ಗುರುಗಳಿವರು
ಗುರುಗಳಿವರು
~~~~~~~~
ಶಿಕ್ಷೆಯೊಳು ಸಿಲುಕಿಸದೆ
ಶಿಕ್ಷೆಯನು ತಾನುಂಡು
ದಕ್ಷತೆಯ ಹಾದಿಯಲಿ ನಡೆಯುತಿರುವ
ಭಕ್ಷಣೆಗೆ ಬಿಸಿಯೂಟ
ಶಿಕ್ಷಣದ ಜೊತೆನೀಡಿ
ರಕ್ಷಿಸುವ ಗುರುಗಳಿಗೆ ನಮನವೆಂಬೆ
ಜಗದಲ್ಲಿ ಯಾರಿಹರು
ಮಗುವಿದುವೆ ನಮದೆಂದು
ನಗುನಗುತ ಸೇವೆಯನು ಮಾಡುವವರು
ಬಗಲಲ್ಲಿ ಸಂಸಾರ
ಮುಗಿಯದಿಹ ಕಾಯಕವು
ಸಿಗುತಿಹುದೆ ನೆಮ್ಮದಿಯು ಕಲಿಸೊ ಮನಕೆ
ಅರಿವನ್ನು ನೀಡುವಗೆ
ಗುರುವೆಂದು ನುಡಿಯುವರು
ಗರಿಯಿವರು ಮನುಕುಲಕೆ ಲೋಕದೊಳಗೆ
ಮರೆಯದಿರಿ ಗುರುಗಳನು
ಬರೆಯುವುದ ಕಲಿಸಿಹರು
ಮೆರೆಯಿಸಿರಿ ನಿಮ್ಮಲಿಹ ಜಾಣ್ಮೆ ತೋರಿ
ಅಕ್ಕರೆಯ ಮಾತಿನಲಿ
ಲೆಕ್ಕವನು ಕಲಿಸಿಹರು
ಲೆಕ್ಕಿಸದೆ ಬರೆಯುತಿರೆ ನೀವದಿಂದು
ಸಕ್ಕರೆಯ ಮನವಿರುವ
ಮಕ್ಕಳಿಗೆ ಕಲಿಸಿರಲು
ತಕ್ಕರಾಗಿಹರಿಂದು ಬದುಕಿನಲ್ಲಿ
ಒಲಿದಿರುವ ತಿಳಿವಿನಲಿ
ಬಲಿಯುತಿರಿ ದಿನದಿನವು
ಬೆಳಗುತಿರಿ ಲೋಕದೊಳು ದೀಪದಂತೆ
ಕಲಿಸಿರುವ ಕೂಸುಗಳು
ಬೆಳೆಯುತಿರೆ ಬದುಕಿನಲಿ
ನಲಿಯುವುದು ಬಹುವಿಧದಿ ಗುರುವ ಮನವು
ಪಶಿವೈ
ಪಿ ಎಸ್ ವೈಲೇಶ ಕೊಡಗು
೫/೯/೨೦೧೯
Comments
Post a Comment