ಮುಕ್ತಕ ಲಾವಣಿ
ಹೊನ್ನಿನ ಜಗವಿದು
~~~~~~~~~~
ನಿನ್ನಯ ನಾಮದ ಬಲದಲಿ ಬೆಳಗಿದೆ
ಹೊನ್ನಿನ ತೆರದಲಿ ಜಗವಿಂದು|
ರನ್ನರು ಜನ್ನರು ಬರೆದಿಹ ಕವಿತೆಯ
ತಣ್ಣಗೆ ಪಾಡುವ ನಾವಿಂದು ||೧||
ಬೆಳಗಿನ ಪೂಜೆಯ ವೇಳೆಗೆ ದೇವಿಗೆ
ಬೆಳಗಿರಿ ತುಪ್ಪದ ಹಣತೆಯನು|
ಕಳಿತಿಹ ಮೆದುಳಿಗೆ ಶಕುತಿಯ ನೀಡುತ
ಒಳಿತನು ಬಯಸಿರು ಜಗಕೆಂದು ||೨||
ಹೊಳೆಯದು ಬಲಿಯಲಿ ಕೆರೆಗಳು ತುಂಬಲಿ
ಕೊಳೆಯದು ಕಳೆಯಲಿ ಜಗದೊಳಗೆ|
ಬೆಳೆಯಲು ಧವಸವ ಹರುಷದಿ ಲೋಗರು
ಸುಳಿವರು ನಿನ್ನಯ ದೇಗುಲಕೆ ||೩||
ಜಗದೊಳಗೊಳಿತನು ಬಯಸುತ ಬೇಡುವೆ
ಖಗಮಿಗಗಳನೀ ಸಲಹೆಂದು|
ಜಗಮಗಿಸಲಿವನ ಉಳಿಯಲಿ ಗಿಡಮರ
ಹೊಗುಳುವೆ ನಿಮ್ಮಯ ನಾಮವನು ||೪||
ಭಕ್ತರ ಸೇವೆಗೆ ಒಲಿಯುವ ದೇವನೆ
ಶಕ್ತಿಯ ನೀಡುತ ಸಲಹೆಮ್ಮ|
ಯುಕ್ತಿಯ ತೋರದೆ ಶಿರಸಾ ನಮಿಸುವೆ
ಮುಕ್ತಿಯ ಕರುಣಿಸು ನಮಗೆಂದು ||೫||
ವೈ.ಕೊ.
ವೈಲೇಶ ಪಿ ಎಸ್ ಕೊಡಗು
೨೬/೭/೨೦೧೯
ಭಾರತ ದೇಶವ ಕಾಯುವ ಯೋಧರೆ
ತೋರುವೆ ಗೌರವ ನಿಮಗಿಂದು
ದೂರದ ಗಡಿಯಲಿ ನಿಂತಿಹ ವೇಳೆಗೆ
ಯಾರದೆ ನೆನಪದು ಬರದಿರಲಿ
ದೇಶದ ಸೇವೆಗಧೀಶನು ನಿನ್ನನು
ವೇಷವ ಮರೆಯಿಸಿ ಕಳುಹಿಸಿದ
ದೋಷವನೆಣಿಸದೆ ಕರುಣೆಯನೀಯದೆ
ಮಾಸದ ನೆನಪನು ಜೊತೆಗಿಟ್ಟ
ಕಾರ್ಗಿಲ್ ಮೇಲ್ಗಡೆ ನುಸುಳುವ ಚೋರಗೆ
ನೀರ್ಗಲ್ ಮೇಲೆಯೆ ಕಾದಿರುವೆ
ಬೇರ್ಗಳ ನೆನಪಿನ ಹಾಡದು ನಿನ್ನಯ
ಮಾರ್ಗವ ತೋರುತ ಕೆಣಕುತಿದೆ
ಮನೆ ಮಠವೆನ್ನುತ ಸಿರಿತನ ಮೆರೆದಿಹ
ಮನಗಳು ನಿಮಗದು ಸಮವೇನು
ತನುಮನವೆಲ್ಲವನತಿಸುಖ ಬಯಸದೆ
ಘನತರ ಕಾರ್ಯಕೆ ಬಳಸಿದಿರಿ
ಕೆಡುಕಿನ ಲೋಗರು ದೇಶಕೆ ಮೋಸವ
ನಡುರಾತ್ರಿಯಲೂ ಮಾಡುವರು
ಬಡತನ ಸಿರಿತನವೆನ್ನದೆ ಬದುಕನು
ಕಡುಗಾವಲಿನಲಿ ಕಳೆಯುವಿರಿ
ದೇಶಭಕ್ತಿ ಗೀತೆ
~~~~~~~~
ಚಿನ್ನದ ಗಂಧದ ನಮ್ಮಯ ನುಡಿಯಲಿ
ಬಣ್ಣಿಸಿ ದೇಶವ ಬಹುವಿಧದಿ
ಕನ್ನಡ ನಾಡಿನ ಹೊನ್ನಿನ ಮನಗಳೆ
ಬನ್ನಿರಿ ಹಾಡುವ ಲಾವಣಿಯಾ
ದೇಶದಿ ತುಂಬಿದೆ ವಿಧವಿಧ ಭಾಷೆಯು
ವೇಷದಿ ಬಹುವಿಧವಿಲ್ಲುಂಟೂ
ಈಶನ ಜೊತೆಯಲಿ ದೇವರದಾಗಿಹ
ಯೇಸುವು ಅಲ್ಲಾನ ಜೊತೆಯುಂಟೂ
ಬಡತನ ಸಿರಿತನ ತುಂಬಿದ ನಮ್ಮಲಿ
ಕೊಡುಗೈ ದಾನಿಗೆ ಬರವಿಲ್ಲಾ
ಬಡವರ ಬವಣೆಯ ನೀಗಲು ಬಯಸುತ
ದುಡಿಯುವ ದೇಶದೊಳ್ ಯೇಳಿಗೆಗೇ
ಜಾತಿಯ ಹೆಸರಲಿ ದೇಶವನೊಡೆಯುವ
ನೀತಿಯನರಿಯದ ಜನಗಳಿಗೆ
ಪ್ರೀತಿಯ ಮಹಿಮೆಯ ಸಾರುತ ನಮ್ಮಲಿ
ಭೀತಿಯನಳಿಸಲು ಪಣತೊಡುವಾ
ಎಡೆಯಲಿ ನಮ್ಮನ್ನು ವಿಂಗಡ ಮಾಡುವ
ಕೆಡುಕಿನ ಜನಗಳ ದೂರಿಡುವಾ
ಒಡೆತನ ನಮ್ಮದು ಜನುಮದ ಹಕ್ಕಿಗೆ
ಬಡಿದಾಡಲು ಬಿಸಿಯುಸಿರಿಡುವಾ
ದ್ವೇಷವ ಮನದಲಿ ತುಂಬುವ ದುರಳರ
ವೇಷವ ಬಯಲಿಗೆ ನಾವೆಳೆವಾ
ರೋಷದ ಮಾತನು ಕಡೆಗಣಿಸುತಲಿರೆ
ಮೋಸವು ನಡೆಯದುಯೆಂದೆನುವಾ
ಮತಗಳ ನಡುವಲಿ ಗೆಳೆತನ ಬೆಳೆಸುತ
ಮತಿಯುತ ನಡತೆಯ ಬಿಂಬಿಸುವಾ
ಮತಗಳ ಬೇಟೆಗೆ ನಮ್ಮನ್ನು ಮೆರೆಸುವ
ಗತಿಯನು ತಡೆಯಲು ಜೊತೆಯಿರುವಾ
ಹಣವದು ನಮ್ಮಯ ಜೊತೆಯಲಿ ಚಿತೆಯಲಿ
ಹೆಣವಾಗಿರಲದು ಬರದೆಂದೂ
ಮನದಲಿವೊಲವಿನ ಬಯಕೆಯ ಚುಂಬಿಸಿ
ಗಣಗಳ ಗುಣದಲಿ ಗೆಲುತಿರುವಾ
ಎಲ್ಲರ ನೆತ್ತರ ಬಣ್ಣವದೊಂದೇ
ಚೆಲ್ಲುವ ಹಂಬಲ ನಮಗೇಕೆ
ಬಲ್ಲವ ಬಲ್ಲನು ಗಾಯದ ನೋವನು
ಕೊಲ್ಲುವ ದುರುಳಗೆ ಮತಿಯುಂಟೇ
ಪ್ರೀತಿಯ ಹಂಚುವ ಕಾಯಕವಾಗಲಿ
ಭೀತಿಯನೋಡಿಸಿ ಬಲುದೂರ
ನೀತಿಯ ಮಾತನು ಬರಿದೆಲೆ ನುಡಿಯದೆ
ರೀತಿಯು ಮೊಳಗಲಿ ನಮ್ಮಿಂದ
ದೇಶವು ನಮ್ಮಯ ಜೀವನವಾಗಿರೆ
ಮೋಸದ ವಾಸನೆ ಬರದೆಂದು
ವೇಷವ ಮರೆಸದೆ ತಾಳ್ಮೆಯ ಮೀರದೆ
ಬೇಸರವಿಲ್ಲದ ಬದುಕಿರಲಿ
ಜನಕನ ಮನೆಯನು ಹರುಷದಿ ನೆನೆಯುತ
ಬೆನಕನ ಕರೆದಳು ಗೌರಮ್ಮಾ
ಜನತೆಯ ಹರಸಲು ಚೌತಿಯ ವೇಳೆಗೆ
ಮನವನು ಮಾಡುತ ಧರೆಗಿಳಿಯೆ
ಹರನನು ಕರೆವೆನು ಬರೆದಿರೆ ಮರೆಯದೆ
ಮರುದಿನ ಬರುವೆನು ನಾನೆಂದ
ವರವನು ನೀಡಲು ದಿನವೊಂದೇತಕೆ
ಹೊರಡಿಲಿಯೆಂದಳು ತಾ ಮಾತೆ
ಇಲಿಯದು ಚಕ್ಕಿಲಿಯಾಸೆಗೆ ಬೇಗನೆ
ನಲಿಯುತ ಕುಣಿಯುತ ಹೊರಟಿತ್ತು
ಉಲಿಯದ ಗಣಪನ ಬೇಗನೆ ಹೊರಡಿಸೆ
ತಲೆಯೊಳ ಬುದ್ಧಿಯ ಬಳಸಿತ್ತು
ಸೂಸಲು ಗಡುಬಿನ ಜೊತೆಯಲಿ ಹೋಳಿಗೆ
ಸೂಸಿದೆ ಪರಿಮಳ ಸುಕ್ರುಂಡೆ
ಹಾಸಿದ ಚಾಪೆಯ ಮೇಲಿನ ತಿಂಡಿಯ
ಮೂಸುತ ಕುಳಿತನು ಮೂಷಿಕನು
ದಿನಮುಂದಾಗಿಯೆ ಬಂದರು ಮಾತೆಯ
ಗಣಗಳು ಕೊರತೆಯ ಮಾಡದೆಲೆ
ತಿನಿಸನು ಬಡಿಸುವ ಕರಗಳು ಹೆಚ್ಚಿವೆ
ತನುವಿನ ಬಯಕೆಗೆ ಮಿತಿಯಿಲ್ಲ
ಚಕ್ಕುಲಿ ಕಜ್ಜಾಯ ಕಡುಬಿನ ಜೊತೆಗೆ
ಸಕ್ಕರೆ ಪಾಯಸ ಸೇವಿಸುತ
ಅಕ್ಕರೆ ತುಂಬಿದ ಭಕ್ತರ ಸೇವೆಗೆ
ಬೆಕ್ಕಸ ಬೆರಗಲಿ ಹರಸಿದನು.
ನಾಡಿನ ಜನಗಳು ಮೋಡದ ಮರೆಯದ
ಹಾಡಿಗೆ ಸೋಲುತ ನಡೆದಿರಲು
ಬಾಡಿದ ಕಾಸಿನ ತೊಂದರೆ ತುಂಬಿರೆ
ನೋಡುತ ಸುಮ್ಮನೆ ಬರಲಹುದೆ
ಜನಪದ ಸಾರ
(ಲಾವಣಿ)
ಭಾರತ ದೇಶದ ಜನಪದ ಗೀತೆಯ
ಸಾರುವೆ ಭರದಲಿ ಕೇಳುತಿರಿ
ಸಾರವು ತುಂಬಿದ ಲಾವಣಿ ಪದಗಳ
ಬೇರಿದು ಕಾಣಿರಿ ನಮ್ಮ ಸಿರಿ
ಅಕ್ಷರವರಿಯದ ಶಿಷ್ಟರು ಹಾಡುತ
ರಕ್ಷಿಸುತಿದ್ದರು ಕಲೆಯನ್ನಾ
ಭಕ್ಷಿಪ ಸಮಯವು ಬಿಡದೆಲೆ ತಿದ್ದುತ
ಶಿಕ್ಷೆಯ ನೀಡದೆ ಜನರನ್ನಾ
ಆಡುವ ಮಾತದು ಮಗನಿಗು ಮಗಳಿಗು
ಮಾಡುವ ಕೆಲಸಕೆ ತಿಳಿವಂತೆ
ಹಾಡುವ ಹಾಡದು ಲೋಗರ ಬುದ್ಧಿಗೆ
ಪಾಡನು ತಿಳಿಸುವ ಬಲವಂತೆ
ಅಂದಿಗು ಯಿಂದಿಗು ಯೆಂದಿಗು ಲೋಕಕೆ
ಸಂದುವ ವಿಷಯವು ತುಂಬಿಹುದು
ಇಂಬನು ನೀಡದೆ ಕೇಡಿಗೆಯೆಂದಿಗು
ತುಂಬಿದ ತಂಬಿಗೆ ಯಾಗಿಹುದು
ನಮ್ಮಯ ಸಂಸ್ಕೃತಿ ಜಗದೊಳು ಹರಡಲು
ಬಿಮ್ಮನೆ ಹಾಡುತ ನಲಿಯುತಲಿ
ಒಮ್ಮನದಿಂದಲಿ ಮೆಚ್ಚುವ ಬನ್ನಿರಿ
ನಮ್ಮನೆ ಮಕ್ಕಳ ಸೊಗಸಿನಲಿ
ಪಶಿವೈ
ಪಿಎಸ್ ವೈಲೇಶ ಕೊಡಗು
೨೯/೯/೨೦೧೯
Comments
Post a Comment