ಹಿರಿಯ ಕವಯಿತ್ರಿ ಸಂಘಟಕಿ ಹೇಮಗಂಗಾರವರು

ನಾ ಕಂಡಂತೆ ಕವಿ ಸಾಹಿತಿ ಕಲಾವಿದರು
ನಾ ಕಂಡಂತೆ ಕವಿ ಸಾಹಿತಿ ಕಲಾವಿದರು:- ಮಾಲಿಕೆ ೬ ಹೇಮಗಂಗಾ. ಎ.
May 18, 2021
ಶ್ರೀಮತಿ ಹೇಮಗಂಗಾ ಶ್ರೀಧರ್.
ಮೈಸೂರಿನ ಹೇಮಗಂಗಾರವರು ಮೂಲತಃ ಚಾಮರಾಜನಗರದ ಶ್ರೀ. ಎನ್. ಅಶ್ವತ್ಥನಾರಾಯಣ ಹಾಗೂ ಶ್ರೀಮತಿ ಲಕ್ಷ್ಮೀ ದಂಪತಿಯ ಪುತ್ರಿಯಾಗಿದ್ದಾರೆ. ಕವಯಿತ್ರಿ,ಸಂಘಟಕಿ ಹಾಗೂ ಸಂಸ್ಕೃತಿ ಪೋಷಕರಾದ  ಇವರು 01 /07/1961 ರಂದು ಮೈಸೂರಿನಲ್ಲಿ ಹುಟ್ಟಿ ಬೆಳೆದವರು. ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿನಿ. ಶಾಲೆಯನ್ನು  ಬಾಲ್ ಬ್ಯಾಡ್ಮಿಂಟನ್ ಹಾಗೂ ಕೊಕ್ಕೋ ಆಟಗಳಲ್ಲಿ ಪ್ರತಿನಿಧಿಸಿದ್ದವರು.

ಮೈಸೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ಎಂ.ಎಸ್ಸಿ.ಯಲ್ಲಿ ( 1983) ಮೂರನೇ ಸ್ಥಾನ ಗಳಿಸಿದ್ದಾರೆ. ಅಧ್ಯಾಪಕಿಯಾಗಿ ದುಡಿದ ಅನುಭವವೂ ಇವರಿಗಿದೆ. ಸಿತಾರ್ ವಾದಕಿಯಾಗಿ ರಾಜ್ಯ ಮಟ್ಟದ ಜ್ಯೂನಿಯರ್ ಹಾಗೂ ಸೀನಿಯರ್ ಪರೀಕ್ಷೆಗಳಲ್ಲಿ ಕ್ರಮವಾಗಿ 3 ಮತ್ತು 2 ನೇ ಸ್ಥಾನಗಳನ್ನು ಗಳಿಸಿರುವ ಇವರು ಮೈಸೂರು ಆಕಾಶವಾಣಿಯಲ್ಲಿ ಹವ್ಯಾಸಿ ಕಲಾವಿದೆಯಾಗಿದ್ದಾರೆ.
ಈಗಾಗಲೇ "ಸಿರಿಗನ್ನಡ ವೇದಿಕೆ"ಯ ಸಂಸ್ಥಾಪಕ ಕಾರ್ಯದರ್ಶಿಯಾಗಿ, ಮೈಸೂರಿನ  ಜಿಲ್ಲಾಧ್ಯಕ್ಷೆಯಾಗಿ ಕಳೆದ ಹದಿನೆಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.  ಹಾಲಿ ರಾಜ್ಯಾಧ್ಯಕ್ಷರಾಗಿ ವೇದಿಕೆಯನ್ನು ಮುನ್ನಡೆಸುವ ಹೊಣೆ ಹೊತ್ತಿದ್ದಾರೆ.ತಮ್ಮನ್ನು ಯಶಸ್ವೀ ಸಂಘಟಕಿಯಾಗಿ ರೂಪಿಸಿದ ಸಂಸ್ಥಾಪಕ ಅಧ್ಯಕ್ಷರಾದ ದಿವಂಗತ ಶ್ರೀ. ಎಂ. ಎಸ್. ವೆಂಕಟರಾಮಯ್ಯನವರನ್ನು ಮತ್ತು ಗಜಲ್ ಗುರುಗಳಾದ ಡಾ.ಗೋವಿಂದ ಹೆಗಡೆಯವರನ್ನು ಕೃತಜ್ಞತೆಯಿಂದ ನೆನೆಯುತ್ತಾರೆ. "ಹೇಮಗಂಗಾ ಕಾವ್ಯ ಬಳಗ"ದ ಗೌರವ ಅಧ್ಯಕ್ಷೆಯಾಗಿ ನೂರಾರು ಕವಿಗಳನ್ನು ಬೆಳಕಿಗೆ ತಂದಿದ್ದಾರೆ. ಅನೇಕ ಸಂಘ ಸಂಸ್ಥೆಗಳ ಪೋಷಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
 ಉತ್ತಮ ವಾಗ್ಮಿ, ಕವಯಿತ್ರಿಯೂ ಆಗಿರುವ ಹೇಮಗಂಗಾರವರು ಇಲ್ಲಿಯವರೆಗೆ  "ಮುಕ್ತ ವಚನಾಮೃತ" ನೂರು ವಚನಗಳ ಸಂಗ್ರಹ ಮತ್ತು "ಹೃದಯಗಾನ" ಭಾವಗೀತೆಗಳ ಸಂಕಲನಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಗಜಲ್ ಹಾಗೂ ಹನಿಗವನಗಳ ಒಂದೊಂದು ಸಂಕಲನಗಳು ಪ್ರಕಟಣೆಯ ಹಂತದಲ್ಲಿವೆ.👆 ಕಾರ್ಯಕ್ರಮ ನಿರೂಪಣೆ ಮಾಡುತ್ತಿರುವುದು

ಮೈಸೂರು ದಸರಾ ಪ್ರಾದೇಶಿಕ ಕವಿಗೋಷ್ಠಿ , ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವೂ ಸೇರಿದಂತೆ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಕವನ ಹಾಗೂ ಗಜಲ್‌ಗಳನ್ನು ವಾಚಿಸಿರುತ್ತಾರೆ.
ಸ್ಪಷ್ಟ ಉಚ್ಚಾರಣೆ ಹಾಗೂ ಭಾವ ತುಂಬಿದ ವಾಚನದಿಂದ ಖ್ಯಾತಿ ಪಡೆದಿದ್ದಾರೆ. 
ಕವನ ರಚನೆ, ಚಿತ್ರಕಲೆ , ಕಾರ್ಯಕ್ರಮ ನಿರೂಪಣೆ ಮತ್ತು ತೋಟಗಾರಿಕೆ ಇವರ ಪ್ರಿಯವಾದ ಹವ್ಯಾಸಗಳು. ಬೆಳಗ್ಗೆ 9 ರಿಂದ ರಾತ್ರಿ 10 ಗಂಟೆಯವರೆಗೆ ಏಕವ್ಯಕ್ತಿ ನಿರೂಪಕಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟಿರುವುದು ಇವರ ಹೆಗ್ಗಳಿಕೆ . ಉತ್ತಮ ನಿರೂಪಕಿಯೆಂದು ಜೆ. ಎಸ್. ಎಸ್. ಸ್ವಾಮೀಜಿಯವರು ,  ಖ್ಯಾತ ಗಾಯಕ ದಿ. ಸಿ.ಅಶ್ವತ್ಥ್ ಹಾಗೂ ಮೈಸೂರಿನ ಹಿರಿಯ ಸಾಹಿತಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅನೇಕ ಕವನ ರಚನೆ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. 

ಮೈಸೂರಿನ ಖ್ಯಾತ ಸಾಹಿತಿಗಳಾದ ಡಾ.ಸಿ.ಪಿ.ಕೆ.ಯವರು ನೀವು "ಹೇಮಗಂಗಾ ಅಲ್ಲ ಹೇಮಯಮುನಾ , ಚೈತನ್ಯದ ಚಿಲುಮೆ ಮಾತ್ರವಲ್ಲ ಅತ್ಯಂತ ಸಮರ್ಥ ಸಂಘಟಕಿ "ಎಂದು ಪ್ರಶಂಸಿಸಿರುವುದನ್ನೂ , ಸಮಾಜ ಸೇವಕರಾದ ಡಾ. ರಘುರಾಮ ವಾಜಪೇಯಿಯವರು "ಹೇಮಗಂಗಾ ಎಂದರೆ ಕರುನಾಡ ಕಣ್ಮಣಿ ಮೈಸೂರಿನ ಸಂಸ್ಕೃತಿಯ ಪ್ರತೀಕ" ಎಂದು ವೇದಿಕೆಯಲ್ಲಿ ನುಡಿದ ಮಾತುಗಳನ್ನೂ ಮತ್ತು ಪದ್ಮಶ್ರೀ ಡಾ. ದೊಡ್ಡರಂಗೇಗೌಡರು "ನಿಮ್ಮ ನಾಲಗೆಯಲ್ಲಿ ತಾಯಿ ಸರಸ್ವತಿ ಮನೆ ಮಾಡಿದ್ದಾರೆ" ಎಂದು ಹರಸಿರುವುದನ್ನೂ ನನ್ನ ಪೂರ್ವ ಜನ್ಮದ ಪುಣ್ಯ ಎಂದು ಅಗಾಗ್ಗೆ ನೆನಪಿಸಿಕೊಳ್ಳುತ್ತಾರೆ. ಸರಳತೆ ಮತ್ತು ಸಜ್ಜನಿಕೆಗೆ ಹೆಸರಾದ ಹೇಮಗಂಗಾ ಎಂದೂ ಪ್ರಚಾರದ ಹಿಂದೆ ಹೋದವರಲ್ಲ ಎಂಬುದು ಗಮನಾರ್ಹ.
ಸಾಹಿತ್ಯ , ಸಂಘಟನೆ  ಮತ್ತು ಸಮಾಜಸೇವೆಗಾಗಿ ಡಾ. ಡಿ.ಎಲ್. ವಿಜಯಕುಮಾರಿ ಸಾಧನಾ ಪ್ರಶಸ್ತಿ ಹಾಗೂ  ಸಾಹಿತ್ಯ ಸಿಂಧು ಪ್ರಶಸ್ತಿಗಳಲ್ಲದೇ ವಿವಿಧ ಸಂಘ ಸಂಸ್ಥೆಗಳಿಂದ ಗೌರವ ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಇದಲ್ಲದೇ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ದುಡಿದ ಮತ್ತು ಕವಿಗೋಷ್ಠಿಗಳ  ಅಧ್ಯಕ್ಷತೆ ವಹಿಸಿದ ಅನುಭವವನ್ನೂ ಹೊಂದಿದ್ದಾರೆ. ಹೇಮಗಂಗಾರವರೊಂದಿಗೆ ಮೈಸೂರಿನ ಕಾರ್ಯಕ್ರಮ ಒಂದರಲ್ಲಿ ಲೇಖಕರು.

ಪತಿ ದಿವಂಗತ  ಡಾ. ಶ್ರೀಧರ್‌ರವರು ಸಿ.ಎಫ್.ಟಿ.ಆರ್.ಐ.ನಲ್ಲಿ ಹಿರಿಯ ವಿಜ್ಞಾನಿಯಾಗಿದ್ದರು. ಮಗಳು ಸಿಂಧು, ಅಳಿಯ ಪವನ್ ಕುಮಾರ್ , ಮೊಮ್ಮಗಳು ಪ್ರಿಶಾ ಹಾಗೂ ಪುತ್ರ ಹೇಮಂತ್ ಇವರುಗಳೊಂದಿಗೆ ಮೈಸೂರಿನಲ್ಲಿ ವಾಸವಿರುವ ಇವರ ಮುಂದಿನ ಬದುಕು ಬರಹಗಳು ಜನಾನುರಾಗಿಯಾಗಿ  ಸಾಹಿತ್ಯಾಸಕ್ತರಿಗೆ ದಾರಿದೀಪವಾಗಲಿ ಎಂದು ಹಾರೈಸೋಣ. 
ವೈಲೇಶ್ ಪಿ ಎಸ್ ಕೊಡಗು. ಲೇಖಕರು

Comments

  1. ಹೇಮಗಂಗಾ ಅವರ ಪರಿಚಯ ಲೇಖನ ಚೆನ್ಮಾಗಿದೆ

    ReplyDelete
  2. ಪರಿಚಯ ಮತ್ತು ಪರಿಚಯಿಸಿರುವ ಪರಿ ಎರಡೂ ಚೆನ್ನಾಗಿದೆ . ಉಭಯ ಸಾಹಿತಿಗಳಿಗೆ ಅಭಿನಂದನೆಗಳು. ಶುಭವಾಗಲಿ.

    ReplyDelete
  3. ಹೇಮಾ ಮೇಡಂ ಅಭಿನಂದನೆಗಳು 👏🌹. ಸಾಹಿತಿಗಳ ಪರಿಚಯ ಚನ್ನಾಗಿದೆ ವ್ಯಲೇಶ್ ಸರ್. 🙏🙏

    ReplyDelete
  4. ಹೇಮಾ ಮೇಡಂ ಅಭಿನಂದನೆಗಳು ಹೇಗಿರುವಿರಿ? ನಿಮ್ಮ ಪರಿಪೂರ್ಣ ಪರಿಚಯ ಓದಿ ಸಂತೋಷ ವಾಯಿತು. ವೈಲೇಶ್ ಸರ್ ಚೆನ್ನಾಗಿ ನಿರೂಪಿಸಿರುವಿರಿ.

    ReplyDelete
  5. ಹೇಮಗಂಗಾ ಅಂದರೆ ಮತ್ತೇನಲ್ಲಾ :

    ಅದೊಂದು ಉದಾತ್ತ ಜೀವಭಾವಗಳ ಅಪೂರ್ವ ಅನುಪಮದುತ್ತುಂಗ..!

    ಅನೇಕ ಪರಮ ಕವಿ ಸಾಹಿತಿ ಸಾಧು ಸಂತರೊಂದಿಗಿನ ಅನನ್ಯ ಸಾತ್ವಿಕ ಸತ್ಸಂಗ..!

    ಕನ್ನಡ ಕಾಯಕದಲ್ಲೇ ಕೈಲಾಸವಿದೆಯೆಂಬಾಶಯದ ಅಪ್ಪಟ ಕನ್ನಡದ ಅನೂಹ್ಯ ಸುಸಂಸ್ಕೃತಿ..!!

    ಸದಾ ಸರ್ವದಾ ಜೀವನ್ಮುಖಿಯಾಗಿ ಹರಿಯುವ ಅನಂತ ತೇವಭಾವಾನುಭಾವಗಳ ಮಾತೃತ್ವದ ಕನ್ನಡದ ಭಾಗೀರಥಿ..!

    ಈ ಲೇಖನವೋ ಅವರಿಗೆ
    ಆತ್ಮೀಯ
    ಅಕ್ಷರಗಳಿಂದಾರದಾದ
    ಪಕ್ಷಿನೋಟದಾರತಿ..!

    -ಡಾ.ಜಯಪ್ಪ ಹೊನ್ನಾಳಿ
    (ಜಯಕವಿ), ಮೈಸೂರು

    ReplyDelete

Post a Comment

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು