂಗ್ ತರಗತಿ ನಡೆಸುತ್ತಾ ತರಬೇತಿ ನೀಡುತ್ತಿರುವಾಗಲೂ ಸಹ ತಮ್ಮ ಬರವಣಿಗೆಯ ಹವ್ಯಾಸವನ್ನು ಕಡೆಗಣಿಸಲಿಲ್ಲ. "ನಮ್ಮ ಬಂಟ್ವಾಳ" ವಾರ ಪತ್ರಿಕೆಗಾಗಿ "ಪ್ರೇಮಾ ಉಳಿಬೈಲು" ಎಂಬ ಹೆಸರಿನಲ್ಲಿ ನಿರಂತರ ಮೂರು ವರ್ಷಗಳವರೆಗೆ ಅಂಕಣ ಬರಹ "ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ" ಹಾಗೂ ಅದೇ ಪತ್ರಿಕೆಗಾಗಿ "ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ " ಎಂಬ ಅಂಕಣ ಬರೆಹವನ್ನು ಬರೆಯುತ್ತಿದ್ದರು.
ಅದು ಅಪಾರ ಜನ ಮನ್ನಣೆ ಗಳಿಸಿತ್ತು. ಬಂಟ್ವಾಳ  ತಾಲೂಕಿನಲ್ಲಿ ಆಂಗ್ಲ ಭಾಷಾ ಶಿಕ್ಷಕರಿಗೆ ಸಂಪನ್ಮೂಲ ವ್ಯಕ್ತಿಯಾಗಿ ಆಂಗ್ಲ ಭಾಷಾ ತರಬೇತಿ ನೀಡುವ ಕಾರ್ಯದಿಂದ ತಾಲ್ಲೂಕಿನ ಎಲ್ಲರ ಪ್ರೀತಿಗೆ ಪಾತ್ರರಾದರು, ಮಕ್ಕಳಿಗೂ ನೆಚ್ಚಿನ ಶಿಕ್ಷಕಿಯಾಗಿದ್ದರು. ಶಿಕ್ಷಕರಿಗೆ ಪ್ರತಿವರ್ಷ ಏರ್ಪಡಿಸುವ ರಸಪ್ರಶ್ನೆ, ಭಾಷಣ, ಪ್ರಬಂಧ ಸ್ಪರ್ಧೆಗಳಲ್ಲೂ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದುದೇ ಅಲ್ಲದೆ, ವಿಜ್ಞಾನ ವಿಚಾರ ಗೋಷ್ಟಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಮೈಸೂರಿನಲ್ಲಿ ಪ್ರತಿನಿಧಿಸಿ ಭೇಷ್ ಅನ್ನಿಸಿಕೊಂಡಿದ್ದಾರೆ.          ಇವರು 2011ರಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು, ಸುಳ್ಯ ಇಲ್ಲಿನ ಪ್ರೌಢ ಶಾಲಾ ವಿಭಾಗಕ್ಕೆ ಆಂಗ್ಲ ಭಾಷಾ ಸಹಶಿಕ್ಷಕಿಯಾಗಿ ಪದೋನ್ನತಿ ಹೊಂದಿ ಹತ್ತು ವರ್ಷಗಳ ಬೋಧನೆಯಲ್ಲಿ ನಿರತರಾಗಿದ್ದರು ಅಲ್ಲಿಯೂ ಸುಳ್ಯದ "ಸುಳ್ಯ ಸುದ್ಧಿ" ಹಾಗೂ "ಅಮರ ಸುದ್ದಿ" ಪತ್ರಿಕೆಗಳಲ್ಲಿ ಹಾಗೂ ಅವರ ದೀಪಾವಳಿ ವಿಶೇಷಾಂಕಗಳಲ್ಲಿ  ಹಲವಾರು ಲೇಖನ, ಕವನಗಳು ಪ್ರಕಟಗೊಂಡಿದ್ದೇ ಅಲ್ಲದೆ ಸುದ್ದಿ ಲೈವ್ ಟಿ ವಿ ಚಾನೆಲ್‌ನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ಎದುರಿಸಲು ಕಿವಿಮಾತು ಹಾಗೂ ಅವರ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಲೈವ್ ಆಗಿ ಪೋಷಕ ಹಾಗೂ ವಿದ್ಯಾರ್ಥಿಗಳಿಗೆ ಫೋನ್ ಇನ್ ಕಾರ್ಯಕ್ರಮ ನಡೆಸಿ ಕೊಟ್ಟಿದ್ದಾರೆ.       2021ರಲ್ಲಿ ಬಿಡುಗಡೆಗೊಂಡ ಎಸ್ . ಬಂಗೇರ ಮುಂಬೈ ಅವರ ನಿರ್ಮಾಪಕತ್ವದ, ಪಿ ವಿ ಪ್ರದೀಪ್ ಕುಮಾರ್ ಕಥಾ ಬಿಂದು ಪ್ರಕಾಶನರವರ ನಿರ್ದೇಶನದ ಕಿರು ಚಲನಚಿತ್ರ "ಬದಲಾಗದವರು ಜೀವನದಲ್ಲಿ ಬದಲಾಗುವರೇ?" ಎಂಬ ಕಿರು ಚಿತ್ರದಲ್ಲಿ ಅತಿಥಿ ನಟಿಯಾಗಿ ಮಗಳ ಜೊತೆ ಅಭಿನಯಿಸಿರುತ್ತಾರೆ. ರೇಡಿಯೋ ಮಣಿಪಾಲದಲ್ಲಿ ಇವರ ಕಥಾ ವಾಚನ ಪ್ರಸಾರವಾಗಿದೆ. ಮಂಗಳೂರು ಆಕಾಶವಾಣಿಯಲ್ಲಿ "ಭಾರತದ ಸಾಮರಸ್ಯ ಹೇಗೆ" ಎಂಬ ವಿಷಯದ ಭಾಷಣ ವನಿತಾವಾಣಿ ಕಾರ್ಯಕ್ರಮದಲ್ಲಿ     ಪ್ರಸಾರವಾಗಿದೆ. ಇವರ ಕವನ ವಾಚನವು ಧ್ವನಿಮುದ್ರಣಗೊಂಡಿದ್ದು ಅತ್ಯಂತ ಶಿಒಘ್ರದಲ್ಲಿ ಪ್ರಸಾರವಾಗಲಿದೆ. ಕರ್ನಾಟಕ ಲೇಖಕಿಯರ ಸಂಘ, ಕರಾವಳಿ ಲೇಖಕಿಯರ ಸಂಘ ಹಾಗೂ  ಕರ್ನಾಟಕ ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ತಿನ  ಸದಸ್ಯರಾಗಿದ್ದು ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಹಲವಾರು ಕವನ ಸ್ಪರ್ಧೆಗಳ ತೀರ್ಪುಗಾರರಾಗಿ ಉತ್ತಮ ತೀರ್ಪು ನೀಡಿದ ಅನುಭವ ಇವರಿಗಿದೆ.         
  ಸುಳ್ಯದಲ್ಲಿರುವಾಗಲೇ ಅಲ್ಲಿನ ಶಿಕ್ಷಕರ ಗುಂಪಿನ ಜೊತೆ ಸಿ ಸಿ ಆರ್ ಟಿ ಗೆ ಸೇರಿ ಉತ್ತರಾಖಾಂಡ ರಾಜ್ಯದಲ್ಲಿ ಕರ್ನಾಟಕದ ಹಾಗೂ ತುಳು ನಾಡಿನ  ಸಂಸ್ಕೃತಿಯನ್ನು ಪ್ರತಿನಿಧಿಸಿದ್ದಾರೆ. ಅಲ್ಲದೇ ಆಂಗ್ಲ ಭಾಷಾ ವಿಷಯದಲ್ಲಿ ಸ್ಪೋಕನ್ ಇಂಗ್ಲಿಷ್ ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಕೇರಳದ ಅರಿಕ್ಕೋಡ್ ಶಾಲೆಯಲ್ಲಿ ಸ್ಪೋಕನ್ ಇಂಗ್ಲಿಷ್ ಹಾಗೂ ಇಂಗ್ಲಿಷ್ ಬರವಣಿಗೆ ವಿಷಯದ ಮೇಲೆ ಕಾರ್ಯಾಗಾರ ನಡೆಸಿ ಕೊಟ್ಟಿದ್ದಾರೆ. ಸುಳ್ಯ ಸಮೀಪದ ಸಂಪಾಜೆ, ಹರಿಹರಗಳಲ್ಲೂ ಸ್ಪೋಕನ್ ಇಂಗ್ಲಿಷ್ ಹಾಗೂ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯನ್ನು ಕಲಿಯುವ, ಬರೆಯುವ ಸುಲಭ ವಿಧಾನಗಳ ಬಗ್ಗೆ ತರಬೇತಿ ಕಾರ್ಯಾಗಾರಗಳನ್ನು ನಡೆಸಿ ಕೊಟ್ಟಿರುತ್ತಾರೆ. ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ದೆಹಲಿ ಕನ್ನಡ ಭವನದಲ್ಲಿ ನಡೆದ ಚುಟುಕು ಕವಿಗೋಷ್ಠಿಯಲ್ಲಿ ಕವಯಿತ್ರಿಯಾಗಿ, ನಿರೂಪಕಿಯಾಗಿ ಭಾಗವಹಿಸಿದ್ದಾರೆ, ಉಡುಪಿಯಲ್ಲಿ ನಡೆದ ಮುಂಬೈ ವಲಸಿಗರ ಸಮ್ಮಿಲನ ಕಾರ್ಯಕ್ರಮದ ( 9 ಯುಟ್ಯೂಬ್ ಚಾನೆಲ್‌ಗಳಲ್ಲಿ ಲೈವ್ ಪ್ರಸಾರವಾದ ಕಾರದಯಕ್ರಮ) ಸಹ ನಿರೂಪಕಿಯಾಗಿದ್ದರು..     
       ಇನ್ನೂರಕ್ಕೂ ಮಿಕ್ಕಿ ತಾಲೂಕು, ಜಿಲ್ಲಾ, ರಾಜ್ಯ, ಅಂತರ ರಾಜ್ಯ, ಹೊರ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕವಿಗೋಷ್ಠಿ, ಕಥಾ ಗೋಷ್ಟಿಗಳಲ್ಲಿ ಕವಿಯಾಗಿ, ಕವಿಗೋಷ್ಟಿಯ ಅಧ್ಯಕ್ಷರಾಗಿ, ಉದ್ಘಾಟಕರಾಗಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದಾರೆ. ತಾವು ಮಾತ್ರ ಭಾಗಿಗಳಾಗದೇ ತನ್ನ ಶಾಲೆಯ ಆಸಕ್ತಿಯುಳ್ಳ ವಿದ್ಯಾರ್ಥಿಗಳನ್ನು ಗುರುತಿಸಿ, ಅವರನ್ನು ಬರೆಯಲು ಪ್ರೇರೆಪಿಸಿ ಜಿಲ್ಲಾ, ರಾಜ್ಯ ಹಾಗೂ ಅಂತರ್ ರಾಜ್ಯ ಮಟ್ಟದ ಕವಿಗೋಷ್ಠಿಗಳಿಗೆ ಕರೆದುಕೊಂಡು ಹೋಗಿ ಅವರಿಂದ ಕವನ ವಾಚನ ಮಾಡಿಸಿರುತ್ತಾರೆ. 2020ರಲ್ಲಿ 10ನೆಯ ತರಗತಿಯಲ್ಲಿ ಓದುತ್ತಿದ್ದ ಇವರ ವಿದ್ಯಾರ್ಥಿನಿ ಕುಮಾರಿ ಹಿಮಾಲಿ ಮಡ್ತಿಲಳ "ಸೃಷ್ಟಿಯ ಸೊಬಗು" ಎಂಬ ಕವನ ಸಂಕಲನಕ್ಕೆ ಮುನ್ನುಡಿ ಬರೆದಿದ್ದಾರೆ. ಆ ಕೃತಿಯನ್ನು  24ನೇ ಸುಳ್ಯ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಲೋಕಾರ್ಪಣೆಗೊಳಿಸುವಲ್ಲಿ ಆಸಕ್ತಿವಹಿಸಿದ್ದಾರೆ.
 ತಮ್ಮ ಮಗಳ ಬರವಣಿಗೆಗೆ ಪ್ರೋತ್ಸಾಹ ನೀಡಿ ಅವಳು ಬರೆದ ಪುಟ್ಟ ಪುಟ್ಟ ಕವನ ಸಂಕಲನ "ಚಿಟಾಣಿ ಚಿಟ್ಟೆ" ಕೃತಿಯನ್ನು ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ 2022ರಲ್ಲಿ ಬಿಡುಗಡೆ ಮಾಡಿಸಿರುತ್ತಾರೆ. ರೇಡಿಯೋ ಮಣಿಪಾಲದ ಚಿಣ್ಣರ ದನಿ ಕಾರ್ಯಕ್ರಮದಲ್ಲಿ ಇವರ ಮಗಳು ದಿಯಾ ಉದಯ್ ಭಾಗವಹಿಸಿದ್ದಾರೆ. ಕಥೆ, ಕವನ ಬರಹದ ಜೊತೆ ನೃತ್ಯ, ತುಳು ಕಲ್ಪುಗ ಯೂಟ್ಯೂಬ್ ಚಾನೆಲ್‌ನಲ್ಲಿಯೂ ದಿಯಾ ಉದಯ್ ಸಹಭಾಗಿಯಾಗಿದ್ದಾರೆ.         
       ಖ್ಯಾತ ಭಾರತನಾಟ್ಯ ಕಲಾವಿದೆ, ಕವಯತ್ರಿ, ವಕೀಲೆ ಪರಿಮಳಾ ಮಹೇಶ್‌ರವರ "ರಾಜ ಬೀದಿಯ ಹೂವಾಡಗಿತ್ತಿ" ಕವನ ಸಂಕಲನಕ್ಕೆ ಮುನ್ನುಡಿ ಬರೆದಿದ್ದಾರೆ. ಹಲವಾರು ಎಲೆಮರೆಯ ಕವಿಗಳಿಗೆ ಪ್ರೋತ್ಸಾಹ ನೀಡಿ ಬೆಳಕಿಗೆ ತರುವ ಪ್ರಯತ್ನ ಮಾಡಿದ್ದಾರೆ. 2021 ಡಿಸೆ೦ಬರ್ ನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಮೂಲ್ಕಿ, ಮಂಗಳೂರು ತಾಲೂಕು ಇಲ್ಲಿಗೆ ವರ್ಗಾವಣೆಗೊಂಡು ಅಲ್ಲಿಯೇ ತಮ್ಮ ವೃತ್ತಿಯನ್ನು ಮುಂದುವರೆಸುತ್ತಿದ್ದಾರೆ. ಅಲ್ಲಿಯೂ ಆಂಗ್ಲ ಭಾಷಾ ಶಿಕ್ಷಕರಿಗೆ ತರಬೇತಿ ನೀಡುವಲ್ಲಿ ಒಬ್ಬರಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕವಿಗೋಷ್ಠಿಗಳಲ್ಲಿ , ಕವಿ ಸಮ್ಮೇಳನಗಳಲ್ಲಿ ಭಾಗವಹಿಸುವುದರ ಜೊತೆಗೆ ಸಾಹಿತ್ಯದ ಕೃಷಿಯನ್ನೂ ಮುಂದುವರೆಸುತ್ತಿದ್ದಾರೆ.       ಬೋಧನೆಯ ಜೊತೆಗೆ ಬರವಣಿಗೆ, ಟೈಲರಿಂಗ್, ಫ್ಯಾಷನ್ ಡಿಸೈನಿಂಗ್ , ಪ್ರವಾಸ, ಗೆಳೆತನ, ವಿದ್ಯಾರ್ಥಿಗಳ ಕೌನ್ಸೆಲಿಂಗ್, ಫೇಸ್‌ಬುಕ್ಕಿನ ಮೂಲಕ ಬೇರೆ ಬೇರೆ ಕವಿಗಳ ಕವನ ವಾಚನ, ಓದು, ತನ್ನ ಮಿತಿಯಲ್ಲಿ ಸಮಾಜ ಸೇವೆ,  ಇತರ ಕವಿಗಳನ್ನೂ ಪ್ರೋತ್ಸಾಹಿಸಿ ಬೆಳೆಸುವುದು ಇವರ ಹವ್ಯಾಸವಾಗಿದೆ. "ನಮ್ಮ ಬಂಟ್ವಾಳ"ವಾರಪತ್ರಿಕೆ, ಡಿಜಿಟಲ್ ಪತ್ರಿಕೆಗಳಲ್ಲೂ ಪ್ರಕಟವಾದ ಬಳಿಕ ಈಗ  ' ಹಾಸನವಾಣಿ  ' ದಿನಪತ್ರಿಕೆ ಗಳಲ್ಲಿ ಇವರ ಅಂಕಣ "ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ" 236 ವಾರಗಳಿಂದ ಪ್ರಕಟವಾಗುತ್ತಿದೆ. ಪ್ರತಿಲಿಪಿ ಬರವಣಿಗೆಯ ಆ್ಯಪ್ ನಲ್ಲಿ ಇವರ ಬರವಣಿಗೆಗಳಿಗೆ 50  ಸಾವಿರಕ್ಕೂ ಅಧಿಕ ಓದುಗರಿದ್ದು ಗೋಲ್ಡನ್ ಬ್ಯಾಡ್ಜ್ ಪಡೆದಿರುತ್ತಾರೆ. ಪ್ರಸ್ತುತ "ಸಂಗಾತಿ" ಆನ್ಲೈನ್ ಪತ್ರಿಕೆಯಲ್ಲಿ ಹವ್ಯಾಸಿ ಸಹಾಯಕ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.                  "ಲಿಟರೇಚರ್ ಆಫ್ ಹನಿ ಬಿಂದು" ಇವರ ಬ್ಲಾಗ್. ಇದರಲ್ಲಿ ಎರಡು ಸಾವಿರಕ್ಕೂ ಅಧಿಕ ಬರೆಹ, ಕವನ, ಗಝಲ್, ಲೇಖನ, ಚುಟುಕು,  ಕಥೆ ಮೊದಲಾದ ಸಾಹಿತ್ಯ ಪ್ರಕಾರಗಳ ಕೃಷಿ ಮಾಡಿದ್ದಾರೆ. ಪ್ರತಿಲಿಪಿ ಆಪ್‌ನ ಬರಹಗಾರರಾಗಿ ಅದೇ ಆಪ್‌ನಲ್ಲಿ ತನ್ನ ಹಾಗೇ ಬೆಳೆದ ಮತ್ತು ಜೀವನದಲ್ಲಿ ಸಾಧನೆ ಮಾಡಿ ಮೆರೆದ ಸಾಧಕರ ಬಗೆಗಿನ ಲೇಖನ ಮಾಲೆ "ಯಶೋಗಾಥೆ"ಯನ್ನು ಬರೆಯುತ್ತಿದ್ದಾರೆ. ಶಾಲಾ ವೃತ್ತಿ ಜೀವನದ ಅನುಭವಗಳ ಲೇಖನಮಾಲೆ "ಶಿಕ್ಷಕರ ಕಕ್ಷೆಯೊಳಗೆ". ಚುಟುಕು, ಟಂಕಾ, ಗಝಲ್, ಕಾದಂಬರಿ, ಕಥೆ, ಲೇಖನ, ಕವನ,  ಹೀಗೆ ಅನೇಕ ಬರಹಗಳು ತುಳು, ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ಪ್ರಕಟವಾಗುತ್ತಿವೆ.              ತುಳು ಕಲಿಕೆಗಾಗಿ ಯೂ ಟ್ಯೂಬ್ ಹಾಗೂ ಇನ್ಸ್ಟ್ರಾಗ್ರಾಮ್, ಮುಖಪುಟಗಳಲ್ಲಿ ತುಳು ಕಲ್ಪುಗ ಎಂಬ ಚಾನಲ್ ಒಂದನ್ನು ತೆರೆದು ಮಗಳು ದಿಯಾ ಜೊತೆ ಪ್ರತಿನಿತ್ಯ ಕನ್ನಡ ಮತ್ತು ಆಂಗ್ಲ ಭಾಷೆ ಬಲ್ಲವರಿಗೆ ತುಳು ಭಾಷೆಯನ್ನು ಕಲಿಸುವ ಕಾರ್ಯವನ್ನೂ ಸದ್ದಿಲ್ಲದೆ ಮಾಡುತ್ತಿದ್ದಾರೆ. ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ 40 ಸಾವಿರ ನೋಡುಗರನ್ನು ಹೊಂದಿದ್ದಾರೆ. ಅಲ್ಲದೆ ದಿನಕ್ಕೊಬ್ಬ ಕವಿಯ ಕವನ ವಾಚನ ಮಾಡುತ್ತಾ ಇಂದಿನ ಸಾಮಾಜಿಕ ಜಾಲ ತಾಣಗಳನ್ನು ಉತ್ತಮ ಕಾರ್ಯಕ್ಕಾಗಿ ಹಾಗೂ ಸಾಹಿತ್ಯಕ್ಕಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ಸುಮಾರು 115 ಕವಿಗಳ ಕವನ ವಾಚನವನ್ನು ಪೂರೈಸಿ ಮುಂದುವರೆಯುತ್ತಾ ಸಾಹಿತ್ಯಕ್ಕಾಗಿ ತಮ್ಮ ಜೀವನ ಮುಡಿಪಾಗಿ ಇಟ್ಟಿದ್ದಾರೆ. ಈಗ ಪರಿಸರದ ಬಗ್ಗೆ ತಮ್ಮ ದೃಷ್ಟಿಯನ್ನು ಹರಿಸಿ ನೇಚರ್ ಲವರ್ ಎಂಬ ಶೀರ್ಷಿಕೆಯ ಅಡಿಯಲ್ಲಿ ಪರಿಸರ ಉಳಿಸಿ ಎಂಬ ಸಂದೇಶವನ್ನು ಪ್ರಕೃತಿ ಚಿತ್ರ, ವಿಡಿಯೋಗಳ ಮೂಲಕ ರೀಲ್ಸ್ ಮಾಡುತ್ತಾ ಅರಿವು ಮೂಡಿಸುವ ಮೂಲಕ ಪರಿಸರ ಉಳಿಸುವ ಹೋರಾಟಕ್ಕೆ ನಿಂತಿರುತ್ತಾರೆ.      
     "ಭಾವ ಜೀವದ ಯಾನ " ಇವರ ಕವನ ಸಂಕಲನ ಕೃತಿಯು 2019ರಲ್ಲಿ ಲೋಕಾರ್ಪಣೆ ಮಾಡಿದ್ದಾರೆ. "ಗವಿಯಡವಿಯ ಗಝಲ್‌ಗಳು" ಗಝಲ್ ಸಂಕಲನ, "ಶಿವ ಭಕ್ತಿ ಗೀತಾಮೃತ" ಭಕ್ತಿ ಗೀತೆಗಳ ಸಂಕಲನ, "ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ"  ಅಂಕಣ ಬರಹಗಳ ಸಂಕಲನ, "ಕುಟುಕದ ಚುಟುಕುಗಳು"  ಚುಟುಕು ಸಂಕಲನ, "poems of me" ಆಂಗ್ಲ ಕವನಗಳ ಸಂಕಲನ , "ತುಳುತ ತಲಮಲಕ" ತುಳು ಕವಿತೆಗಳ ಸಂಕಲನ , "ಪುಟ್ಟನ ಕವನ" (ಶಿಶು ಗೀತೆಗಳ ಸಂಕಲನ )..ಹೀಗೆ ಹಲವಾರು ಪುಸ್ತಕಗಳು ಅಚ್ಚಿನ ಮನೆಯತ್ತ ಸಾಗಲು ಸಿದ್ಧವಾಗುತ್ತಿವೆ.       
  "ದಶಕಗಳು" ಎಂಬ 10 ಸಾಲಿನ ಕವನ ಇವರದೇ ಆದ ವಿಶಿಷ್ಟ ಕಾವ್ಯ ಪ್ರಕಾರವನ್ನು ಸೃಷ್ಟಿಸಿದ್ದಾರೆ. 120 ಕ್ಕೂ ಹೆಚ್ಚು ದಶಕಗಳನ್ನು ಬರೆದ ಇವರು ಹಲವಾರು ಪ್ರಾರ್ಥನಾ ಗೀತೆಗಳನ್ನೂ ರಚಿಸಿರುವುದೆ ಅಲ್ಲದೆ ಗಝಲ್, ಸಣ್ಣ ಕಥೆ, ನ್ಯಾನೋ ಕಥೆ, ಕವನ, ಕಾವ್ಯ, ಟoಕಾ, ಚುಟುಕು, ಮಕ್ಕಳ ಕವಿತೆ (ಶಿಶುಗೀತೆ), ಭಕ್ತಿಗೀತೆ, ಭಾವಗೀತೆ, ಕಥನ ಕವನ, ಲಘು ಪ್ರಬಂಧ, ಲೇಖನ, ಪ್ರಬಂಧ ಹೀಗೆ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ  ತಮ್ಮನ್ನು ತಾವು ತೊಡಗಿಸಿಕೊಂಡು ಕನ್ನಡ ತಾಯಿಯ ಸೇವೆಯಲ್ಲಿ ನಿತ್ಯ ನಿರತರಾಗಿರುತ್ತಾರೆ. 
         ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್ತಿನ "ಕನ್ನಡ  ಸೇವಾ ರತ್ನ" ಪ್ರಶಸ್ತಿ, ರಾಜ್ಯ ಮಟ್ಟದಲ್ಲಿ ಸ್ನೇಹ ಸಂಗಮ ಬರಹಗಾರರ ಬಳಗ ತುಮಕೂರು ಇವರು ಕೊಡಮಾಡಿದ "ಕನ್ನಡ ಸಾಹಿತ್ಯ ರತ್ನ" ಪ್ರಶಸ್ತಿ, ಸುಳ್ಯದ ಚಂದನ ಸಾಹಿತ್ಯ ವೇದಿಕೆ ಕೊಡಮಾಡುವ ರಾಜ್ಯ ಮಟ್ಟದ "ಕನ್ನಡ ಕಾವ್ಯ ರತ್ನ" ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ದಿನಾಂಕ 26.03.23 ರಂದು ಕರುನಾಡ ಹಣತೆ ಕಲ್ಪತರೋತ್ಸವ ಐದನೇ ವಾರ್ಷಿಕ ಸಮ್ಮೇಳನ ತುಮಕೂರು ಇಲ್ಲಿ ರಾಜ್ಯ ಮಟ್ಟದ "ಕುವೆಂಪು ರತ್ನ " ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಹಾಗೆಯೇ ಮ್ಯಾಕ್ಸ್ ಲೈಫ್ ಇನ್ಸೂರನ್ಸ್ ಮಂಗಳೂರು ಇವರ ಶಿಕ್ಷಕ achievement ಸನ್ಮಾನ ಇವರಿಗೆ ಲಭಿಸಿದೆ. ಸಕಲೇಶಪುರ ತಾಲೂಕಿನ ಚುಟುಕು ಸಾಹಿತ್ಯ ಪರಿಷತ್ತು ಆಯೋಜಿಸಿದ ಜಿಲ್ಲಾ ಮಟ್ಟದ ಚುಟುಕು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಇವರು ಬೆಂಗಳೂರು, ಕಾಸರಗೋಡಿನ ಪೆರ್ಲದ ವಿವಿಧ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಉದ್ಘಾಟಕರಾಗಿ ಹಾಗೂ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ತಮ್ಮ ಅನುಭವವನ್ನು ಹೆಚ್ಚಿಸಿಕೊಂಡಿದ್ದಾರೆ.               "ಕರ್ನಾಟಕದ ಮಹಿಳಾ ಕವಿ ರತ್ನಗಳು"  ಎಂಬ ವಾಟ್ಸ್ ಆ್ಯಪ್ ಗುಂಪು ರಚಿಸಿ ಬರೆಯುವ ಮಹಿಳೆಯರಿಗೆ ಅವಕಾಶ ಹಾಗೂ ಉತ್ತೇಜನ ಕೊಡುತ್ತಾ, ಪ್ರತಿವರ್ಷ ಅಲ್ಲಿ ಕವನ ಸ್ಪರ್ಧೆಗಳನ್ನು ಏರ್ಪಡಿಸಿ, ನಾಡಿನ ಖ್ಯಾತ ಬರಹಗಾರರನ್ನು ತೀರ್ಪುಗಾರರಾಗಿ ಮಾಡಿ ಪುಸ್ತಕ ಬಹುಮಾನ ನೀಡುತ್ತಿದ್ದಾರೆ. ಹಾಗೆಯೇ "ಲೇಡೀಸ್ ಗ್ಯಾಲರಿ" ಎಂಬ ವಾಟ್ಸ್ ಆ್ಯಪ್  ಗುಂಪಿನ ಮೂಲಕ ಮಹಿಳೆಯರಿಗೆ ನ್ಯಾಯ, ಸುಲಭವಾದ ವೈದ್ಯಕೀಯ ಸಲಹೆಗಳ ಜೊತೆಗೆ ಉತ್ತಮ ಮಾಹಿತಿಯನ್ನು ಕಳೆದ 10 ವರ್ಷಗಳಿಂದ ಹಂಚವಲ್ಲಿ ಸಫಲರಾಗಿದ್ದಾರೆ. ಹಾಗೆಯೇ "ಸ್ಟೂಡೆಂಟ್ಸ್ ಟೀಮ್" ಗುಂಪನ್ನು ರಚಿಸಿ ಹಲವಾರು ಹಿರಿಯ ವಿದ್ಯಾರ್ಥಿಗಳಿಗೆ ಮುಂದಿನ ಕೆಲಸ, ಓದು, ಉನ್ನತ ಶಿಕ್ಷಣ, ಉದ್ಯೋಗದ  ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಕಡಬದ ಯುವ ತೇಜಸ್ಸು ಟ್ರಸ್ಟ್ ನ ಸಹಾಯಕರಲ್ಲಿ ಒಬ್ಬರಾಗಿದ್ದಾರೆ. ಹಾಗೆಯೇ ಕಡಬದ ವಿದ್ಯಾ ಸಂಸ್ಥೆಯೊಂದಕ್ಕೆ ಟ್ರಸ್ಟಿಗಳಲ್ಲಿ ಒಬ್ಬರಾಗಿ ಸಣ್ಣ ಸಹಾಯ ನೀಡುತ್ತಾ ಬಂದಿರುತ್ತಾರೆ. ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಉನ್ನತ ವ್ಯಾಸಂಗಕ್ಕೆ ಕಾಲೇಜಿಗೆ ಸೇರಲು ಸಹಾಯ, ಮುಂದಿನ ವಿದ್ಯಾರ್ಹತೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.     ನೈರುತ್ಯ, ನಮ್ಮ ಬಂಟ್ವಾಳ, ಪ್ರಜಾ ಪ್ರಗತಿ, ಮಂಗಳ, ವಿಜಯ ಕರ್ನಾಟಕ,  ಸ್ತ್ರೀ ಜಾಗೃತಿ, ಸಂಪದ ಸಾಲು,ಹಾಸನ ವಾಣಿ ಇನ್ನೂ ಮುಂತಾದ ಹಲವಾರು ಪತ್ರಿಕೆ ಹಾಗೂ ವಾರ್ಷಿಕ ಸಂಚಿಕೆಗಳಲ್ಲಿ, ಹಲವಾರು ಪುಸ್ತಕಗಳಲ್ಲಿ ಇವರ ಕವನ, ಕಥೆ, ಲೇಖನಗಳು ಪ್ರಕಟವಾಗಿವೆ. ಹಲವಾರು ಶಾಲಾ, ಸಂಘಗಳ ವಾರ್ಷಿಕ ಸ್ಮರಣ ಸಂಚಿಕೆಗಳಲ್ಲಿ ಇವರ ಕವನ ಹಾಗೂ ಲೇಖನಗಳು ಪ್ರಕಟವಾಗಿವೆ.ತಮ್ಮ ಕನ್ನಡ ಆಂಗ್ಲ ಹಾಗೂ ತುಳು ಸಾಹಿತ್ಯ ಸೇವೆಗೆ 2023 ನೇ ಸಾಲಿನ  All India women's Achievement Award (AIVAA)ನ್ನು TWELL media ದಿಂದ ದಿನಾಂಕ 25.06.2023ರಂದು ಬೆಂಗಳೂರಿನಲ್ಲಿ ಪಡೆದಿರುತ್ತಾರೆ. ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲೂ ಪ್ರಥಮ ಸ್ಥಾನ ಗಳಿಸಿ 2021ನೆಯ ಸಾಲಿನ ಸಲ್ - ಸಬೀಲ್ ಎಕ್ಸೆಲೆನ್ಸ್ ಅವಾರ್ಡ್ ಪಡೆದಿದ್ದಾರೆ. ಸ್ಪಂದನ ಟಿವಿಯ ಕವಿ ಸಮಯ ಕಾರ್ಯಕ್ರಮದಲ್ಲಿ ಇವರ ಸಂದರ್ಶನ ಪ್ರಸಾರವಾಗಿದೆ. 2022-23 , 2023 -24 ನೆಯ ಸಾಲಿನಲ್ಲಿ ಎಸೆಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಮೂಲ್ಕಿ ಸರಕಾರಿ ಪ್ರೌಢ ಶಾಲೆಯ  ಶೇಕಡಾ 100 ಫಲಿತಾಂಶ ಪಡೆದುದಲ್ಲದೆ , ತಮ್ಮ ವೃತ್ತಿಯ ಜೊತೆಗೆ ಪ್ರವೃತ್ತಿಯನ್ನು ಪೋಷಿಸಿ ಬೆಳೆಸುತ್ತಾ, ಬರೆಯುವ ಆಸಕ್ತಿ ಇರುವವರನ್ನು ಹಾಗೂ ವಿದ್ಯಾರ್ಥಿಗಳಿಗೂ ಆಸಕ್ತಿ ಬೆಳೆಸುತ್ತಾ ಇರುವುದರ ಜೊತೆಗೆ ಇದೀಗ ರೋಶನಿ ನಿಲಯ ಮಂಗಳೂರು ಇಲ್ಲಿ ಆನ್‌ಲೈನ್ ಮೂಲಕ counselling of Adolescents ಎಂಬ ಸರ್ಟಿಫಿಕೇಟ್ ತರಬೇತಿಗೆ ಸೇರಿ ಮೊದಲ ಶ್ರೇಣಿಯಲ್ಲಿ ಉತ್ತೀರ್ಣರಾದ ಇವರು  ಸದಾ ವಿದ್ಯಾರ್ಥಿಯಾಗಿದ್ದಾರೆ. ಕಲಿಕೆಗೆ ವಯಸ್ಸಿನ ಮಿತಿ ಇಲ್ಲ ಎನ್ನುವ ಇವರು ಸಾಹಿತ್ಯದಲ್ಲಿ ಡಾಕ್ಟರೇಟ್ ಕಲಿಯಬೇಕು ಎಂಬ ಗುರಿಯನ್ನು ಹೊಂದಿದರಾಗಿದ್ದಾರೆ. ಮಗಳು ದಿಯಾ ಉದಯ್‌ ಹಾಗೂ ಇವರ ಮುಂದಿನ ಬದುಕು ಬರೆಹಗಳು ಇನ್ನಷ್ಟೂ ಉಜ್ವಲಗೊಂಡು ನಾಡಿನ ಹಲವರಿಗೆ ದಾರಿದೀಪವಾಗಿ ಇನ್ನಷ್ಟೂ ಜನಮನ್ನಣೆ ಗಳಿಸಲೆಂದು ಹಾರೈಸೋಣ. 

ಎಂದೆಂದಿಗೂ ಸಾಹಿತ್ಯದ ಸೇವಕ
ವೈಲೇಶ. ಪಿ.ಎಸ್. ಕೊಡಗು.
೮೮೬೧೪೦೫೭೩೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು