ಮನೆ ಮನೆ - ಕೋರಿಕೆ
ಮನೆ ಮನೆ ಕಾವ್ಯಗೋಷ್ಠಿ ಕುಟುಂಬದ ಆತ್ಮೀಯ ಬಂಧುಗಳೇ ತಮ್ಮ ತುಂಬು ಪ್ರೀತಿಯ ಅಭಿನಂದನೆಗಳು ಹಾರೈಕೆಗಳಿಗೆ ಹಾಗೂ ಆಶೀರ್ವಾದಗಳಿಗೆ ನನ್ನ ಮನದಾಳದ ಕೃತಜ್ಞತೆಗಳನ್ನು ಸಲ್ಲಿಸಲೇಬೇಕು ಮತ್ತು ಸಲ್ಲಿಸುತ್ತಿದ್ದೇನೆ. ತಮ್ಮೆಲ್ಲರ ಮನೆ ಮನದ ಕಂದ ನಾನು ಇಂದು ಮನೆ ಮನೆ ಕಾವ್ಯಗೋಷ್ಠಿ ಕುಟುಂಬದ ಸಕಲ ಏಳಗೆಗಳಿಗೆ ಕಾರಣರು ಕೂಡ ತಾವೆಲ್ಲರೂ ಎನ್ನುವುದೇ ನನ್ನ ಮನದ ಭಾವನೆ. ತಮಗೆ ಅರಿಯದಂತೆ ತಾವು ಯಾಕೋ ಹಿಂದೆ ಉಳಿದುಬಿಡುತ್ತಿದ್ದೀರಿ. ಹಾಗಾಗದೆ ನಾವೆಲ್ಲರೂ ಜೊತೆ ಜೊತೆಗೆ ಹೆಜ್ಜೆ ಹಾಕುತ್ತಾ ನಡೆದರೆ ತಮ್ಮೆಲ್ಲರ ಅದ್ಭುತ ಪ್ರತಿಭೆಯನ್ನು ಈ ಜಗದ ಒಳ್ಳೆಯ ಮನಸುಗಳು ಖಂಡಿತವಾಗಿ ಗುರುತಿಸುತ್ತವೆ.
ಈಗಾಗಲೇ ಗುಂಪಿನಲ್ಲಿ ನಡೆಯುತ್ತಿರುವ ಕವಿಗೋಷ್ಠಿಯಂತಹ ಕಾರ್ಯಕ್ರಮದ ಜೊತೆಗೆ ನಿತ್ಯದ ರಸ ಪ್ರಶ್ನೆ ಕಾರ್ಯಕ್ರಮ ಕೂಡ ಎಲ್ಲರ ಮನ ಮನ ಬೆಸೆಯುವಂತಾಗಬೇಕು. ಹಾಗೆಯೇ ಛಂದೋಬದ್ಧ ಕವಿತೆಯ ಸ್ಪರ್ಧೆಯಲ್ಲಿ ಸ್ಪರ್ಧಾಳುಗಳ ಕೊರತೆಯಿಂದ ಶ್ರೀಯುತ ಗಿರೀಶ್ ಕಿಗ್ಗಾಲುರವರು ಆಸಕ್ತಿ ಕಳೆದುಕೊಂಡು ಬಹುತೇಕ ಮರೆತು ಹೋದಂತಾಗಿದೆ. ಈಗಾಗಲೇ ಮೈಸೂರಿನ ನನ್ನ ಗೆಳೆಯರಾದ ಮುತ್ತುಸ್ವಾಮಿಯವರು ಮುಕ್ತಕ ಸಾಹಿತ್ಯ ಪರಿಷತ್ತಿನ ವತಿಯಿಂದ ನಮ್ಮ ಜಿಲ್ಲೆಯ ಇಬ್ಬರು ಕವಯತ್ರಿಯರ ಪುಸ್ತಕವನ್ನು ಪಡೆದು ಅವುಗಳನ್ನು ಮೈಸೂರಿನ ಮುಕ್ತಕ ಸಾಹಿತ್ಯ ಪರಿಷತ್ತಿನ ಪುಸ್ತಕ ಬಹುಮಾನಕ್ಕಾಗಿ ಮಂಡಿಸುವವರಿದ್ದಾರೆ. ಇಂದಲ್ಲದಿದ್ದರೆ ನಾಳೆ ಆ ಪುಸ್ತಕಗಳಿಗೆ ಬಹುಮಾನ ಖಂಡಿತವಾಗಿ ದೊರೆಯುತ್ತದೆ. ಹಾಗೂ ಕೊಡಗಿನ ಛಂದೋಬದ್ಧ ಕವಿಗಳಿಗೆ ರಾಜ್ಯ ಮಟ್ಟದ ಮನ್ನಣೆ ದೊರೆಯುವ ಕಾಲ ಬಹುದೂರವೇನಿಲ್ಲ. ಮತ್ತು ಕೊಡಗಿನಲ್ಲಿ ಸಹ ಮುಕ್ತಕ ಸಾಹಿತ್ಯ ಪರಿಷತ್ತು ನೆಲೆಯೂರುವ ಎಲ್ಲಾ ಲಕ್ಷಣಗಳು ಈಗಾಗಲೇ ನಮ್ಮೆಲ್ಲರ ಮನದಲ್ಲಿ ಮೂಡುತ್ತಿದೆ.
ಹಾಗೆ ಕೊಡಗಿನ ಹೊರಗೆ ರಾಜ್ಯ ಮಟ್ಟದಲ್ಲಿ ನಡೆಯುವ ಕವಿಗೋಷ್ಠಿಗಳಿಗೆ ಕೂಡ ಹೆಸರು ಪಡೆಯುವಲ್ಲಿ ಮತ್ತು ಕೆಲವೊಮ್ಮೆ ಕವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕೂಡ ನಮ್ಮ ಸಹಕಾರ ಬಯಸುವ ಕವಿಗಳ ಗುಂಪುಗಳು ತುಂಬಾ ಇವೆ. ಹಾಗೆ ಸಹಕಾರ ಬಯಸುವ ಗುಂಪುಗಳ ಕೋರಿಕೆಯನ್ನು ಈ ಬಳಗದಲ್ಲಿ ಎಲ್ಲರೂ ಹಾಕುವವರಿದ್ದಾರೆ. ಅದಕ್ಕೆ ಸ್ಪಂದಿಸುವ ಮನಸುಗಳು ಖಂಡಿತವಾಗಿ ಇದ್ದಾವೆ. ಇದು ನಮ್ಮ ಮನೆ ಮನೆ ಕಾವ್ಯಗೋಷ್ಠಿ ಕುಟುಂಬದ ಎಲ್ಲಾ ಸದಸ್ಯರಿಗೆ ದೊರಕುವ ಅವಕಾಶಗಳು. ಇಂದೂ ಕೂಡಾ ಅದೆಷ್ಟೋ ಕವಿಗಳು ಕವಯತ್ರಿಯರು ಅವಕಾಶ ವಂಚಿತರಾಗಿ ಬೆಳಕಿಗೆ ಬಾರದೇ ಕಳೆದು ಹೋಗುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಮನೆ ಮನೆ ಕಾವ್ಯಗೋಷ್ಠಿ ಕುಟುಂಬದ ಪ್ರತಿ ಮಾಸದ ಕವಿಗೋಷ್ಠಿಗಳಲ್ಲಿ ಕನಿಷ್ಠ ಒಬ್ಬ ಹೊಸ ಕವಿ ಯಾ ಕವಯತ್ರಿಯರು ಭಾಗವಹಿಸುತ್ತಿರುವುದು ಇದಕ್ಕೆ ನಿದರ್ಶನ ಎನ್ನಬಹುದು.
ಕೇವಲ ನಮ್ಮ ಕೊಡಗಿನಲ್ಲಿ ಮಾತ್ರವಲ್ಲದೆ ನಮ್ಮ ಕುಟುಂಬದ ಸದಸ್ಯರನ್ನು ತನ್ಮೂಲಕ ರಾಜ್ಯ ಮಟ್ಟದ ಕವಿಗೋಷ್ಠಿಗಳಿಗೆ ಪರಿಚಯಿಸಬೇಕೆನ್ನುವುದು ಆ ಮೂಲಕ ತಮ್ಮ ಕವಿತೆ ಬರೆಯುವ ಅಂತಃಶಕ್ತಿಯನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತಾಗಬೇಕು ಎನ್ನುವ ಮಹದಾಸೆ ನಮ್ಮದು. ಈಗಾಗಲೇ ಮನೆ ಮನೆ ಕಾವ್ಯಗೋಷ್ಠಿ ಬಳಗ ಜನಿಸುವ ಮೊದಲೇ ಕೊಡಗಿನ ಕೆಲವು ಕವಿ ಕವಯತ್ರಿಯರನ್ನು ರಾಜ್ಯ ಮಟ್ಟದ ವಾಟ್ಸ್ ಆಪ್ ಗುಂಪುಗಳಿಗೆ ಪರಿಚಯಿಸಿದ್ದೆ. ಮತ್ತು ಅವರವರ ಸ್ವಂತ ಸಾಮರ್ಥ್ಯದ ಬಲದಿಂದ ಆ ಬಳಗದ ಜೊತೆಗೆ ಇನ್ನಷ್ಟು ಬಳಗಗಳಲ್ಲಿ ಸೇರಿಕೊಂಡು ಕೊಡಗಿನ ಹೆಸರನ್ನು ರಾಜ್ಯದ ಎಲ್ಲಾ ಕಡೆಗೆ ಪಸರಿಸುತ್ತಿರುತ್ತಾರೆ. ತಮ್ಮ ಜೊತೆಗೆ ಇನ್ನಷ್ಟು ನವಕವಿಗಳ ಉಗಮಕ್ಕೆ ಕಾರಣರಾಗಿದ್ದಾರೆ ಎಂದರೆ ತಪ್ಪಾಗಲಾರದು.
ಹಾಗೆಯೇ ಒಂದಷ್ಟು ಕವಿ ಕವಯತ್ರಿಯರು ಹೊರಗಿನ ವಾಟ್ಸ್ ಆಪ್ ಗುಂಪುಗಳಲ್ಲಿ ಅನಾಸಕ್ತರಾಗುವ ಜೊತೆಗೆ ಬರಹಗಳಲ್ಲಿ ಸಹ ಅನಾಸಕ್ತರಾಗಿ ತಮ್ಮೊಳಗೆ ಹುದುಗಿರುವ ಅತ್ಯಂತ ಉತ್ಕೃಷ್ಟ ಭಾವಗಳನ್ನು ಹೊರಗೆಡವದೆ ನಾಲ್ಕು ಗೋಡೆಗಳ ನಡುವೆ ಹೂತು ಹಾಕಿರುವುದು ಕೂಡ ಸುಳ್ಳಲ್ಲ. ಅವರವರ ವೈಯಕ್ತಿಕ ಜೀವನದ ಕಷ್ಟಸುಖಗಳು ಏನಿವೆಯೋ ನಾನರಿಯೆ
ಆದರೆ ನೀರಿನ ಬುಗ್ಗೆಯಂತೆ ಚಿಮ್ಮುವ ಭಾವನೆಗಳನ್ನು ತಡೆ ಹಿಡಿಯಲು ಇವರಿಗೆ ಅದೆಂತು ಸಾಧ್ಯವಿದೆ ಎಂಬುದನ್ನು ನಮಗೆ ಮನಗಾಣಿಸುವವರಾರು? ನನ್ನ ಬಗ್ಗೆ ತಮ್ಮ ಅಭಿಪ್ರಾಯ ಏನಿದೆಯೋ ನನಗದರ ಬಗ್ಗೆ ಆಸಕ್ತಿ ಇಲ್ಲ. ನಾವೆಲ್ಲರೂ ಜೊತೆಗೂಡಿ ಹೆಜ್ಜೆ ಇಡುವ ಬಗ್ಗೆ ಆಸಕ್ತಿ ಇರುವವರು ದಯವಿಟ್ಟು ನಮ್ಮ ಜೊತೆಗೆ ಕೈ ಜೋಡಿಸಿ ನಡೆಯಲು ತಮ್ಮಿಂದ ನನಗೂ ಕೂಡ ಕಲಿಯಲು ಅವಕಾಶಗಳನ್ನು ಮಾಡಿಕೊಡಿ ಎಂದು ಮತ್ತೊಮ್ಮೆ ಧನ್ಯವಾದಗಳನ್ನು ಅರ್ಪಿಸುವ ಮೂಲಕ ಕೇಳಿಕೊಳ್ಳುತ್ತೇನೆ.
ಇದನ್ನು ನನ್ನ ಅಹಂಕಾರದ ನುಡಿಗಳೆಂದು, ಕೇವಲ ಸಣ್ಣಪುಟ್ಟ ಯಶಸ್ಸು ಕಂಡ ಕೂಡಲೇ ತತ್ವಜ್ಞಾನದ ಮಾತುಗಳನ್ನು ಆಡುವವನೆಂದು ಗ್ರಹಿಸದೆ ತಮ್ಮೊಳಗಿನ ಆಸೆ ಆಕಾಂಕ್ಷೆಗಳನ್ನು ಅರಿತ ತಮ್ಮ ಅಣ್ಣ ತಮ್ಮ ಮಗ ಬಂಧುವೆಂದು ತಿಳಿದು ಏನೇ ತಪ್ಪಾಗಿ ನುಡಿದಿದ್ದರೂ ನೇರವಾಗಿ ನನ್ನೊಂದಿಗೆ ಮಾತನಾಡಲು ಕೋರುತ್ತಿದ್ದೇನೆ.
ತಮ್ಮವ
ವೈಲೇಶ ಪಿ ಎಸ್ ಕೊಡಗು
Comments
Post a Comment